ADVERTISEMENT

ಪುಸ್ತಕ ವಿಮರ್ಶೆ: ಉದಕದೊಳಗಿನ ಪ್ರತಿಬಿಂಬವೇ ‘ನೀಲು’

ಸುರೇಶ ನಾಗಲಮಡಿಕೆ
Published 27 ಮಾರ್ಚ್ 2021, 19:30 IST
Last Updated 27 ಮಾರ್ಚ್ 2021, 19:30 IST
ನೀಲು: ಮಾತು ಮೀರಿದ ಮಿಂಚು ಕೃತಿ
ನೀಲು: ಮಾತು ಮೀರಿದ ಮಿಂಚು ಕೃತಿ   

ನೀಲು: ಮಾತು ಮೀರಿದ ಮಿಂಚು

ಲೇ: ಎಸ್‌. ಎಫ್‌. ಯೋಗಪ್ಪನವರ್‌

ಪ್ರ: ಸಂಗಾತ ಪುಸ್ತಕ

ADVERTISEMENT

ಮೊ: 9341757653

***

ಎಸ್.ಎಫ್.ಯೋಗಪ್ಪನವರ್ ಅವರ ‘ನೀಲು: ಮಾತು ಮೀರಿದ ಮಿಂಚು’ ಎಂಬ ಕೃತಿಯು ಪಿ. ಲಂಕೇಶ್ ಅವರ ಕಾವ್ಯದ ಹೊಸ ಬಗೆಯ ರೂಹುಗಳನ್ನು ಹೊತ್ತು ತಂದಿದೆ. ಯೋಗಪ್ಪನವರ್ ಕನ್ನಡದ ವಿಶಿಷ್ಟ ಬಗೆಯ ರೂಪಕದ ಗದ್ಯಕಾರರಾದರೂ ಓದಿನ ರಾಜಕಾರಣದಿಂದ ಬಹುಬಗೆಯ ಚರ್ಚೆಯ ಆಚೆಯೇ ನಿಂತವರು. ಇವರ ‘ಬೋದಿಲೇರ್‌ನ ಐವತ್ತು ಗದ್ಯಕವಿತೆಗಳು’, ‘ರೂಪಕದ ಲೇಖಕರು’, ಸ್ಯಾಲೆಂಜರ್‌ನ ‘ಹದಿಹರೆಯದ ಒಬ್ಬಂಟಿಪಯಣ’ ಮುಂತಾದ ಕೃತಿಗಳ ಪಾಶ್ಚಾತ್ಯ ಒಳನೋಟಗಳು ಮತ್ತು ಅವರು ನೀಡುವ ಬದುಕಿನ ಅಗ್ನಿಕುಂಡದಂತಹ ಸತ್ಯಗಳನ್ನು ಮರು ಓದಿಗೆ ಒಳಪಡಿಸುವ ಅಗತ್ಯವಿದೆ.

ಎಂಬತ್ತರ ದಶಕದ ಸೃಜನಶೀಲ ಲೇಖಕರ ಪಟ್ಟಿಗೆ ಸೇರುವ ಯೋಗಪ್ಪನವರ್ ಜನಪದಲೋಕವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟ ‘ಪ್ರೀತಿ ಎಂಬುದು ಚಂದ್ರನ ದಯೆ’ ಕಾದಂಬರಿ ಇನ್ನೂ ಮಾಸಿಲ್ಲ. ಲಂಕೇಶರ ಒಡನಾಡಿಗಳೂ ಅವರಿಗೆ ಪ್ರೀತಿಪಾತ್ರರೂ ಆದ ಈ ಲೇಖಕರು ನೀಲು ಕಾವ್ಯವನ್ನು ನಿಕಟವಾಗಿ ಓದಿ ಅಧ್ಯಯನ ಮಾಡಿದ ಫಲವೇ ಈ ಕೃತಿ. ವಾಸ್ತವವಾಗಿ ಈ ಕೃತಿಯನ್ನು ನಾವು ಶುದ್ಧ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಂದ, ವಿಧಾನಗಳಿಂದ ಕಾಣಬಾರದು. ಒಬ್ಬ ಸೃಜನಶೀಲ ಲೇಖಕ ನೀಲು ಕಾವ್ಯವನ್ನು ದರ್ಶಿಸಿದ ಬಗೆ, ಕಾಣುವ ಕಾಣ್ಕೆ ಯಾವ ರೀತಿಯಲ್ಲಿ ಇರಬಲ್ಲವು ಎಂಬುದಕ್ಕೆ ಇದು ನಿದರ್ಶನ. ಯೋಗಪ್ಪನವರ್‌ ಕೃತಿಯ ಉದ್ದಕ್ಕೂ ಬಳಸುವ ಭಾಷೆ ರೂಪಕ ಜಗತ್ತಿನದು.

