ADVERTISEMENT

ಒಳನೋಟ: ಕಿಲಾರದ ಪ್ರಗತಿ ಪುರುಷನ ಸಾಹಸಗಾಥೆ

ಅಭಿಲಾಷ್ ಪಿ.ಎಸ್‌.
Published 18 ಫೆಬ್ರುವರಿ 2023, 19:30 IST
Last Updated 18 ಫೆಬ್ರುವರಿ 2023, 19:30 IST
ಕಿಲಾರ ಗಣೇಶ ಹೆಗಡೆ
ಕಿಲಾರ ಗಣೇಶ ಹೆಗಡೆ   

ಕೆಚ್ಚೆದೆಯ ಪ್ರಗತಿ ಪುರುಷ ಕಿಲಾರ ಗಣೇಶ ಹೆಗಡೆ
ಪ್ರ.ಸಂ.: ಜಯಪ್ರಕಾಶ ಹೆಗಡೆ
ಪ್ರ: ವಿಕಾಸ ಪ್ರಕಾಶನ, ಬೆಂಗಳೂರು
ಸಂ: 9900095204

ಹಳ್ಳಿಯಿಂದ ದಿಲ್ಲಿಯವರೆಗೆ ಎನ್ನುವುದು ಆಡುಮಾತು. ಆದರೆ ತಂತ್ರಜ್ಞಾನದ ಅಳವಡಿಕೆ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗಳ ವಿಷಯದಲ್ಲಿ ಇದು ತದ್ವಿರುದ್ಧ. ಇದು ಪೂರ್ವಗ್ರಹವೆಂದೂ ಹೇಳಬಹುದು. ಏಕೆಂದರೆ, ದಿಲ್ಲಿಯೂ ಬೆರಗಿನಿಂದ ಹಳ್ಳಿಯ ಸಾಧನೆಯನ್ನು ನೋಡಲು ಸಾಧ್ಯವಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಸಿಗುತ್ತಾರೆ ಕಿಲಾರ ಗಣೇಶ ಹೆಗಡೆ.

ಇನ್ನೂ ಜೋಗದ ಸಮೀಪ ವಿದ್ಯುತ್‌ ಉತ್ಪಾದನೆಯಾಗದ ಕಾಲವದು. ಶಿವನಸಮುದ್ರಕ್ಕೆ ಹೋಗಿ ವಿದ್ಯುತ್ತನ್ನು ಉತ್ಪಾದಿಸುವ ಸ್ಥಾವರಕ್ಕೆ ಭೇಟಿ ನೀಡಿದ್ದ ಗಣೇಶ ಹೆಗಡೆಯವರು ‘ಜನರಲ್‌ ಎಲೆಕ್ಟ್ರಿಕ್‌ ಕಂ’ ಪ್ರಕಟಿಸಿದ್ದ ಪುಸ್ತಕವೊಂದನ್ನು ಓದಿ ಪ್ರೇರೇಪಿತರಾಗಿದ್ದರು. ತಮ್ಮ ಪರಿಸರದಲ್ಲೇ ಸಣ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯ ಕನಸು ಹೊತ್ತು ಮುಂಬೈಗೆ ಹೋದರು. ಬೇಕಾದಂಥ ಎಲ್ಲ ಕಚ್ಚಾವಸ್ತುಗಳನ್ನು ಖರೀದಿಸಿ ತಂದು, ಜನರೇಟರಿನಿಂದ ವಿದ್ಯುತ್‌ ಉತ್ಪಾದಿಸಿದರು. 1938ರಲ್ಲಿ ಹೆಗಡೆಯವರ ಮನೆಯಲ್ಲಿನ ವಿದ್ಯುದ್ದೀಪಗಳು ಬೆಳಗಿದವು. ಇದು ಶರಾವತಿ ಕಣಿವೆಯಲ್ಲಿ ಮೊದಲ ಬಾರಿಗೆ ವಿದ್ಯುತ್‌ ಹರಿಯುವುದಕ್ಕೂ ದಶಕದ ಹಿಂದೆಯೇ ನಡೆದ ಘಟನೆ! ‘ಕಿಲಾರ ಹೆಗಡೆ ವಿದ್ಯುತ್‌ ಕೇಂದ್ರ’ಕ್ಕೆ ಭೇಟಿ ನೀಡಿದ ಅನುಭವಗಳನ್ನು ಬಿಚ್ಚಿಡುತ್ತಾ ನಾ. ಡಿಸೋಜ ಅವರು ‘ಓರ್ವ ಗ್ರಾಮೀಣ ರೈತ, ಜೋಗದಲ್ಲಿ ಕರೆಂಟ್‌ ತಯಾರಾಗುವುದಕ್ಕೆ ಮುನ್ನವೇ ತನ್ನ ಹಳ್ಳಿಯಲ್ಲಿ ವಿದ್ಯುತ್‌ ಉತ್ಪಾದಿಸಿದ್ದು ಮುಖ್ಯ ಅಲ್ಲವೇ’ ಎಂದು ಪ್ರಶ್ನಿಸುತ್ತಾರೆ.

