ಒಟ್ಟು 12 ಕಥೆಗಳ ಈ ಸಂಕಲನದಲ್ಲಿ ಹಳ್ಳಿಗಾಡಿನ ಬದುಕಿನ ಕಣ್ಣುಗಾವಲು ಇದ್ದಂತೆಯೇ, ನಗರದ ಬದುಕಿನ ಎದೆಬಡಿತವೂ ಕೇಳಿಸುತ್ತದೆ. ಚೀಮನಹಳ್ಳಿ ರಮೇಶಬಾಬು ಅವರಿಗೆ ನಿಸೂರಾಗಿ ಕಥೆ ಹೇಳುವ ಶೈಲಿ ಸಿದ್ಧಿಸಿದೆ. ಇಲ್ಲಿನ ಎಲ್ಲ ಕಥೆಗಳಲ್ಲೂ ನಿರೂಪಣೆಯ ಜೊತೆಜೊತೆಗೇ ಪಾತ್ರಗಳ ಬದುಕಿನ ಮತ್ತು ಪರಿಸರದ ದಟ್ಟ ವಿವರಗಳು ಗೊತ್ತೇ ಆಗದಂತೆ ಸಹಜವಾಗಿ ಬಿಚ್ಚಿಕೊಳ್ಳುವ ಅನನ್ಯ ಪರಿ ಓದುಗನನ್ನು ಕಥೆಯೊಳಗಿನ ಪಾತ್ರವೇ ಆಗಿಸುತ್ತದೆ. ಈ ಕಥೆಗಳು ಕಳೆದ ಆರೇಳು ವರ್ಷಗಳಲ್ಲಿ ಬರೆದ ಕಥೆಗಳಾದರೂ ಇವುಗಳ ಮಧ್ಯೆ ಒಂದು ರೇಶಿಮೆ ಹುಳು ಗೂಡು ಕಟ್ಟುತ್ತಾ ಸಂಚರಿಸುವ ಏಕರೂಪತೆ ಇದೆ. ಪಾತ್ರಗಳನ್ನು ಅವುಗಳ ಪರಿಸರದ ಚೌಕಟ್ಟಿನಲ್ಲೇ ಬಗೆದು ನೋಡುವ ಮನೋವಿಶ್ಲೇಷಣಾತ್ಮಕ ಕ್ರಮ, ಪ್ರತಿಯೊಂದು ಕಥೆಗೂ ತಾರ್ಕಿಕ ಅಂತ್ಯವನ್ನು ಹುಡುಕುವುದರಲ್ಲಿ ಆಸಕ್ತಿ ತೋರದೆ ಅವುಗಳನ್ನು ಅವುಗಳ ಜಾಡಿನಲ್ಲೇ ಬಿಟ್ಟುಬಿಡುವುದು ಇಲ್ಲಿ ರಮೇಶಬಾಬು ಅವರು ಅನುಸರಿಸಿಕೊಂಡು ಬಂದಿರುವ ತಂತ್ರ.
