ಬಿಳಿಯ ಹತ್ತಿಯಂಥ ಮೋಡಗಳನ್ನು ಹಿಂಜಿದ ಜಾಗದಲ್ಲಷ್ಟೇ ಕಾಣುವ ಆಕಾಶದ ನೀಲಿ ಬಣ್ಣ, ದೂರದಿಗಂತದ ವಿಷಾದವೆಲ್ಲ ಇಷ್ಟಿಷ್ಟೇ ಉಮ್ಮಳಿಸಿದಂತೆ ಒಂದರ ಹಿಂದೆ ಇನ್ನೊಂದರಂತೆ ಎದ್ದೆದ್ದು ಬರುತ್ತಿರುವ ಬೆಳ್ನೊರೆಯ ಕಿರುತೆರೆಗಳು, ಆ ಆಕಾಶ ಮತ್ತು ಸಮುದ್ರದ ಅಗಾಧತೆಯನ್ನು ಅಣಕಿಸುವ ಹಾಗೆ ಧೀಮಂತ ಮುದ್ರೆಹೊತ್ತು ನಿಂತಿರುವ ಹಾಳು ಹಡಗು ಮತ್ತದರ ಮೇಲೆ ಬರೆದಿರುವ ಅಸ್ಪಷ್ಟ ಅಕ್ಷರಗಳು, ವಾಸ್ತವದಿಂದ ಎರಡೇ ಇಂಚು ಆಚೆಗೆ ಚಾಚಿಕೊಂಡಿರುವ ಆ ಪರಿಸರದಲ್ಲಿ, ದಿಗ್ಭ್ರಾಂತನಾಗಿ ನಿಂತಂತಿರುವ ಲೇಖಕರ ಚಿತ್ರ, ಅವರು ಏನನ್ನು ದಿಟ್ಟಿಸಿ ನೋಡುತ್ತಿರಬಹುದು? ಆ ತನ್ಮಯ ನೋಟದ ತುದಿಯಲ್ಲಿ ಅವರದ್ದೇ ಬಾಲ್ಯ, ಯೌವನದ ದಿನಗಳು ಬಗೆಬಗೆ ವೇಷ ತೊಟ್ಟು ಪಕಳೆ ಒಡೆಯುತ್ತಿರಬಹುದೇ? – ಅಬ್ದುಲ್ ರಶೀದ್ ಅವರ ‘ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್’ ಕಥಾಸಂಕಲನದ ಮುಖಪುಟವು ಒಳಪುಟಗಳಲ್ಲಿ ತೆರೆದುಕೊಳ್ಳುವ ಕಥಾಜಗತ್ತಿನ ವಿಸ್ತರಣೆಯಾಗಿಯೇ ಕಾಣಿಸುತ್ತದೆ. ಹಡಗಿನ ಒಡಲಿಗೆ ತುಕ್ಕು ಹಿಡಿಸಿ ಪುಡಿಗಟ್ಟಿಸುವ ಉಪ್ಪುನೀರೇ ಅದರ ಗಾಯವನ್ನು ನೇವರಿಸುವ ಆಪ್ತಸಂಗಾತವೂ ಆಗಿದೆ. ಬದುಕಿನ ಈ ವಿಚಿತ್ರವನ್ನೂ, ವೈರುಧ್ಯವನ್ನೂ, ವಿಷಾದವನ್ನೂ, ಆನಂದವನ್ನೂ ರಶೀದರ ಕಥೆಗಳು ಹೂ ಅರಳಿದಷ್ಟು ಸಹಜವಾಗಿ ಹಿಡಿದಿಡುತ್ತವೆ.
ಬದುಕಿನ ಬರ್ಬರತೆಯನ್ನು ಹಾಗ್ಹಾಗೇ ಕಾಣಿಸುವುದು ಒಂದು ದಾರಿ. ಅದನ್ನು ಅದರ ಪಾಡಿಗೆ ಬಿಟ್ಟು, ಅದೇ ಬದುಕಿನ ಇನ್ನೊಂದು ಮಗ್ಗುಲಿನ ಸೌಂದರ್ಯವನ್ನೂ, ಆಳದಲ್ಲಿನ ವಿಷಾದವನ್ನೂ ಕಾಣಿಸುತ್ತ ನಮ್ಮನ್ನು ಮೆತ್ತಗಾಗಿಸುವುದು, ಸಡಿಲಗೊಳಿಸುವುದು ಮತ್ತೊಂದು ಬಗೆ. ರಶೀದರ ಕಥೆಗಳದ್ದು ಎರಡನೇ ದಾರಿ.
