ADVERTISEMENT

ಬಡತನದ ಅರ್ಥಶಾಸ್ತ್ರ

ಪುಸ್ತಕ ವಿಮರ್ಶೆ

ರಾಜೇಂದ್ರ ಚೆನ್ನಿ
Published 16 ನವೆಂಬರ್ 2019, 19:30 IST
Last Updated 16 ನವೆಂಬರ್ 2019, 19:30 IST
ಗುಡ್ ಎಕಾನಿಮಿಕ್ಸ್‌ ಮತ್ತು ಪೂರ್‌ ಎಕಾನಿಮಿಕ್ಸ್
ಗುಡ್ ಎಕಾನಿಮಿಕ್ಸ್‌ ಮತ್ತು ಪೂರ್‌ ಎಕಾನಿಮಿಕ್ಸ್   

‘ಅರ್ಥಶಾಸ್ತ್ರವು ಅದನ್ನು ಕೇವಲ ಅರ್ಥಶಾಸ್ತ್ರಜ್ಞರಿಗೆ ಬಿಡಲಾಗದಷ್ಟು ಮಹತ್ವಪೂರ್ಣವಾಗಿದೆ’. ಇದು ಈ ವರ್ಷ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ದೂಫ್ಲೋ ಅವರು ಬರೆದ ‘Good Economics for Hard Times' ಕೃತಿಯ ಕೊನೆಯ ವಾಕ್ಯ. ಈ ಕೃತಿಯಲ್ಲಿ ಮಾತ್ರವಲ್ಲ ಇಷ್ಟೇ ಮುಖ್ಯವಾದ ‘Poor Economics’ ಕೃತಿಯಲ್ಲಿ ಕೂಡ ಇವರಿಬ್ಬರೂ ಒಂದು ಮಾದರಿ ಹಾಗೂ ಸಂಪ್ರದಾಯದ ಅರ್ಥಶಾಸ್ತ್ರಜ್ಞರೊಂದಿಗೆ ಇಂಥ ಲಘು ಧಾಟಿಯಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ಹೇಳುತ್ತಲೇ ಇರುತ್ತಾರೆ. Poor Economics ಕೃತಿಯ ಶೀರ್ಷಿಕೆಯನ್ನು ವಿವರಿಸುತ್ತಾ ಇದು ಬಡತನದ ಬಗೆಗಿನ ಅರ್ಥಶಾಸ್ತ್ರವೇ ಹೊರತು ಬಡ (ಕಳಪೆ) ಅರ್ಥಶಾಸ್ತ್ರವಲ್ಲ ಎನ್ನುತ್ತಾರೆ. ಆದರೆ ಬಹುಪಾಲು ಅರ್ಥಶಾಸ್ತ್ರಜ್ಞರು ಬಡತನದ ಬಗ್ಗೆ ತಮ್ಮ ಸೈದ್ಧಾಂತಿಕ ನಿಲುವುಗಳಿಂದಾಗಿ ಅನಾಸಕ್ತರಾಗಿದ್ದರೆಂದು ಅವರ ವಾದ.

ಅರ್ಥಶಾಸ್ತ್ರವನ್ನು ಅಮೂರ್ತ ವೈಜ್ಞಾನಿಕ ಶಾಸ್ತ್ರವನ್ನಾಗಿ ನೋಡುವ ಇವರು ‘ಮೂಲ ತತ್ವಗಳು’ ಮಾದರಿಯ ಚಿಂತನೆಯನ್ನು ನೆಚ್ಚಿಕೊಳ್ಳುತ್ತಾರೆ. ಉದಾಹರಣೆಗೆ ವ್ಯಾಪಾರ ಅದರಲ್ಲೂ ಅಂತರರಾಷ್ಟ್ರೀಯ ವ್ಯಾಪಾರವು ಅವರಿಗೆ ಒಂದು ಪ್ರಶ್ನಾತೀತ ಮೌಲ್ಯವಾಗಿರುವುದರಿಂದ ಅದು ವಾಸ್ತವವಾಗಿ ಆಯಾ ರಾಜಕೀಯ, ಸಾಮಾಜಿಕ ಸಂದರ್ಭಗಳಲ್ಲಿ ಯಾವ ವರ್ಗಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಆಸಕ್ತಿಯನ್ನು ತೋರಿಸುವುದಿಲ್ಲ. ಅದೇ ರೀತಿ ಅತಿ ಶ್ರೀಮಂತ ಅಲ್ಪಸಂಖ್ಯಾತ ವರ್ಗದ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಿದರೆ ಅದರಿಂದಾಗಿ ಆರ್ಥಿಕ ವ್ಯವಸ್ಥೆಯು ಸುಧಾರಿಸುತ್ತದೆ ಮಾತ್ರವಲ್ಲ, ಅದರಿಂದಾಗುವ ಲಾಭಗಳು ಕ್ರಮೇಣವಾಗಿ ಕೆಳಗಿನ ವರ್ಗಗಳಿಗೆ ಹರಿದು ಬರುತ್ತವೆಯೆನ್ನುವ ವಾದ. ಇದನ್ನು ‘trickle down effect’ ಎಂದು ಕರೆದು ಮಿಲ್ಟನ್ ಫ್ರೀಡ್‍ಮನ್‍ನಂಥ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಅದನ್ನು ‘ಮೂಲ ಸತ್ಯಸೂತ್ರವಾಗಿ ಕಂಡರು’.

