ತುಂಬು ತಾರುಣ್ಯ. ಮದುವೆ ಅರಿಷಿಣದ ಬಣ್ಣವೂ ದೇಹದಿಂದ ಮಾಸಿಲ್ಲ. ಮನೆ–ಮನ ತುಂಬಿದ ಕೊರಳಗೆಳತಿಯನ್ನು ಸೇರಬೇಕು. ಆದರೆ, ಆ ಯಕ್ಷನಿಗೆ ಅವನ ಒಡೆಯ ಕುಬೇರ ಶಾಪ ನೀಡುತ್ತಾನೆ. ‘ನೀನು ಒಂದು ವರುಷ ಪತ್ನಿಯಿಂದ ದೂರ ಇರಬೇಕು!’. ಶೃಂಗಾರ ಲೋಕದಲ್ಲಿ ತೇಲಬೇಕೆಂಬ ಹಂಬಲದಲ್ಲಿದ್ದ ಯಕ್ಷನಿಗೆ ಆಘಾತ. ಪತ್ನಿಯಿಂದ ದೂರ ಇರುವುದೆಂದರೆ ಹೃದಯಕ್ಕೆ ಬಾಣ ನಾಟಿದಂತೆ. ವೇದನೆ ಅನುಭವಿಸಲೇಬೆಕು. ವೇದನೆ ಇರುವುದರಿಂದಲೇ ವಿರಹ ಜಾಗೃತವಾಗುತ್ತದೆ.
ಇಂತಹ ವಿರಹಿಗಳ ಹೃದಯ ವೀಣೆಯನ್ನು ಅನಾದಿಕಾಲದಿಂದಲೂ ಮೀಟಿ, ನೋವಿನಲ್ಲಿಯೂ ನಲಿವಿನ ಝೇಂಕಾರವನ್ನು ಹೊರಹೊಮ್ಮಿಸಿದ ಸಂದೇಶ ಕಾವ್ಯ ಕಾಳಿದಾಸನ ಮೇಘದೂತ. ಈ ಶೃಂಗಾರ ಕಾವ್ಯವನ್ನು ಶ್ಲೋಕ, ಪದ್ಯಾನುವಾದ ಹಾಗೂ ಮನೋಹರವಾದ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಟ್ಟಿರುವ ಕೃತಿ ‘ಪ್ರೇಮಿಗಳ ಪಂಚಾಂಗ ಮೇಘದೂತ’. ಕುಮಟಾದ ಪ್ರೊ. ವಿಷ್ಣು ಜೋಶಿ ಈ ಕೃತಿಯನ್ನು ರಚಿಸಿದ್ದಾರೆ.
ವಿರಹದಲ್ಲಿ ಪರಸ್ಪರ ಒಲವು ಬಲವಾಗಿ ನಿಂತರೆ, ಬತ್ತದೇ ಇದ್ದರೆ, ಎಣ್ಣೆ ತೀರಿದ ದೀಪದಂತೆ ಆರದೇ ಇದ್ದರೆ, ಮಧುರ, ಮೃದಲ ಶಂಗಾರ ಭಾವನೆ ಅದೆಷ್ಟು ಅಪ್ಯಾಯಮಾನ ಎನ್ನುವುದನ್ನು ಈ ಕೃತಿ ಸಾಕ್ಷಾತ್ಕರಿಸಿದೆ. ಕಾಳಿದಾಸ ಕವಿಯ ವಿಶಿಷ್ಟವಾದ ಮನೋಧರ್ಮವೇ ಈ ಕಾವ್ಯದಲ್ಲಿ ರಸವಾಗಿ ಹರಿದಿದೆ. ವಿರಹಿಗಳಿಗೆ ವಿರಹವನ್ನು ತಾಳುವ, ಬಾಳುವ, ಪುನಃ ಮೇಲೇಳುವ ಧೈರ್ಯವನ್ನು, ಸಾಂತ್ವನವನ್ನು ಈ ಕಾವ್ಯ ನೀಡುತ್ತದೆ. ಈ ಶಕ್ತಿ ಜಗತ್ತಿನಲ್ಲಿ ಪ್ರೇಮಕ್ಕಲ್ಲದೆ ಬೇರೆ ಯಾವುದೇ ಬಾಹ್ಯ ವಸ್ತುಗಳಿಗೂ ಇರಲಿಕ್ಕೆ ಸಾಧ್ಯವೇ ಇಲ್ಲ. ಮೇಘದೂತದಲ್ಲಿ ಯಕ್ಷನಿಗೆ ಉಂಟಾದ ವಿರಹ ರಸಿಕರಿಗೆ ರಸದೂಟವಾಗುತ್ತದೆ. ಆಷಾಢದಿಂದ ಕಾರ್ತಿಕ ಮಾಸದವರೆಗಿನ ಅವಧಿ ಮೇಘದೂತದ ವ್ಯಾಪ್ತಿ ವೈಶಾಲ್ಯ. ಕಾಮವು ನಿಷ್ಕಾಮವಾಗಿ, ಪ್ರೇಮದ ಪರಿಪಾಕವಾಗಿ ಮೈದಳೆಯುವ ಸೊಬಗು, ಸೊಗಸು ಈ ಕಾವ್ಯದಲ್ಲಿದೆ.
ಕಾಳಿದಾಸ ಮೇಘದೂತ ಕಾವ್ಯದ 111 ಶ್ಲೋಕಗಳನ್ನು ವಿಷ್ಣು ಜೋಶಿ ಅನುವಾದಿಸಿದ್ದಾರೆ ಮತ್ತು ವಿವರಣೆಯನ್ನು ನೀಡಿದ್ದಾರೆ. ಸಂಸ್ಕೃತ ಮೂಲದಲ್ಲಿದ್ದಷ್ಟೇ ಸಮರ್ಥವಾಗಿ ಕನ್ನಡದಲ್ಲಿ ಪದ್ಯರೂಪಕ್ಕೆ ಇಳಿಸಿದ್ದಾರೆ. ಓದುತ್ತಿದ್ದರೆ ಮನಸಿಗೆ ಉಲ್ಲಾಸವನ್ನೂ, ಆನಂದವನ್ನೂ ನೀಡುವ ಕೃತಿ ‘ಪ್ರೇಮಿಗಳ ಪಂಚಾಂಗ ಮೇಘದೂತ’.
ಕೃತಿ:ಪ್ರೇಮಿಗಳ ಪಂಚಾಂಗ ಮೇಘದೂತ
ಕವಿ: ಪ್ರೊ. ವಿಷ್ಣು ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಬೆಲೆ: ₹225
ಪುಟಗಳು: 240
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.