ರೇಷ್ಮೆ ಬಟ್ಟೆ ಹುಟ್ಟಿದ ಬಗೆ, ಭಾರತಕ್ಕೆ ನಡೆದು ಬಂದ ಬಗೆಯನ್ನು ಆಸಕ್ತಿಕರವಾಗಿ ಹೇಳಿರುವ ಕಾದಂಬರಿ ಇದು. ಈ ಕಾದಂಬರಿಯ ಪ್ರತಿ ಅಧ್ಯಾಯಗಳೂ ಬದುಕಿನ ಹೊಸ ಹೊಳಹನ್ನು ನೀಡುತ್ತ ಹೋಗುತ್ತವೆ. ಕಾನ್‌ಫ್ಯೂಶಿಯಸ್ ಮತ್ತು ಬೌದ್ಧ ಧರ್ಮ, ಪಾರ್ಸಿ ಧರ್ಮಗಳ ನವನೀತ ನೀಡಿದಂತೆ ಒಳಿತನ್ನು ಮಾತ್ರ ತರ್ಕಕ್ಕೆ ಒಡ್ಡುತ್ತ, ಒಳಿತನ್ನೇ ನೀಡುತ್ತ ಹೋಗುತ್ತದೆ. ಕೆಲವೊಮ್ಮೆ ಮೂಲ ಕಥೆಯ ಪಾತ್ರವನ್ನೇ ಮರೆತು ಈ ಪಾಠಗಳಲ್ಲಿ ಓದುಗ ಕಳೆದುಹೋಗುವಷ್ಟು ಆಳವಾಗಿ ಅವುಗಳನ್ನು ವಿಶ್ಲೇಷಿಸಲಾಗಿದೆ.
ಆಹಾರ ಸಂಸ್ಕೃತಿ, ಕಲೆ, ಚಿತ್ರಕಲೆ ಮತ್ತು ಕಸೂತಿ ಕಲೆಗಳೊಂದಿಗೆ ತನುತಣಿಸುವ ಉದ್ಯೋಗ ಬೆಳೆದು ಬಂದ ಬಗೆಯನ್ನೂ ವಿವರಿಸುತ್ತದೆ. ಎರಡನೆಯ ಶತಮಾನದಿಂದ ಆರಂಭವಾಗುವ ಈ ಕಥನದಲ್ಲಿ ಹಲವಾರು ಗಡಿಮೀರಿ ಅಥವಾ ಕಾದಂಬರಿಯ ಭಾಷೆಯಲ್ಲಿಯೇ ಹೇಳುವುದಾದರೆ ಹದ್ದು ಮೀರಿ ಕತೆ ಸಾಗುತ್ತದೆ.
ಆ ಕಾಲದ ಬದುಕಿನ ಚಿತ್ರಣವನ್ನು ನೀಡುತ್ತಲೇ ಸಾರ್ವಕಾಲಿಕ ಸತ್ಯವೆನಿಸುವ ಧಾರ್ಮಿಕ ಹೊಳಹುಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ಸಮಣರ ಕಾಮ, ಮಿತ್ರವಂದಕನ ಪ್ರೇಮ, ಮಧುಮಾಯಾಳ ತ್ಯಾಗ, ಹವಿನೇಮನ ಬಲಿದಾನ, ಸಗನೇಮಿಯ ಮಹತ್ವಾಕಾಂಕ್ಷೆ, ಕಥೆಯ ಹಿನ್ನೆಲೆಯಲ್ಲಿಯೇ ಪಾತ್ರದಂತೆ ಗೋಚರಿಸುವ ಆ ಕಾಲದ ರಾಜಕಾರಣ ಓದುಗರ ಸಮಯವನ್ನು ಬೇಡುತ್ತದೆ. ನಂತರ ಮನ ಕಲಕಿ ಕಾಡುತ್ತದೆ. ಕೆಲವೊಂದೆಡೆ ಕಥೆ ಹಿಂದೆ ಸರಿದು, ಈ ಉಪದೇಶಗಳೇ ಮೇಲುಗೈ ಸಾಧಿಸಿದಂತೆ ಎನಿಸುತ್ತವೆ. ಸಂಯಮದ ಓದನ್ನು ಬೇಡುವ ಈ ಕಾದಂಬರಿ ಮುಗಿಸಿದಾಗ ರೇಷ್ಮೆಯ ನುಣುಪಿಗೆ ರೋಮಾಂಚನವಾದಂತೆಯೇ, ಹುಳುಗಳ ಸಾವಿಗೆ ಎದೆ ಝಲ್ಲೆನ್ನುತ್ತದೆ.
ಪುಸ್ತಕ: ರೇಷ್ಮೆ ಬಟ್ಟೆ
ಲೇ: ವಸುಧೇಂದ್ರ
ಪ್ರ: ಛಂದ ಪುಸ್ತಕ
ಸಂ: 9844422782
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.