ಪತ್ರಕರ್ತ ಹಾಗೂ ಪರಿಸರ ಕಾರ್ಯಕರ್ತನ ರೂಪದಲ್ಲಿ ನಾಡಿನ ತುಂಬಾ ಅನಾವರಣಗೊಂಡಿರುವ ನಾಗೇಶ ಹೆಗಡೆ ಅವರದು ಹಲವು ಚಾಚುಗಳ ಪ್ರತಿಭೆ. ಶಿವರಾಮ ಕಾರಂತರಂತೆಯೇ ಇವರ ‘ಹುಚ್ಚು’ ಮನಸ್ಸಿನ ವ್ಯಕ್ತಿತ್ವಕ್ಕೂ ಹತ್ತಾರು ಮುಖಗಳು. ಪರಿಸರ ಕಾಳಜಿಯ ಹುಚ್ಚನ್ನೂ ವಿಜ್ಞಾನ ಬರವಣಿಗೆಯ ಹುಚ್ಚನ್ನೂ ಸಹಜ ಕೃಷಿಯ ಹುಚ್ಚನ್ನೂ ಚಳವಳಿಯ ಹುಚ್ಚನ್ನೂ ಅಭ್ಯುದಯ ಪತ್ರಿಕೋದ್ಯಮದ ಹುಚ್ಚನ್ನೂ ವಿಭಿನ್ನ ನುಡಿಗಟ್ಟು ಟಂಕಿಸುವ ಭಾಷಾಶಾಸ್ತ್ರದ ಹುಚ್ಚನ್ನೂ ಹೃದಯಕ್ಕೆ ಅಂಟಿಸಿಕೊಂಡವರು ಅವರು. ಈ ವಾಮನಮೂರ್ತಿ ಪತ್ರಿಕೋದ್ಯಮಕ್ಕೆ ದಾಪುಗಾಲು ಹಾಕಿ, ತ್ರಿವಿಕ್ರಮನಾಗಿ ಬೆಳೆದು ಬರೊಬ್ಬರಿ ಐವತ್ತು ವರ್ಷಗಳು ಸಂದಿರುವ ನೆನಪಿನಲ್ಲಿ ಒಡನಾಡಿಗಳು ಹೊರತಂದಿರುವ ಅಭಿನಂದನಾ ಗ್ರಂಥ ‘ನೆಲಗುಣ’.
ಪಶ್ಚಿಮಘಟ್ಟದ ತೊಟ್ಟಿಲಿನ ಬಕ್ಕೆಮನೆಯಲ್ಲಿ ಜನಿಸಿದ ಹೆಗಡೆ ಅವರಿಗೆ ಮಣ್ಣಿನ ಮೇಲೆ ಅಗಾಧ ಪ್ರೀತಿ. ‘ಇರುವುದೊಂದೇ ಭೂಮಿ’ ಎಂದು ಕನವರಿಸಿದ, ಕನವರಿಸುವ ಈ ಪತ್ರಕರ್ತ ‘ಗಗನಸಖಿಯರ ಸೆರಗ ಹಿಡಿದು’ ಆಕಾಶದಲ್ಲೂ ಹಾರಾಡಿದವರು. ಸಹಜವಾಗಿಯೇ ಅವರ ಬರವಣಿಗೆಯ ವಿಷಯವ್ಯಾಪ್ತಿ ಭೂಮ್ಯಾಕಾಶದವರೆಗೆ ಹಬ್ಬಿ ನಿಂತಿದೆ. ಹೆಗಡೆ ಅವರು ಬರೆದ ಹೊತ್ತಗೆಗಳ ಸಂಖ್ಯೆ ಅರ್ಧ ಸೆಂಚುರಿ ಬಾರಿಸಿದ್ದರೂ ಅವರ ಹೆಸರು ಪ್ರಸ್ತಾಪವಾದೊಡನೆ ಮೊದಲು ನೆನಪಿಗೆ ಬರುವುದು ‘ಪ್ರಜಾವಾಣಿ’ಯ ವಿಜ್ಞಾನ ವಿಶೇಷ ಅಂಕಣವೇ. ಆ ಅಂಕಣಕ್ಕೂ ಈಗ 40ರ ಹರೆಯ! ಇಲ್ಲಿನ ಹಲವು ಲೇಖನಗಳಲ್ಲಿ ಆ ಅಂಕಣ ಮತ್ತೆ ಮತ್ತೆ ಪ್ರಸ್ತಾಪಗೊಂಡಿರುವುದು ಅದು ಗಳಿಸಿರುವ ಓದುಗ ಪ್ರೀತಿಗೆ ಸಾಕ್ಷಿ.
