ADVERTISEMENT

ಟಿಂಗ್‌ ಟಿಂಗ್‌ ನಾದ; ಚಂಗ್‌ ಚಂಗ್‌ ನೆಗೆತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:31 IST
Last Updated 9 ನವೆಂಬರ್ 2019, 19:31 IST
ಕುವೆಂಪು
ಕುವೆಂಪು   

ತುಂಗಾ ತೀರದಲ್ಲಿ ಹಿಂದೊಮ್ಮೆ ಕೇಳಿದ್ದ ಆ ‘ಟಿಂಗ್‌ ಟಿಂಗ್‌’ ನಾದ, ಅದನ್ನು ಹಿಂಬಾಲಿಸಿದ್ದ ಮಣಮಣ ಮಂತ್ರ ಮತ್ತೆ ಕಿವಿಗೆ ಬಂದು ಅಪ್ಪಳಿಸಿದ ಅನುಭವ. ಜಗವನೆ ಮೋಹಿಸಿದ ಆ ನಾದದ ಸದ್ದು ಜೋರಾದಂತೆ ಮನೆಯಿಂದ ‘ಚಂಗ್‌ ಚಂಗ್‌’ ನೆಗೆದು ಹೊರಬಂದು ನೋಡಿದೆ. ಅದಾಗಲೇ ಗಡ್ಡವ ನೀವುತ ಸುತ್ತಲೂ ನೋಡಿ, ಮಂತ್ರವ ಬಾಯಲಿ ಮಣಮಣ ಹಾಡಿ, ನಿಂತಿದ್ದ ಕಿಂದರಿ ಜೋಗಿ.

ಬೊಮ್ಮನಹಳ್ಳಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ, ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಬಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲರನ್ನೂ ತುಂಗಾ ನದಿಯಲ್ಲಿ ಮುಳುಗಿಸಿದ್ದು ನೀನೇ ಅಲ್ಲವೇ ಜೋಗಿ ಎಂದೆ. ‘ಅಷ್ಟೇ ಅಲ್ಲ ತಮ್ಮಾ, ಕೇಳಿಲ್ಲಿ. ಊರಿನ ಗೌಡ ಮಾತಿಗೆ ಒಪ್ಪಿದಂತೆ ದುಡ್ಡು ಕೊಡದಿದ್ದಾಗ, ಇನ್ನೊಂದು ನಾದ ಬಾರಿಸಿದೆ ನೋಡು. ಊರಿನ ಮಕ್ಕಳೆಲ್ಲ ನನ್ನನ್ನು ಹಿಂಬಾಲಿಸಿಕೊಂಡು ಬಂದರು’ ಎಂದು ಜೋಗಿ ಹೇಳಿದ. ‘ಬೆಟ್ಟದ ಬಾಗಿಲು ತೆಗೆಸಿ ಆ ಮಕ್ಕಳನ್ನು ಕರೆದುಕೊಂಡು ಹೋದೆಯಲ್ಲ; ಮುಂದೇನಾಯಿತು’ ಎಂದು ಕೇಳಿದೆ. ಅದು ಸಸ್ಪೆನ್ಸ್‌ ಎಂದು ಕಣ್ಣು ಮಿಟುಕಿಸಿದ.

‘ಭಾಷೆಯ ಕೊಟ್ಟರೆ ಮೂರ್ತಿ, ನಾವು ಮೋಸವ ಮಾಡದೆ ಸಲ್ಲಿಸಬೇಕು’ ಎಂದು ಕುವೆಂಪು ತಾತಾ ಹೇಳಿಲ್ಲವೇ? ಕೊಟ್ಟ ಭಾಷೆಯನ್ನು ಮರೆತ ಎಲ್ಲರನ್ನೂ ಕರೆದೊಯ್ಯಲು ಈಗ ಬಂದಿರುವೆ ಎಂದ ಜೋಗಿ. ಅಯ್ಯೋ ಇಲ್ಲಿ ಎಷ್ಟೊಂದು ಮಾಲಿನ್ಯ ತುಂಬಿದೆ. ಮೊದಲು ಕಿನ್ನರಿ ನುಡಿಸಿ, ಅದನ್ನು ಕರೆದೊಯ್ಯುವೆ. ನೀವೆಲ್ಲ ಗಿಡಮರ ಬೆಳೆಸಿ, ಪರಿಸರ ಪ್ರೀತಿ ತೋರಿ ಎಂದ ಜೋಗಿ, ಯಾವುದೋ ಬೀದಿಯಲ್ಲಿ ಮಾಯವಾದ. ಟಿಂಗ್‌ ಟಿಂಗ್‌ ಸದ್ದು ಕೇಳುತ್ತಲೇ ಇತ್ತು.

ADVERTISEMENT

ಕುವೆಂಪು ಅವರು ಮಕ್ಕಳಿಗೆ ಕೊಟ್ಟ ಅಮೋಘ ಕಥನಕಾವ್ಯ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’. ಈ ಕಾವ್ಯಕ್ಕೆ ಇನ್ನೇನು ನೂರು ವರ್ಷಗಳು ತುಂಬಲಿವೆ (ರಚನೆ: 1926). ದೇಶದ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌ ಅವರು ಈ ಕಾವ್ಯಕ್ಕೆ ಚಿತ್ರಗಳನ್ನು ಬರೆದುಕೊಟ್ಟಿರುವುದು ವಿಶೇಷ. ಮಕ್ಕಳೆಲ್ಲ ಓದಲೇಬೇಕಾದ ಪುಸ್ತಕ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.