ADVERTISEMENT

ಪುಸ್ತಕ ವಿಮರ್ಶೆ | ವಿಧವಾ ಪುನರ್ವಿವಾಹದ ಅನನ್ಯ ಚರಿತೆ

ಶರತ್‌ ಹೆಗ್ಡೆ
Published 11 ಫೆಬ್ರುವರಿ 2023, 19:45 IST
Last Updated 11 ಫೆಬ್ರುವರಿ 2023, 19:45 IST
ಸವಿಸ್ಮೃತಿ ಕೃತಿಯ ಮುಖಪುಟ
ಸವಿಸ್ಮೃತಿ ಕೃತಿಯ ಮುಖಪುಟ   

ಹೆಣ್ಣಿಗೆ ಪುನರ್‌ವಿವಾಹದ ಅವಕಾಶಗಳು ವೇದ– ಪುರಾಣ ಕಾಲದಿಂದಲೂ ಇದ್ದವು. ಈಗಲೂ ಇವೆ ಎನ್ನುವ ಸತ್ಯವನ್ನು ಗಂಟಾಘೋಷವಾಗಿ ಸಾರುವ ಕೃತಿ ಸವಿಸ್ಮೃತಿ. ಹೆಣ್ಣಿನ ಪುನರ್‌ವಿವಾಹದ ಸಂದರ್ಭಗಳನ್ನು ಸಾಕ್ಷೀಕರಿಸುತ್ತಲೇ ಶತಮಾನಗಳ ಹಿಂದೆಯೇ ವಿಧವಾ ವಿವಾಹವನ್ನು ಅನುಷ್ಠಾನಕ್ಕೆ ತಂದ ಧೀಮಂತ ಶಕ್ತಿಗಳ ಬಗ್ಗೆಯೂ ಕೃತಿ ವಿವರಿಸಿದೆ.

ಹೇಳಿಕೇಳಿ ‘ಸವಿಸ್ಮೃತಿ’ ವಿಧವಾ ಪುನರ್ವಿವಾಹದ ರೂವಾರಿಗಳನ್ನು ನೆನೆಯುವ ಹೊತ್ತಿಗೆ. ಅಬಲಾಶ್ರಮವನ್ನು ತೆರೆಯುವ ಮೂಲಕ ಇಂತಹ ಉದಾತ್ತ ಸಂಗತಿಗೆ ಅಪರಿಮಿತ ಉತ್ತೇಜನ ನೀಡಿದ ವೆಂಕಟವರದಯ್ಯಂಗಾರರು ಮತ್ತು ಅವರ ಪತ್ನಿ ಕೃಷ್ಣಮ್ಮನವರು ವಹಿಸಿದ ಪರಿಶ್ರಮದ ಕಥೆಯನ್ನು ಓದುತ್ತಾ ಹೋದಂತೆ, ಕಣ್ಣೀರಿನಿಂದ ದೃಷ್ಟಿ ಮಂಜಾಗುತ್ತದೆ. ಮಾಧ್ವಮತಕ್ಕೆ ಸೇರಿದ ಬಾಲವಿಧವೆ ಕೃಷ್ಣಮ್ಮ, ವೆಂಕಟವರದಯ್ಯಂಗಾರರನ್ನು ವರಿಸುವ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲೇ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದರು. ಅವರು ಸ್ಥಾಪಿಸಿದ ಅಬಲಾಶ್ರಮ ನೂರು ವಸಂತಗಳನ್ನು ಪೂರೈಸಿ ಮುನ್ನಡೆಯುತ್ತಿರುವುದೇ ಒಂದು ಬೆರಗು.