ADVERTISEMENT

ಗಣೇಶ ಹೆಗಡೆ ಅವರೊಂದಿಗಿನ ಇಂಥ ಹಲವು ಅನುಭಗಳ, ನೆನಪುಗಳ ಜೊತೆಗೆ ಅವರ ಸಾಹಸಗಾಥೆಗಳ ಸರಮಾಲೆಯೇ ಈ ಕೃತಿ. ಈ ಗುಚ್ಛವನ್ನು ಕಟ್ಟಿಕೊಟ್ಟವರು ಅವರ ಬಂಧುಬಾಂಧವರು. ಅವರೊಂದಿಗಿನ ಒಡನಾಟ, ನಡೆದ ಸ್ವಾರಸ್ಯಕರ ಘಟನೆಗಳನ್ನು ಹೆಕ್ಕಿ ಇಲ್ಲಿ ಪೋಣಿಸಿದ್ದಾರೆ. ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಗಣೇಶ ಹೆಗಡೆಯವರು ಸಾಧಾರಣದವರೇನಲ್ಲ! ಇಲ್ಲಿನ ಲೇಖನಗಳೇ ಅವುಗಳಿಗೆ ಸಾಕ್ಷಿ. ಕೃಷಿ ಕುಟುಂಬವೊಂದರಿಂದ ಬಂದ ಹೆಗಡೆಯವರು ಆಧುನಿಕ ತಂತ್ರಜ್ಞಾನ ಇನ್ನೂ ದೇಶಕ್ಕೆ ಕಾಲಿಡದ ಸಂದರ್ಭದಲ್ಲೇ ಕಗ್ಗಾಡಿನಲ್ಲಿದ್ದುಕೊಂಡು ಸಾಧಿಸಿದ ಸಾಧನೆಗಳು, ಸಾಹಸದ ಪಟ್ಟಿ ಪುಟ ಉರುಳಿದಂತೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ಕೃತಿ ಒಂದು ರೀತಿಯಲ್ಲಿ ಅವರ ಬದುಕಿನ ಹೂರಣ. ಬದುಕು–ಹೋರಾಟ–ಸಾಧನೆಗಳ ಚಿತ್ರಣ.

ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಹಳ್ಳಿಯಾದ ಐನಕೈಯಲ್ಲಿ ಜನಿಸಿದ ಹೆಗಡೆಯವರು, ರಾಮಯ್ಯ ಹೆಗಡೆ ಎಂಬ ಅನುಕೂಲಸ್ಥ ಕೃಷಿಕರ ಮಗ. ಬಾಲ್ಯದಲ್ಲೇ ತೀಕ್ಷ್ಣ ಬುದ್ಧಿಮತ್ತೆ, ಮೇಧಾಶಕ್ತಿಯನ್ನು ಹೊಂದಿದ್ದರಂತೆ. ಹೀಗಾಗಿ ಅವರ ಆಲೋಚನೆಯ ಕ್ರಮವೂ ಪ್ರಬುದ್ಧವಾಗಿತ್ತು. ಮಲೆನಾಡಿನಲ್ಲಿ ಮಲೇರಿಯಾ ಹಾವಳಿ ವಿಪರೀತವಾಗಿ, ಇದಕ್ಕೆ ದೆವ್ವ–ಭೂತಗಳ ಕಾಟವೆಂದು ನಂಬಿ, ಜನರು ದೊಡ್ಡ ಪ್ರಮಾಣದಲ್ಲಿ ಊರು ಬಿಡತೊಡಗಿದ್ದರು. ಇದರಿಂದಾಗಿ ಪಾಳುಬಿದ್ದ ಭೂಮಿಯನ್ನು ಖರೀದಿ ಮಾಡಿ, ಕೃಷಿಯ ಮೂಲಕ ಪುನರುದ್ಧರಿಸುವ ಕೆಲಸವನ್ನು ಹೆಗಡೆಯವರು ಆರಂಭಿಸಿದ್ದರು. ಈ ಸಂದರ್ಭದಲ್ಲಿ ‘ಜನರು ಸಾಯುತ್ತಿರುವುದು ರೋಗದಿಂದ ವಿನಾ ದೆವ್ವ–ಭೂತಗಳೆಲ್ಲ ಮೂಢನಂಬಿಕೆ’ ಎನ್ನುವುದನ್ನು ಹೆಗಡೆಯವರು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರಂತೆ.

