ADVERTISEMENT

ಪುಸ್ತಕ ವಿಮರ್ಶೆ: ಸಂಸ್ಕೃತಿ ಚಿಂತನೆಗೊಂದು ಬೆಳಕಿಂಡಿ

ಎಚ್.ದಂಡಪ್ಪ
Published 18 ಸೆಪ್ಟೆಂಬರ್ 2021, 19:30 IST
Last Updated 18 ಸೆಪ್ಟೆಂಬರ್ 2021, 19:30 IST
ಲೋಕ ರೂಢಿಯ ಮೀರಿ ಕೃತಿ
ಲೋಕ ರೂಢಿಯ ಮೀರಿ ಕೃತಿ   

‘ಲೋಕ ರೂಢಿಯ ಮೀರಿ’ ಕೃತಿಯು ಚೇತನ ಸೋಮೇಶ್ವರ ಅವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿಪದವಿಗಾಗಿ ಸಿದ್ಧಪಡಿಸಿದ ಮಹಾಪ್ರಬಂಧ. ಈ ಕೃತಿಯಲ್ಲಿ ಎ.ಎನ್. ಮೂರ್ತಿರಾಯರ ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸೇರಿದ ಮೂವತ್ತು ಕೃತಿಗಳಲ್ಲಿನ ಸಂಸ್ಕೃತಿ ಚಿಂತನೆಯ ಸ್ವರೂಪ ಹಾಗೂ ಅದು ಜನರ ಬದುಕನ್ನು ರೂಪಿಸಲು ವಿಶ್ವಾತ್ಮಕ ಭಾವನೆಗಳನ್ನು ಒಳಗೊಂಡಿರುವ ಬಗೆಯನ್ನು ವಿವರಿಸಲಾಗಿದೆ.

‘ಸಂಸ್ಕೃತಿ’ ಎಂಬ ಪದಕ್ಕೆ ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ತತ್ವಶಾಸ್ತ್ರಜ್ಞರು ಹಲವಾರು ಬಗೆಯ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಸಾಹಿತ್ಯ ಮೀಮಾಂಸೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಚಿಂತಕರು ವಿವಿಧ ನೆಲೆಗಳಲ್ಲಿ ಈ ಪದದಿಂದ ಬೆಳಕು ಹೊಮ್ಮಿಸಿದ್ದಾರೆ, ವ್ಯಾಖ್ಯೆಗಳನ್ನು ನೀಡಿದ್ದಾರೆ. ಇದರ ಜತೆಗೆ ಸಾಹಿತ್ಯ ಕೃತಿಯೊಂದರಲ್ಲಿ ಸಂಸ್ಕೃತಿಯು ಯಾವ ರೀತಿ ಅಂತರ್ಗತವಾಗಿರುತ್ತದೆ, ಸಾಹಿತ್ಯದೊಡನೆ ಅದರ ಸಂಬಂಧವೆಂಥದ್ದು ಎಂಬ ಚಿಂತನೆಗಳನ್ನು ಇಂದಿಗೂ ಮಾಡುತ್ತಲೇ ಇದ್ದಾರೆ. ಕನ್ನಡದ ಸಂದರ್ಭದಲ್ಲಿ ಈ ಕುರಿತು ಆಳ ಅಗಲವಾಗಿ ಚರ್ಚಿಸಿದ ಹಲವಾರು ಚಿಂತಕರಲ್ಲಿ, ವಿಮರ್ಶಕರಲ್ಲಿ ಮೂರ್ತಿರಾಯರೂ ಒಬ್ಬರು.

