ADVERTISEMENT

ಕರಿಡಬ್ಬಿ ಪುಸ್ತಕ ವಿಮರ್ಶೆ | ಕೊರೊನಾ ಕಾಲಘಟ್ಟಕ್ಕೆ ವಿಮರ್ಶಾಗನ್ನಡಿ

ಚ.ಹ.ರಘುನಾಥ
Published 4 ಜೂನ್ 2022, 20:15 IST
Last Updated 4 ಜೂನ್ 2022, 20:15 IST
ಕರಿಡಬ್ಬಿ
ಕರಿಡಬ್ಬಿ   

ರಾಜಾರಾಂ ತಲ್ಲೂರು, ವರ್ತಮಾನದ ದಂದುಗಗಳಿಗೆ ಬಿಡುಗಣ್ಣಾಗಿರುವ ಪತ್ರಕರ್ತರ ಸಾಲಿಗೆ ಸೇರಿದವರು. ಕಳೆದ ಐದು ವರ್ಷಗಳಿಂದ ವರ್ಷಕ್ಕೊಂದರಂತೆ ಅವರು ಪ್ರಕಟಿಸಿರುವ ಕೃತಿಗಳು – ‘ನುಣ್ಣನ್ನ ಬೆಟ್ಟ’ (2017), ‘ತಲ್ಲೂರು ಎಲ್ ಎನ್‌’ (2018), ‘ಏನಿದು ಪೌರತ್ವ ತಿದ್ದುಪಡಿ ಕಾಯಿದೆ’ (2019), ‘ದುಪ್ಪಟ್ಟು’ (2020) ಹಾಗೂ ‘ನಮ್ದೇಕತೆ’ (2021) – ಲೇಖಕನ ಆಸಕ್ತಿಗಳನ್ನು ಸೂಚಿಸುವುದರ ಜೊತೆಗೆ ಸಂವೇದನಾಶೀಲ ಬರಹಗಾರನೊಬ್ಬ ತನ್ನ ಕಾಲಕ್ಕೆ ಸ್ಪಂದಿಸಿರುವ ಪ್ರತಿಕ್ರಿಯೆಗಳೂ ಆಗಿವೆ. ಈ ಆಸಕ್ತಿ–ಆಶಯಗಳ ಮುಂದುವರಿಕೆ, ‘ಕರಿಡಬ್ಬಿ.’

‘ಕರಿಡಬ್ಬಿ’ ಕೊರೊನಾ ಕಾಲಘಟ್ಟಕ್ಕೆ ಕನ್ನಡಿ ಹಿಡಿಯುವ ಮಹತ್ವಾಕಾಂಕ್ಷೆಯ ಪ್ರಯತ್ನ. ಈ ಕನ್ನಡಿ ಬಿಂಬಗಳನ್ನಷ್ಟೇ ಕಾಣಿಸುತ್ತಿಲ್ಲ; ಮುಖಗಳ ಹಿಂದಿನ ಮುಖವಾಡಗಳನ್ನು ಕಾಣಿಸುವ ವಿಮರ್ಶಾಗುಣವನ್ನೂ ಹೊಂದಿದೆ. ಈ ವಿಶಿಷ್ಟ ಬರವಣಿಗೆಯನ್ನು ಎರಡು ರೀತಿಯಲ್ಲಿ ನೋಡಬಹುದು. ಸುಮಾರು ಎರಡು ವರ್ಷಗಳ ಕೊರೊನಾ ಅವಧಿಯಲ್ಲಿ ನಡೆದ ವಿದ್ಯಮಾನಗಳ ಪಕ್ಷಿನೋಟದ ಆಯಾಮ ಮೊದಲನೆಯದು. ಎರಡನೆಯದು, ಬಹುಮುಖ್ಯವಾದುದು – ಸಾಂಕ್ರಾಮಿಕ ಕಾಲಘಟ್ಟವನ್ನು ಈ ಸಮಾಜ ಅಥವಾ ವ್ಯವಸ್ಥೆ ಹೇಗೆ ಎದುರಿಸಿತು ಎನ್ನುವುದರ ವಿಶ್ಲೇಷಣೆ. ಒಂದು ಸಮಾಜವಾಗಿ ಕೊರೊನಾ ಕಾಲಘಟ್ಟವನ್ನು ನಿಭಾಯಿಸುವಲ್ಲಿ ನಾವು ವಿಫಲವಾದೆವೆ ಅಥವಾ ಸಫಲವಾದೆವೆ ಎನ್ನುವ ಪ್ರಶ್ನೆಗೆ ಸಹೃದಯರನ್ನು ಮುಖಾಮುಖಿ ಆಗಿಸುವಲ್ಲಿ ‘ಕರಿಡಬ್ಬಿ’ಯ ಯಶಸ್ಸಿದೆ.

