ಐವತ್ತು ವರ್ಷಗಳ ಹಿಂದೆ ಪತ್ರಕರ್ತರನ್ನು ತಯಾರುಮಾಡುವ ಕಾಲೇಜುಗಳಿರಲಿಲ್ಲ. ಪತ್ರಿಕಾವೃತ್ತಿಯನ್ನು ನ್ಯೂಸ್‌ರೂಮುಗಳಲ್ಲಿ, ಮುದ್ರಣ ವಿಭಾಗಗಳಲ್ಲಿ ಕಲಿತುಕೊಳ್ಳಬೇಕಾಗಿತ್ತು. ಕಾರ್ಖಾನೆಗಳಂಥ ಕ್ರಿಯಾಕ್ಷೇತ್ರಗಳಲ್ಲಿ ಸೂಕ್ತ ತರಬೇತಿ ಪಡೆಯುತ್ತಿದ್ದ ಭಾವೀ ಪತ್ರಕರ್ತರು ತಮ್ಮ ವೃತ್ತಿಯ ನಿಯಮ ನಿಲುವುಗಳನ್ನು ಪರಸ್ಪರ ಸಹಕಾರದಿಂದ ರೂಢಿಸಿಕೊಳ್ಳುತ್ತಿದ್ದರು.
ಒಂದು ಅವಿಭಕ್ತ ಕುಟುಂಬದಂತಿದ್ದ ಪತ್ರಕರ್ತರು ಸಮಾನ ಜೀವನವನ್ನು ಬದುಕುತ್ತ ತಮ್ಮ ವೃತ್ತಿಯನ್ನಲ್ಲದೆ ಬೇರೇನನ್ನೂ ಯೋಚಿಸುತ್ತಲೇ ಇರಲಿಲ್ಲ ಎನ್ನಬೇಕು. ಆಗ ಆದರ್ಶಪ್ರಾಯರಾಗಿದ್ದವರು ವಾಲ್ಟರ್ ಲಿಪ್‌ಮನ್, ಕಿಂಗ್‌ಸ್ಲೀ ಮಾರ್ಟಿನ್‌ರಂಥ ಪಾಶ್ಚಾತ್ಯರು ಮತ್ತು ಪೊತನ್ ಜೋಸೆಫ್, ರಘುನಾಥ ಐಯರ್, ಫ್ರಾಂಕ್ ಮೊರೇಸ್, ಚಲಪತಿರಾವ್ ಮೊದಲಾದ ನಮ್ಮವರೇ ಪತ್ರಕರ್ತರು. ‘ನಾನು ಹಿಂದೂ ರಾಮಯ್ಯ’ ಎಂಬ ಈ ಕೃತಿಯ ಲೇಖಕ ಪಿ. ರಾಮಯ್ಯನವರು ಆ ಕಾಲಕ್ಕೆ ಸೇರಿದ ವಿಶಿಷ್ಟ ಪತ್ರಕರ್ತರು.
‘ದಿ ಹಿಂದೂ’ ಪತ್ರಿಕೆಯ ವರದಿಗಾರರಾಗಿ, ಬ್ಯೂರೋ ಮುಖ್ಯಸ್ಥರಾಗಿ, ಸಂಪಾದಕೀಯ ಪ್ರತಿನಿಧಿಯಾಗಿ, ಡೆಪ್ಯುಟಿ ಎಡಿಟರ್ ಆಗಿ, ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಸುಮಾರು 48 ವರ್ಷ ಕಾರ್ಯನಿರ್ವಹಿಸಿದ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಜ್ಞಾವಂತ ವಾತಾವರಣದಿಂದ ಪ್ರಭಾವಿತನಾದ ನನ್ನಲ್ಲಿ ನನ್ನ ಮುಂದಿನ ವೃತ್ತಿ ಪತ್ರಕರ್ತನಾಗಿಯೇ ಮುಂದುವರಿಯಬೇಕು ಎನ್ನುವ ನಿರ್ಧಾರಕ್ಕೆದೂಡಿತ್ತು. ವೃತ್ತಿ ಒಪ್ಪಿದ ಮೇಲೆ ಅದರಲ್ಲಿ ಸಾರ್ಥಕತೆ ದಕ್ಕಿಸಿಕೊಳ್ಳುವ ನಿರ್ಧಾರ ನನ್ನಲ್ಲಿ ಪ್ರಬಲವಾಯಿತು’ ಎಂದಿದ್ದಾರೆ.