ಹಾಗೆ ನೋಡಿದರೆ ಸಂಸ್ಕೃತಿ ವಿಮರ್ಶೆಯು ಇತ್ತೀಚಿನದ್ದೇನಲ್ಲ. ರವೀಂದ್ರನಾಥ ಟ್ಯಾಗೋರರ ‘ಪ್ರಾಚೀನ ಸಾಹಿತ್ಯ’ (ಅನುವಾದ: ಟಿ.ಎಸ್. ವೆಂಕಣ್ಣಯ್ಯ), ಸಂಸ್ಕೃತಿ ವಿಮರ್ಶೆಗೆ ಉತ್ತಮ ಉದಾಹರಣೆ. ಅಲ್ಲಿಂದ ನಿರಂತರವಾಗಿ ಬೇರೆ ಬೇರೆ ಚಿಂತಕರಿಂದ ಬೆಳೆಯುತ್ತಲೇ ಬಂದಿರುವ ಸಂಸ್ಕೃತಿಯು ಬದುಕಿನ ಒಂದು ನಿರ್ದಿಷ್ಟ ಸ್ವರೂಪವನ್ನು ಮೈಗೊಳ್ಳುತ್ತಿದೆ.

ADVERTISEMENT

‘ಸಂಸ್ಕೃತಿ’ ಎಂಬುದು ‘ಬದುಕಿನ ಬೆಂಬಲ ಪಡೆದು ನಿರಂತರವಾಗಿ ಹರಿದು ಬಂದಿರುವ ಜೀವನದಿ. ವ್ಯಕ್ತಿಯ ಮನಸ್ಸನ್ನು ಅರಳಿಸಿ ಅವನ ಮಾನವೀಯ ವಿಕಾಸಕ್ಕೆ ದಾರಿ ಹುಡುಕುವ ಮೂಲಕ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸುವ ವಿಚಾರಗಳು ಮತ್ತು ಮೌಲ್ಯಗಳು’ ಎಂದು ವ್ಯಾಖ್ಯಾನಿಸಲಾಗಿದೆ. ಮೂರ್ತಿರಾಯರ ‘ಸಾಹಿತ್ಯ-ಸಂಸ್ಕೃತಿ’ ಲೇಖನದಲ್ಲಿಯೂ ಇದೇ ಬಗೆಯ ವ್ಯಾಖ್ಯಾನವಿದೆ, ವಿಶ್ವಮಾನವ ಪ್ರಜ್ಞೆ ಬೆಳೆಸುವ ಉದ್ದೇಶ ಸಾಧನೆಗಾಗಿ ಸಾಹಿತ್ಯದ ಅಗತ್ಯವಿದೆ ಎಂಬ ವಾದವೂ ಇಲ್ಲಿ ಸೇರಿದೆ.

