ಮಂಡ್ಯ ರಮೇಶ್ ರಂಗದ ಮೇಲೆ ನಲಿದದ್ದು, ತೆರೆಯ ಮೇಲೆ ನಗಿಸಿದ್ದು ಅಷ್ಟು ಮಾತ್ರವೇ? ಹಾಗಿದ್ದರೆ ಆ ತೆರೆಯ ಹಿಂದಿನ ಕಥೆಗಳೇನು? ಪ್ರಬುದ್ಧ ನಟನ ಬದುಕು ಹೇಗಿತ್ತು? ಈ ಕಲಾವಿದನ ಬದುಕು ಪಡೆದ ತಿರುವುಗಳ ಬಗ್ಗೆ ಸಮಗ್ರವಾಗಿ ಕಟ್ಟಿಕೊಟ್ಟಿದೆ ಈ ಕೃತಿ.
ಶೀರ್ಷಿಕೆಯಲ್ಲಿರುವಂತೆ ಇದು ಬರಿ ನಟನ ಸಂಸ್ಥೆಯೊಂದರ ಕಥನ ಅಲ್ಲ. ರಂಗ, ಚಿತ್ರ ನಟ, ನಿರ್ದೇಶಕ ಬರಹಗಾರನ ಬದುಕೊಂದು ರೂಪುಗೊಂಡದ್ದು, ಅದಕ್ಕೆ ಪೂರಕವಾಗಿ ಬಂದ ವ್ಯಕ್ತಿ– ಶಕ್ತಿ ಒದಗಿದ್ದು ಹೀಗೆ ಹತ್ತಾರು ವಿಷಯಗಳನ್ನು ಆಪ್ತವಾಗಿ ಹೇಳುತ್ತಲೇ ಹೋಗಿದೆ.
ಕೆಲವು ರಂಗ ಪ್ರಯೋಗಗಳ ಹಿನ್ನೆಲೆಯ ಕಥನಗಳಿವೆ. ಆಪ್ತರ ಅನಿಸಿಕೆಗಳಿವೆ. ಸಂದರ್ಶನಗಳಿವೆ. ವಿದೇಶದಲ್ಲಿ ಹೆಜ್ಜೆ ಇಟ್ಟ ‘ಮಂಡ್ಯ’ದಲ್ಲಿ ಒಂದು ಹೆಮ್ಮೆಯ ನಿಟ್ಟುಸಿರು ಇದೆ. ಟಿ.ವಿ. ಕಾರ್ಯಕ್ರಮಗಳಲ್ಲಿ ದಿಗ್ಗಜರ ಒಡನಾಟದ ಅನುಭವಗಳಿವೆ. ಲೇಖಕರಾಗಿ ಮಂಡ್ಯ ರಮೇಶ್ ಏನು ಎಂಬುದೂ ಗೊತ್ತಾಗಿದೆ. ಸಾಂಸಾರಿಕ ಬದುಕಿನ ಸುಖದುಃಖಗಳೂ ಹಾಗೆಯೇ ಬಂದು ಹೋಗಿವೆ.
ಕೊನೆಯ ಲೇಖನವೊಂದರಲ್ಲಿ ಮಂಡ್ಯದ ಕಬ್ಬಿನಲ್ಲಿ ಎಷ್ಟು ಸಿಹಿ ಇದೆಯೋ ಅಷ್ಟೇ ಕಹಿಯೂ ಇರುವುದರ ಕಥೆ ಇದೆ. ಹಲವಾರು ಉಳಿ ಪೆಟ್ಟುಗಳನ್ನು ತಿನ್ನದೇ ಕಲ್ಲು ಶಿಲೆಯಾಗದು. ಕಲೆಯಲ್ಲಿ ದೃಢ ಮನಸ್ಸನ್ನು ನೆಟ್ಟು ಟೀಕಿಸಿದವರಿಗೆ ಮೌನವಾಗಿಯೇ ಉತ್ತರವನ್ನು ಕೊಟ್ಟು ಮಂಡ್ಯದ ಮಣ್ಣನ್ನು ಗೌರವಿಸಿದ್ದಾರೆ ಈ ಕಲಾವಿದ. ಮೈಸೂರಿನ ರಂಗ ಪೀಠವನ್ನು ತಲೆಯ ಮೇಲೆ ಹೊತ್ತು ಮೆರೆಸಿದ್ದಾರೆ ಎಂಬ ಹೆಮ್ಮೆ ಇಲ್ಲಿನ ಬರಹಗಳಲ್ಲಿದೆ. ಕೊನೆಯಲ್ಲೊಂದು ಚಿತ್ರ ಸಂಪುಟವೂ ಇದೆ. ಪ್ರೊ.ಎಂ.ಕೃಷ್ಣೇಗೌಡರ ಆಪ್ತ ಮುನ್ನುಡಿಯಿದೆ. ಲೇಖಕರು ಮಂಡ್ಯ ರಮೇಶ್ ಅವರ ಆತ್ಮೀಯರೂ ಆಗಿರುವ ಕಾರಣ ಬರಹ ಮಾತಿನ ರೂಪ ಪಡೆದು ಆಪ್ತವಾಗಿ ಮೂಡಿಬಂದಿದೆ.
***
ಕೃತಿ: ಮಂಡ್ಯ ರಮೇಶ್ ನಟನ ಕಥೆ
ಲೇ: ಎನ್. ಧನಂಜಯ
ಪ್ರ: ವೀರಲೋಕ ಬುಕ್ಸ್ ಪ್ರೈ. ಲಿ.
ಬೆಲೆ: ₹ 250
ಪುಟಗಳು: 216
ಸಂ. 70221 22121
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.