ADVERTISEMENT

ಎಡ ಚಿಂತನೆಗಳ ದೊಂದಿ

ವಿಕ್ರಂ ಕಾಂತಿಕೆರೆ
Published 13 ಜುಲೈ 2019, 19:45 IST
Last Updated 13 ಜುಲೈ 2019, 19:45 IST
   

‘ಪೊ ಲೀಸರ ಲಾಠಿಯಲ್ಲೇನಾದರೂ ವೀರ್ಯ ಇದ್ದಿದ್ದರೆ ನಾನು ಸಾವಿರಾರು ಲಾಠಿಗಳನ್ನೇ ಹೆರುತ್ತಿದ್ದೆ…’

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿನಲ್ಲಿದ್ದು, ಬಿಡುಗಡೆಯಾದ ನಂತರ ‘ಗೌರಿ’ ಆಡಿದ ಈ ಮಾತು ಬಂದೀಖಾನೆಯಲ್ಲಿ ಅನುಭವಿಸಿದ ಕ್ರೌರ್ಯ ಮತ್ತು ಮಾನಸಿಕ ಯಾತನೆಯನ್ನು ಸಮರ್ಥವಾಗಿ ಚಿತ್ರಿಸಿತ್ತು. ಗೂಢಾರ್ಥದ ಈ ಹೇಳಿಕೆಯಲ್ಲಿ ಟೀಕೆ ಇತ್ತು; ಲೇವಡಿಯೂ.

ತುರ್ತು ಪರಿಸ್ಥಿತಿಯ ನಂತರ ಕೇರಳದಲ್ಲಿ ಎಡಪಂಥೀಯ ಹೋರಾಟದ ಸಂದರ್ಭದಲ್ಲೆಲ್ಲ ಈ ಮಾತು ಪ್ರತಿಯೊಬ್ಬರ ಆಂತರ್ಯದಲ್ಲಿ ಘೋಷವಾಕ್ಯದಂತೆ ಮೊಳಗುತ್ತಿತ್ತು. ಜಗತ್ತೇ ಅಚ್ಚರಿಯಿಂದ ಗಮನಿಸಿದ ಗೌರಿ ಅವರ ಜೈಲುವಾಸದ ಅನುಭವ ‘ಕಥನ’ ಕೊನೆಗೆ ಪುಸ್ತಕ ರೂಪದಲ್ಲೂ ಬಂತು, ಬೆಳ್ಳಿತೆರೆಯಲ್ಲೂ ಮೂಡಿತು.

ADVERTISEMENT

ಮಹಿಳೆಗೆ ಸಾಮಾಜಿಕ ಹೋರಾಟ, ರಾಜಕೀಯ ಇತ್ಯಾದಿ ನಿಷಿದ್ಧ ಎಂಬಂತೆಯೇ ಬಿಂಬಿತವಾಗಿದ್ದ ಸಂದರ್ಭದಲ್ಲಿ ಎಡಚಿಂತನೆಗಳನ್ನು ಮೈ-ಮನಸಿನಲ್ಲಿ ತುಂಬಿಕೊಂಡು ಬೀದಿ ಬೀದಿಯಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಮೊಳಗಿಸಿದವರು ಗೌರಿ, ಅರ್ಥಾತ್ ಕೆ.ಆರ್.ಗೌರಿ ಅಮ್ಮ. ಅವರು ಈಗ ನೂರು ವಸಂತಗಳನ್ನು ಕಂಡ ಚೇತನ.

ಕೇರಳ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ಗಟ್ಟಿ ದನಿಯಾಗಿದ್ದ ಗೌರಿಯಮ್ಮ ಅಲ್ಲಿನ ಸಾಮಾಜಿಕ ಜೀವನದಲ್ಲೂ ‘ನಿಯಮಸಭಾ’ದಲ್ಲೂ (ವಿಧಾನಸಭೆ) ದಾಖಲೆಗಳನ್ನು ಬರೆದಿದ್ದಾರೆ. ಹೀಗಾಗಿ ಅವರಿಗೆ ಹಿತ-ಶತ್ರುಗಳೂ ಇದ್ದರು. ಅಂಥವರ ಕುತಂತ್ರದ ರಾಜಕೀಯದಿಂದಾಗಿ ಬೀಳುಗಳನ್ನು ಕಂಡರು. ತಮ್ಮವರೇ ತೋಡಿದ ಖೆಡ್ಡಾದಲ್ಲಿ ಬಿದ್ದಾಗ ಸಾಮಾಜಿಕ ಕಾರ್ಯ, ಸಾಹಿತ್ಯ ಕೃಷಿಯತ್ತ ಹೊರಳಿ ಜೀವನ ಸಾರ್ಥಕ ಮಾಡಿಕೊಂಡರು.