ವಿಜ್ಞಾನ ಸಾಹಿತ್ಯವು ತನ್ನ ಜಟಿಲ ‘ವ್ಯಾಕರಣ’ದಲ್ಲಿ ಬಂಧಿಯಾಗದಂತೆ ಛಂದೋಬದ್ಧ ರಾಜಮಾರ್ಗವನ್ನು ನಿರ್ಮಿಸಿ ನಗೆ ಬೀರಿದವರಲ್ಲವೇ ಈ ಲೇಖಕ? ‘ಹೆಗಡೆಯವರು ಮೊದಲು ತಮ್ಮ ಕನ್ನಡವನ್ನು ಕಟ್ಟಿಕೊಂಡು, ಬಳಿಕ ತಮ್ಮ ಬರಹಗಳಿಂದ ಕನ್ನಡವನ್ನು ಕಟ್ಟಿದ್ದಾರೆ’ ಎಂಬ ಕೆ.ವಿ. ಅಕ್ಷರರ ಮಾತು ಖಂಡಿತ ದಿಟ ಎನ್ನುವುದಕ್ಕೆ ಅವರ ಯಾವುದೇ ಬರಹವೂ ಸಾಕ್ಷ್ಯ ನುಡಿಯುತ್ತದೆ. ‘ಕ್ಯಾಪ್ಸೂಲಗಿತ್ತಿ’, ‘ನ್ಯಾನೊಹೇನು’, ‘ಹಾರುವತಟ್ಟೆಯ ದಶಾವತಾರಗಳು’, ‘ಮುಷ್ಟಿಯಲ್ಲಿ ಮಿಲೇನಿಯಂ’... ಅವರು ಕನ್ನಡ ಕಟ್ಟುವ ಕ್ರಿಯೆಯ ಪರಿಶೀಲನೆಗಾಗಿ ನಿಮಗೆ ಎಷ್ಟು ಸಾಕ್ಷಿ ಬೇಕು ಹೇಳಿ? ಅಂದಹಾಗೆ, ಹೆಗಡೆ ಅವರ ಬರಹಗಳನ್ನು ವಿಜ್ಞಾನ ಲೇಖನಗಳ ಪ್ರಭೇದದಲ್ಲಿ ಮಾತ್ರ ವರ್ಗೀಕರಿಸಿ ನೋಡದೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯ ಕೃತಿಗಳನ್ನಾಗಿಯೂ ನೋಡುವ ಅಗತ್ಯವಿದೆ.
ವೈದೇಹಿ, ಸಿ.ಎನ್. ರಾಮಚಂದ್ರನ್, ಡಿ. ಉಮಾಪತಿ, ಜಯಂತ ಕಾಯ್ಕಿಣಿ ಸೇರಿದಂತೆ ಹಲವು ಹಿರಿಯರ ಲೇಖನಗಳು ಈ ಸಂಗ್ರಹದಲ್ಲಿವೆ. ವ್ಯಕ್ತಿತ್ವದ ಒಂದೊಂದು ಒಳಗುಟ್ಟನ್ನು ಅವುಗಳು ಹೊಳೆಯಿಸುತ್ತವೆ. ಹೆಗಡೆ ಅವರ ತಂಗಿ ಶಾರದಾ ದಾಬಡೆ ಅವರು ಬರೆದ ಲೇಖನ ನಾವು–ನೀವೆಲ್ಲ ಕಾಣುತ್ತಿರುವ ‘ಇಂದಿನ ಹೆಗಡೆ’ ರೂಪುಗೊಂಡ ಕಥೆಯನ್ನು ಸೊಗಸಾಗಿ ಕಟ್ಟಿಕೊಡುತ್ತದೆ. ಪುಟ್ಟ ಹುಡುಗ ಬೆಟ್ಟಗುಡ್ಡಗಳನ್ನೇರಿ ಶಾಲೆಗೆ ಹೋಗುತ್ತಿದ್ದುದರಿಂದ ಹಿಡಿದು ಪಟ್ಟಣದಲ್ಲಿ ಬೇರೆಯವರ ಮನೆಯಲ್ಲಿ ಉಳಿದು, ಕೊನೆಗೆ ಜೆಎನ್‌ಯು ಅಂಗಳದಿಂದ ಹೊರಬಂದು ದೈತ್ಯನಾಗಿ ಬೆಳೆದವರೆಗಿನ ಪರಿಯನ್ನು ತಂಗಿಯ ಕಣ್ಣುಗಳಿಂದ ಕಂಡರಿಸಿದ ನೋಟಗಳು ಹೃದಯಸ್ಪರ್ಶಿ. ಜೆಎನ್‌ಯುನಲ್ಲಿ ಸಹಪಾಠಿಯಾಗಿದ್ದ ವಿಘ್ನೇಶ್ ಭಟ್ ಅವರು ನೀಡುವ ವಿವರಗಳು ಸಹ ‘ಯುವಕ ಹೆಗಡೆ’ ವ್ಯಕ್ತಿತ್ವವನ್ನು ತೆರೆದಿಡಲು ಯಶಸ್ವಿಯಾಗಿವೆ.