ವೆಂಕಟವರದಯ್ಯಂಗಾರರು ಮತ್ತು ಅವರ ಪತ್ನಿ ಕೃಷ್ಣಮ್ಮ ಅವರನ್ನು ಕುರಿತು ಡಿವಿಜಿ ಅವರು ‘ಜ್ಞಾಪಕ ಚಿತ್ರಶಾಲೆ’ಯಲ್ಲಿ ಬರೆದ ಬರಹವನ್ನೂ ಈ ಕೃತಿಯಲ್ಲಿ ಬಳಸಿಕೊಳ್ಳಲಾಗಿದೆ. ಅಬಲಾಶ್ರಮದ ಗೃಹಪ್ರವೇಶೋತ್ಸವಕ್ಕೆ ಸಾಕ್ಷಿಯಾಗಿದ್ದ ಡಿವಿಜಿಯವರು ಆ ಸಂದರ್ಭವನ್ನು ತಮ್ಮ ಬರಹದಲ್ಲಿ ಸ್ಮರಿಸಿಕೊಂಡಿದ್ದಾರೆ. ಇಂಡಿಯನ್‌ ಸಿವಿಲ್‌ ಸರ್ವಿಸ್‌ಗೆ ಸೇರಿದ ಐಸ್ಯಾಕ್‌ ಜೆ. ಪಿಟ್ಸ್‌ ಸಣ್ಣಪ್ರಾಯದಲ್ಲಿ ತೀರಿಕೊಂಡಾಗ ಆತನ ನೆನಪಿನಲ್ಲಿ ಅಬಲಾಶ್ರಮವನ್ನು ಸ್ಥಾಪಿಸಲು ಪ್ರೇರಣೆ ನೀಡಿದಾಕೆ ಆತನ ಪತ್ನಿ. ಪೆನುಗೊಂಡೆಯ ವಕೀಲ ಶಿವಶಂಕರಂ ಅವರಿಗೆ ಮೂರುಸಾವಿರ ರೂಪಾಯಿ ಮೂಲಧನ ಕೊಟ್ಟು ಆಶ್ರಮ ಸ್ಥಾಪನೆಗೆ ಆಕೆ ಕಾರಣವಾದರೆ, ಅದರ ಜವಾಬ್ದಾರಿ ಹೊತ್ತು ಮುನ್ನಡೆಸಿದವರು ವೆಂಕಟವರದಯ್ಯಂಗಾರ ದಂಪತಿ. ಚರಿತ್ರೆಯಲ್ಲಿ ಕಳೆದು ಹೋಗಬಹುದಾದ ಈ ಘಟನೆಗಳೆಲ್ಲವೂ ಇಲ್ಲಿ ದಾಖಲಾಗಿವೆ.

ADVERTISEMENT

ತಳ ಸಮುದಾಯದ ಜನಪದರ ಜೀವನದಲ್ಲಿ ವಿಧವೆಯರ ಮರು ಮದುವೆ ಎಂಬುದು ಸಹಜವಾಗಿಯೇ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೂಡಿಕೆ, ಕೂಡಾವಳಿ ಅನ್ನುವ ಪದ್ಧತಿಯೂ ಇದೆ. ಹಾಗಿದ್ದರೆ ವಿಧವೆಯರು ಮರು ಮದುವೆ ಆಗುವುದಕ್ಕೆ ಮಡಿವಂತಿಕೆಯ ಮುಸುಕು ಹಾಕಿದವರು ಯಾರು ಎನ್ನುವುದೊಂದು ಪ್ರಶ್ನೆ ಕಾಡುತ್ತದೆ.

ಈ ಪ್ರಶ್ನೆಗೆ ಪ್ರಸ್ತಾವನೆಯಲ್ಲಿ ಕೃತಿಯ ಪ್ರಧಾನ ಸಂಪಾದಕಿ ಡಾ.ಗೀತಾ ಕೃಷ್ಣಮೂರ್ತಿ ವಿವರಿಸಲು ಪ್ರಯತ್ನಿಸಿದ್ದಾರೆ. ‘ವೇದ ಯುಗದ ಕೊನೆಯಲ್ಲಿ ಮಹಿಳೆಯರ ಸ್ಥಾನಮಾನ ಅವನತಿಯತ್ತ ಸಾಗಿತು. 19ನೇ ಶತಮಾನದ ವೇಳೆಗೆ ಮಹಿಳೆಯರ ಜೀವನವನ್ನು ದುರ್ಭರವನ್ನಾಗಿಸುವ ಅನೇಕ ಪಿಡುಗುಗಳು ಶುರುವಾದವು. ಸತಿ ಪದ್ಧತಿ, ಬಾಲ್ಯ ವಿವಾಹ, ಬಹು ಪತ್ನಿತ್ವ, ವಿಧವಾ ವಿವಾಹ ನಿಷೇಧ ಮುಂತಾದವು. ಮುಸ್ಲಿಂ ದಾಳಿಯೊಡನೆ ಹಿಂದೂ ಸ್ತ್ರೀಯ ಅವನತಿ ಆರಂಭವಾಯಿತು...’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಕಾರಣಗಳಿಂದಾಗಿ ಬಂದ ಪಿಡುಗುಗಳು ವೇದ, ಪುರಾಣ ಗ್ರಂಥಗಳಲ್ಲೂ ಅಸ್ತಿತ್ವ ಪಡೆದಿವೆ ಎಂದು ಬಿಂಬಿಸಿ, ಶಾಸ್ತ್ರದ ಮುದ್ರೆ ಒತ್ತಲಾಯಿತು ಎಂದು ಕೃತಿಯ ಹಲವು ಲೇಖನಗಳು ಹೇಳುತ್ತವೆ. ಶತಾವಧಾನಿ ಆರ್‌. ಗಣೇಶ್‌ ಅವರು ‘ಒಳ್ನುಡಿ’ ಲೇಖನದಲ್ಲಿ ವಿಧವಾ ಪುನರ್‌ವಿವಾಹದ ಅಗತ್ಯವನ್ನು, ಅದಕ್ಕಿರುವ ಶಾಸ್ತ್ರಸಮ್ಮತಿಯನ್ನು, ಇಂಥ ವಿವಾಹದ ಹಿಂದಿರುವ ಸ್ತ್ರೀಕುಲದ ಹಿತಚಿಂತನೆಯನ್ನು ಉಲ್ಲೇಖಗಳ ಸಹಿತ ಮಂಡಿಸಿದ್ದಾರೆ.

