ADVERTISEMENT

ಪುಸ್ತಕ ವಿಮರ್ಶೆ | ಆಫ್ರಿಕಾ ನೆಲದ ಪಲ್ಲಟಗಳಿಗೆ ಕೈಗನ್ನಡಿ

ಎಚ್.ದಂಡಪ್ಪ
Published 4 ಫೆಬ್ರುವರಿ 2023, 19:30 IST
Last Updated 4 ಫೆಬ್ರುವರಿ 2023, 19:30 IST
ಯುದ್ಧ ಕಾಲದ ಹುಡುಗಿಯರು
ಯುದ್ಧ ಕಾಲದ ಹುಡುಗಿಯರು   

ಚಿನುವ ಅಚಿಬೆಯವರ ‘Girls at war’ ಎಂಬ ಕಥಾ ಸಂಕಲನವನ್ನು ಚನ್ನಪ್ಪ ಕಟ್ಟಿಯವರು ‘ಯುದ್ಧ ಕಾಲದ ಹುಡುಗಿಯರು’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ಅಚಿಬೆಯವರ ಕಥೆಗಳಲ್ಲಿ ಜನಾಂಗದ ಹಿರಿಯರ, ವಿವೇಕಿಗಳ ಧ್ವನಿಯಾಗಿ ಕಾಣುವ ನಿರೂಪಕನಿದ್ದಾನೆ. ಜೊತೆಗೆ ಅಲ್ಲಲ್ಲಿ ಬೇರೆ ಧ್ವನಿಗಳೂ ಕಾಣುತ್ತವೆ. ವಸಾಹತುಶಾಹಿ ಪ್ರವೇಶದಿಂದಾಗಿ ಶಿಕ್ಷಣ, ಹಣ, ಧರ್ಮಗಳ ಮೂಲಕ ಆಧುನಿಕತೆಯತ್ತ ಹೊರಳಲು ಸಾಧ್ಯವಾಯಿತು ಎಂದು ಹೇಳುವ ಸುಶಿಕ್ಷಿತ ವಿಮರ್ಶಕನೊಬ್ಬನ ಧ್ವನಿಯೂ ಇಲ್ಲಿದೆ.

ಇಲ್ಲಿನ ಕಥೆಗಳಲ್ಲಿ ಸಂಪ್ರದಾಯಕ್ಕೆ ಅಂಟಿಕೊಂಡವರಿದ್ದಾರೆ, ಐರೋಪ್ಯ ಪ್ರಜ್ಞೆಯನ್ನು ಬೆಳೆಸಿಕೊಂಡು ಆಧುನಿಕ ಮೌಲ್ಯಗಳನ್ನು ಅಳವಡಿಸಿಕೊಂಡವರಿದ್ದಾರೆ. ಜೊತೆಗೆ ನಿಧಾನವಾಗಿ ಪರಂಪರೆಯಿಂದ ವರ್ತಮಾನಕ್ಕೆ ಬದಲಾಗುವ ಒಂದು ಪ್ರಜ್ಞೆ ಇದೆ. ಸಮುದಾಯದ ಸಂಸ್ಕೃತಿಯು ಮೌನವಾಗಿರುವಂತೆ, ಕ್ಷೀಣವಾಗಿರುವಂತೆ ಕಂಡರೂ ಅದು ಚಲಿಸುತ್ತಿದೆ ಎಂಬಂತೆ ಓದುಗರಿಗೆ ಭಾಸವಾಗುವಂತೆ ಕಥೆಗಳ ನಿರೂಪಕ ಕಥೆಯನ್ನು ನಿರೂಪಿಸುತ್ತಾನೆ.

