ADVERTISEMENT

ಒಳನೋಟ: ದಲಿತ ದೃಷ್ಟಿಕೋನದ ಭಿನ್ನ ಲೇಖನಗಳ ಗುಚ್ಛ ನೆಲದನಿ

ರಾಜಶ್ರೀ ಟಿ.ರೈ ಪೆರ್ಲ
Published 17 ಜುಲೈ 2022, 0:00 IST
Last Updated 17 ಜುಲೈ 2022, 0:00 IST
ನೆಲದನಿ
ನೆಲದನಿ   

ಕಾಸರಗೋಡು ಪರಿಸರದಲ್ಲಿ ಕನ್ನಡವೇ ಕಾಣೆಯಾಗುತ್ತಿರುವಾಗ ಕೆಲವು ಲೇಖಕರು ಅಲ್ಲಿ ವೇಗವಾಗಿ ಕಳೆದು ಹೋಗುತ್ತಿರುವ ತುಳು-ಕನ್ನಡ ಸಂಸ್ಕೃತಿಗಳ ಬಗ್ಗೆ ಬರೆಯುತ್ತಿರುವುದು ಸ್ತುತ್ಯಾರ್ಹ ಕೆಲಸ. ಸುಂದರ ಬಾರಡ್ಕ ಅವರ ‘ನೆಲದನಿ’ ಕೃತಿಯು ದಲಿತನೊಬ್ಬ ಈ ಪರಿಸರದ ಇತಿಹಾಸ ಮತ್ತು ವರ್ತಮಾನವನ್ನು ನೋಡುವ ಕ್ರಮವನ್ನು ಸೊಗಸಾಗಿ ದಾಖಲಿಸಿದೆ. 16 ಲೇಖನಗಳ ಈ ಪುಸ್ತಕದಲ್ಲಿ ಲೇಖಕರು ‘ದಲಿತರ ಕೈಯಲ್ಲಿ ಶಿಕ್ಷಣವಿಲ್ಲದ ಕಾರಣ ಇಲ್ಲಿನ ಯಾವ ಚರಿತ್ರೆಯೂ ದಾಖಲೆಯಾಗಿ ಉಳಿದಿಲ್ಲ. ಅದು ಅಧಿಕಾರ, ಅಂತಸ್ತು, ಉಳ್ಳವರಿಗೆ ಬೇಕಾದಂತೆ ದಾಖಲಾಯಿತು. ಇಲ್ಲಿನ ಅವೆಷ್ಟೋ ವಿಚಾರಗಳು, ಚರಿತ್ರೆಗಳು ಮಣ್ಣುಪಾಲಾಗಿ ಹೋಗಿವೆ’ ಎಂಬ ಮಾತನ್ನು ಹೇಳಿದ್ದಾರೆ ಮತ್ತು ಈ ಚೌಕಟ್ಟಿನಲ್ಲಿ ಮಣ್ಣುಪಾಲಾದ ವಿಷಯಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಈ ಕೃತಿಯಲ್ಲಿ ‘ನೆಲದನಿ’ ಎನ್ನುವುದು ಈ ನೆಲದ ದನಿಯಾಗಿದೆ. ಇಲ್ಲಿನ ಪ್ರತಿಯೊಂದು ದಾಖಲಾತಿಯ ಹಿಂದಿರುವುದು ಜಾನಪದ ಹರಿವಿನ ಪಳೆಯುಳಿಕೆಗಳಿಂದ ಆಯ್ದ ಪುರಾವೆಗಳು. ಜಾನಪದದ ಗಟ್ಟಿತನವಿರುವುದೇ ಮುಗ್ಧತನದಲ್ಲಿ ಮತ್ತು ಢಾಂಬಿಕತೆಯ ಅನುಪಸ್ಥಿತಿಯಲ್ಲಿ. ಆದಕಾರಣ ಇವು ಸುಳ್ಳಾಗುವ ಸಾಧ್ಯತೆಗಳು ಕಡಿಮೆ. ಪೂರ್ವ ಮಾದರಿಗಳನ್ನು ಒಡೆಯುವ ಬಾರಡ್ಕರಿಗೆ ಆ ಮೂಲಕವೇ ಕೆಲವು ಒಳನೋಟಗಳನ್ನು ನೀಡಲು ಸಾಧ್ಯವಾಗಿದೆ.