ಅಭಿಜಿತ್ ಮತ್ತು ಎಸ್ತರ್ ಆಧುನಿಕ ಅರ್ಥಶಾಸ್ತ್ರೀಯ ಚಿಂತನೆಯ ಇಂಥ ಅನೇಕ ಸಂಕಥನಗಳನ್ನು, ಪುರಾಣಗಳನ್ನು (myth) ತಮ್ಮ ವಾಸ್ತವಕೇಂದ್ರಿತ ಸಂಶೋಧನೆಗಳ ಮೂಲಕ ಒಡೆಯುತ್ತಾರೆ. ಉದಾಹರಣೆಗೆ ವಿಶ್ವಸಂಸ್ಥೆಗೆ ಸಲಹೆಗಾರನಾಗಿದ್ದ, ಕೋಲಂಬಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞನಾಗಿದ್ದ ಜೆಫ್ರಿ ಸ್ಯಾಕ್ಸ್ ಎನ್ನುವ ಪ್ರಸಿದ್ಧ ಚಿಂತಕನ ಪ್ರಕಾರ ಬಡದೇಶಗಳು ಏರುತಾಪಮಾನದ, ಬಂಜರು ಭೂಮಿಯ, ಮಲೇರಿಯಾ ರೋಗಗಳಿಂದ ಪೀಡಿತ ದೇಶಗಳಾಗಿರುವುದರಿಂದ ಅವುಗಳನ್ನು ಅಭಿವೃದ್ಧಿಗೊಳಿಸಲು ಅಪಾರವಾದ ಹಣದ ಹೂಡಿಕೆ ಬೇಕು. ಆದರೆ ಅವು ಬಡದೇಶಗಳು ಆಗಿರುವುದರಿಂದ ಈ ಹೂಡಿಕೆ ಸಾಧ್ಯವಿಲ್ಲ. ಆದ್ದರಿಂದ ಅವು ಬಡತನದ ಬಲೆಯಿಂದ ಹೊರಬರಲಾಗುವುದಿಲ್ಲ. ಮುಕ್ತ ವ್ಯಾಪಾರ, ಪ್ರಜಾಪ್ರಭುತ್ವ ಇವಾವುದರಿಂದಲೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಬದಲಾವಣೆಯು ಶ್ರೀಮಂತ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದ ಧನಸಹಾಯದಿಂದ ಮಾತ್ರ ಸಾಧ್ಯವೆಂದು ಅವನು ಹೇಳುತ್ತಾನೆ.

ADVERTISEMENT

ಅಭಿಜಿತ್ ಮತ್ತು ಎಸ್ತರ್ ಪ್ರಕಾರ ಸಿದ್ಧಾಂತಗಳನ್ನು ಬದಿಗಿಟ್ಟು ಬಡರಾಷ್ಟ್ರಗಳ ಸ್ಥಿತಿಗಳನ್ನು ಹಲವು ಮಗ್ಗಲುಗಳಿಂದ ಸಂಶೋಧನೆ ಮಾಡಿದರೆ ಈ ವಿದೇಶಿ ಧನಸಹಾಯದ ಬಗ್ಗೆ ಒಂದೇ ಬಗೆಯ ನಿಲುವು ಸಾಧ್ಯವಿಲ್ಲ. ಅದು ಸಂಪೂರ್ಣವಾಗಿ ಋಣಾತ್ಮಕವೂ ಆಗಬಹುದು. ಸ್ವತಃ ಅವರ ಕೃತಿಗಳಲ್ಲಿ ಅತ್ಯಂತ ಸರಳವಾದ ಪಾರದರ್ಶಕವಾದ ಭಾಷೆಯಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇರಲಿ, ಅದರ ಎಲ್ಲ ಮಗ್ಗಲುಗಳನ್ನು ವಾಸ್ತವಕೇಂದ್ರಿತ (empirical) ಅಧ್ಯಯನಗಳ ಮೂಲಕ ವಿವೇಕಪೂರ್ಣವಾಗಿ ಚರ್ಚಿಸುತ್ತಾರೆ. ಹಾಗೆ ಮಾಡುತ್ತಲೆ ಆಧುನಿಕ ಅರ್ಥಶಾಸ್ತ್ರದಲ್ಲಿ ಪ್ರಶ್ನೆಗೆ ಒಳಗಾಗದೇ ‘ಮೂಲ ಸೂತ್ರಗಳಂತೆ’ ಕೆಲಸ ಮಾಡುತ್ತಿರುವ ಪೂರ್ವಗ್ರಹಗಳನ್ನು ಗಾಢವಾಗಿ ಪ್ರಶ್ನಿಸುತ್ತಾರೆ.

