ADVERTISEMENT

ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು: ಅನುವಾದ ಸಾಹಿತ್ಯದ ಮೌಲಿಕ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
<div class="paragraphs"><p>ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು</p></div>

ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು

   

ಕನ್ನಡದಲ್ಲಿ ಬಂದ ಅನುವಾದಗಳ ಸಾಂಸ್ಕೃತಿಕ ಅಧ್ಯಯನ ಎಂಬ ಅಡಿಬರಹ ಇರುವ ಈ ಪುಸ್ತಕದಲ್ಲಿ 13 ಬಿಡಿ ಲೇಖನಗಳಿವೆ.  ಶೇಕ್ಸ್‌ಪಿಯರ್‌ನಿಂದ ಗಾಂಧೀಜಿವರೆಗೂ ಕನ್ನಡದಲ್ಲಿ ಪಾಶ್ಚಿಮಾತ್ಯದಿಂದ ಪೌರ್ವಾತ್ಯ ಸಾಹಿತ್ಯ ದಕ್ಕಿಸಿಕೊಂಡ ಬಗೆಯನ್ನು ತಾರಿಣಿ ಅವರು ವಿಶ್ಲೇಷಿಸಿದ್ದಾರೆ. ಅಲ್ಲಿಂದ ಇಲ್ಲಿಗೆ ಬರುವ ಪ್ರಕ್ರಿಯೆಗೆ ಒಂದು ಶತಮಾನದ ಇತಿಹಾಸವಿದೆ. ಆದರೆ ಇಲ್ಲಿಂದ ಅಲ್ಲಿಗೆ ಹೋಗಿದ್ದೆಷ್ಟು ಎಂಬ ಪ್ರಶ್ನೆಯನ್ನು ಲೇಖಕಿ ಎತ್ತುತ್ತಾರೆ. ರಷ್ಯನ್‌ ಸಾಹಿತ್ಯ ಜಗತ್ತಿಗೆ ಪರಿಚಯವಾಗಲಿ, ರಷ್ಯನ್‌ ಸಿದ್ಧಾಂತಗಳು ಜನರಿಗೆ ತಲುಪಲಿ ಎಂದು ಆ ಕಾಲದ ಸೋವಿಯತ್‌ ರಷ್ಯಾ ಒಕ್ಕೂಟ ಅನುವಾದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿತ್ತು. ಮತ್ತು ವಿದೇಶಿ ಭಾಷೆಗಳನ್ನು ಕಲಿತವರು, ಆಯಾ ಭಾಷೆಯ ಕ್ಲಾಸಿಕ್‌ಗಳನ್ನು ಕನ್ನಡಕ್ಕೆ ತರಲು ಇಂಗ್ಲಿಷ್‌ ಮೊರೆಹೋಗಿದ್ದು, ಆ ಓದು ಹೇಗೆಲ್ಲ ಸಾಂಸ್ಕೃತಿಕ ವಲಯದಲ್ಲಿ ಸ್ವೀಕೃತವಾಗಿದೆ ಎಂಬುದನ್ನೂ ವಿವರಿಸಲಾಗಿದೆ.

ಕನ್ನಡದಲ್ಲಿ ಅನುವಾದ ಸಾಹಿತ್ಯವನ್ನು ಮೂರು ಘಟ್ಟಗಳಲ್ಲಿ ವಿವರಿಸಲಾಗಿದೆ. ಒಂದು ಶೇಕ್ಸ್‌ಪಿಯರ್‌ ಕಾಲ. ಆಗ ಇಂಗ್ಲಿಷ್‌ನಿಂದ ನಾಟಕಗಳಷ್ಟೇ ಅಲ್ಲ, ಸುನೀತಗಳು, ಕಾದಂಬರಿಗಳೂ ಬಂದವು. ಸಂಸ್ಕೃತದ ಮಹಾಕಾವ್ಯಗಳು ಕನ್ನಡಕ್ಕೆ ಬಂದವು. ರಷ್ಯನ್‌ ಮತ್ತು ಜರ್ಮನ್‌ ಸಾಹಿತ್ಯ ಕನ್ನಡಕ್ಕೆ ಬಂದಿರುವುದಕ್ಕೂ ಭಾರತದ ದೇಸಿ ಭಾಷೆಗಳ ಸಾಹಿತ್ಯವು ನಮ್ಮ ಭಾಷೆಗೆ ಅನುವಾದಗೊಂಡಿರುವುದಕ್ಕೂ ಸಂಬಂಧವಿದೆ. ಮರಾಠಿ, ಮಲಯಾಳಂ ಜೊತೆಗೆ ಬಂಗಾಲಿ ಭಾಷೆಯ ಸಾಹಿತ್ಯದ ಅನುವಾದವೂ ಇಲ್ಲಿ ಹೇರಳವಾಗಿದೆ. ಈ ಭಾಷೆಗಳನ್ನು ಹೊರತುಪಡಿಸಿದರೆ ಅನ್ಯ ದೇಸಿ ಭಾಷೆಗಳ ಅನುವಾದ ನಮ್ಮಲ್ಲಿ ಕಡಿಮೆ ಇದೆ. ಮರಾಠಿಯಲ್ಲಿ ಆತ್ಮಚರಿತ್ರೆ, ಆತ್ಮಕಥನಗಳ ಸಾಹಿತ್ಯ ಪ್ರಕಾರ, ಮಲಯಾಳಂನಲ್ಲಿ ಸ್ತ್ರೀ ಸಾಹಿತ್ಯ ಸಂಸ್ಕೃತದಿಂದ ಕಾವ್ಯಪ್ರಕಾರ ಹೆಚ್ಚು ಹೆಚ್ಚು ಕನ್ನಡಕ್ಕೆ ಬಂದಿವೆ.

ADVERTISEMENT

ಕನ್ನಡ ನವೋದಯ ಸಾಹಿತ್ಯ ಪ್ರಕಾರದ ಜೊತೆಗೆ ಮತ್ತೆ ಮತ್ತೆ ಟಾಲ್‌ಸ್ಟಾಯ್‌ ಹಾಗೂ ಗಾಂಧೀಜಿಯವರ ನೈತಿಕ ಸಿದ್ಧಾಂತಗಳು, ಧೋರಣೆಗಳು ಅನುಸಂಧಾನವಾಗುವ ಬಗೆಯನ್ನು ಲೇಖಕಿ ಪ್ರತಿಪಾದಿಸುತ್ತ ಹೋಗುತ್ತಾರೆ. ಕನ್ನಡದ ಜಾಯಮಾನಕ್ಕೆ ಒಗ್ಗುವ ಅನುವಾದ, ಕನ್ನಡತನದೊಂದಿಗೆ ಅನುಸಂಧಾನವಾಗುವ ಬಗೆಯನ್ನು ಪುಸ್ತಕ ಸರಳವಾಗಿ, ಉದಾಹರಣೆಗಳೊಂದಿಗೆ ವಿವರಿಸುತ್ತ ಹೋಗುತ್ತದೆ. ಸಾಹಿತ್ಯ ಸಂಶೋಧಕರಿಗೆ ಒಂದು ಆಕರ ಗ್ರಂಥದಂತೆ ಇರುವ ಕೃತಿಯಲ್ಲಿ ಪ್ರತಿ ಲೇಖನದೊಂದಿಗೆ ನೀಡಿರುವ ಆಕರಗ್ರಂಥಗಳ ಪಟ್ಟಿಯೂ ಅಧ್ಯಯನಕ್ಕೆ ಸಹಾಯಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.