ಹೆಚ್ಚು ಚರ್ಚೆಗೆ ಒಳಪಡದ ಬಲಿ, ನಂದರಾಜ, ಹುಭಾಷಿಕ, ಅಂಗಾರ, ಮಾಯಿಲ, ಬಡಜರು ಮೊದಲಾದವರ ಬಗ್ಗೆ ಪುಸ್ತಕದಲ್ಲಿ ಕುತೂಹಲಕರ ಮಾಹಿತಿಗಳಿವೆ. ಅವರೆಲ್ಲರ ಬಗೆಗೆ ಇಂದೂ ಕೂಡ ಜೀವಂತವಿರುವ ಮೌಖಿಕ ಕಥನಗಳು, ಸ್ಥಳನಾಮಗಳು, ಹಾಡುಗಬ್ಬಗಳು ಮತ್ತು ಕೆಲವು ಐತಿಹ್ಯಗಳನ್ನು ಇಲ್ಲಿ ಶ್ರಮವಹಿಸಿ ಕಲೆ ಹಾಕಲಾಗಿದೆ. ದೇವರು, ನಂಬಿಕೆಗಳು ಮತ್ತು ಆರಾಧನ ವಿಧಾನಗಳಲ್ಲಿನ ವ್ಯತ್ಯಾಸಗಳು ಉಚ್ಚನೀಚ ಎಂಬ ಪರಿಗಣನೆಯ ಮೂಲಕ ಸಮಾಜವನ್ನು ಹೇಗೆ ಒಡೆದಿದೆ ಎಂಬ ಕುರಿತೂ ಇಲ್ಲಿ ಮಾಹಿತಿಗಳಿವೆ.

ADVERTISEMENT

ಭಾಷೆಯ ಹೆಸರಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಪಲಾಯನದ ಕರಾಳತೆಯತ್ತಲೂ ಬಾರಡ್ಕರು ಬೆಳಕು ಚೆಲ್ಲಿದ್ದಾರೆ. ಪಂಜಿ ಮೇಸ್ತ್ರಿಯ ಬದಿಯಡ್ಕ ಹೋಟೆಲ್, ಮೋಗೇರರ ಸಾಂಸ್ಕೃತಿಕ ಅನನ್ಯತೆ, ದಲಿತೋದ್ಧಾರಕ ಸ್ವಾಮಿ ಆನಂದ ತೀರ್ಥ, ಕಾಂತಗ ಎಂಬ ಸಂಗೀತ ವಾದ್ಯ, ಮೊದಲಾದ ಬರಹಗಳು ನಮಗೆ ಇದುವರೆಗೆ ಸಿಗದ ಮಾಹಿತಿಗಳಾಗಿವೆ. ತುಳು ಅಧ್ಯಯನಗಳು ಮಂಗಳೂರು ಕೇಂದ್ರಿತವಾಗಿ ನಡೆಯುತ್ತಿರುವಾಗ, ಅದರಿಂದ ಸಿಡಿದು ನಿಂತು ಕಾಸರಗೋಡು ಕೇಂದ್ರಿತವಾಗಿ ಮಾಡುತ್ತಿರುವ ಸುಂದರ ಅವರ ಪ್ರಯತ್ನ ಅಭಿನಂದನೀಯ.

ಕೃತಿ: ನೆಲದನಿ

ಲೇ: ಸುಂದರ ಬಾರಡ್ಕ

ಪ್ರ: ಅಂಬೇಡ್ಕರ್‌ ವಿಚಾರ ವೇದಿಕೆ, ಬದಿಯಡ್ಕ

ಸಂ: 9995279442

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.