ಇದೇ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ವಿಜಯನಳಿನಿ ರಮೇಶ್‌ ನೆನಪಿಸಿಕೊಳ್ಳುತ್ತಾರೆ: ‘ಕಿಲಾರಕ್ಕೆ ಬಂದು ನೆಲೆಸಿದ ಹೆಗಡೆಯವರು 140 ಎಕರೆ ಜಮೀನನ್ನು ಕ್ರಯಕ್ಕೆ ತೆಗೆದುಕೊಂಡಿದ್ದರು. ಕಿಲಾರ ಪ್ರವೇಶ ಮಾಡಿದ ಅವರು ಮೊದಲಿಗೆ ಮಾಡಿದ ಕೆಲಸವೆಂದರೆ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಚದುರಿಬಿದ್ದಿದ್ದ ಭೂತ, ಚೌಡಿ ಮುಂತಾದ ಕಲ್ಲುಗಳನ್ನು ತೆಗೆದು ಪಾಗಾರಕ್ಕೆ ಹಾಕಿಸಿದ್ದು. ಈ ಸಂದರ್ಭದಲ್ಲಿ ‘ನಮ್ಮ ದೇವ್ರನ್ನೆಲ್ಲಾ ಕಿತ್ತು ಹಾಕಿ ಕಂಟ್ನೆಗೆ (ಪಾಗಾರ) ಹಾಕ್ಬಿಟ್ಟೀರಿ ಹೆಗಡೇರೇ. ಈಗ ನಾವು ಹರಕೆ ಹೇಳಿಕ್ಯಂಡ ಕುರಿ, ಕೋಳಿ ಎಲ್ಲ ಕೊಡದೆಲ್ರಾ? ನಮ್‌ ದೇವ್ರಿಗೆ ಶಿಟ್‌ ಬಂದು ಆ ಮಲೇರಿ ರೋಗೆಲ್ಲಾ ಹೆಚ್‌ ಆಗ್ತಾ ಐತಿ, ನಾವೆಲ್ಲಾ ನಾಸ ಆಗಿ ಹೊಕ್ಕೆಂವೆ. ನಮ್ಗೆ ಊರು ಬಿಡದು ಬಿಟ್ರೆ ಬೇರೆ ದಾರಿಯೇ ಇಲ್ಲದ ಹಾಂಗಾಗೈತಿ’ ಎಂದು ರೈತರ ಗುಂಪೊಂದು ದೂರು ಸಲ್ಲಿಸಿತ್ತು. ‘ಇವರಿಲ್ಲದೆ ತನ್ನ ಭೂಮಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲವೆಂದು ತಿಳಿದ ಹೆಗಡೆಯವರು ಅವರ ಮನಸ್ಸನ್ನು ಒಳ್ಳೆಯ ಮಾತುಗಳಲ್ಲಿ ಪರಿವರ್ತಿಸಿ, ಒಂದೆರಡು ಕಲ್ಲುಗಳನ್ನು ಸರಿಯಾದ ಜಾಗದಲ್ಲಿ ಹುಗಿಸಿ, ಪೂಜೆ ಸಲ್ಲಿಸಲು ಪ್ರಶಸ್ತಗೊಳಿಸಿಕೊಟ್ಟಿದ್ದರು’.

ಈ ರೀತಿಯ ಸಾಹಸ, ಸಾಧನೆಗಳ ಪಟ್ಟಿ ಪುಸ್ತಕದುದ್ದಕ್ಕೂ ಇದೆ. ಕಾಡುಗುಡ್ಡಗಳ ಮೇಲೆ ರಾಗಿ ಬೆಳೆಯುವ ಯೋಜನೆ, ಕಿಲಾರದ ಜಮೀನಿನಲ್ಲಿ ಕಬ್ಬು ಬೆಳೆ, ಸಕ್ಕರೆ ಕಾರ್ಖಾನೆಯ ನಿರ್ಮಾಣ, ಜಿಲ್ಲೆಯಲ್ಲಿ ಮೊದಲು ವಿಧವಾ ವಿವಾಹ ಮಾಡಿಸಿದ್ದು, ಅಮೃತ ಮಹಲ್‌ ತಳಿಯ ಗೋವುಗಳ ಸಾಕಣೆ, ಕೃಷಿ ವಿದ್ಯಾಶಾಲೆ ಪ್ರಾರಂಭಿಸಿದ್ದು, ಅಡಿಕೆ ಸುಂಕ ರದ್ದತಿಯ ಬಗ್ಗೆ ನಡೆದ ಹೋರಾಟ, ಕರನಿರಾಕರಣೆ ಚಳವಳಿಯಲ್ಲಿ ಪರೋಕ್ಷ ಕೆಲಸ, ವಿದ್ಯುತ್‌ ಬೇಲಿಯ ಪರಿಕಲ್ಪನೆ ಮತ್ತು ನಾಯಿಯ ಮೇಲೆ ಅದರ ಪ್ರಯೋಗ, ಮಲೆನಾಡು ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಕನಸು... ಸಾಧನೆಗಳ ಪಟ್ಟಿಯೇ ಇಲ್ಲಿದೆ. ಗಣೇಶ ಹೆಗಡೆ ಅವರ ಆತ್ಮಚರಿತ್ರೆಯ ಪ್ರಮುಖ ಅಂಶಗಳನ್ನೂ ಇಲ್ಲಿ ಕ್ರೋಡೀಕರಿಸಿ ನೀಡಲಾಗಿದೆ. ಇಲ್ಲಿನ ಹಲವು ಸಾಧನೆಗಳ ವಿವರ ಇಂದಿನ ಯುವಜನತೆಗೆ ಸ್ಫೂರ್ತಿಯಾಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.