ಅನ್ಯಾಯಕ್ಕೆ ನಿಷ್ಠುರ ಉತ್ತರ

ಕೆ.ಎ.ರಾಮನ್ ಮತ್ತು ಪಾರ್ವತಿ ಅಮ್ಮ ದಂಪತಿಯ ಏಳನೇ ಪುತ್ರಿ, ಗೌರಿಯಮ್ಮ. ತುರ ವೂರ್ ಮತ್ತು ಚೇರ್ತಲದಲ್ಲಿ ಶಾಲಾ ಶಿಕ್ಷಣ. ಎರ್ನಾಕುಳಂ ಮಹಾರಾಜ ಕಾಲೇಜಿನಲ್ಲಿ ಪದವಿ. ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ. ಈ ಸಾಧನೆ ಮಾಡಿದ ಈಳವ ಸಮುದಾಯದ ಮೊದಲ ಮಹಿಳೆ ಎಂಬ ದಾಖಲೆ.

ಹುರಿಹಗ್ಗ ತಯಾರಿಕೆಯ ಜೊತೆಯಲ್ಲೇ ಸಾಮಾಜಿಕ ಹೋರಾಟಕ್ಕಾಗಿ ಮನವನ್ನು ಹುರಿಗೊಳಿಸಿದವರಲ್ಲಿ ಪ್ರಮುಖರು; ಆಲಪ್ಪುಳ ಜಿಲ್ಲೆಯವರು. ಆ ಪರಿಸರದಲ್ಲಿ ಬೆಳೆದ ಗೌರಿಯಮ್ಮ ವಿದ್ಯಾರ್ಥಿ ಜೀವನದಲ್ಲೇ ಕೆಂಪು ಪತಾಕೆ ಹಿಡಿದು ಹೆಜ್ಜೆ ಹಾಕಿದರು. ಅನ್ಯಾಯ, ದೌರ್ಜನ್ಯ, ಅಸಮಾನತೆ ಕಂಡರೆ ಸಿಡಿದೇಳುವ ಮನೋಭಾವ ರಕ್ತಗತವಾಗಿದ್ದರಿಂದ ಅವರ ಜೀವನದ ಪ್ರತಿ ಹಂತವೂ ಹೋರಾಟದ ಒಂದೊಂದು ಅಧ್ಯಾಯವಾಯಿತು.

ಅಣ್ಣ ಸುಕುಮಾರನ್ ಜೊತೆಗೂಡಿ ಕಾರ್ಮಿಕರ ಮತ್ತು ಕೃಷಿಕರ ಪರ ಹೋರಾಟಕ್ಕಿಳಿದ ಅವರು ‘ರಾಜಕೀಯ ಚಟುವಟಿಕೆ’ಯ ಹಿನ್ನೆಲೆಯಲ್ಲಿ ಅನೇಕ ಬಾರಿ ಜೈಲು ಸೇರಬೇಕಾಯಿತು. ಆದರೆ ಆ ಹೋರಾಟದ ದನಿಯೇ ಅವರನ್ನು ಜನರ ಪ್ರತಿನಿಧಿಯನ್ನಾಗಿಸಿತು. ಇ.ಎಂ.ಎಸ್.ನಂಬೂದಿರಿಪ್ಪಾಡ್ ನೇತೃತ್ವದಲ್ಲಿ 1957ರಲ್ಲಿ ರಚನೆಯಾದ ಕೇರಳದ ಮೊದಲ ಕಮ್ಯುನಿಸ್ಟ್ ಸರ್ಕಾರದಲ್ಲಿ ಕಂದಾಯ ಸಚಿವೆಯಾದರು. ಸಚಿವ ಸಂಪುಟದ ಸಹಚರ ಕಾಮ್ರೇಡ್ ಟಿ.ವಿ.ಥಾಮಸ್ ಜೊತೆ ಅದೇ ವರ್ಷ ಆದರ್ಶ ದಾಂಪತ್ಯವೂ ಆರಂಭವಾಯಿತು. ಮಂತ್ರಿಯಾದ ನಂತರವೂ ದೀನರ ಕುರಿತ ಕಾಳಜಿ ಹೆಚ್ಚಿತು. ಹಟತೊಟ್ಟು ಜಾರಿಗೆ ತಂದ ಭೂ ಸುಧಾರಣೆ ನಿಯಮ ರಾಷ್ಟ್ರದಲ್ಲೇ ಹೆಸರು ಮಾಡಿತು.