ಆಫ್ರಿಕಾದ ಸಂಸ್ಕೃತಿಯಲ್ಲಿ ವಸಾಹತುಶಾಹಿ ಬರುವುದಕ್ಕಿಂತ ಮುಂಚೆ ಬಿರುಕುಗಳಿದ್ದವು. ಕ್ರೈಸ್ತ ಧರ್ಮ ಬಂದಾಗ ಅವರ ಸಂಸ್ಕೃತಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳುಂಟಾದವು. ಕೆಟ್ಟ ಪರಿಣಾಮಗಳಲ್ಲಿ ಭ್ರಷ್ಟಾಚಾರವೂ ಒಂದು. ಎರಡನೇ ಪೀಳಿಗೆಯಲ್ಲಿ ಇದರ ವಿರಾಟ್ ದರ್ಶನವನ್ನು ಕಾಣಬಹುದು. ಇಲ್ಲಿನ ಕೆಲವು ಕಥೆಗಳಲ್ಲಿ ಈ ಭ್ರಷ್ಟತೆಯ ಸ್ವರೂಪವನ್ನು ಕಾಣಬಹುದು.

ADVERTISEMENT

ಪಾರಂಪರಿಕ ಜೀವನ ವಿಧಾನ, ನಗರದ ಆಕರ್ಷಣೆ, ರಾಜಕೀಯ ಹಾಗೂ ಆರ್ಥಿಕ ಭ್ರಷ್ಟಾಚಾರ, ಸ್ವಾತಂತ್ರ್ಯ ಬಂದ ನಂತರದ ಭ್ರಮನಿರಸನ, ಬುಡಕಟ್ಟು ಗ್ರಾಮಕ್ಕೂ ನಗರಕ್ಕೂ ಇರುವ ವೈದೃಶ್ಯ, ಭ್ರಷ್ಟತೆಗೆ ಇವೆರಡೂ ಪರಸ್ಪರ ಪೂರಕವಾಗಿರುವುದರ ಸ್ವರೂಪದ ಅನಾವರಣವೂ ಈ ಕಥೆಗಳ ನಿರೂಪಣೆಯಲ್ಲಿದೆ.

ಈ ಕಥೆಗಳಲ್ಲಿ ಸಾಮಾಜಿಕ ಬದಲಾವಣೆಯನ್ನು ಒಪ್ಪಿಕೊಳ್ಳುವ ಮನೋಭಾವವಿದೆ. ಪರಿಶುದ್ಧ ಆಫ್ರಿಕಾಕ್ಕೆ ಮರುಳುವ ಹಂಬಲ ಇಲ್ಲಿಲ್ಲ. ಸಾಮಾಜಿಕ ಬದಲಾವಣೆ, ರಾಷ್ಟ್ರ ನಿರ್ಮಾಣ, ಸ್ವಾತಂತ್ರ್ಯ, ವರ್ಗಗಳ ಉದಯ, ಹೋರಾಟಗಳು ಒಂದು ಗುರಿಯತ್ತ ಚಲಿಸುತ್ತಿರುವ ಸ್ವರೂಪವನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಆದ್ದರಿಂದ ಇಲ್ಲಿನ ಕಥೆಗಳಲ್ಲಿ ಸಂಕ್ರಮಣಾವಸ್ಥೆಯ ಸ್ಥಿತಿಯ ಸ್ವರೂಪವನ್ನು, ನಿರ್ವಸಾಹತೀಕರಣದ ಲಯಗಳನ್ನು ಕಾಣಬಹುದು.

‘ಮದುವೆಯೆಂಬುದು ಖಾಸಗೀ ಸಂಗತಿ’ ಎಂಬ ಕಥೆಯಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷದ ಸ್ವರೂಪವಿದೆ, ಸಂಪ್ರದಾಯ ನಿಯಂತ್ರಿಸಿದರೆ ಆ ನಿಯಂತ್ರಣವನ್ನು ಮುರಿಯುವ ಕೆಲಸವನ್ನು ಆಧುನಿಕತೆಯ ಮೌಲ್ಯಗಳು ಮಾಡುತ್ತವೆ. ಆಧುನಿಕತೆಯ ಲಕ್ಷಣವೇ ಸ್ವಾತಂತ್ರ್ಯ ಮತ್ತು ಬದಲಾವಣೆಗಳು. ಆಧುನಿಕತೆಗೆ ಸಂಪ್ರದಾಯ ಮಣಿಯುತ್ತದೆ. ಇದಕ್ಕೆ ಕಾರಣ ಮಾನವ ಸಂಬಂಧಗಳು. ತಂದೆ ಮತ್ತು ಮಗನ ನಡುವೆ ನಡೆಯುವ ಸಂಘರ್ಷದಲ್ಲಿ ತಂದೆ ಶರಣಾಗುವುದು ತನ್ನ ಮಗನಿಗಲ್ಲ, ತನ್ನ ಸೊಸೆ ಮತ್ತು ಮೊಮ್ಮಕ್ಕಳಿಗೆ. ಮಳೆ, ಈ ಕಥೆಯಲ್ಲಿ ಬದಲಾವಣೆ ಮತ್ತು ಆಧುನಿಕತೆಯನ್ನು ಸ್ವಾಗತಿಸುವ ಸಂಕೇತವಾಗಿ ಬಂದಿದೆ. ಭಾರತದಂತಹ ಎಲ್ಲಾ ಸಂಪ್ರದಾಯ ನಿಷ್ಠ ಸಮಾಜಗಳಿಗೆ ಅನ್ವಯವಾಗುವ ಕಥೆ ಇದು.