ಸಾಹಿತ್ಯ ಕೃತಿಗಳಲ್ಲಿರುವ ಸಂಸ್ಕೃತಿಯನ್ನು ಜ್ಞಾನ ಎಂದು ಕರೆಯಲಾಗುತ್ತದೆ. ಯಾವುದೋ ಅಗೋಚರವಾದ ವಿಚಾರವನ್ನು ಕುರಿತು ಯೋಚಿಸುತ್ತ ಕೂರುವುದು ಸಂಸ್ಕೃತಿಯ ಉದ್ದೇಶವಲ್ಲ. ಹೇಗೆ ವಿಜ್ಞಾನವು ಅದ್ಭುತ ಚಮತ್ಕಾರಗಳನ್ನು ಒಳಗೊಂಡಿದೆಯೋ ಹಾಗೆಯೇ ಸಾಹಿತ್ಯ ಕೂಡ ಅದ್ಭುತ ಕಲ್ಪನೆಗಳನ್ನೊಳಗೊಂಡು ಭಾಷೆಯಲ್ಲಿ ಮೈಗೂಡಿರುತ್ತದೆ. ಅದು ಓದುಗನ ಹೃದಯದ ಮೇಲೆ ಹಲವು ಬಗೆಯ ಪರಿಣಾಮವನ್ನು ಉಂಟುಮಾಡುತ್ತದೆ. ಆದುದರಿಂದ ಸಾಹಿತ್ಯವು ಶ್ರೇಷ್ಠವಾದ, ಉದಾತ್ತವಾದ ಮೌಲ್ಯಗಳನ್ನು ಉಳಿಸಿ ಬೆಳೆಸುವಂತಹ ಸಾಧನವಾಗಿದ್ದು, ಎಲ್ಲರ ಒಳಿತನ್ನು ಬಯಸುವ ಮೌಲ್ಯಗಳೇ ‘ಸಂಸ್ಕೃತಿ’ಯಾಗಿದೆ ಎಂಬ ನಂಬಿಕೆ ಮೂರ್ತಿರಾಯರದ್ದು. ಈ ವಿಚಾರಗಳನ್ನು ಸೋಮೇಶ್ವರರ ಕೃತಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿ ಚಿಂತನೆಯ ಸ್ವರೂಪವನ್ನು ಅಧ್ಯಯನ ಮಾಡುವ ಸಂಶೋಧಕನು ಆ ಕೃತಿಯಲ್ಲಿರುವ ಮನುಷ್ಯ ಬದುಕನ್ನು ಹಾಗೂ ಆತ ಅನುಸರಿಸುತ್ತಿರುವ ಮೌಲ್ಯಗಳನ್ನು ಅನ್ವೇಷಿಸಿ ಸಮಕಾಲೀನ ಸಾರ್ವಕಾಲಿಕ ಪ್ರಜ್ಞೆಯನ್ನು ಇಟ್ಟುಕೊಂಡು, ಇತರ ಕೃತಿಗಳ ಬಳಿ ಇಟ್ಟು ತುಲನಾತ್ಮಕವಾಗಿ ವಿಮರ್ಶಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳಲ್ಲಿ ಕೃತಿಕಾರನ ಕಲ್ಪನೆಗಳು ಮಾತ್ರ ಇರುವುದಿಲ್ಲ, ಬೌದ್ಧಿಕ ಹೊಳಹುಗಳು ಕೂಡ ಇರುತ್ತವೆ. ಅವುಗಳಲ್ಲಿ ಮನುಷ್ಯನ ಪ್ರಗತಿಗೆ ಸಂಬಂಧಿಸಿದಬದುಕಿನ ಅನುಭವಗಳು ಮತ್ತು ಬೌದ್ಧಿಕ ವಿಚಾರಗಳು ದಾಖಲಾಗಿರುತ್ತವೆ. ಈ ಸಂಗತಿಗಳನ್ನೆಲ್ಲ ವಿಮರ್ಶಕರು ತೌಲನಿಕವಾಗಿಯಲ್ಲದಿದ್ದರೂ ವಿಸ್ತಾರವಾಗಿ ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.

‘ಸಂಸ್ಕೃತಿ ಚಿಂತನೆ’, ‘ಸಂಸ್ಕೃತಿ ಚಿಂತನೆಯ ನೆಲೆಗಳು’, ‘ಜಾತಿ ಕುರಿತ ಚಿಂತನೆಗಳು’, ‘ಮತ-ಧರ್ಮ-ಅಧ್ಯಾತ್ಮ ಕುರಿತ ನಿಲುವುಗಳು’, ‘ಸ್ವಾತಂತ್ರ್ಯದ ಪರಿಕಲ್ಪನೆ ಹಾಗೂ ಕೇಡಿನ ಕಲ್ಪನೆ’, ‘ದೇವರ ಕುರಿತು ಚಿಂತನೆ’, ‘ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿ’, ‘ಹೆಣ್ಣಿನ ಕುರಿತು ಧೋರಣೆಗಳು’, ‘ಭಾಷೆ-ಶಿಕ್ಷಣ ಆಲೋಚನೆಗಳು’, ‘ಸಾಹಿತ್ಯ- ಕಲೆಯ ಚಿಂತನೆ’ ಮುಂತಾದ ಬೇರೆ ಬೇರೆ ಶೀರ್ಷಿಕೆಗಳಡಿಯಲ್ಲಿ ಮೂರ್ತಿರಾಯರು ಸಂಸ್ಕೃತಿಯ ಆಳವಾದ ಚಿಂತನೆಯನ್ನು ನಡೆಸುತ್ತಾರೆ. ಮೂರ್ತಿರಾಯರ ಸಂಸ್ಕೃತಿ ಚಿಂತನೆ ನಮ್ಮ ಕಾಲಕ್ಕಷ್ಟೇ ಅಲ್ಲ, ಎಲ್ಲ ಕಾಲಗಳಿಗೂ ಪ್ರಸ್ತುತವಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು’ ಎಂದಿರುವುದು ಈ ಕೃತಿಯ ಅಧ್ಯಯನದ ಮಹತ್ವವನ್ನು ಸೂಚಿಸುತ್ತದೆ.

