ADVERTISEMENT

ಸ್ತ್ರೀವಾದದ ದೀವಿಗೆ

stree vaada

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:30 IST
Last Updated 25 ಮೇ 2019, 19:30 IST
ಸ್ತ್ರೀವಾದ ಪದ ವಿವರಣ ಕೋಶ
ಸ್ತ್ರೀವಾದ ಪದ ವಿವರಣ ಕೋಶ   

ಸ್ತ್ರೀವಾದಿ ಚಿಂತನೆ ಸ್ಪಷ್ಟವಾಗಿ ರೂಪುಗೊಳ್ಳುವಲ್ಲಿ ಮಹಿಳಾ ಅಧ್ಯಯನದ ಪಾತ್ರ ಮಹತ್ವದ್ದು. ಸ್ತ್ರೀಯರ ಸಾಮಾಜಿಕ ಬದುಕನ್ನು ಸುಸ್ಥಿರವಾಗಿಸುವ ಆಶಯವುಳ್ಳ ಮಹಿಳಾ ಅಧ್ಯಯನ ಮತ್ತು ಸ್ತ್ರೀವಾದವನ್ನು ಅರ್ಥೈಸಿಕೊಳ್ಳಲು ಪರಿಕಲ್ಪನೆಗಳು ಅಗತ್ಯ. ಈ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ‘ಸ್ತ್ರೀವಾದ’ ಪದ ವಿವರಣ ಕೋಶ ಕೃತಿ ದೀವಿಗೆಯಂತಿದೆ.

ಕನ್ನಡ ಮಹಿಳಾ ಅಧ್ಯಯನಕಾರರಲ್ಲಿ ಮುಂಚೂಣಿಯಲ್ಲಿರುವ ಎಚ್.ಎಸ್. ಶ್ರೀಮತಿ ಅವರ ಪರಿಶ್ರಮದಿಂದ ಮೂಡಿಬಂದಿರುವ ಈ ಕೃತಿ ಸ್ತ್ರೀವಾದಕ್ಕೆ ಕನ್ನಡಿಯಂತಿದೆ. ಸ್ತ್ರೀವಾದಿ ಅಧ್ಯಯನದಲ್ಲಿ ತೊಡಗಿರುವವರಿಗೆ, ಅದನ್ನು ಬೆಳೆಸುವ ಹಾದಿಗಳನ್ನು ಶೋಧಿಸುವ ಮಾದರಿಯಂತಿದೆ ಈ ಕೃತಿ.

ಕನ್ನಡ ಜ್ಞಾನ ಲೋಕದಲ್ಲಿ ಇದುವರೆಗೂ ಬಂದಿರುವ ಸ್ತ್ರೀವಾದಿ ಪರಿಕಲ್ಪನೆಗಳನ್ನು ಸರಳ ಮತ್ತು ಸ್ಪಷ್ಟ ಅರ್ಥ ಕೊಡುವ ಈ ಪದ ವಿವರಣಾಕೋಶ, ಕನ್ನಡ ಮಹಿಳಾ ಸಂಕಥನ ನಿರೂಪಿಸುವವರಿಗೆ ಮಾರ್ಗದರ್ಶಿಯಂತಿದೆ. ಹೆಣ್ಣು ಏಕೆ ಗಂಡಿಗಿಂತ ಭಿನ್ನವಾದ ಪರಿಭಾಷೆಗಳಲ್ಲಿ ಮಾತನಾಡುತ್ತಾಳೆ? ಅವುಗಳ ಹಿಂದಿರುವ ಸ್ತ್ರೀಸಂವೇದನಾ ಅರ್ಥೈಸುವಿಕೆಗಳೇನು? ಮುಖ್ಯವಾಗಿ ಸ್ತ್ರೀಸಂವೇದನೆಯ ನೆಲೆಗಳಾವುವು ಎಂಬುದನ್ನು ಈ ಕೃತಿ ಸರಳವಾಗಿ ಹೇಳುತ್ತದೆ.

ADVERTISEMENT

ಈ ಕೋಶವು ಒಂದೇ ಓದಿನಲ್ಲಿ ಮುಗಿಸುವ ಕೃತಿಯಲ್ಲ. ಬದಲಿಗೆ ಅಗತ್ಯವೆನಿಸಿದಾಗ ಬಳಸಬಹುದಾದ ಒಂದು ಪರಾಮರ್ಶನ ಕೃತಿಯಾಗಿದೆ. ಇಲ್ಲಿ ಪದ ವಿವರಣೆಯನ್ನು ಅ ಕಾರಾದಿಯಾಗಿ ನೀಡಲಾಗಿದೆಯಾದರೂ ವಿಷಾಯಾನುಸಾರ ಅಕಾರಾದಿಯಾಗಿಲ್ಲ ಎಂಬುದು ಗಮನೀಯ. ಸ್ತ್ರೀವಾದಿ ಚಳವಳಿಯ ತಾತ್ವಿಕ ನೆಲೆಯ ಪಠ್ಯದಂತಿರುವ ಈ ಕೃತಿ ಜ್ಞಾನಮೀಮಾಂಸೆಯ ಹಲವು ದಾರಿಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವಂತಿದೆ. ಸ್ತ್ರೀವಾದಿ ಮತ್ತು ಮಹಿಳಾ ಅಧ್ಯಯನಕಾರರಿಗಷ್ಟೇ ಅಲ್ಲ, ಸಮಾಜ–ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವವರಿಗೂ ಈ ಕೃತಿ ಅಧ್ಯಯನ ಸಾಮಗ್ರಿ ಒದಗಿಸುತ್ತದೆ.

ತಮ್ಮ ಶೈಕ್ಷಣಿಕ ಬದುಕಿನಲ್ಲಿ ಬೋಧನೆಯ ಸಂದರ್ಭದಲ್ಲಿ ಗ್ರಹಿಸಿದ ಸ್ತ್ರೀವಾದವನ್ನು, ಅಧ್ಯಯನದ ಮೂಲಕ ಕಂಡುಕೊಂಡ ಹೂರಣವನ್ನು ಕೃತಿಯಲ್ಲಿ ಲೇಖಕಿ ನಿರೂಪಿಸಿದ್ದಾರೆ.ಇಂಗ್ಲಿಷ್‌ನಲ್ಲಿ ಹೇರಳವಾಗಿ ದೊರೆಯುವ ಸ್ತ್ರೀವಾದ ಭಾಷೆಯ ಕೋಶಗಳು ಕನ್ನಡದ ಮಟ್ಟಿಗೆ ಅಪರೂಪವೇ. ಅಂಥ ಕೊರತೆಯನ್ನು ಸ್ತ್ರೀವಾದ ಪದವಿವರಣಾ ಕೋಶ ಅಲ್ಪಮಟ್ಟಿಗಾದರೂ ನೀಗಿಸಿದೆ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.