‘ಪ್ರಜಾವಾಣಿ’ಯ ಕರ್ನಾಟಕ ದರ್ಶನ ಪುರವಣಿ ಮೂಲಕ ಅಭ್ಯುದಯ ಪತ್ರಕರ್ತರ ತಂಡವನ್ನೇ ಕಟ್ಟಿದವರು ಹೆಗಡೆ. ‘ತರಾಸು, ಅನಕೃ ಅವರನ್ನು ‘ಓದುವ ಸಂಸ್ಕೃತಿ’ ಬೆಳೆಸಿದವರು ಎನ್ನುವಂತೆಯೇ ಇವರು ಬರೆಯುವ ತಲೆಮಾರೊಂದನ್ನು ರೂಪಿಸಿದ ಮೇಷ್ಟ್ರು’ ಎಂದು ಕರೆದಿರುವುದು ಕೂಡ ಉತ್ಪ್ರೇಕ್ಷೆಯ ಮಾತೇನಲ್ಲ. ಹೆಗಡೆಯವರ ಕುರಿತು ಇಲ್ಲಿರುವ ದೊಡ್ಡ ಲೇಖನಗಳಿಗಿಂತಲೂ ಲೇಖಕರ ಕುರಿತು ಹೆಗಡೆಯವರು ಬರೆದ ಪುಟ್ಟ ಟಿಪ್ಪಣಿಗಳೇ ಹೆಚ್ಚು ರಸವತ್ತಾಗಿವೆ. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗಿ, ತುಟಿಯಂಚಿನಲ್ಲೊಂದು ನಗೆಯನ್ನೂ ಮೂಡಿಸುತ್ತವೆ. ಎಲ್ಲಿಯೋ ಒಂದುಕಡೆ ಫೋಟೊ ಆಲ್ಬಂ ಕೊಟ್ಟು ಕೈತೊಳೆದುಕೊಳ್ಳುವ ಬದಲು ಆಯಾ ಲೇಖನದಲ್ಲಿ ಚರ್ಚಿತವಾದ ವಿವರಗಳಿಗೆ ಪೂರಕವಾದ ಚಿತ್ರಗಳನ್ನು ಅಲ್ಲಲ್ಲೇ ನೀಡಿರುವುದು ಗಮನಾರ್ಹವಾಗಿದೆ. ಗಗನಸಖಿಯರ ನಡುವಿನ ಬಡಪಾಯಿ ಪತ್ರಕರ್ತನ ಚಿತ್ರವಂತೂ ಅನನ್ಯವಾಗಿದೆ.