ಅವರ ಪ್ರಕಾರ ಎಲ್ಲಾ ಅರ್ಥಶಾಸ್ತ್ರಜ್ಞರಿಗೂ ವ್ಯಾಪಾರವು ಕೆಲವು ವರ್ಗಗಳಿಗೆ ಮಾರಕವಾಗುತ್ತದೆ ಎಂದು ಗೊತ್ತಿದೆ. ಆದರೆ ತಮ್ಮ ಸೈದ್ಧಾಂತಿಕ ನಂಬಿಕೆಗಳನ್ನು ಬಿಟ್ಟುಕೊಡಲು ಅವರು ಸಿದ್ಧರಿರುವುದಿಲ್ಲ. ಇದು ಇಂದಿನ ಜಗತ್ತಿನ ಸಾಮಾನ್ಯಜನರ ಪ್ರವೃತ್ತಿಯೂ ಆಗಿದೆ. ವಿಶೇಷವಾಗಿ ಮಾಧ್ಯಮಗಳಿಂದಾಗಿ. ಒಂದು ಅಧ್ಯಾಯದಲ್ಲಿ ಇವರು ‘ವಲಸೆ ಬರುವವರಿಂದಾಗಿ ಅಮೆರಿಕದ ಆರ್ಥಿಕತೆಗೆ ಅಪಾಯವಿದೆ’ ಎನ್ನುವ ಪೂರ್ವಗ್ರಹವನ್ನು ಪರೀಕ್ಷಿಸುತ್ತಾರೆ. ಇದು ಈಗ ಅದರಲ್ಲೂ ಟ್ರಂಪ್‍ ಅವರ ನಂತರ ಜನಸಾಮಾನ್ಯರಿಗೆ ವೇದವಾಕ್ಯವೂ, ಅಂತಿಮ ಸತ್ಯವೂ ಆಗಿದೆ. ಆದರೆ ಸಂಶೋಧನೆಗಳಿಂದ ಇವರು ಸಾಬೀತು ಮಾಡುವುದೇನೆಂದರೆ ವಲಸಿಗರಿಂದ ಬಹುಪಾಲು ಆರ್ಥಿಕತೆಗೆ ಸಹಾಯವಾಗಿದೆ. ಅಲ್ಲದೆ ಅದರ ಪರಿಣಾಮಗಳು ಆಯಾ ವರ್ಗದಲ್ಲಿರುವ ವ್ಯಕ್ತಿಗಳ ಈಗಾಗಲೇ ಇರುವ ಕೌಶಲ ಹಾಗೂ ಉದ್ಯೋಗಗಳನ್ನು ಅವಲಂಬಿಸಿರುತ್ತದೆ. ಅಮೆರಿಕದ ಆರ್ಥಿಕತೆಯು ವಲಸಿಗರಿಂದ ನಾಶವಾಗುತ್ತಿದೆಯೆನ್ನುವುದು ರಾಜಕೀಯ ಪ್ರಚಾರವೇ ಹೊರತು ಅರ್ಥಶಾಸ್ತ್ರಜ್ಞರು ಒಪ್ಪುವ ಸತ್ಯವಲ್ಲ. ಆಶ್ಚರ್ಯವೆಂದರೆ ಈ ಮಾಹಿತಿಯನ್ನು ಜನರಿಗೆ ನೀಡಿದ ಮೇಲೆಯೂ ಅವರು ತಮ್ಮ ಅಭಿಪ್ರಾಯ ಬದಲಿಸಲಿಲ್ಲ!

