ಪುಟಾಣಿ ಕೈಗಳಲ್ಲಿ ಟಚ್‌ಸ್ಕ್ರೀನ್ ಮೊಬೈಲ್‌ಗಳು, ರಿಮೋಟ್‌ಗಳು ರಾರಾಜಿಸುತ್ತಿರುವ ಸಂದರ್ಭದಲ್ಲಿ ಮಕ್ಕಳ ಕಥೆ, ಪದ್ಯ ಹೊತ್ತ ಹೊತ್ತಿಗೆ ಬಗ್ಗೆ ಮತ್ತೆ ಚಿಂತಿಸುವ ಕಾಲ ಬಂದಿದೆ. ಅಜ್ಜಿ ಕಥೆಗಳು, ಪುಟಾಣಿ ಪದ್ಯಗಳಿಂದ ಮಕ್ಕಳು ಎಷ್ಟು ದೂರ ಉಳಿಯುತ್ತಿದ್ದಾರೋ ಹಾಗೆಯೇಮಕ್ಕಳ ಸಾಹಿತ್ಯ ರಚನೆಯೂ ಕ್ಷೀಣಿಸುತ್ತಿರುವುದು ಅಷ್ಟೇ ಸತ್ಯ. ಮಕ್ಕಳನ್ನು ಮತ್ತೆ ಹೊತ್ತಿಗೆಯತ್ತ ಸೆಳೆಯುವ ಪ್ರಯತ್ನದ ಆರಂಭಿಕ ಹೆಜ್ಜೆಯೇ ಈ ಕೃತಿ.
ಕೇಂದ್ರ ಸಾಹಿತ್ಯ ಅಕಾದೆಮಿಯ ಅನುವಾದ ಕೇಂದ್ರ ಶಬ್ದನಾ ಆಯೋಜಿಸಿದ್ದ ‘ಮಕ್ಕಳಿಗಾಗಿ ಅನುವಾದ ಕಮ್ಮಟ’ದಲ್ಲಿ ಮಂಡನೆಯಾದ ಪ್ರಬಂಧಗಳ ಸಂಕಲನ ಈ ಕೃತಿ. ಶಿಕ್ಷಣ ಎನ್ನುವುದು ಪಠ್ಯಪುಸ್ತಕಗಳಿಗೆ ಸೀಮಿತ ಎನ್ನುವ ಈ ಕಾಲಘಟ್ಟದಲ್ಲಿ, ಮಕ್ಕಳ ಸಾಹಿತ್ಯದತ್ತ ಲೇಖಕರು, ಪೋಷಕರೂ ಗಮನಹರಿಸಬೇಕಾದ ಅಗತ್ಯವನ್ನು ಇಲ್ಲಿನ ಪ್ರಬಂಧಗಳು ಎತ್ತಿತೋರಿವೆ.
ಮಕ್ಕಳ ಸಾಹಿತ್ಯದ ಜಗತ್ತಿಗೆ ದಿಕ್ಸೂಚಿಯಂತಿರುವ ಈ ಕೃತಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದೆ. ‘ಮಕ್ಕಳ ಕವಿತೆ ಅಜ್ಜನ ಹೆಗಲ ಮೇಲೆ ಕೂತ ಮೊಮ್ಮಗುವಿನಂತೆ’ ಎಂದು ಮಕ್ಕಳಿಗೆ ಬರೆಯುವುದು ಏಕೆ, ಹೇಗೆ ಎಂಬ ಪ್ರಬಂಧದಲ್ಲಿ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿಯವರು ಉಲ್ಲೇಖಿಸುತ್ತಾರೆ. ಈ ಮಾತಿಗೆ ಪೂರಕವಾಗಿ ‘ಹಕ್ಕಿಸಾಲು’ ಸಂಗ್ರಹದ ಸಾಕ್ಷ್ಯ ನೀಡುತ್ತಾರೆ. ಗಂಭೀರ ಸಾಹಿತ್ಯಕ್ಕೂ ಮಕ್ಕಳ ಸಾಹಿತ್ಯಕ್ಕೂ ಗುಲಗಂಜಿ ತೂಕ ಹೆಚ್ಚು ಕಮ್ಮಿ ಇಲ್ಲ ಎಂದು ಉಲ್ಲೇಖಿಸುವ ಎಚ್ಚೆಸ್ವಿ ಅವರ ಮಾತು ಯುವ ಲೇಖಕರಿಗೆ ತಟ್ಟಬೇಕಿದೆ. ವಾಸ್ತವ ಜಗತ್ತಿನ ಬಿಂಬಗಳೂ ಕಥೆಗಳ ಮೂಲಕ ಮಕ್ಕಳ ಮನಸ್ಸಿನಲ್ಲಿ ಪಡಿಮೂಡಬೇಕು ಎನ್ನುವ ಅಂಶವನ್ನು ನಾಗೇಶ ಹೆಗಡೆ ಅವರು ಉಲ್ಲೇಖಿಸುತ್ತಾರೆ.ಹೀಗೆ ಮಕ್ಕಳ ಕತೆಗಳು, ಅನುವಾದದ ಬಗ್ಗೆ ಪ್ರಸ್ತಾಪಿಸುತ್ತಾ, ಕನ್ನಡ ಶಾಲೆಗಳು ಉಳಿಯಬೇಕು, ಬಲಗೊಳ್ಳಬೇಕು ಎನ್ನುವ ಹಂಬಲದ ಜೊತೆಗೆ ಕನ್ನಡದ ಮಕ್ಕಳ ಸಾಹಿತ್ಯ ಸಮೃದ್ಧಗೊಳ್ಳಬೇಕು, ಮಕ್ಕಳಿಗಾಗಿ ಅನುವಾದ ಮಾಡುವ ಲೇಖಕರ ಸಂಖ್ಯೆಯೂ ಹೆಚ್ಚಬೇಕು ಎನ್ನುವ ಆಶಯವನ್ನೂ ಕೃತಿ ಹೊತ್ತಿದೆ. ಪ್ರಬಂಧಗಳನ್ನು ಸಂಪಾದಿಸಿದ ಎ.ವಿ. ನಾವಡರ ಕಾರ್ಯ ಸ್ತುತ್ಯರ್ಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.