ಕೃತಿಯ ಸಂಪಾದಕ ಗುರುರಾಜ್ ದಾವಣಗೆರೆ ಅವರು ಹೆಗಡೆಯವರ ಸಹೋದ್ಯೋಗಿಗಳಿಂದಲೇ ಹೆಚ್ಚಿನ ಲೇಖನಗಳನ್ನು ಬರೆಸಿದ್ದೇಕೋ? ಈ ಕಾರಣದಿಂದ ‘ಪತ್ರಕರ್ತ ಹೆಗಡೆ’ಯವರೇ ಢಾಳಾಗಿ ಎದ್ದುಕಂಡಿದ್ದಾರೆ. ಹೆಗಡೆಯವರು ಗೌರವಿಸುವ ಸಿ.ಎನ್.ಆರ್. ರಾವ್, ಅವರ ಒಡನಾಡಿಗಳಾದ ಮೇಧಾ ಪಾಟ್ಕರ್, ರಾಜೇಂದ್ರ ಸಿಂಗ್, ವಂದನಾ ಶಿವ, ದೇವಿಂದರ್ ಶರ್ಮಾ ಅವರಂತಹ ಘಟಾನುಘಟಿಗಳಿಂದಲೂ ಬರೆಸಿದ್ದರೆ ಹೆಗಡೆಯವರ ವ್ಯಕ್ತಿತ್ವದ, ಅವರ ಹೋರಾಟ–ಚಳವಳಿ–ಚಟುವಟಿಕೆಗಳ ಕುರಿತ ಇನ್ನಷ್ಟು ಒಳನೋಟಗಳು ದಕ್ಕುತ್ತಿದ್ದವು.
ಹೆಗಡೆ ಅವರ ಪತ್ನಿ ರೇಖಾ ಅವರ ಹಳೆಯ ನಿರೂಪಿತ ಲೇಖನ ಪ್ರಕಟಿಸುವ ಬದಲು, ಅವರಿಂದಲೇ ಹೊಸದಾಗಿ ಲೇಖನವೊಂದನ್ನು ಬರೆಸಿದ್ದರೆ ಚೆನ್ನಾಗಿತ್ತು. ಆಗ ನಡುಬಾಗದ ಪತ್ರಕರ್ತ, ನಡುರಾತ್ರಿ ಸ್ವಗತದಲ್ಲಿ ತೊಡಗುವುದರಿಂದ ಅವರು ಅನುಭವಿಸುವ ಕೀಟಲೆ ಹಾಗೂ ಹೊಸದೊಂದು ಪುಸ್ತಕ ಬಂದಾಗ ಅವರು ತೋರುವ ಸಂಭ್ರಮದ ರೇಖಾಚಿತ್ರಣವೊಂದು ಸಿಗುತ್ತಿತ್ತು. ಹಾಗೆಯೇ ಹೆಗಡೆಯವರ ‘ನಡುಭಾಗ’ದ ವಿಚಾರಗಳನ್ನು (ಎಡ, ಬಲ ತೊಡೆತಟ್ಟಿ ನಿಂತಿರುವ ಈ ಹೊತ್ತಿನ ಜರೂರು) ತಿಳಿಯುವಂತಹ ಸಂದರ್ಶನವೊಂದು ಇದ್ದಿದ್ದರೆ ಕೃತಿಯ ತೂಕ ಇನ್ನೂ ಹೆಚ್ಚುತ್ತಿತ್ತು. ಆದರೆ, ಅಭಿನಂದನೆಯ ನೆಪದಲ್ಲಿ ಈ ಗ್ರಂಥವೊಂದು ಭಜನಾ ಕಲಾಪವಾಗದೆ ಪತ್ರಿಕೋದ್ಯಮ, ಪರಿಸರ, ಜ್ಞಾನ, ವಿಜ್ಞಾನ, ಕೃಷಿ ವಿಷಯಗಳ ಕಲರವವಾಗಿದೆ ಎನ್ನುವುದನ್ನು ಒಪ್ಪಬೇಕು. ಅದನ್ನು ಹಾಗೆ ರೂಪಿಸಿದ್ದಕ್ಕಾಗಿ ಸಂಪಾದಕರಿಗೆ ಅಭಿನಂದನೆಯೂ ಸಲ್ಲಬೇಕು.
ಕೃತಿ: ನೆಲಗುಣ
ನಾಗೇಶ ಹೆಗಡೆ ಅಭಿನಂದನಾ ಗ್ರಂಥ
ಸಂಪಾದಕ: ಗುರುರಾಜ್ ಎಸ್. ದಾವಣಗೆರೆ
ಪ್ರ: ನಾಗೇಶ ಹೆಗಡೆ ಅಭಿನಂದನಾ ಸಮಿತಿ
ಪುಟಗಳು: 434 ಬೆಲೆ: 350
ಸಂಪರ್ಕ: 9449177628
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.