ದೇವೇಗೌಡರ ಪ್ರಧಾನಿಯ ದಿನಗಳು
ಲೇ: ಶಿವಾಜಿ ಗಣೇಶನ್
ಪ್ರಕಾಶನ: ಶಿಂಷಾ ಲಿಟರರಿ ಅಕಾಡೆಮಿ ತುಮಕೂರು
ಸಂ: 9845157308
ಹರದನಹಳ್ಳಿಯ ಸಹಕಾರ ಸಂಘದಿಂದ ರಾಜಕಾರಣ ಆರಂಭಿಸಿ ದೇಶದ ಪ್ರಧಾನಿ ಪಟ್ಟದವರೆಗೆ ಬೆಳೆದ ದೇವೇಗೌಡರ ಹೋರಾಟದ ಹಾದಿಯ ಮೈಲುಗಲ್ಲುಗಳನ್ನು ತಿರುಗಿ ನೋಡುವ ಕ್ರಿಯೆಯನ್ನು ಈ ಕೃತಿ ಮಾಡುತ್ತದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ನೀತಿ, ನಿರೂಪಣೆ, ಆಡಳಿತ ಸುಧಾರಣೆಗಳನ್ನು ಹತ್ತಿರದಿಂದ ಗಮನಿಸಿದ್ದ ಪತ್ರಕರ್ತ ಶಿವಾಜಿ ಗಣೇಶನ್ ಅವರು ತಮ್ಮ ನೋಟಕ್ಕೆ ದಕ್ಕಿದ ಅಂಶಗಳನ್ನು ಪೂರ್ವಗ್ರಹಗಳಿಲ್ಲದೆ ದಾಖಲಿಸಿದ್ದಾರೆ. ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟರು, ಡಿ.ದೇವರಾಜ ಅರಸು ಕುರಿತು ರಚಿಸಿದ ‘ಬಹೂರೂಪಿ ಅರಸು’ ಕೃತಿ ಪ್ರೇರಣೆ ಎಂದು ಹೇಳುತ್ತಾರೆ.
ದೇವೇಗೌಡರು ಪ್ರಧಾನಿ ಆಗುವ ಸಂದರ್ಭ ವಿಶೇಷವಾಗಿತ್ತು. ಕಮ್ಯುನಿಸ್ಟ್ ಪಕ್ಷದ ನಿಲುವು ಮತ್ತು ವಾಜಪೇಯಿ ಅವರ ರಾಜಧರ್ಮದ ಆದರ್ಶ ಪಾಲನೆ ಕೂಡ ಆ ಸಂದರ್ಭಕ್ಕೆ ಕಾರಣ ಆಗಿತ್ತು. 13 ಪಕ್ಷಗಳ ಬೆಂಬಲದಿಂದ 11 ತಿಂಗಳು ಮೊದಲ ಕನ್ನಡಿಗ ಪ್ರಧಾನಿ ಆಡಳಿತ ಅವಧಿಯ ಹಲವು ಸಂಗತಿಗಳನ್ನು ಬಿಡಿಬಿಡಿಯಾಗಿ ಲೇಖಕ ಕಟ್ಟಿಕೊಟ್ಟಿದ್ದಾರೆ. ಪ್ರಧಾನಿ ದೇವೇಗೌಡರ ಗ್ರಾಮೀಣ ಭಾರತದ ಕನಸು, ಕಾಶ್ಮೀರ ಸಮಸ್ಯೆಯ ಸೌಹಾರ್ದ ಪರಿಹಾರ ಸಂಬಂಧಿ ಪ್ರಯತ್ನವನ್ನೂ ಸ್ಮರಿಸಲಾಗಿದೆ. 40 ವರ್ಷಗಳ ಹೋರಾಟದ ಫಲದಿಂದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಒಲ್ಲದ ಮನಸಿನಿಂದಲೇ ಪ್ರಧಾನಿ ಆಗುವ ಸನ್ನಿವೇಶವನ್ನು ವಿವರಿಸುವ ಲೇಖಕರು, ಅವತ್ತಿನ ರಾಜಕೀಯ ಪರಿಸ್ಥಿತಿಯನ್ನು ವಿಷಯನಿಷ್ಠವಾಗಿ ನಿರೂಪಿಸುತ್ತಾರೆ.
ಕೃತಿಯ ಬಹುತೇಕ ಲೇಖನಗಳು ‘ಪ್ರಜಾವಾಣಿ’ಯ ‘ದೆಹಲಿ ದಿನಚರಿ’ ಅಂಕಣದಲ್ಲಿ ಪ್ರಕಟಗೊಂಡಿವೆ. ದೇವೇಗೌಡರು ಪ್ರಧಾನಿಯಾದಾಗ ಶಿವಾಜಿ ಗಣೇಶನ್ ‘ಸುಧಾ’ ಪತ್ರಿಕೆಗೆ ‘ಪ್ರಧಾನಿ ಪಟ್ಟಕ್ಕೆ ಮೊದಲ ಕನ್ನಡಿಗ ದೇವೇಗೌಡ’ ಎಂಬ ಮುಖಪುಟ ಲೇಖನ ಬರೆದಿದ್ದರು. ಅವರ ಆಡಳಿತಕ್ಕೆ ನೂರುದಿನ ತುಂಬಿದಾಗ ಪ್ರಜಾವಾಣಿಯ ‘ಸಾಪ್ತಾಹಿಕ ಪುರವಣಿ’ಗೆ ಬರೆದ ಲೇಖನವೂ ಸೇರಿ 59 ಲೇಖನಗಳು ಇವೆ. ಮಾತ್ರವಲ್ಲದೆ, ಸುದ್ದಿ ವಿಶ್ಲೇಷಣೆ ಮತ್ತು ಅಪರೂಪದ ಚಿತ್ರಗಳನ್ನೂ ಕೃತಿ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.