ಪ್ರಸ್ತುತ ಪುಸ್ತಕದಲ್ಲಿ ರಾಮಯ್ಯನವರು ಪ್ರಜಾಸತ್ತಾತ್ಮಕ ಸಮಾಜದಲ್ಲಿ ನಾಗರಿಕರ ಹಾಗೂ ರಾಜಕಾರಣಿಗಳ ಪಾತ್ರವನ್ನು ಹೇಗೋ ಹಾಗೆ ಸಾರ್ವಜನಿಕರ ಗ್ರಹಣ ಶಕ್ತಿಯನ್ನು, ಅವರ ನಿರೀಕ್ಷೆಗಳನ್ನು ಮತ್ತು ಆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳನ್ನು ರೂಪಿಸುವಲ್ಲಿ ಪತ್ರಿಕೆಗಳ ಪಾತ್ರವನ್ನೂ ಪರಿಶೀಲಿಸಿದ್ದಾರೆ.
ಹಿಂದೆಲ್ಲ ಪತ್ರಕರ್ತರಾಗಬಯಸುವವರಿಗೆ ವಿಸ್ತಾರವಾದ ಸಾಂಸ್ಕೃತಿಕ ಹಿನ್ನೆಲೆ ಅಗತ್ಯವಾಗಿತ್ತು. ಅಂತರ್ಜಾಲ ಇಲ್ಲದಿದ್ದ ಆ ಕಾಲದಲ್ಲಿ ವೃತ್ತಿಯ ಅಗತ್ಯಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳ ಸ್ಥೂಲ ಪರಿಚಯವನ್ನು ಪಡೆಯುವುದಕ್ಕಾಗಿ ವಿಪುಲವಾಗಿ ಓದಬೇಕಿತ್ತು. ಪತ್ರಿಕಾವೃತ್ತಿಯನ್ನು ಮನಸಾರೆ ಇಚ್ಛಿಸಿದವರು ಸ್ವಯಂ-ಶಿಕ್ಷಿತರಾಗಿದ್ದು, ಬೇಗ ಬೇಗ ಕಲಿತುಕೊಳ್ಳುತ್ತಿದ್ದರು. ಸಮರ್ಥ ಪತ್ರಕರ್ತನಾಗಿದ್ದವನು ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಬಗೆಗೆ ಅತ್ಯಲ್ಪ ಕಾಲದಲ್ಲಿ ಲೇಖನಗಳನ್ನು ಬರೆಯುತ್ತಿದ್ದ. ಅಂಥ ಅನೇಕ ಸಮರ್ಥರು ‘ಪ್ರಜಾವಾಣಿ’ಯಂಥ ಪತ್ರಿಕೆಗಳಲ್ಲಿ ಇದ್ದದ್ದನ್ನು ನಾನೇ ಕಂಡಿದ್ದುಂಟು.
ಒಬ್ಬ ಸಮರ್ಥ ಪತ್ರಕರ್ತ ಒಬ್ಬಅತ್ಯುತ್ತಮ ವರದಿಗಾರನೂ ಆಗಿರುತ್ತಾನೆ ಎಂಬ ಮಾತಿದೆ. ವರದಿಗಾರಿಕೆ ಎಂದರೆ ವಾಸ್ತವಾಂಶವನ್ನು ಅತ್ಯಂತ ಕರಾರುವಾಕ್ಕಾಗಿ, ಕೂಲಂಕಶವಾಗಿ ಪುನರ‍್ರೂಪಿಸುವ, ಘಟನೆಗಳು ನಿಜಕ್ಕೂ ನಡೆದಂತೆ, ಓದುಗ ಸ್ವತಃ ಆ ಘಟನೆಗಳನ್ನು ಕಣ್ಣಾರೆ ಕಂಡಂತೆ, ಪುನರ‍್ರಚಿಸುವ ವಿಧಾನ. ರಾಮಯ್ಯನವರು ಹೆಸರಾದದ್ದು ತಮ್ಮ ಬಹುಮುಖ್ಯ ರಾಜಕೀಯ ವರದಿಗಳಿಗಾಗಿ. ಅವರೇ ಹೇಳುವಂತೆ, ‘ವರದಿಗಾರ ತನ್ನ ಕಾರ್ಯವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಕೆಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ, ವಿವಿಧ ಮಂತ್ರಿಗಳ ಖಾತೆಗಳು, ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳು, ಉದ್ದಿಮೆಗಳು, ಆಡಳಿತ ಯಂತ್ರದ ಕಾರ್ಯನಿರ್ವಹಣೆ, ಅದು ಕೈಗೊಂಡಿರುವ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ರೀತಿ, ಇತ್ಯಾದಿಗಳ ಬಗ್ಗೆ ಅರಿವು ಹೊಂದಿರಬೇಕಾಗುತ್ತದೆ. ವರದಿಗಾರನಿಗೆ ರಾಜಕೀಯ, ಆಯವ್ಯಯ, ಸರ್ಕಾರಕ್ಕೆ ಸಂಬಂಧಿಸಿದ ಇತರೆ ಎಲ್ಲಾ ವಿಷಯಗಳ ಅಭ್ಯಾಸ ಅತ್ಯಗತ್ಯ.’