ವರ್ತಮಾನದ ಸಾಕ್ಷಿಪ್ರಜ್ಞೆಯ ರೂಪದಲ್ಲಿ ಗುರ್ತಿಸಿಕೊಳ್ಳಬೇಕಾದ ಪತ್ರಕರ್ತನ ವಿಶ್ವಾಸಾರ್ಹತೆ ಪದೇಪದೇ ಪ್ರಶ್ನೆಗೊಳಗಾಗುತ್ತಿರುವ ಸನ್ನಿವೇಶ ಇಂದಿನದು. ಸಂವೇದನೆಗಳನ್ನೆಲ್ಲ ಸಾಬೂನು ಹಾಕಿಕೊಂಡು ತೊಳೆದುಕೊಂಡಂತೆ ಕೆಲವು ಪತ್ರಕರ್ತರು ವರ್ತಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಾಧ್ಯಮಕ್ಷೇತ್ರದಲ್ಲಿ ಇರುವವರಿಗೆ ಗೌರವ ತರುವಂತಹ ಬದ್ಧತೆ, ವೃತ್ತಿಪರತೆ ಹಾಗೂ ಕಸುಬುದಾರಿಕೆಯ ಮಾದರಿಯಂತೆಯೂ ‘ಕರಿಡಬ್ಬಿ’ ಕೃತಿಯನ್ನು ಗುರ್ತಿಸಬಹುದು.

ADVERTISEMENT

ಮಾಹಿತಿಗಳಿಂದ ಕಿಕ್ಕಿರಿದಿರುವ ಎಪ್ಪತ್ತೈದು ಅಧ್ಯಾಯಗಳು ಕೃತಿಯ ವ್ಯಾಪ್ತಿಯನ್ನು ಸೂಚಿಸುವಂತಿವೆ. ಪ್ರತೀ ಅಧ್ಯಾಯಕ್ಕೂ ಆಕರಗಳ ಉಲ್ಲೇಖವಿದೆ. 2019ರ ಡಿ. 31ರಿಂದ 2021ರ ಡಿ. 28ರವರೆಗಿನ ಎರಡು ವರ್ಷಗಳಲ್ಲಿ ಕೋವಿಡ್‌ ಹೆಜ್ಜೆಗುರುತುಗಳನ್ನು ದಾಖಲಿಸುವ ‘ಟೈಮ್‌ಲೈನ್‌’ ಇದೆ. ಹೆಚ್ಚುವರಿ ಓದಿಗಾಗಿ ಕೊಂಡಿಗಳನ್ನೂ ನೀಡಲಾಗಿದೆ. ಲೇಖಕರು ಉಲ್ಲೇಖಿಸಿರುವ ನೂರಾರು ಆಕರಗಳಲ್ಲಿ ಕನ್ನಡ ಮಾಧ್ಯಮಗಳ ಒಂದೆರಡು ಕೊಂಡಿಗಳಷ್ಟೇ ಇರುವುದು ಏನನ್ನು ಸೂಚಿಸುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಈ ‘ಕೊರೊನಾ ಕಥನ’ ರೂಪುಗೊಂಡಿದ್ದರೂ, ವಿಶ್ವದ ವಿವಿಧ ಭಾಗಗಳನ್ನೂ ಸಾಂಕ್ರಾಮಿಕ ಕಾಡಿದ ಬಗೆಯ ಸಂಕ್ಷಿಪ್ತ ನೋಟವೂ ಇದೆ.