ಸಾಹಿತ್ಯದಿಂದ ಇಂಥದ್ದೇ ಬೇಕು ಎಂಬ ಅಪೇಕ್ಷೆಯನ್ನು ಹೊತ್ತು ಹೊರಟರೆ ಅವರ ಕಥೆಗಳು ನಮ್ಮನ್ನು ‘ಕುರೆ’ (ಮಂಗ) ಮಾಡಿ ವಾಪಸ್ಸು ಕಳಿಸುತ್ತವೆ. ಏನಿದೆಯೋ ನೋಡೋಣ ಎಂಬ ಕುತೂಹಲವನ್ನಷ್ಟೇ ಇಟ್ಟುಕೊಂಡು ಹೋದರೆ ಬೆಟ್ಟದ ಬುಡದ ನೆರಳಲ್ಲಿ ತನ್ನಷ್ಟಕ್ಕೆ ತಾನು ಅರಳಿ, ಬೆಳಗಿ, ಬಾಡಿ, ಅಳಿದು ಹೋಗುವ ಹೂವಿನ ಬದುಕನ್ನು ವಿಸ್ಮಯ–ವಿಷಾದ ಭಾವದಲ್ಲಿ ಕಾಣಿಸುತ್ತದೆ. ‘ಅರೆ, ಇದು ನಾವೂ ಒಳಗೊಳಗೆ ಬಯಸುತ್ತಿರುವ ಬದುಕೇ ಅಲ್ಲವೇ? ಎಲ್ಲ ಇಷ್ಟು ಸರಳವಿರುವಾಗ ನಾವೇಕೆ ಇಷ್ಟೊಂದು ಸರಪಳಿಗಳನ್ನು ಬಿಗಿದುಕೊಂಡು ಬಿಡಿಸಿಕೊಳ್ಳಲು ಹೆಣಗುತ್ತಿದ್ದೇವೆ?’ ಎಂಬ ಅಚ್ಚರಿಗೆ ನೂಕುತ್ತದೆ.
ಸಂಕಲನದ ಐದೂ ಕಥೆಗಳಲ್ಲಿ, ನಿರೂಪಕ ನಡುವಯಸ್ಸಿನವನು. ಅವನ ನೋಟ ಮಾತ್ರ ಬಾಲ್ಯ, ಯೌವನದ ದಿನಗಳ ಕಡೆಗೆ ಹೊರಳಿಕೊಂಡಿದೆ. ಅವನನ್ನು ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹೂವಿನೋಪಾದಿಯಲ್ಲಿ ಸುಗಮ ಸಂಚಾರ ಮಾಡಿಸಲು ಅವನದೇ ವಯಸ್ಸಿನ, ಪ್ರೇಯಸಿಯರಿದ್ದಾರೆ. ನಡುವಯಸ್ಸಿನವನೊಬ್ಬ, ತನ್ನನ್ನು ಬೇಟೆಯಾಡುತ್ತಿರುವ ಒಂಟಿತನದಿಂದ ಬಚಾವಾಗಲು ಹದಿವಯದ ಪೊದೆ ಹೊಕ್ಕಾಗ ಈ ಕಥೆಗಳು ಹುಟ್ಟಿಕೊಂಡಿವೆ! ಅಲ್ಲಿನ ಏದುಸಿರು, ಭಯ, ರೋಮಾಂಚನ, ಒಳಗೊಳಗೇ ಊಟೆಯೊಡೆಯುತ್ತಿರುವ ಖುಷಿ ಎಲ್ಲವೂ ಈ ಕಥೆಗಳಲ್ಲಿವೆ. ಮತ್ತದು ಎಷ್ಟು ಸಹಜವಾಗಿ ಮೈದಳೆದಿವೆಯೆಂದರೆ ಇಲ್ಲಿನ ಒಂದು ಕಥೆಯಲ್ಲಿಯೇ ಉಲ್ಲೇಖಿತವಾಗುವ ಲಿಲ್ಲಿ ಹೂಗಳನ್ನು ಮತ್ತೆ ಮತ್ತೆ ನೆನಪಿಸುವಷ್ಟು!
ಸಮಾಜ ಹೇರುವ ವ್ಯವಸ್ಥೆಯ ಚೌಕಟ್ಟಿಗೂ, ಮಾಪನಸಲಕರಣೆಗಳಿಗೂ ಸಿಗದ ಹಾಗೆ ಬೆಳೆಯುವ ಮನುಷ್ಯ ಸಂಬಂಧಗಳನ್ನು ಇಲ್ಲಿನ ಕಥೆಗಳು ತುಂಬ ಸಹಜವಾಗಿ ಚಿತ್ರಿಸುತ್ತವೆ; ಅಷ್ಟೇ ಸಹಜವಾಗಿ ಕಥೆ ಕಟ್ಟುವಿಕೆಯ ರೂಢಿಗತ ಮಾದರಿಗಳನ್ನೂ ಮುರಿಯುತ್ತವೆ.
