ಕಾದಂಬರಿಯೊಂದು ಸಿನಿಮಾ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ಮೊದಲು ಸಿನಿಮಾ ಆಗಿ ನಂತರ ಕಾದಂಬರಿಯಾಗಿರುವ ಪ್ರಯೋಗ ‘ನಾತಿಚರಾಮಿ’ಯದ್ದು. ಸಿನಿಮಾ ನೋಡದೇ ಓದಿದರೆ ಮೂರು ಹೆಣ್ಣುಮಕ್ಕಳ ಕತೆ, ಏಕ್ತಾರಿಯಲ್ಲಿ ತಂದಿರುವ ಸುಂದರ ಓದು ಇದಾಗುತ್ತದೆ. ಗೌರಿ, ಲಕ್ಷ್ಮಮ್ಮ ಮತ್ತು ಸುಮಾ ಮೂವರೂ ಒಂದೊಂದು ಬಗೆಯ ಕತೆಯನ್ನು ಹೇಳಿಕೊಡುತ್ತಾರೆ. ಹೆಣ್ಣುಮಕ್ಕಳ ಸೆಕ್ಶುಯಾಲಿಟಿ ಎಂದು ಒಂದೇ ಪದದಲ್ಲಿ ಇದನ್ನು ಹೇಳಬಹುದು.
ಗೌರಿಗೆ ದೇಹದ ಅಗತ್ಯಗಳನ್ನು ಪೂರೈಸಿಕೊಳ್ಳುವ ಜಿಜ್ಞಾಸೆ. ಲಕ್ಷ್ಮಮ್ಮನಿಗೆ ಗಂಡ ಅನ್ಯ ಧರ್ಮದ ಮಹಿಳೆಯಲ್ಲಿ ಕಾಣುವ ಆಕರ್ಷಣೆ ಏನು ಎಂಬ ಪ್ರಶ್ನೆಯೊಂದಿಗೆ ಏಗುವುದು, ಸುಮಾ ಒಲ್ಲದ ಗಂಡನಿಂದ ಒಲವನ್ನು ನಿರೀಕ್ಷಿಸುವ ಜೀವ. ಈ ಮೂವರೂ ಒಂದೊಂದು ಸ್ತರದಲ್ಲಿ ಮಹಿಳೆಯ ಬಯಕೆ, ದೇಹದ ಬೇಡಿಕೆ, ಸಾಮಾಜಿಕ ಮನ್ನಣೆ ಇವೆಲ್ಲವನ್ನೂ ಒಟ್ಟೊಟ್ಟಿಗೆ ಚರ್ಚಿಸುತ್ತ ಹೋಗುತ್ತದೆ. ಸಿನಿಮಾ ನೋಡಿ, ಪುಸ್ತಕ ಓದುವವರಿಗೆ ಸಿನಿಮಾ ಮನಸಿನಲ್ಲಿಯೇ ರಿವೈಂಡ್ ಆಗುತ್ತಿರುತ್ತದೆ. ಸಿನಿಮಾ ನೋಡದೆಯೇ ಓದುವವರಿಗೆ ಹೆಣ್ಣುಮಕ್ಕಳ ಮನೋವ್ಯಾಪಾರಗಳು, ಗಂಡು ಮಕ್ಕಳ ವಾಂಛೆಗಳು, ಬದುಕನ್ನು ನೋಡುವ ಹೆಣ್ಣು ಮತ್ತು ಗಂಡು ನೋಟಗಳೆರಡೂ ವಿಭಿನ್ನವಾಗಿ ದಕ್ಕುತ್ತ ಹೋಗುತ್ತವೆ.
ಲೇಖಕಿ ಸಂಧ್ಯಾರಾಣಿ ಗಂಡು ಹೆಣ್ಣಿನ ಮನೋವ್ಯಾಪಾರವನ್ನು ಮಾತುಗಳಲ್ಲಿ ವ್ಯಕ್ತಪಡಿಸುತ್ತಲೇ ಹಲವಾರು ಅವ್ಯಕ್ತ ಭಾವಗಳನ್ನು ಅನಾವರಣಗೊಳಿಸುತ್ತ ಹೋಗುತ್ತಾರೆ. ಕಾಫಿ, ವಿಂಡ್‌ಚೈಮ್, ಲಿಲ್ಲಿ ಹೂ ಪ್ರತಿಮೆಗಳಂತೆಯೂ, ರೂಪಕಗಳಾಗಿಯೂ, ಪುಸ್ತಕದಲ್ಲಿ ಪಾತ್ರಗಳಂತೆಯೇ ಕಾಣಿಸಿಕೊಳ್ಳುತ್ತವೆ. ಮನಸೊಪ್ಪಿದರೆ ಮಾತ್ರ ಮಿಲನ, ಇಲ್ಲದಿದ್ದಲ್ಲಿ ಅದು ಕ್ರಿಯೆ ಮಾತ್ರ. ಆ ಕ್ರಿಯೆಗೂ ಮನಸು ಸಿದ್ಧವಾಗಬೇಕು. ಇಲ್ಲದಿದ್ದಲ್ಲಿ ಸುಮಾ ಹೇಳುವಂತೆ, ಕಮೋಡ್ ಮೇಲೆ ಕುಳಿತು ಏಳುವಂಥ ಕ್ರಿಯೆಯಾಗುತ್ತದೆ. ದೈಹಿಕ ಬೇಡಿಕೆಯಾಗಿದ್ದೂ, ಅಗತ್ಯವಾಗಿದ್ದೂ, ಸಾಂಗತ್ಯದಲ್ಲಿ ನರಳಿಯೂ ಅರಳುವ, ಅರಳದೇ ನರಳುವ ಕಥನ ಈ ನೂರೈವತ್ತು ಪುಟಗಳಲ್ಲಿ ಓದುಗರನ್ನು ಹಿಡಿದಿಡುತ್ತದೆ.
ಕಾಮ, ಜಗತ್ತಿನ ಎಲ್ಲ ಭಾವಗಳನ್ನೂ ಹಿಡಿದಿಡುವಂತೆ, ಅದೇ ಎಳೆಯ ಸುತ್ತಲೇ ಸಮಾಜ, ತಂತ್ರಜ್ಞಾನ, ಆ್ಯಪ್‌ಗಳು, ಮನಃಸ್ಥಿತಿಗಳು, ಸಾಮಾಜಿಕ ಚೌಕಟ್ಟುಗಳು, ಹೆಣ್ಣುಮಕ್ಕಳ ಅಂತರಂಗ, ಗಂಡಸರ ಅಂತರಾಳ ಎಲ್ಲವನ್ನೂ ಹೆಣೆದಿಟ್ಟಿರುವ ಕಾದಂಬರಿ ಇದು.
ನಾತಿಚರಾಮಿ
ಲೇ: ಎನ್.ಸಂಧ್ಯಾರಾಣಿ
ಪ್ರ: ವೀರಲೋಕ
ಸಂ: 70221 22121
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.