ಇಂಥ ಪೂರ್ವಸಿದ್ಧತೆಯ ಜೊತೆಗೆ ಸಾಮಯಿಕ ಪ್ರಜ್ಞೆ, ವಿಶ್ಲೇಷಣಾ ಪ್ರವೃತ್ತಿ, ಎಂಥ ಪ್ರತಿಬಂಧಕವನ್ನೂ ದಾಟುವ ಜಾಣ್ಮೆ, ಎಲ್ಲವೂ ರಾಮಯ್ಯನವರಲ್ಲಿ ಧಾರಾಳವಾಗಿ ಇತ್ತೆನ್ನುವುದಕ್ಕೆ ಅವರು ವಿಜ್ಞಾನಿ ಸಿ.ವಿ.ರಾಮನ್‌ರ ಮನವೊಲಿಸಿ ಅವರ ಸಂಶೋಧನೆಯನ್ನು ಅವರೇ ವಿವರಿಸುವಂತೆ ಮಾಡಿದ ಪ್ರಸಂಗ, ಫುಟ್‌ಬಾಲ್, ಕ್ರಿಕೆಟ್, ಟೆನಿಸ್ ಮೊದಲಾದ ಕ್ರೀಡಾಪಂದ್ಯಗಳ ವರದಿ, ಮಠಾಧಿಪತಿಗಳ ಸಂದರ್ಶನ, ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭ, ಹೀಗೆ ಹಲವಾರು ಘಟನೆಗಳು ಪುರಾವೆಯಾಗಿವೆ. ಹಾಗೆ ನೋಡಿದರೆ ರಾಮಯ್ಯನವರು ಕರ್ನಾಟಕದ ರಾಜಕೀಯ, ಕೈಗಾರಿಕೆ, ನೀರಾವರಿ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ನಡೆದ ಬೆಳವಣಿಗೆ/ಅಭಿವೃದ್ಧಿಗಳನ್ನು ಪ್ರತ್ಯಕ್ಷ ಕಂಡವರು ಮತ್ತು ಅವುಗಳಿಗೆ ತಮ್ಮ ಬರಹಗಳ ಮೂಲಕ ಪ್ರತಿಕ್ರಿಯಿಸಿದವರು. ದೇವರಾಜ ಅರಸು, ಎಸ್.ಎಂ. ಕೃಷ್ಣ, ಆರ್. ಗುಂಡೂರಾವ್, ಎಸ್.ಆರ್. ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಜೆ.ಎಚ್. ಪಟೇಲ್ ಮೊದಲಾದ ರಾಜಕಾರಣಿಗಳ ಕಾರ್ಯವೈಖರಿಯನ್ನು ಅವರಷ್ಟು ಸೂಕ್ಷ್ಮವಾಗಿ ಗಮನಿಸಿದವರು ಅಪರೂಪ.
ರಾಮಯ್ಯನವರ ಪ್ರಾಮಾಣಿಕತೆ, ವಸ್ತುನಿಷ್ಠೆ ಎಷ್ಟು ವಿಸ್ವಾಸಾರ್ಹವಾಗಿದ್ದುವೆಂಬುದಕ್ಕೆ ಎರಡು ಪ್ರಸಂಗಗಳು: ಒಂದು ಎಸ್.ಎಂ. ಕೃಷ್ಣ ವಿಧಾನಸಭೆಯ ಸ್ಪೀಕರ್ ಆಗಿದ್ದ ಸಂದರ್ಭ. ಬಂಗಾರಪ್ಪ ಸರ್ಕಾರ ಕಾವೇರಿ ನದಿ ನೀರಿನ ಬಳಕೆಗೆ ಸಂಬಂಧಪಟ್ಟಂತೆ ಒಂದು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಆದರೆ ‘ಮಸೂದೆ ಅಂಗೀಕಾರವಾಯಿತು’ಎಂದು ಪ್ರಸಾರ ಮಾಡಿತು ಆಕಾಶವಾಣಿ. ಅದು ಹಾಗೆ ವರದಿ ಮಾಡಿದವರು ತಮ್ಮ ಕೆಲಸ ಕಳೆದುಕೊಳ್ಳಬಹುದಾಗಿದ್ದ ಪ್ರಸಂಗ. ಆಗ ರಾಮಯ್ಯನವರು ಇತರ ಕೆಲವು ಪತ್ರಕರ್ತರೊಡನೆ ಕೃಷ್ಣ ಅವರನ್ನು ಕಂಡು ಆ ಅಚಾತುರ್ಯದ ಬಗ್ಗೆ ಪ್ರಸ್ತಾಪಿಸಿದಾಗ ಅವರು ‘ನಾನು ಯಾವ ರೀತಿ ನನ್ನ ನಿರ್ಣಯವನ್ನು ಕೊಡಬೇಕುಎಂದು ನೀವೇ ಬರೆದುಕೊಡಿ ಎಂದರು. ನಾನು ವರದಿಗಾರರ ಜವಾಬ್ದಾರಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಸಭೆಯ ಕಲಾಪಗಳನ್ನು ಯಥಾವತ್ತಾಗಿ ವರದಿ ಮಾಡುವ ಜವಾಬ್ದಾರಿಯನ್ನು ಒತ್ತಿ ಹೇಳುವಂತೆ ಒಂದು ನಿರ್ಣಯದ ಕರಡನ್ನು ಬರೆದು ಕೊಟ್ಟೆ. ಕೃಷ್ಣ ಅವರು ಅದನ್ನೇ ಸಭೆಯಲ್ಲಿ ಓದಿ ವಿವಾದಕ್ಕೆ ತೆರೆ ಎಳೆದರು.’