ಇಲ್ಲಿನ ಬಹುತೇಕ ಕಥೆಗಳು ಘಟಿಸುವುದು ಭೂತಕಾಲದಲ್ಲಿ. ಹಾಗೆ ನೋಡಿದರೆ ಅವರ ಕಥೆಗಳಲ್ಲಿ ಹೆಚ್ಚಿಗೆ ಏನೂ ಘಟಿಸುವುದಿಲ್ಲ.‘ಲಾರ್ಡ್ ಕಾರ್ನ್‌ವಾಲೀಸ್...’ ಕಥೆಯಲ್ಲಿ ಹೇಳಲು ಹೊರಟಿರುವುದು ಗಂಡೂ ಅಲ್ಲ, ಹೆಣ್ಣೂ ಅಲ್ಲದ ನಿರೂಪಕನ ಬದುಕಿನ ಬಗ್ಗೆಯಾ? ಅಥವಾ ಹೂವಯ್ಯ ಮತ್ತು ಎಲಿಜಬೆತ್ ಟೀಚರ್ ಪ್ರೇಮಕಥೆಯ ಬಗ್ಗೆಯಾ ಎನ್ನುವುದೂ ಸ್ಪಷ್ಟವಾಗುವುದಿಲ್ಲ. ‘ಜಲಪುಷ್ಟ’ ಕಥೆಯಲ್ಲಿ ದಶಕಗಳಿಂದ ಅವಳು ಮೀನು ತಿನ್ನಲೊಪ್ಪದೆ, ಇವನು ಮೀನು ತಿನ್ನುವುದನ್ನು ಬಿಡಲೊಪ್ಪದೆ ಪ್ರೇಮಿಸಿಕೊಂಡಿರುವುದಕ್ಕೆ ಹೇಳುವಂಥ ಯಾವ ಮಹತ್ವದ ಉದ್ದೇಶವೂ ಇದ್ದಂತಿಲ್ಲ.‘ಕಲಗಚ್ಚು’ವಿನಲ್ಲಿ ಏನೋ ಘಟಿಸಲಿಕ್ಕಿದೆ ಎಂಬ ಕುತೂಹಲವಿದ್ದರೂ ಕೊನೆಯಲ್ಲಿ ಬಿಟ್ಟುಕೊಡುವ ಗುಟ್ಟು ಸ್ಫೋಟಕವೇನೂ ಅಲ್ಲ.
‘ಮೋಹಕ ದ್ವೀಪದ ಮೂಗಿನ ತುದಿಯಲ್ಲಿ’ ಕೊನೆಯಾಗಲು ಬಂದಿರುವ ನಿರೂಪಕ ಜುಬೇದಾಳ ಸಂಗದಲ್ಲಿ ಪಡೆದುಕೊಂಡಿದ್ದೇನು ಎಂದು ಕೇಳಿದರೆ ಹೇಳಲಿಕ್ಕೆ ಏನೂ ಇರುವುದಿಲ್ಲ. ಇದೇ ಕಥೆಯ ಕೊನೆಗೆ ಬರುವ ಕೆಲವು ಸಾಲುಗಳು ರಶೀದರ ಇಲ್ಲಿನ ಬಹುತೇಕ ಎಲ್ಲ ಕಥೆಗಳ ಹಿಂದಿನ ಭೂಮಿಕೆಯನ್ನೂ ಹೇಳುವಂತಿದೆ. ಆ ಮಾತುಗಳು ಹೀಗಿವೆ: ಬಡಿಯುತ್ತಿದ್ದ ಹಾಗೆ ಆ ಬೆಳಕಿನಲ್ಲಿ ಆಕ್ಟೋಪಸ್ಸಿನ ತೀರಿ ಹೋದ ಮೈಯಲ್ಲಿ ಒಂದರ ನಂತರ ಒಂದು ಬಣ್ಣಗಳು ಬದಲಾಗುತ್ತಿದ್ದವು. ಕನಸಿನಲ್ಲಿ ಬದಲಾಗುವ ಬಣ್ಣಗಳು ಭೇಟೆಯಾಡುವ ಹೊತ್ತಲ್ಲೂ, ಮಿಕವಾಗುವುದರಿಂದ ಬಚಾವಾಗುವ ಹೊತ್ತಲ್ಲೂ, ಬಂದು ಹೋಗುತ್ತಿದ್ದವು. ಇದು ಯಾವುದನ್ನೂ ಗಮನಿಸುವ ಅಗತ್ಯವೂ ಇಲ್ಲ, ವ್ಯವಧಾನವೂ ಇಲ್ಲ, ಈ ಯಾವುದರ ಒಳಾರ್ಥಗಳನ್ನು ಅರಿಯುವುದರಿಂದ ನಯಾ ಪೈಸೆಯ ಉಪಯೋಗವೂ ಇಲ್ಲ. ಸತ್ತು ಹೋಗಿರುವ ಆಕ್ಟೋಪಸ್ಸಿನ ಜೀವನದಲ್ಲಿ ಈ ಯಾವುದಕ್ಕೂ ಯಾವ ಅರ್ಥವೂ ಇಲ್ಲ ಮತ್ತು ಇದು ಯಾವುದೂ ಅದನ್ನು ತನ್ನ ಈಟಿಯಿಂದ ರಕ್ಷಿಸಲೂ ಇಲ್ಲ ಎಂಬ ಭಾವದಲ್ಲಿ ಜುಬೇದಾ ಅದನ್ನು ಬಡಿಯುತ್ತಾ ಹದಗೊಳಿಸುತ್ತಿದ್ದಳು.
