ತೊಟ್ಟು ಕ್ರಾಂತಿ ಎಂಟು ಕತೆಗಳ ಸಂಕಲನ. ಪ್ರತಿಯೊಂದು ಕತೆಯೂ ರಾಷ್ಟ್ರಗಳ ಸೀಮೆ, ಎಲ್ಲೆಯನ್ನೂ ಮೀರಿ, ಮನುಷ್ಯನ ಆಂತರಿಕ ತುಮುಲ, ಗೊಂದಲವನ್ನು ಹರಡುತ್ತ ಹೋಗುತ್ತದೆ. ಕತೆಗಳ ಪಾತ್ರಗಳಿಲ್ಲಿ, ನಮ್ಮದೇ ವಲಯದಲ್ಲಿರುವಂತೆ ಕಂಡು ಬರುತ್ತವೆ. ವಂಚನೆಯ ಕಾರ್ಪೊರೆಟ್ ಜಗತ್ತು, ಸ್ನೇಹವೆಂಬುದು ಅನುಕೂಲಸಿಂಧುವಾಗುವ ಕಥಾಸಂಕಲನದ ಹೆಸರಿರುವ ಕಥಾ ಹಂದರ ಔದ್ಯೋಗಿಕ ಪ್ರಪಂಚದ ಹಲವಾರು ಸ್ಪರ್ಧೆಗಳನ್ನು ಬಿಚ್ಚಿಡುತ್ತದೆ. ಟ್ಯಾಟು ಅಥವಾ ಪಿಂಕಿ ಕತೆಗಳು ಮಮತೆ, ಬಾಂಧವ್ಯ ಮತ್ತು ಬಂಧಗಳ ನಡುವಿನ ಸಂಘರ್ಷವನ್ನು ಸ್ಪಷ್ಟವಾಗಿಯೇ ನವಿರಾದ ಭಾಷೆಯಲ್ಲಿ ಹೇಳುತ್ತ ಹೋಗುತ್ತವೆ.
ಎಂಟೂ ಕತೆಗಳು ವಿಭಿನ್ನ. ವಿಶಿಷ್ಟ ಭಾಷಾ ಪ್ರಯೋಗ. ಉತ್ತರ ಕನ್ನಡದ ಭಾಷೆಯಿಂದ, ಈ ಜೆನ್ ಎಕ್ಸ್, ಜೀಗಳ ಸ್ಲ್ಯಾಂಗ್‌ವರೆಗೂ ಎಲ್ಲವನ್ನೂ ಕಾವ್ಯ ದುಡಿಸಿಕೊಂಡಿದ್ದಾರೆ. ಈ ತಲೆಮಾರುಗಳ ನಡುವಿನ ಮೌಲ್ಯ ಮತ್ತು ಬಾಂಧವ್ಯಗಳ ನಡುವಿನ ಸಂಘರ್ಷ ಈ ಕತೆಗಳಲ್ಲಿ ಎದ್ದು ಕಾಣುತ್ತವೆ. ಹೆಣ್ತನ ಮತ್ತು ಹೆಣ್ಣುಮಕ್ಕಳ ಲೋಕದಲ್ಲಿ ಸಂಚರಿಸುವ ಈ ಕತೆಗಳು ಒಂದೇ ಗುಕ್ಕಿಗೆ ಓದುವಂಥದ್ದಲ್ಲ. ಪ್ರತಿ ಕತೆಯೂ ಒಂದೊಂದು ಆಯಾಮದಲ್ಲಿ ಯೋಚಿಸಲು ಪ್ರಚೋದಿಸುವಂತಿವೆ. ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪಡೆದಿರುವ ಈ ಸಂಕಲನ ಕಾವ್ಯರ ಎಂಟನೆಯ ಕೃತಿ ಆಗಿದೆ.
ತೊಟ್ಟು ಕ್ರಾಂತಿ
ಲೇ: ಕಾವ್ಯ ಕಡಮೆ
ಪ್ರ: ಛಂದ ಪುಸ್ತಕ
ಸಂ: 9844422782
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.