ಲಂಕೇಶರು ಬರೆದ ನೀಲು ಕಾವ್ಯ ಕನ್ನಡದ ಸಾಹಿತ್ಯ ಜಗತ್ತಿನಲ್ಲಿ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಲವರಿಗೆ ಹಲವು ರೀತಿಯ ಅರ್ಥಗಳನ್ನು ನೀಡಿದೆ. ಬಹುಜನರು ನೀಲು ಕಾವ್ಯವನ್ನು ಲೈಂಗಿಕತೆಯ ಅರ್ಥಛಾಯೆಯಲ್ಲಿ ಕಂಡಿದ್ದುಂಟು. ಆದರೆ, ಈ ಬರಹ ಆ ಬಗೆಯ ಕ್ಷಣಿಕತೆಯ ತೀರ್ಮಾನಗಳಿಗೆ ತಲುಪುವುದಿಲ್ಲ. ಬದಲಿಗೆ ನೀಲು ಕಂಡ ಲೋಕದರ್ಶನ ಮನುಷ್ಯನ ಒಟ್ಟು ಜೀವಿತಕ್ರಮಗಳಿಗೆ ಎಡತಾಕುವ ವಿಶಾಲ ನೆಲೆಗಳನ್ನು ಚರ್ಚೆ ಮಾಡುತ್ತದೆ. ನೀಲು ಅಭಿವ್ಯಕ್ತಿಸುವ ಜಗತ್ತಿನಲ್ಲಿ ಜನಪದರಿದ್ದಾರೆ, ಪ್ರೇಮಿಗಳು, ದಾರ್ಶನಿಕರು, ರಾಜಕಾರಣಿಗಳು, ಪ್ರಕೃತಿ, ಮನುಷ್ಯನ ನೀಚತನಗಳು, ಅವನ ಅಸಂಗತತನಗಳು, ಹೆಣ್ಣಿನ ಎದೆಬಡಿತಗಳು ಅಲಜಡಿಗಳು ಎಲ್ಲವೂ ಇಲ್ಲಿ ಮುಖಾಮುಖಿಯಾಗುತ್ತವೆ. ಇಲ್ಲಿ ಒಂದು ಮರದಲ್ಲಿ ನೂರು ಸ್ವರಗಳಿವೆ. ಇವುಗಳನ್ನು ಸಾವಧಾನದಿಂದ ಆಲಿಸುವ ಕೆಲಸವನ್ನು ಯೋಗಪ್ಪನವರ್ ಮಾಡಿದ್ದಾರೆ.

ನೀಲು ಕಾವ್ಯವನ್ನು ಹದಿನೇಳು ಚಿಕ್ಕ ಅಧ್ಯಾಯಗಳು ಅನ್ನುವುದಕ್ಕಿಂತ ತಾತ್ವಿಕ ಆಯಾಮಗಳ ಬೆನ್ನಲ್ಲಿ ಚರ್ಚೆಮಾಡುತ್ತಾರೆ. ಹೀಗೆ ಮಾಡುವಾಗ ಯೋಗಪ್ಪನವರ್‌ ನೀಲುವಿನ ಲೋಕದ ಜತೆಗೆ ಜಗತ್ತಿನ ಅನೇಕ ದಾರ್ಶನಿಕರನ್ನು ಜತೆಗೂಡಿಸುತ್ತಾರೆ. ಇದೇ ಈ ಕೃತಿಯ ವೈಶಿಷ್ಟ್ಯ ಎನ್ನಬಹುದು. ಯೋಗಪ್ಪನವರ್‌ ಅವರಿಗೆ ಇರುವ ಭಾರತ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರದ ತಿಳಿವಳಿಕೆ ಇದರಲ್ಲಿ ಎದ್ದುಕಾಣುತ್ತದೆ.

ಲೌಕಿಕ- ಅಲೌಕಿಕ ಸುಳಿದಾಟಗಳ ಕುರಿತು ಹಾಗೂ ಇವುಗಳ ನಡುವಿನ ಬದುಕನ್ನು ಅರ್ಥೈಸಿಕೊಳ್ಳುವ ಕ್ರಮಗಳ ಕುರಿತು ಗಂಭೀರ ತೌಲನಿಕ ವಿಶ್ಲೇಷಣೆಯಿದೆ. ಸದ್ಯಕ್ಕೆ ಇವೆರಡರ ನಡುವೆ ಬದುಕು ನಡೆಸುವ ಜಂಜಾಟಗಳನ್ನು ಮತ್ತು ಎದುರೀಜು ನಡೆಸುವ ಒಳಚಿಂತನೆಗಳನ್ನು ನೀಲು ನಡೆಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಲಂಕೇಶರಿಗಿದ್ದ ಆಳದ ಗುಬುಲುತನಗಳು ನೀಲು ಕಾವ್ಯದಲ್ಲೂ ಗೋಚರಿಸುತ್ತವೆ. ಗುಬುಲುತನಗಳೇ ಅನೇಕ ಬಾರಿ ಮನುಷ್ಯನ ಒಳತೋಟಿಗಳನ್ನು ಪ್ರಾಮಾಣಿಕವಾಗಿ ನಿರ್ಧರಿಸುತ್ತವೆ.

ಇದಕ್ಕೆ ಅನೇಕ ನಿದರ್ಶನಗಳನ್ನು ನೀಲುಕಾವ್ಯದಲ್ಲಿ ಕಾಣಬಹುದು. ಲಂಕೇಶರ ‘ಜೊತೆಗಾರ’ ಕತೆಯಲ್ಲಿ ‘ಮನುಷ್ಯ ಒಬ್ಬಂಟಿಯಾಗಿದ್ದಾಗ ಬದುಕಿನ ಬಗ್ಗೆ ಎಚ್ಚರದಿಂದ ಇರುತ್ತಾನೆ’ ಎಂದು ನಿರೂಪಕ ಹೇಳುವ ಮಾತುಗಳು ನೀಲುವಿನಲ್ಲೂ ಕಾಣಿಸುತ್ತವೆ. ಈ ಮಾರ್ಗವನ್ನು ವಿವರಿಸುವ ಕ್ರಮ ಅದಕ್ಕೆ ಅಗತ್ಯವಾಗುವ ಕವಿತೆಯ ಸಾಲುಗಳನ್ನು ಯೋಗಪ್ಪನವರ್‌ ಯೋಗ್ಯ ರೀತಿಯಲ್ಲಿ ಬಳಸುತ್ತಾರೆ. ನೀಲು ಕಾವ್ಯದಲ್ಲಿ ಏಕಕಾಲದಲ್ಲಿ ಸಾಹಿತ್ಯ ಮತ್ತು ತಾತ್ವಿಕ (ತತ್ವಶಾಸ್ತ್ರ) ಸೆಳಕುಗಳು ಎದುರು ಬದುರುಗೊಂಡಿವೆ.