ಉಳುವವರನ್ನು ಹೊಲದೊಡೆಯರನ್ನಾಗಿಸುವ ಮತ್ತು ಶ್ರೀಮಂತರ ಬಳಿ ಇದ್ದ ಹೆಚ್ಚುವರಿ ಜಾಗವನ್ನು ಭೂರಹಿತರಿಗೆ ನೀಡುವ ಮಸೂದೆಯನ್ನು ಗೌರಿಯಮ್ಮ ಮಂಡಿಸಿದ್ದರು. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಉಳ್ಳವರು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಈ ಬೆಳವಣಿಗೆಗಳಿಂದಾಗಿ ನಿಯಮ ರೂಪಿಸಲು ಸಾಧ್ಯವಾಗಲಿಲ್ಲ. ಮುಂದೆ ಸಿಪಿಎಂ ಅಧಿಕಾರಕ್ಕೆ ಬಂದದ್ದು ಒಂದು ದಶಕದ ನಂತರ. ಆಗಲೂ ಭೂಸುಧಾರಣೆ ಕಾಯ್ದೆಯ ಬಗ್ಗೆ ಕಾಳಜಿ ವಹಿಸಿದ ಅವರು ಹಿಂದಿನ ಸರ್ಕಾರ ಜಾರಿಗೆ ತಂದ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಿ ಜಾರಿಗೊಳಿಸಿದರು. ಸಾವಿರಾರು ಮಂದಿ ಸ್ವಂತ ಜಾಗ ಹೊಂದಿದರು.

ಕವಲು ದಾರಿಯಲ್ಲಿ ಸಾಗಿದ ಬದುಕು

1964, ಗೌರಿಯಮ್ಮ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಕವಲು ದಾರಿಯಲ್ಲಿ ಸಾಗಿದ ವರ್ಷ. ಎಡಪಕ್ಷ ಸಿಪಿಐ ಮತ್ತು ಸಿಪಿಎಂ ಆಗಿ ಹೋಳಾದಾಗ ಪತಿ-ಪತ್ನಿಯರೂ ಭಿನ್ನ ಹಾದಿಯಲ್ಲಿ ಸಾಗಿದರು. ಗೌರಿಯಮ್ಮ ಸಿಪಿಐನಲ್ಲೇ ಉಳಿದರು. ಆದರೆ ಸರಿಯಾಗಿ ಮೂರು ದಶಕಗಳ ನಂತರ ‘ಪಕ್ಷ ವಿರೋಧಿ ಚಟುವಟಿಕೆ’ಯಲ್ಲಿ ಪಾಲ್ಗೊಂಡದ್ದಕ್ಕಾಗಿ ಪಕ್ಷದಿಂದ ಉಚ್ಚಾಟನೆಗೆ ಒಳಗಾದರು.

ಎದೆಗುಂದದ ಗೌರಿಯಮ್ಮ ಜನಾಧಿಪತ್ಯ ಸಂರಕ್ಷಣ ಸಮಿತಿ (ಪ್ರಜಾಪ್ರಭುತ್ವ ರಕ್ಷಣಾ ಸಮಿತಿ) ಸ್ಥಾಪಿಸಿದರು. ಈ ಸಂಘಟನೆಗೆ ಸಿಕ್ಕಿದ ಜನಬೆಂಬಲ ಕೇರಳದಲ್ಲಿ ಸಿಪಿಎಂನ ತಳವನ್ನೇ ಅಲುಗಾಡಿಸಿತು. ಕ್ರಮೇಣ ಈ ಸಂಘಟನೆ ಯುಡಿಎಫ್‌ಗೆ (ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಪ್ರಭುತ್ವ ರಂಗ) ಬೆಂಬಲ ನೀಡಿತು. ಕಾಂಗ್ರೆಸ್ ಸರ್ಕಾರದಲ್ಲಿ ಗೌರಿಯಮ್ಮ ಮಂತ್ರಿಯಾದರು.