ಈ ಕೃತಿ ವೈದ್ಯಕೀಯ ಜಗತ್ತಿನ ಇಣುಕುನೋಟ ಆಗಿರುವಂತೆಯೇ, ಸಾಮಾಜಿಕ ಕಥನ, ಆರ್ಥಿಕ ಕಥನ, ಸಾಂಸ್ಕೃತಿಕ ಕಥನ ಹಾಗೂ ಇವೆಲ್ಲವುಗಳನ್ನೂ ಹೆಣೆದುಕೊಂಡ ರಾಜಕೀಯ ಸಂಕಥನವಾಗಿ ರೂಪುಗೊಂಡಿದೆ. ಮಾಹಿತಿ ಪೋಣಿಸುವುದಷ್ಟೇ ಲೇಖಕರ ಉದ್ದೇಶವಾಗಿಲ್ಲ. ವಸ್ತುನಿಷ್ಠ ಮಾಹಿತಿಗಳ ಮೂಲಕ, ಸಂದರ್ಭವನ್ನು ಸರಿಯಾಗಿ ನಿಭಾಯಿಸಲಾಯಿತೇ ಇಲ್ಲವೇ ಎನ್ನುವ ವಿಶ್ಲೇಷಣೆಯನ್ನೂ ಲೇಖಕರು ಮಾಡಿದ್ದಾರೆ. ಬಿಕ್ಕಟ್ಟಿನ ಸಂದರ್ಭಕ್ಕೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಸ್ಪಂದನ ಹೇಗಿತ್ತು ಎನ್ನುವ ವಿವರಗಳಿವೆ. ಇಲ್ಲಿನ ಮಾಹಿತಿಗಳ ಮೂಲಕ ಓದುಗರು ತಮ್ಮದೇ ಆದ ನಿರ್ಧಾರಗಳಿಗೆ ಬರಲಿಕ್ಕೆ ಸಾಧ್ಯವಿದೆ. ಉದಾಹರಣೆಗೆ, ಕೊರೊನಾ ಅವಧಿಯಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣಗಳ ಮುಖ್ಯಾಂಶಗಳನ್ನು ನೀಡಿರುವ ಅಧ್ಯಾಯ. ಈ ಭಾಷಣಗಳನ್ನು ಒಟ್ಟಿಗೆ ಗಮನಿಸಿದರೆ – ಬಿಕ್ಕಟ್ಟನ್ನು ನಿಭಾಯಿಸಿದ ಪ್ರಧಾನಿಯವರ ಪ್ರಯತ್ನಗಳಲ್ಲಿ ಜವಾಬ್ದಾರಿಯುತ ನಡವಳಿಕೆಯ ಪಾಲೆಷ್ಟು, ಭಾವುಕತೆಯ ಪಾತ್ರವೆಷ್ಟು ಎನ್ನುವುದರ ವಿಶ್ಲೇಷಣೆ ಸುಲಭವಾಗುತ್ತದೆ.

ಟೀಕೆಗಳಿರುವಂತೆಯೇ ಧನಾತ್ಮಕ ಸಂಗತಿಗಳ ಟಿಪ್ಪಣಿಗಳಿಗೂ ಅವಕಾಶವಿರುವುದು ‘ಕರಿಡಬ್ಬಿ’ಯ ವಸ್ತುನಿಷ್ಠತೆ ಹೆಚ್ಚಿಸಿದೆ. ಜನಸಾಮಾನ್ಯರಿಗೆ ನ್ಯಾಯಾಂಗದ ಮೂಲಕ ದೊರೆತ ಸ್ಪಂದನ–ಸಮಾಧಾನ, ಸಕಾಲಕ್ಕೆ ಒದಗಿಬಂದ ‘ನರೇಗಾ ಯೋಜನೆ’ಯಂಥ ಸಂಗತಿಗಳನ್ನು ಲೇಖಕರು ಚರ್ಚಿಸಿದ್ದಾರೆ. ರೈತರು, ಕಾರ್ಮಿಕರು, ಮಕ್ಕಳು ಸೇರಿದಂತೆ ಸಮಾಜದ ಬೇರೆ ಬೇರೆ ವರ್ಗಗಳ ಮೇಲೆ ಕೋವಿಡ್‌ ಬೀರಿದ ಪರಿಣಾಮದ ಕುರಿತು ಲೇಖಕರು ಗಮನಸೆಳೆದರೂ, ಮಹಿಳೆಯರ ಕುರಿತ ಸಂಕಷ್ಟಗಳು ಯಾಕೋ ಅಷ್ಟಾಗಿ ಅವರ ಗಮನಸೆಳೆದಂತಿಲ್ಲ.