ಜೀವರೇಶಿಮೆ ಈ ಸಂಕಲನದ ಅತ್ಯುತ್ತಮ ಕಥೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ವಂತ ಟ್ರ್ಯಾಕ್ಟರ್ ಹೊಂದಿ ಹೊಲ ಉಳುತ್ತಾ ಅದೇ ದುಡಿಮೆಯಲ್ಲಿ ಬದುಕು ಕಟ್ಟಿಕೊಂಡಿರುವ ಚೌಡರೆಡ್ಡಿಗೆ ರೇಷ್ಮೆ ಬೆಳೆ ಇನ್ನೊಂದು ಮುಖ್ಯ ಆದಾಯ ಮೂಲ. ಚೌಡರೆಡ್ಡಿಯ ವೃತ್ತಿಗೆ ಆತುಕೊಂಡು ಅವನ ತೋಟದ ಕಂಬಳಿ ಸೊಪ್ಪನ್ನೇ ಬಳಸಿ ತನ್ನ ಹುಳವನ್ನೂ ಬೆಳೆಸುವ ರಂಗಪ್ಪ ಒಂದು ರೀತಿಯಲ್ಲಿ ಚೌಡರೆಡ್ಡಿಯನ್ನೇ ನಂಬಿ ಬದುಕು ಸಾಗಿಸುವವ. ಹಣದ ವಿಷಯದಲ್ಲಿ ಚೌಡರೆಡ್ಡಿ ಕಟ್ಟುನಿಟ್ಟು. ಆತನ ಗೂಡುಗಳನ್ನು ಮಾರಿ ಹಣ ತರುವುದು ರಂಗಪ್ಪನ ಕೆಲಸ. ಹೀಗೆ ಮಾರಿಬಂದ ದುಡ್ಡು ಊರಿಗೆ ಬರುವ ಬಸ್ಸು ಹತ್ತುವಷ್ಟರಲ್ಲಿ ಮಂಗಮಾಯ ಆಗುವುದೇ ಕಥೆಯ ಮುಖ್ಯ ತಿರುವು. ಕುತೂಹಲದ ಕಟ್ಟು ಬಿಚ್ಚುತ್ತಾ ಓದಿಸಿಕೊಳ್ಳುವ ಈ ಕಥೆ ಕೊನೆಯಲ್ಲಿ ಚೌಡರೆಡ್ಡಿಯ ಮಾನವೀಯ ಮುಖವನ್ನು ಧುತ್ತನೆ ಓದುಗರ ಎದುರು ತಂದು ನಿಲ್ಲಿಸಿ ಮೂಖವಿಸ್ಮಿತನನ್ನಾಗಿಸುತ್ತದೆ. ಲೌಕಿಕದ ಎಷ್ಟೆಲ್ಲ ರೂಕ್ಷಗಳು ಇದ್ದರೂ, ಮನುಷ್ಯಜೀವಿಗಳ ಮಧ್ಯೆ ಹೇಗೆ ಅಂತಃಕರಣದ ರೇಶಿಮೆ ಹುಳವೊಂದು ಗೂಡುಕಟ್ಟಿಕೊಂಡಿದೆ ಎನ್ನುವುದನ್ನು ಈ ಕಥೆ ಬಿಚ್ಚಿಡುತ್ತದೆ.
ನಗರ ಜೀವನದ ಒಳತಲ್ಲಣಗಳನ್ನು ಸಂಯಮದಿಂದ ಹೇಳುತ್ತಾ ಹೋಗುವ ಕಥೆ 'ಇಲಿಗಳು.' ಮುಸ್ಸಂಜೆಯ ಮಳೆಯ ಬಳಿಕ ರಾತ್ರಿಯ ಜಗಮಗಿಸುವ ಬೆಳಕಿನಲ್ಲಿ ನಗರ ಕಾಣುವ ರೀತಿಯನ್ನು ಬಣ್ಣಿಸುವ ಪರಿ ಇಡೀ ಕಥೆಗೊಂದು ಮುನ್ಸೂಚನೆಯನ್ನು ಕೊಡುತ್ತದೆ. ಖಾಸಗಿ ಸಂಶೋಧನಾ ಸಂಸ್ಥೆಯೊಂದರಲ್ಲಿ ಇಲಿಗಳ ಮೇಲೆ ಪ್ರಯೋಗ ನಡೆಸುತ್ತಾ ಎಲ್ಲೆಂದರಲ್ಲಿ ಇಲಿಗಳ ಹೋಲಿಕೆಯನ್ನು ಕಾಣುವ ಆನಂದ ಇಡೀ ಕಥೆಯನ್ನು ಆವರಿಸಿಕೊಳ್ಳುತ್ತಾ ಹೋಗುತ್ತಾನೆ. ಶ್ರೀನಿವಾಸ ಕ್ಲಿನಿಕ್‍ನ ಡಾ.