‘ಯುದ್ಧಾನಂತರದ ಶಾಂತಿ’ ಈ ಸಂಕಲನದ ಎಲ್ಲಾ ದೃಷ್ಟಿಯಿಂದಲೂ ಬಹಳ ಯಶಸ್ವಿಯಾದ ಕಥೆ. ನೈಜೀರಿಯಾದ ಅಂತರ್ಯುದ್ಧದ ನಂತರ ಬರೆಯಲಾಗಿರುವ ಈ ಕಥೆಯಲ್ಲಿ ದೇಶದಲ್ಲಿ ಹಾಳಾಗಿರುವ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಅನಾವರಣಗೊಳಿಸುತ್ತಾ ಅಮಾಯಕ ಜೀವಗಳ ಸಾವು ಮತ್ತು ಜನರ ಶೋಚನೀಯ ಸನ್ನಿವೇಶಗಳನ್ನು ಸಾಂಕೇತಿಕವಾಗಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಯುದ್ಧದಲ್ಲಿ ಜೊನದನ್ ಮತ್ತು ಇವೆಗ್ಬು ದಂಪತಿಯ ಮನೆ, ಆಸ್ತಿ ಧ್ವಂಸವಾಗುತ್ತದೆ. ತನ್ನ ಮಗನನ್ನೂ ಕಳೆದುಕೊಂಡಿರುವ ಅವರು ಧ್ವಂಸಗೊಂಡ ತಮ್ಮ ಮನೆಯ ಅವಶೇಷಗಳ ಅಡಿಯಲ್ಲಿದ್ದ ಸೈಕಲ್ಲನ್ನು ತೆಗೆದು ರಿಪೇರಿ ಮಾಡಿ ಬಾಡಿಗೆ ಟ್ಯಾಕ್ಸಿಯನ್ನಾಗಿ ಪರಿವರ್ತಿಸಿ ಹಣ ಸಂಪಾದನೆ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಬಗೆ ಇಲ್ಲಿದೆ. ‘ಯುದ್ಧಾ ನಂತರದ ಶಾಂತಿ’ ಶೀರ್ಷಿಕೆಯೇ ವ್ಯಂಗ್ಯದಿಂದ ಕೂಡಿದೆ. ಅಧಿಕಾರಿಗಳ ಅಸಮರ್ಥತೆ, ಹಿಂಸಾಚಾರ, ಅದರ ಪರಿಣಾಮಗಳನ್ನು ಚಿತ್ರಿಸುವ ಈ ಕಥೆಯಲ್ಲಿ ಬೈಸಿಕಲ್, ಭರವಸೆ ಮತ್ತು ಬದುಕನ್ನು ಪುನರ್ ರೂಪಿಸಿಕೊಳ್ಳುವ ಸಂಕೇತವಾಗಿ ಬರುತ್ತದೆ. ‘ನಥಿಂಗ್ ಪಜಲ್ಸ್ ಗಾಡ್’ ಎಂಬ ಪದ ಅನುರಣನಗೊಳ್ಳುತ್ತದೆ. ‘ಯುದ್ದ ಕಾಲದ ಹುಡುಗಿಯರು’ ಕಥೆಯಲ್ಲಿಯೂ ಯುದ್ಧದ ಪರಿಣಾಮಗಳು ತೀವ್ರವಾಗಿ ಚಿತ್ರಣಗೊಂಡಿವೆ.

