ಚಿಂಪಾಂಜಿಗಳ ಗುಂಪಿನಲ್ಲಿ ನಡೆಯುವ ರಾಜಕೀಯವನ್ನು ಕುತೂಹಲಕಾರಿ ಕಥನವಾಗಿ ಕಟ್ಟಿಕೊಡುವ ಕೃತಿ ‘ನರ ವಾನರ’. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜೊತೆಗೆ ಸಹ ಲೇಖಕರಾಗಿ ಗುರುತಿಸಿಕೊಂಡು, ಜಗತ್ತಿನ ವಿಸ್ಮಯಗಳ ಕುರಿತೇ ಹೆಚ್ಚು ಬರೆದಿರುವ ಲೇಖಕ ಪ್ರದೀಪ್ ಕೆಂಜಿಗೆ ಈ ಕೃತಿಯೊಂದಿಗೆ ಓದುಗರನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ.
ಮನುಷ್ಯ ಲೋಕದಲ್ಲಿ ರಾಜಕೀಯ ಸಾಮಾನ್ಯವಾದ ಪದ. ಜಗತ್ತಿನಲ್ಲಿ ರಾಜಕೀಯವೇ ಇಲ್ಲದ ಯಾವ ಜಾಗವೂ ಸಿಗಲಿಕ್ಕಿಲ್ಲ. ಆದರೆ ವನ್ಯಜೀವಿಗಳ ಜಗತ್ತಿನಲ್ಲಿಯೂ ರಾಜಕಾರಣ ಜೋರಾಗಿದೆ ಎಂಬುದನ್ನು ಸಾರುವ ಕೃತಿಯಿದು. ಹಾಗಂತ ಇದು ಕಾಲ್ಪನಿಕ ಕಥನವಲ್ಲ. ಸಂಶೋಧನೆ ಆಧಾರಿತವಾಗಿದೆ. ಜೀವ ವಿಜ್ಞಾನಿ ಫ್ರಾನ್ಸ್ ಡಿ ವಾಲ್ ಅವರ ‘ಚಿಂಪಾಂಜಿ ಪಾಲಿಟಿಕ್ಸ್’ ಈ ಪುಸ್ತಕಕ್ಕೆ ಮೂಲ ಆಧಾರ ಎಂದು ಲೇಖಕ ಮುನ್ನುಡಿಯಲ್ಲಿ ಹೇಳಿದ್ದಾರೆ. ಆದರೆ ಇದು ಆ ಪುಸ್ತಕದ ಸಂಪೂರ್ಣ ಭಾಷಾಂತರವಲ್ಲ.
ಮನುಷ್ಯನ ರಾಜಕಾರಣದೊಂದಿಗೆ ಚಿಂಪಾಂಜಿಗಳ ರಾಜಕೀಯವನ್ನು ಹೋಲಿಸುತ್ತ ಹೋಗುತ್ತಾರೆ. ಒಟ್ಟು 13 ಲೇಖನಗಳಿದ್ದು, ನಿರೂಪಣೆ ಅತ್ಯಂತ ಸರಳವಾಗಿದೆ. ಜೊತೆಗೆ ವಾನರ ಪ್ರಪಂಚದಲ್ಲಿನ ಒಂದಷ್ಟು ವಿಸ್ಮಯಕಾರಿ ಅಂಶಗಳನ್ನು ಹೇಳಿದ್ದಾರೆ. ‘ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು’ ಎಂದು ನಾಗೇಶ್ ಹೆಗಡೆ ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ.
ಪುಸ್ತಕ: ನರ ವಾನರ
ಲೇ: ಡಾ.ಪ್ರದೀಪ್ ಕೆಂಜಿಗೆ
ಪ್ರ: ಪುಸ್ತಕ ಪ್ರಕಾಶನ
ಸಂ: 08212545774
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.