ಮುರಳಿಮೋಹನ್ ಮತ್ತು ಅವನ ನಡುವಣ ಸ್ನೇಹದ ಮೂಲಕವೇ ಕಥೆ ಮುಂದಕ್ಕೆ ಚಲಿಸುತ್ತದೆ. ಇದರ ಮಧ್ಯೆ ಬರುವ ಆತ್ಮವಿಶ್ವಾಸ ತುಂಬಿದ ಕಣ್ಣುಗಳ ಕೊಳೆಗೇರಿಯ ಪುಟ್ಟ ಬಾಲಕ, ಆನಂದನನ್ನು ನೈತಿಕತೆಯ ಪ್ರಶ್ನೆಯತ್ತ ಸೆಳೆದೊಯ್ಯುತ್ತಾನೆ. ಇಲಿಗಳ ಮೇಲೆ ಪ್ರಯೋಗ ನಡೆಸುವುದು ಎಷ್ಟರ ಮಟ್ಟಿಗೆ ನೈತಿಕವಾದದ್ದು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುವ ಡಾಕ್ಟರ್ ಮುರಳಿ ಮೋಹನ್. ಸರ್ಕಾರಿ ವೈದ್ಯನಾಗಿದ್ದೂ ಖಾಸಗಿ ಪ್ರಾಕ್ಟೀಸ್ ಮಾಡುವುದನ್ನು ನೈತಿಕತೆಯ ಪ್ರಶ್ನೆಯಾಗಿ ಪರಿಗಣಿಸುವುದಿಲ್ಲ. ಈ ಮಧ್ಯೆ ತಂದೆ-ತಾಯಿಯ ದಾರುಣ ಕಥೆಯನ್ನು ಸೃಷ್ಟಿಸುವ ಹಣ ಪಡೆಯುವ ಬಡ ಹುಡುಗನ ನೈತಿಕತೆಯನ್ನು ಪ್ರಶ್ನಿಸುವ ಹಕ್ಕು ಇವರಿಬ್ಬರಿಗೂ ಇದೆಯೆ ಎನ್ನುವ ಅಂಶವನ್ನು ಮುಂದೊತ್ತಿ ಕಥೆ ಮುಗಿಯುತ್ತದೆ. ಕಥೆಗೆ ತಾರ್ಕಿಕ ಅಂತ್ಯ ಇಲ್ಲವಾದರೂ ಈ ಕಥೆ ಎತ್ತುವ ನೈತಿಕತೆಯ ಪ್ರಶ್ನೆ ಓದುಗನ ಮನಸ್ಸಿನಲ್ಲಿ ಗಾಢ ಪರಿಣಾಮವೊಂದನ್ನು ಬೀರುವುದು ಸುಳ್ಳಲ್ಲ.
ಸ್ತ್ರೀಪಾತ್ರಗಳನ್ನು ರಮೇಶ್‍ಬಾಬು ನಿರ್ವಹಿಸುವ ರೀತಿ ನಿಜಕ್ಕೂ ಕುತೂಹಲಕರ. "ಹಸ್ತಬಲಿ' ಕಥೆಯ ನಾಗಿ ಮತ್ತು "ಗಯ್ಯಾಳಿ' ಕಥೆಯ ವಿಧನೆ ನಂಜಮ್ಮ ಈ ಎರಡೂ ಪಾತ್ರಗಳು ಇಡೀ ಸಂಕಲನಕ್ಕೆ ಘನತೆ ತಂದುಕೊಟ್ಟಿವೆ. ಪಾತ್ರನಿರೂಪಣೆಯ ಸಂಯಮ ಎರಡೂ ಕಥೆಗಳಲ್ಲಿ ಎದ್ದು ಕಾಣುತ್ತದೆ. ಜೀವನಪೂರ್ತಿ ಹೆಂಡತಿ ನಾಗಿಯನ್ನು ಬೈದು ಬಡಿಯುತ್ತಿದ್ದ ವೆಂಕಟ್ರಾಮ, ಕೊನೆಯಲ್ಲಿ ಮಚ್ಚು ಕೈಗೆತ್ತಿಕೊಂಡ ಹೆಂಡತಿಯ ರೌದ್ರಾವತಾರದ ಎದುರು ಬಲಿಯ ಕುರಿಯಂತೆ ದೈನೇಸಿಯಾಗುತ್ತಾನೆ. ಅದೇ ತಾನೇ ಊರಹಬ್ಬಕ್ಕೆ ಕುರಿಯನ್ನು ಬಲಿಕೊಟ್ಟು ಬಂದ ವೆಂಕಟ್ರಾಮನ ಪರಾಕ್ರಮ ಹೀಗೆ ಇಳಿದುಹೋಗುವ ಸನ್ನಿವೇಶದ ಮೂಲಕ ಎರಡೂ ಘಟನೆಗಳಲ್ಲಿ ಸಾದೃಶವೊಂದನ್ನು ಸೃಷ್ಟಿಸುವಲ್ಲಿ ಕಥೆಗಾರನ ಜಾಣ್ಮೆ ಎದ್ದುಕಾಣುತ್ತದೆ. ನಂಜಮ್ಮನ ಪಾತ್ರವಂತೂ ಹೆಣ್ಣಿನ "ಭೂಮಿತೂಕ"ವನ್ನು ಓದುಗರ ಎದೆಯೊಳಕ್ಕೆ ಅಮ್ಮನ ಅಮೃತಪಾನದಂತೆ ಇಳಿಸುತ್ತದೆ. ಹೆಣ್ಣಿನ ವ್ಯಕ್ತಿತ್ವದ ನಿಜವಾದ ಆಳ-ಅಗಲಗಳನ್ನು ಗ್ರಹಿಸಲಾಗದೆ ಓದುಗ ದಿಗ್ಭ್ರಮೆಗೆ ಒಳಗಾಗುತ್ತಾನೆ. "ಎಮ್ಮೆಕರು" ಕಥೆಯ ಸುಬ್ಬಕ್ಕ ಕೂಡಾ ಇದೇ ಜಾಡಿನಲ್ಲಿ ಮನಸ್ಸನ್ನು ಆವರಿಸುವ ಪಾತ್ರವಾಗಿದೆ.
ರಮೇಶ್‍ಬಾಬು ತಮ್ಮ ಕೃತಿಯ ಅರ್ಪಣೆಯಲ್ಲಿ "ಅನಂತ ಅನುಭವದ ಸಾಧ್ಯತೆಯ ಬೀಜಗಳನ್ನು ಸ್ಮೃತಿಪಟಲದಲ್ಲಿ ಚೆಲ್ಲಿಹೋದ" ತಮ್ಮ ಮುತ್ತಜ್ಜಿಯನ್ನು ನೆನಕೆ ಮಾಡಿದ್ದಾರೆ. ಈ ಕಥಾ ಸಂಕಲನದ ಉದ್ದಕ್ಕೂ ಆ ಅನುಭವದ ಬೀಜಗಳು ಸೊಂಪಾದ ಪೈರಾಗಿ ಬೆಳೆದುನಿಂತದ್ದು ಎದ್ದು ಕಾಣುತ್ತದೆ. ಮುನ್ನುಡಿಯಲ್ಲಿ ಕೇಶವ ಮಳಗಿಯವರು ಹೇಳಿದ ಹಾಗೆ, ಇಲ್ಲಿಯ ಪಾತ್ರಗಳು ಎಲ್ಲೂ ಕೃತ್ರಿಮವಾಗಿ ವರ್ತಿಸದೆ ಅಪ್ಪಟ ಮನುಷ್ಯರಂತೆ ಒಡಮೂಡಿದೆ. ಕಥೆಗಾರನ ಪ್ರಯೋಗಶೀಲತೆಯೂ ಸಂಕಲನದ ಹಿರಿಮೆಯನ್ನು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.