ಆದರೆ ಎಡಚಿಂತನೆಯಲ್ಲೇ ಬೆಳೆದ ಅವರಿಗೆ ಕಾಂಗ್ರೆಸ್ ಪಾಳಯ ಉಸಿರುಗಟ್ಟಿಸಿತು. ಹೀಗಾಗಿ ದೂರ ಉಳಿಯಲು ಬಯಸಿದರು. ಚರ್ಚೆ, ಮಾತುಕತೆ, ಸಂಧಾನದ ಕೊನೆಯಲ್ಲಿ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿ, ಗೊಂದಲಗಳಿಗೆ ಕೊನೆ ಹಾಡಿದರು.

‘ಮೀನು ನೀರಿನಲ್ಲಿ ಇರುವಂತೆ ರಾಜಕಾರಣಿ ಜನಗಳ ಮಧ್ಯದಲ್ಲೇ ಇರಬೇಕು’ ಎಂಬುದು ಗೌರಿಯಮ್ಮ ಅವರ ರಾಜಕೀಯ ನೀತಿ. ಮಕ್ಕಳಿಲ್ಲದ ಅವರಿಗೆ ಜನಸೇವೆಯೇ ಜೀವನವಾಯಿತು; ಕಾಮ್ರೇಡ್ ಗಳೇ ಮಕ್ಕಳಾದರು. ಈಗ ಆ ಮಕ್ಕಳೇ ಜನ್ಮಶತಾಬ್ದಿ ಆಚರಿಸಲು ಮುಂದಾಗಿದ್ದಾರೆ. ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಪಕ್ಷ-ಭೇದವಿಲ್ಲದೆ ಮುಖಂಡರು ಪಾಲ್ಗೊಂಡು, ಹೋರಾಟದ ಜೀವಕ್ಕೆ ಶುಭ ಹಾರೈಸಿದ್ದಾರೆ.

ಸಂಕ್ಷಿಪ್ತ ಪರಿಚಯ

l ಹೆಸರು: ಕೆ.ಆರ್.ಗೌರಿಯಮ್ಮ

l ಜನನ: ಜೂನ್ 21, 1919

l ಸ್ಥಳ: ಪಟ್ಟಣಕ್ಕಾಡ್, ಆಲಪ್ಪುಳ ಜಿಲ್ಲೆ

l ಶಾಸಕಿ: 1952,1954 (ತಿರುವಾಂಕೂರು-ಕೊಚ್ಚಿ ವಿಧಾನಸಭೆ)

l 1957ರಿಂದ 2001 (ಕೇರಳ ವಿಧಾನಸಭೆ)

l ನಿರ್ವಹಿಸಿದ ಖಾತೆಗಳು: ಕಂದಾಯ, ತೆರಿಗೆ, ನಾಗರಿಕ ಪೂರೈಕೆ, ಸಮಾಜಕಲ್ಯಾಣ, ಕಾನೂನು, ಕೃಷಿ

ಸಾಮಾಜಿಕ ಕಾರ್ಯಗಳು

l ಅಧ್ಯಕ್ಷೆ, ಕೇರಳ ರೈತ ಸಂಘ
(1960-1984)

l ಅಧ್ಯಕ್ಷೆ, ಕೇರಳ ಮಹಿಳಾ ಸಂಘ
(1967-1976)

l ಕಾರ್ಯದರ್ಶಿ, ಕೇರಳ ಮಹಿಳಾ ಸಂಘ (1976-1987)

l ಸ್ಥಾಪಕಿ, ಜನಾಧಿಪತ್ಯ ಸಂರಕ್ಷಣ ಸಮಿತಿ (1994)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.