‘ಹುಚ್ಚ’ ಕಥೆಯು, ನೈಜೀರಿಯಾದ ಆದಿವಾಸಿ ಜನಾಂಗದ ಜೀವನವು ವಸಾಹತುಶಾಹಿಯ ಪ್ರಭಾವದಿಂದ ಛಿದ್ರವಾದವಾಗುವ ಸ್ವರೂಪವನ್ನು ಸಾಂಕೇತಿಕವಾಗಿ ಚಿತ್ರಿಸಿದರೆ ‘ಸಕ್ಕರೆಯ ಹುಡುಗಿ’ ಕಥೆ ಆಧುನಿಕತೆಯ ಸೆಳೆತದ ಅಪಾಯಕಾರಿ ನಿಲುವುಗಳನ್ನು ಹಿಡಿದಿಟ್ಟಿದೆ. ‘ಅಂಕಲ್ ಬೆನ್‌ನ ಆಯ್ಕೆ’, ‘ನಿವಾಳಿಸಿದ ಮೊಟ್ಟೆ’, ‘ಸೇಡಿನ ಸಾಲಗಾರ’, ‘ಚಾಯಿಕನ ಶಾಲಾದಿನಗಳು’ ಕಥೆಗಳಲ್ಲಿ ಆಧುನಿಕತೆ, ಇಂಗ್ಲಿಷ್ ಶಿಕ್ಷಣ, ಪ್ರಗತಿ ಎಂಬ ಪರಿಕಲ್ಪನೆಗಳ ಸತ್ಯಾಸತ್ಯಗಳು ಓದುಗನನ್ನು ಆಲೋಚಿಸುವಂತೆ ಮಾಡುವಂತೆ ನಿರೂಪಿತವಾಗಿವೆ.

ವಸಾಹತುಶಾಹಿಯ ಪರಿಣಾಮಗಳು ಸಮಕಾಲೀನ ಆಫ್ರಿಕನ್ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ‌ ಕ್ಷೇತ್ರಗಳಲ್ಲಿ ಯಾವ ರೀತಿ ಬದಲಾಣೆ ತಂದವು ಎಂಬುದನ್ನು ಅನಾವರಣಗೊಳಿಸುವ ನಿರೂಪಣೆ ಇಲ್ಲಿದೆ. ಭಾಷೆ ಸರಳವಾಗಿದ್ದು ವಾಕ್ಯಗಳು ಅರ್ಥಹೀನ ಅಲಂಕಾರಗಳಿಂದ ದೂರವಾಗಿವೆ. ಚಿತ್ರಗಳು, ಸಂಕೇತಗಳನ್ನು ಅರ್ಥಪೂರ್ಣವಾಗಿ ಬಳಸುವ ಅಚಿಬೆಯವರ ಈ ಕಥೆಗಳು ಭಾರತದ ಇಂದಿನ ಸಾಂಸ್ಕೃತಿಕ ಸಂದರ್ಭಕ್ಕೂ ಪ್ರಸ್ತುತವಾಗುತ್ತವೆ. ಇಂತಹ ಕಥೆಗಳನ್ನು ಕಟ್ಟಿಯವರು ಅಲ್ಲಲ್ಲಿ ಕಲ್ಯಾಣ ಕರ್ನಾಟಕದ ಭಾಷೆಯ ಪದಗಳನ್ನು ಬಳಸಿ ಮೂಲದಲ್ಲಿನ ಸಂಕೇತಗಳನ್ನು, ಚಿತ್ರಗಳನ್ನು, ಧ್ವನಿಯನ್ನು ಹಿಡಿದು ಅನುವಾದಿಸಿದ್ದಾರೆ.

***
ಕೃತಿ: ಯುದ್ಧ ಕಾಲದ ಹುಡುಗಿಯರು
ಕನ್ನಡಕ್ಕೆ: ಚನ್ನಪ್ಪ ಕಟ್ಟಿ
ಪ್ರ: ನೆಲೆ ಪ್ರಕಾಶನ ಸಂಸ್ಥೆ, ಸಿಂಧಗಿ
ಸಂ: 9481082518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.