‘ರಕ್ತಚಂದನ’ ಈ ಸಂಕಲನದ ಉಳಿದ ಎಲ್ಲ ಕಥೆಗಳಿಗಿಂತ ಭಿನ್ನವೂ, ಹೆಚ್ಚು ಸ್ಪಷ್ಟವಾದ ಕಥನಚೌಕಟ್ಟನ್ನೂ ಹೊಂದಿರುವ ಕಥೆ. ಉಳಿದ ಎಲ್ಲ ಕಥೆಗಳಲ್ಲಿ ಇರುವ ಗಾಢವಾದ ವಿಷಾದದ ಜಾಗವನ್ನು ಇಲ್ಲಿ ಸ್ವಾರ್ಥ, ಸಣ್ಣತನ, ಆಮಿಷ, ಆಷಾಢಭೂತಿತನ, ನಯವಾದ ಸಂಚುಗಳು ತುಂಬಿಕೊಂಡಿವೆ. ಹಿರಿಯ ಸಾಹಿತಿಯೊಬ್ಬರ ಸಾವಿನ ಸುತ್ತ ಬೆಳೆಯುತ್ತ ಹೋಗುವ ಕಥೆ, ಕಥನ ಕಟ್ಟುವಿಕೆಯ ಪ್ರಕ್ರಿಯೆಯ ಕುರಿತೂ ಮಾತಾಡುತ್ತದೆ. ರಶೀದರ ಎಲ್ಲ ಕಥೆಗಳೂ ಕಥೆ ಹೇಳುತ್ತಲೇ ಕಥನಕ್ರಿಯೆಯ ಬಗ್ಗೆಯೂ ಕಮೆಂಟ್ ಮಾಡುತ್ತಿರುತ್ತವೆ.
ಈ ಕಥೆಗಳ ಶಕ್ತಿ ಇರುವುದು ವಿವರಗಳಲ್ಲಿ; ವಿವರಗಳನ್ನು ಜೀವಂತಗೊಳಿಸಿ, ಅದರ ಪುಳಕವನ್ನೂ, ವಿಷಾದವನ್ನೂ ನಮ್ಮ ಬೆರಳ ತುದಿಗೂ ತಾಕುವಂತೆ ಮಾಡುವ ರಶೀದರ ಸತ್ವಶಾಲಿ ಭಾಷೆಯಲ್ಲಿ. ಹಾಗಾಗಿಯೇ ಈ ಕಥೆಗಳನ್ನು, ಅದು ಕೊಡುವ ಅನುಭವನ್ನು ನೀವು ಅನ್ಯರಿಗೆ ಹೇಳಲು ಸಾಧ್ಯವಿಲ್ಲ. ಅಷ್ಟೇ ಏಕೆ, ಇವು ನಿಮ್ಮ ನೆನಪುಗಳಲ್ಲಿಯೂ ಒಂದು ಸ್ಪಷ್ಟಚಿತ್ರದ ಕಥೆಯಾಗಿ ಉಳಿಯದೇ ಹೋಗಬಹುದು. ಆದರೆ ಆ ಕಥೆ ನಮ್ಮೊಳಗೆ ಮೀಟಿ ಎಬ್ಬಿಸುವ ಭಾವತೀವ್ರತೆ ಮಾತ್ರ ಬಹುಕಾಲದವರೆಗೆ ಉಳಿದಿರುತ್ತದೆ.
ಕೃತಿ:ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್ ಎಲಿಜಬೆತ್
ಲೇ: ಅಬ್ದುಲ್ ರಶೀದ್
ಪು: 84 ಬೆ: ₹135
ಪ್ರ: ಬಹುವಚನ
ದೂ:6362588659
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.