ಕನ್ನಡ ವಿದ್ವತ್ ವಲಯದ ಹಿರಿ-ಕಿರಿಯರೆಲ್ಲರಿಂದ ಸಮಾನ ಆದರ ಗೌರವಗಳಿಗೆ ಪಾತ್ರರಾದವರು ವಿಮರ್ಶಕ-ವಿದ್ವಾಂಸ
ಪ್ರೊ. ಎಲ್.ಎಸ್. ಶೇಷಗಿರಿರಾವ್ (1925-2019). ಅಧ್ಯಾಪನ, ವಿಮರ್ಶನ, ಸಂಪಾದನಾ ಕಾರ್ಯಗಳಲ್ಲದೆ ಮುಖ್ಯಮಂತ್ರಿಯವರ ಪತ್ರಿಕಾ ಕಾರ್ಯದರ್ಶಿ, ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷ, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಮುಂತಾದ ಹುದ್ದೆಗಳಲ್ಲಿ ಯಶಸ್ವಿ ಆಡಳಿತಾಧಿಕಾರಿಯಾಗಿಯೂ ಅವರು ಪರಿಚಿತರಾಗಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್ ತರಗತಿಗೆ ಸೇರಿದ್ದ ಎಲ್.ಎಸ್.ಎಸ್ ಅವರಿಗೆ ಕನ್ನಡದಲ್ಲಿ ಬರೆಯುವಂತೆ ಮೊದಲಿಗೆ ಪ್ರೇರೇಪಿಸಿದವರು ಅವರ ವಿದ್ಯಾಗುರುಗಳಾದ ಆಚಾರ್ಯ ಬಿ.ಎಂ.ಶ್ರೀ ಅವರು. ಮುಂದೆ ತೀ.ನಂ.ಶ್ರೀ, ಪ್ರೊ. ಈಗಲ್‌ಟನ್ ಹೀಗೆ ಅನೇಕರಿಂದ ಅವರು ಪ್ರೇರಣೆ ಪಡೆದರು.
ಶೇಷಗಿರಿರಾವ್ ಅವರು ಬರೆದು ಪ್ರಕಟಿಸಿರುವ 108 ಕನ್ನಡ, 44 ಇಂಗ್ಲಿಷ್ ಪುಸ್ತಕಗಳು ಸೇರಿ ಒಟ್ಟು 152 ಕೃತಿಗಳು ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಯ ಕುರಿತಾಗಿ ಸದಾ ತಿಳಿಸಲು ನಮ್ಮೊಡನೆ ಉಳಿದಿವೆ. ಅವುಗಳಲ್ಲಿ ಸಣ್ಣಕತೆಗಳು, ನಾಟಕಗಳು, ವ್ಯಕ್ತಿ ಚಿತ್ರಗಳು, ಅನುವಾದಗಳು, ನಿಘಂಟುಗಳು, ಸಾಹಿತ್ಯ ಚರಿತ್ರೆ, ವಿಮರ್ಶೆ, ರಾಮಾಯಣ, ಮಹಾಭಾರತ (ಇಂಗ್ಲಿಷ್‌ನಲ್ಲಿ), ಇಂಗ್ಲಿಷ್ ಭಾಷೆಯ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಗ್ರೀಕ್ ರಂಗಭೂಮಿ, ಶೇಕ್ಸ್‌ಪಿಯರ್ ಮೊದಲಾದವರ ಕುರಿತ ಕೃತಿಗಳು, ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯಗಳ ಮನೋಧರ್ಮ, ಪರಂಪರೆಗಳ ಅಧ್ಯಯನ- ಹೀಗೆ ಸಾಹಿತ್ಯದ ದೊಡ್ಡ ವೈವಿಧ್ಯವೇ ಸೇರಿದೆ. ಲೇಖಕನೊಬ್ಬನ ಕೇಂದ್ರ ವಿಚಾರವನ್ನು ಸಂಕ್ಷಿಪ್ತ ರೀತಿಯಲ್ಲಿ ಅವರ ವಿಮರ್ಶೆಯು ಓದುಗನಿಗೆ ಸುಲಭವಾಗಿ ತಿಳಿಯುವಂತೆ ಮಾಡುತ್ತದೆ.
‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ ಕೃತಿಗೆ ಸಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಉನ್ನತ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರ ಕೃತಿಗಳು ಕನ್ನಡದ ಹೊಸ ತಲೆಮಾರು ಆಯ್ದು ಅಧ್ಯಯನ ಮಾಡಬೇಕಾದ ಆಕರ ಸಾಹಿತ್ಯವೂ ಹೌದು. ಇಂತಹ ಹಿರಿಯ ವಿಮರ್ಶಕರ ಬಗ್ಗೆ, ಭಾರತೀಯ ಸಾಹಿತ್ಯ ನಿರ್ಮಾಪಕರು ಸರಣಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಈಚೆಗೆ ಮೊನೋಗ್ರಾಫ್ ಒಂದನ್ನು ಪ್ರಕಟಿಸಿದೆ. ವಿಮರ್ಶಕ, ಪತ್ರಕರ್ತ ಎನ್.ಎಸ್. ಶ್ರೀಧರಮೂರ್ತಿಯವರು ಕನ್ನಡದಲ್ಲಿ ಬರೆದಿರುವ ಈ ಮೊನೋಗ್ರಾಫ್ ಅನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಇತರ ಭಾರತೀಯ ಭಾಷೆಗಳಿಗೂ ಅನುವಾದಿಸಿ ಪ್ರಕಟಿಸಲಿದೆ. ಒಂದು ಭಾರತೀಯ ಭಾಷೆಯಲ್ಲಿ ಸಾಹಿತ್ಯ ನಿರ್ಮಾಣ ಮಾಡಿದ ಉನ್ನತಮಟ್ಟದ ಪ್ರತಿಭೆಯನ್ನು ಇತರ ಭಾರತೀಯ ಭಾಷೆಗಳಿಗೂ ಪರಿಚಯಿಸುವುದು ಭಾರತೀಯ ಸಾಹಿತ್ಯ ನಿರ್ಮಾಪಕರು ಸರಣಿಯ ಉದ್ದೇಶವಾಗಿದೆ.
ಶ್ರೀಧರಮೂರ್ತಿಯವರು ತಮ್ಮ ಕೃತಿಯಲ್ಲಿ ಪ್ರೊ. ಎಲ್.ಎಸ್.ಎಸ್ ಅವರ ಜೀವನವನ್ನು ಮುಖ್ಯ ಘಟನೆಗಳೊಡನೆ ಪರಿಚಯಿಸುವುದರೊಂದಿಗೆ ಅವರ ಇಂಗ್ಲಿಷ್-ಕನ್ನಡ ಸಾಹಿತ್ಯವನ್ನು ಸ್ಥೂಲ ವಿಂಗಡನೆಗೆ ಒಳಪಡಿಸಿ ಮೊನೋಗ್ರಾಫ್‌ನ ಪುಟ ಮಿತಿಯಲ್ಲಿ ವಿವರಿಸಿದ್ದಾರೆ. ಸೃಜನ ಸಾಹಿತ್ಯ, ಸಾಹಿತ್ಯ ಚರಿತ್ರೆ, ವಿಮರ್ಶಾ ಕೃತಿಗಳು, ನಿಘಂಟುಗಳು ಈ ನಾಲ್ಕು ವಿಭಾಗಗಳ ಮೂಲಕ ಶೇಷಗಿರಿರಾಯರ 152 ಕೃತಿಗಳ ಸಂಕ್ಷಿಪ್ತ ಪರಿಚಯ ಮತ್ತು ಮೌಲ್ಯಯುಕ್ತ ವಿಮರ್ಶೆ ಎರಡನ್ನೂ ನೀಡಿದ್ದಾರೆ. ಇಷ್ಟು ಆಗಾಧವಾದ ಸಾಧನೆಯನ್ನು 120 ಪುಟಗಳ ಮಿತಿಯಲ್ಲಿ ನೀಡುವುದು ಸುಲಭದ ಕೆಲಸವಲ್ಲ. ಏಕಾಗ್ರತೆ, ಸಂಯಮ ಮತ್ತು ಅನಿವಾರ್ಯವಾದದ್ದನ್ನು ಮಾತ್ರ ಹೇಳುವ ನಿಯಂತ್ರಣ- ಈ ಮೂರೂ ಶಕ್ತಿಯನ್ನು ಒಟ್ಟಿಗೆ ಸೇರಿಸಿಕೊಂಡು ಶ್ರೀಧರಮೂರ್ತಿಯವರು ಇದನ್ನು ಸಾಧಿಸಿದ್ದಾರೆ. ಈ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ, ಆ ಮೂಲಕ ಶ್ರೀಧರಮೂರ್ತಿ ಅವರು ಎಲ್.ಎಸ್.ಎಸ್ ಅವರನ್ನು ಕನ್ನಡದ ಓದುಗರಿಗೆ ಹೊಸದಾಗಿ ಪರಿಚಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.