ರಾಜಾರಾಮ್‌ ಮೋಹನರಾಯ್‌ ಕುರಿತ ಲೇಖನದಲ್ಲಿ ಇದುವರೆಗೆ ಅಷ್ಟಾಗಿ ಸಿಗದ ಹೊಸ, ಕುತೂಹಲಕರ ವಿವರಗಳಿವೆ. ಇಸ್ಲಾಮಿ ತತ್ವದಲ್ಲಿ ಪಾರಂಗತರಾದ ಅವರನ್ನು ‘ಮೌಲ್ವಿ ರಾಮಮೋಹನರಾಯ್‌’ ಎಂದು ಅನೇಕರು ಕರೆದದ್ದು, ಮೊಘಲ್‌ ಸುಲ್ತಾನ್‌ ದ್ವಿತೀಯ ಅಕ್ಬರ್‌, ಅವರಿಗೆ ರಾಜಾ ಎಂಬ ಬಿರುದು ಕೊಟ್ಟದ್ದು, ಬೌದ್ಧ ಮತದ ಕೆಲ ಆಚರಣೆಗಳನ್ನು ಟೀಕಿಸಿದ್ದಕ್ಕಾಗಿ ಪ್ರಾಣ ಸಂಚಕಾರ ತಂದುಕೊಂಡದ್ದು, ರಾಮಮೋಹನರಾಯರ ಅಣ್ಣ ಜಗಮೋಹನರಾಯ್‌ ಅವರ ಪತ್ನಿಯನ್ನು ಬಲವಂತವಾಗಿ ಸತಿ ಪದ್ಧತಿಗೆ ದೂಡಿದ್ದು, ಆ ಘಟನೆ ರಾಜಾ ರಾಮಮೋಹನರಾಯರ ಮನ ಕಲಕಿ ಅವರು ಆ ಪದ್ಧತಿಯ ನಿರ್ಮೂಲನಕ್ಕೆ ಹೋರಾಡಿದ್ದು ಮೊದಲಾದ ಕಥನಗಳಿವೆ.

ಕೇವಲ 22 ವರ್ಷ ಬದುಕಿ, ಅನಿಷ್ಟಗಳ ವಿರುದ್ಧದ ಹೋರಾಟದಲ್ಲಿ ದಂತಕಥೆಯಾದ ಹೆನ್ರಿ ಲೂಯಿಸ್‌ ವಿವಿಯನ್‌ ಡೆರೊಜಿಯೊ, ಈಶ್ವರಚಂದ್ರ ವಿದ್ಯಾಸಾಗರ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಧೋಂಡೋ ಕೇಶವ ಕರ್ವೆ, ದೇವೇಂದ್ರನಾಥ ಟ್ಯಾಗೋರ್‌, ಬಾಳಾಶಾಸ್ತ್ರಿ ಜಾಂಬೇಕರ್‌, ರಮಾಬಾಯಿ ರಾನಡೆ ಮೊದಲಾದವರ ಕುರಿತ ಲೇಖನಗಳು ಇಲ್ಲಿವೆ. ಜೊತೆಗೆ ನಮ್ಮ ನಾಡಿನ ಪ್ರಮುಖ ಸಾಹಿತಿ, ಚಿಂತಕರು ಸಮಾಜ ಸುಧಾರಕರಾದ ಘಟನೆಗಳ ವಿವರಗಳೂ ಇಲ್ಲಿವೆ.

ಆಕರ್ಷಕ ಮುದ್ರಣ, ಚಿತ್ರಗಳು ಮತ್ತು ಕುತೂಹಲಕರ ಮಾಹಿತಿಯಿಂದಾಗಿ ಕೃತಿ ಓದಿಸಿಕೊಂಡು ಹೋಗುತ್ತದೆ. ಸ್ತ್ರೀ ಸುಧಾರಣೆ ಸಂಬಂಧಿಸಿ ಅಧ್ಯಯನಕಾರರಿಗೆ ಸಂಗ್ರಹಯೋಗ್ಯ ಕೃತಿ.

***

ಕೃತಿ: ಸವಿಸ್ಮೃತಿ
ಗೌ.ಸಂ.: ಬಾ.ವೆಂ. ಶೇಷ
ಪ್ರ.ಸಂ.: ಡಾ.ಗೀತಾ ಕೃಷ್ಣಮೂರ್ತಿ
ಪ್ರ: ಸತ್ಪ್ರಕಾಶನ, ಅಬಲಾಶ್ರಮ, ಬಸವನಗುಡಿ, ಬೆಂಗಳೂರು
ಸಂ: 97425 88860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.