ಇನ್ನೊಂದು, ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರನ್ನು ಸಂದರ್ಶಿಸಬೇಕಾದ ಸಂದರ್ಭ. ‘‘ಸಂದರ್ಶನವು ನನಗೆ ಬೇಕಾದ ಮಾಹಿತಿ ಇಲ್ಲದೆ ಮುಗಿಯುವ ಶಂಕೆ ಆವರಿಸಿತು... ಆಗ ಮೆಲ್ಲಗೆ, ‘ಪಟೇಲರೇ, ನಾನು ಸಂದರ್ಭೋಚಿತವಾದ ಕೆಲ ಪ್ರಶ್ನೆಗಳನ್ನು ರೂಪಿಸಿ ಅವುಗಳಿಗೆ ಉತ್ತರಗಳನ್ನೂ ಸಂಕ್ಷಿಪ್ತವಾಗಿ ಬರೆದಿದ್ದೇನೆ’ ಎಂದೆ. ‘ಎಲ್ಲಿ? ಓದಿ’ ಎಂದರು. ನಾನು ಪ್ರಶ್ನೆ ಮತ್ತು ಉತ್ತರ ಓದುತ್ತಾ ಹೋದೆ... ‘ಏನಪ್ಪಾ, ನೀವು ಮಂತ್ರಿಗಳಿಗಿಂತಾ ಚೆನ್ನಾಗಿ ಉತ್ತರಿಸಿದ್ದೀರಿ!’ ಎಂದರು.’’
ಈ ಪುಸ್ತಕಕ್ಕೆ ಹಿಂದೂ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಎನ್. ರಾಮ್ ಅವರ ಆತ್ಮೀಯ ಮುನ್ನುಡಿ ಇದೆ. ಅದರ ಈ ಕೆಲವು ಮಾತುಗಳು ತೀರ ಅರ್ಥಪೂರ್ಣ: ‘ಹಿಂದೂ ರಾಮಯ್ಯ ಎಂದೇ ಹೆಸರಾದ ಅವರು ಪ್ರಾಮಾಣಿಕತೆ, ಸ್ವತಂತ್ರ ಪ್ರವೃತ್ತಿ, ವಾಸ್ತವಾಂಶ ಪರ ನಿಲುವಿನ, ವಿಶ್ವಾಸಾರ್ಹ ಪತ್ರಕರ್ತರಾಗಿ ಯಾರೂ ಅಸೂಯೆಪಡುವಂಥ ಸ್ಥಾನವನ್ನು ಗಳಿಸಿದ ರಾಮಯ್ಯನವರು ತಮ್ಮ ವರದಿಗಾರಿಕೆ, ವಿಶ್ಲೇಷಣೆ, ವ್ಯಾಖ್ಯಾನಗಳಿಗಾಗಿ ಸರ್ಕಾರದಲ್ಲಿ, ರಾಜಕೀಯದಲ್ಲಿ, ಸಮಾಜದಲ್ಲಿ ತಮಗಿದ್ದ ಸಂಪರ್ಕಗಳನ್ನು ಉಪಯೋಗಿಸಿಕೊಂಡವರು; ಸರ್ಕಾರದ ನೀತಿ ರೂಪಣೆಗೂ ಸಾರ್ವಜನಿಕ ಜೀವನಕ್ಕೂ ಅನೇಕ ಕೊಡುಗೆಗಳನ್ನು ನೀಡಿದವರು.”
ಕೃ: ನಾನು ಹಿಂದೂ ರಾಮಯ್ಯ (ಅರವತ್ತು ವರ್ಷಗಳ ಅನುಭವಕಥನ)
ಲೇ: ಪಿ.ರಾಮಯ್ಯ
ಪ್ರ: ಅಭಿಮಾನಿ ಪಬ್ಲಿಕೇಷನ್ಸ್ ಲಿ.
ಪು: 312
ದ: ₹350 ನಂ: 080 2313 2090
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.