‘ಕರಿಡಬ್ಬಿ’ಯ ಓದು ಕೊರೊನಾಕ್ಕೆ ಸಂಬಂಧಿಸಿದಂತೆ ಓದುಗರ ತಿಳಿವಳಿಕೆಯನ್ನು ವಿಸ್ತರಿಸುತ್ತದೆ, ಈಗಾಗಲೇ ತಿಳಿದಿರುವ ಸಂಗತಿಗಳನ್ನು ಮತ್ತಷ್ಟು ಸ್ಪಷ್ಟಪಡಿಸಿ ಕೊಳ್ಳಲು ಕೈಪಿಡಿಯಾಗಿ ಒದಗಿ ಬರುತ್ತದೆ ಹಾಗೂ ಡಬ್ಬಿಯಲ್ಲಿನ ಕಪ್ಪು ನಮ್ಮೊಳಗೋ ಹೊರಗೋ ಇರಬಹುದೇ ಎಂದು ಪರಿಶೀಲಿಸಿ ಕೊಳ್ಳಲು ನಿಕಷವಾಗಿದೆ. ಇಲ್ಲಿನ ಅನೇಕ ಅಧ್ಯಾಯಗಳು ನಿಟ್ಟುಸಿರನ್ನೂ ಗಾಢ ವಿಷಾದವನ್ನೂ ಮೂಡಿಸ ಬಲ್ಲವು. ಕೊರೊನಾ ಕಾಲಘಟ್ಟ ವೈಯಕ್ತಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಅನೇಕ ಪಾಠಗಳನ್ನು ನಮಗೆ ಕಲಿಸಿತು. ನಮ್ಮ ಬದುಕಿನ ನಂಬಿಕೆಗಳನ್ನು ಉಜ್ಜಿ ನೋಡಿಕೊಳ್ಳುವಂತೆ ಮಾಡಿತು. ಈಗ, ಕೊರೊನಾದೊಂದಿಗೆ ಜಗತ್ತು ಹೊಂದಾಣಿಕೆಯ ಬಾಳ್ವೆ ನಡೆಸುತ್ತಿರುವಾಗ, ಕಳೆದ ಎರಡು ವರ್ಷಗಳ ಅನುಭವಗಳಲ್ಲಿ ಎಷ್ಟು ನಮ್ಮ ಬದುಕಿನ ಭಾಗವಾಗಿವೆ ಹಾಗೂ ಎಷ್ಟು ಮರೆವಿಗೆ ಸಂದಿವೆ ಎನ್ನುವುದರ ಪರಾಮರ್ಶೆಗೂ ‘ಕರಿಡಬ್ಬಿ’ ಅವಕಾಶ ಕಲ್ಪಿಸುತ್ತದೆ.

ಕೊರೊನಾ ಕಾಲಘಟ್ಟಕ್ಕೆ ಕನ್ನಡಿ ಹಿಡಿಯುವ ಇಷ್ಟು ಸಮಗ್ರವಾದ ಕೃತಿ ಬೇರೆ ಭಾಷೆಗಳಲ್ಲಿ ಬಂದಿರುವುದು ಅನುಮಾನ. ಶ್ರದ್ಧೆ ಹಾಗೂ ಬದ್ಧತೆಗಳು ಮಿಳಿತಗೊಂಡ ವಿಶಿಷ್ಟ ಬರವಣಿಗಾಗಿ ರಾಜಾರಾಂ ಅವರಿಗೆ ಕನ್ನಡಿಗರ ಅಭಿನಂದನೆಗಳು ಸಲ್ಲಬೇಕು.

ಹೂರಣದಷ್ಟೇ ಪುಸ್ತಕದ ಮೈಮಾಟವೂ ಸೊಗಸಾಗಿದೆ. ಶೀರ್ಷಿಕೆಗೆ ತಕ್ಕಂತೆ ಪುಸ್ತಕದ ಆಕಾರವನ್ನೂ ಇದ್ದಿಲು ಪೂಸಿಕೊಂಡಿರುವ ಕರಿಡಬ್ಬಿಯಂತೆ ರೂಪಿಸಿರುವುದು ಕಲಾತ್ಮಕವಾಗಿದೆ. ಆದರೆ, ಈ ಕಲಾತ್ಮಕತೆ ಓದುಗರಿಗೆ ದುಬಾರಿಯಾಗಿ ಪರಿಣಮಿಸಿದೆ. ಸರಳತೆ ಎನ್ನುವುದು ಕೂಡ ಈ ಕೃತಿಯ ಮಟ್ಟಿಗೆ ಗುಣ–ಆಭರಣವೇ ಆಗಬಹುದಿತ್ತು.

ಕೃತಿ: ಕರಿಡಬ್ಬಿ
ಲೇ: ರಾಜಾರಾಂ ತಲ್ಲೂರು
ಬೆ: 600; ಪು: 500
ಪ್ರ: ಸಂಕಥನ, ಮಂಡ್ಯ.

ಸಂ: 9019529494.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.