ಯಾವುದೇ ಕಾವ್ಯ ತತ್ವಜ್ಞಾನಿಯ ಜಿಜ್ಞಾಸೆಯನ್ನು, ಮನಸ್ಸನ್ನು ತಾಕದೇ ಹೋದರೆ ಖಂಡಿತ ಅದು ಮಾತಿನಲ್ಲೇ ಸೊರಗುತ್ತದೆ. ಬೇಂದ್ರೆ ಕಾವ್ಯ ಇಂದು ಮುಂದೆಯೂ ನೆಲಕಚ್ಚಿ ನಿಲ್ಲುವುದೇ ಈ ಕಾರಣದಿಂದ. ನೀಲುವಿನಲ್ಲಿ ಅಂತಹ ಸೆಳಕುಗಳು ದೊಡ್ಡಪ್ರಮಾಣದಲ್ಲಿ ಇಲ್ಲದಿದ್ದರೂ ಮಿಂಚಿನಂತೆ ಕಾಣಿಸುತ್ತವೆ. ಆ ಬಗೆಯ ಮಿಂಚುಗಳನ್ನು ಯೋಗಪ್ಪನವರ್ ಸರಿಯಾದ ದಾರಿಯಲ್ಲಿ ವಿವರಿಸಿದ್ದಾರೆ. ನಿಸರ್ಗ, ಸೃಷ್ಟಿ, ಮನುಷ್ಯನ ಒಳ ಬಾಳಾಟಗಳನ್ನು ಅವರು ವೇದ, ಜೆನ್ ಪರಂಪರೆ, ಸೂಫಿಕವಿ ಶೇಕ್ ಸಾದಿ, ರೂಮಿ, ಅಮೆರಿಕನ್ ಆದಿವಾಸಿಗಳ ನಂಬಿಕೆಗಳು, ಕನ್ನಡದ ಜನಪದ ಪರಂಪರೆ, ಬೌದ್ಧಗುರು ನಾಗಾರ್ಜುನ ಮುಂತಾದವರ ಬೆನ್ನಲ್ಲಿ ಚರ್ಚೆಮಾಡುತ್ತಾರೆ.

ಭಾಷೆಯು ಅಂತಿಮವಾಗಿ ಸೌಂದರ್ಯಾನುಭವವನ್ನು ಮಾತ್ರ ನೀಡುತ್ತದೆ ಎಂಬ ಮಾಮೂಲಿ ಮಾತುಗಳು ಇಲ್ಲಿ ತಲೆಕೆಳಗಾಗಿವೆ. ಇಲ್ಲಿನ ಭಾಷೆ ಮನುಷ್ಯನ ಎಲ್ಲ ಗುಣ-ಅವಗುಣಗಳನ್ನು ಸಾಧ್ಯವಿದ್ದಷ್ಟೂ ಅನಾವರಣ ಮಾಡಿದೆ. ನುಡಿಯಲ್ಲಿನ ಲೋಕದರ್ಶನ, ಜೀವನ ದೃಷ್ಟಿಕೋನಕ್ಕೂ ಕಾರಣಗಳನ್ನು ಒದಗಿಸುತ್ತದೆ. ಈ ಕಾರಣದಿಂದಲೇ ನೀಲು ಕವಿತೆಗಳು ಇಂದಿಗೂ ತಾಜಾ ಆಗುತ್ತವೆ. ಮುಕ್ತಛಂದಸ್ಸುವಿನ ಮಾರ್ಗವನ್ನು ಹಿಡಿದ ಇಲ್ಲಿನ ಕವಿತೆ ತನ್ನ ಮೀಮಾಂಸೆಯನ್ನು ಹಿಗ್ಗಿಸಿಕೊಂಡಿದೆ. ಯೋಗಪ್ಪನವರ್‌ ಬಹುತೇಕ ನೀಲು ಕಾವ್ಯದ ಎಲ್ಲ ಆಯಾಮಗಳನ್ನು ಹಿಡಿದಿದ್ದಾರೆ. ನಿಸರ್ಗದ ವಿಚಾರಗಳು ಕೆಲವೊಮ್ಮೆ ಪುನರಾವರ್ತನೆಯಾದಂತೆ ಕಾಣುತ್ತವೆ ಎನ್ನವುದು ಬಿಟ್ಟರೆ, ತಮಗೆ ಕಂಡಂತೆ ನೀಲು ಜಗತ್ತನ್ನು ಪ್ರಾಮಾಣಿಕವಾಗಿ ಕಂಡರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.