ಲೇಖಕರು ಸಂಸ್ಕೃತಿಯನ್ನು ವ್ಯಾಖ್ಯಾನಿಸುವಾಗ ಮಾನವಶಾಸ್ತ್ರಜ್ಞರ ಹಾಗೂ ಸಾಹಿತ್ಯಚಿಂತಕರ ವ್ಯಾಖ್ಯಾನಗಳನ್ನು ಸಂಗ್ರಹಿಸಿ ಕೊಡುತ್ತಾರೆ. ಈ ವ್ಯಾಖ್ಯಾನಗಳನ್ನು ಮೂರ್ತಿರಾಯರ ಕೃತಿಗಳಿಗೆ ಅನ್ವಯಿಸಿ ವಿಶ್ಲೇಷಣೆ ಮಾಡುವುದಿಲ್ಲ. ಉದಾಹರಣೆಗೆ, ‘ಸಂಸ್ಕೃತಿ ಚರ್ಚೆ-ತೌಲನಿಕ ವಿಧಾನ’ ಎಂಬ ಭಾಗ ನೋಡಬಹುದು (ಪುಟ 60ರಿಂದ 75). ಸಂಶೋಧನೆಯಾಗಿರಲಿ, ವಿಶ್ಲೇಷಣೆಯಾಗಿರಲಿ- ಮಾಹಿತಿ ಸಂಗ್ರಹಣೆ, ಪರಿಶೀಲನೆ, ವಿವರಣೆ, ವಿಶ್ಲೇಷಣೆಗಳಿರಬೇಕು. ಸಂಶೋಧನಾ ಪ್ರಬಂಧಗಳಲ್ಲಂತೂ ತೌಲನಿಕ ವಿಶ್ಲೇಷಣೆ ಅತ್ಯಗತ್ಯ. ಇಲ್ಲಿ ತೌಲನಿಕ ಅಧ್ಯಯನ ಕಡಿಮೆಯಿದ್ದರೂ ಪದಗಳ ವಿಜೃಂಭಣೆಯಿಂದ ವಿಚಾರಗಳು ಸೊರಗಿದಂತೆ ಭಾಸವಾದರೂ ಚೇತನ ಸೋಮೇಶ್ವರರು ಮೂರ್ತಿರಾಯರ ಚಿಂತನೆಗಳ ಬಗ್ಗೆ ಮಾಡಿರುವ ಈ ಸಂಶೋಧನೆಯು ಸಂಸ್ಕೃತಿ ಚಿಂತನೆಯ ದೃಷ್ಟಿಯಿಂದ ಮುಂದಿನ ಸಂಶೋಧಕರಿಗೆ, ಓದುಗರಿಗೆ ಅಧ್ಯಯನಕ್ಕೆ ಬೇಕಾದ ಹೇರಳವಾದ ಮಾಹಿತಿಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ.

ಕೃತಿ: ಲೋಕ ರೂಢಿಯ ಮೀರಿ
ಲೇ: ಚೇತನ ಸೋಮೇಶ್ವರ
ಪ್ರ: ಬಹುರೂಪಿ
ಸಂ:7019182729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.