ಇದಕ್ಕೂ ‘ಬಡ ಅರ್ಥಶಾಸ್ತ್ರ’ಕ್ಕೂ ಏನು ಸಂಬಂಧ? ಸಂಬಂಧವು ಬಹಳ ಗಾಢವಾಗಿದೆ. ಅಭಿಜಿತ್ ಹಾಗೂ ಎಸ್ತರ್ ಅವರ ಪ್ರಕಾರ ಅರ್ಥವ್ಯವಸ್ಥೆಯಲ್ಲಿ ಪ್ರಕೃತಿಯ ನಿಯಮಗಳಂತೆ ಯಾವ ಶಾಶ್ವತ, ಸಾರ್ವತ್ರಿಕ ನಿಯಮವೂ ಇಲ್ಲ, ಬಹುಪಾಲು ಎಲ್ಲವೂ ಮನುಷ್ಯರು ಮಾಡುವ ಆಯ್ಕೆಗಳ ಮೇಲೆ ಮತ್ತು ಸಾಮುದಾಯಿಕವಾಗಿ ಅಥವಾ ಸರಕಾರದ ಮೂಲಕ ಆಯ್ದುಕೊಳ್ಳುವ ನೀತಿಗಳನ್ನು (policies) ಅವಲಂಬಿಸಿರುತ್ತದೆ. ಈ ನಂಬಿಕೆಯು ಇವರನ್ನು ಅಮರ್ತ್ಯ ಸೇನ್ ಅವರ ಚಿಂತನೆಯ ವಾರಸುದಾರರನ್ನಾಗಿ ಮಾಡುತ್ತದೆ. ಮುಕ್ತಮಾರುಕಟ್ಟೆ ಹಾಗೂ ಜಾಗತೀಕರಣ ಪರವಾಗಿರುವ ಆರ್ಥಿಕ ಚಿಂತಕರು ಇವುಗಳನ್ನು ವಿಧಿನಿಯಮಗಳ ಹಾಗೆ ನೋಡುತ್ತಾರೆ. ಹಾಗಂತ ಅಭಿಜಿತ್ ಮತ್ತು ಎಸ್ತರ್ ಜಾಗತೀಕರಣ, ಮುಕ್ತಮಾರುಕಟ್ಟೆಯ ವಿರೋಧಿಗಳಲ್ಲ. ಬದಲಾಗಿ ಅವುಗಳನ್ನು ಚಾರಿತ್ರಿಕವಾಗಿ, ಸಾಂದರ್ಭಿಕವಾಗಿ ವಿಶ್ಲೇಷಿಸಬೇಕು ಮತ್ತು ಈ ಪ್ರಕ್ರಿಯೆಗಳಲ್ಲಿ ನಮ್ಮ ಆಯ್ಕೆ ಬಹಳ ಮುಖ್ಯವೆಂದು ಹೇಳುತ್ತಾರೆ.

ಅವರ ಪ್ರಕಾರ ಇಂಥ ಇನ್ನೊಂದು ಸೈದ್ಧಾಂತಿಕ ಪೂರ್ವಗ್ರಹವೆಂದರೆ ಜಿಡಿಪಿ ಹೆಚ್ಚಾದರೆ ಅದು ಆರ್ಥಿಕತೆಯ ಹಾಗೂ ಅಭಿವೃದ್ಧಿಯ ಆರೋಗ್ಯದ ಲಕ್ಷಣವೆನ್ನುವುದು. ಈ ಕುರಿತು ಇವರು ಬರೆದಿರುವುದನ್ನು ನಾವೆಲ್ಲ ಗಂಭೀರವಾಗಿ ಚರ್ಚೆ ಮಾಡಬೇಕಿದೆ. ನಿಜವೇನೆಂದರೆ ಆರ್ಥಿಕವಾಗಿ ಒಂದು ಹಂತದಲ್ಲಿ ಹಿಂದುಳಿದ ದೇಶಗಳು ತ್ವರಿತವಾಗಿ ಬೆಳೆಯುತ್ತ ತಮ್ಮ ಜಿಡಿಪಿಗಳನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತವೆ. ಈ ಬೆಳವಣಿಗೆಗಳಿಗೆ ಉದಾರ ಆರ್ಥಿಕ ನೀತಿಯೂ ಒಳಗೊಂಡಂತೆ ಅನೇಕ ಕಾರಣಗಳಿರಬಹುದು. ಆದರೆ ಇದು ನಿರಂತರವಾಗಿ ಬೆಳೆಯುವುದು ಅಸಾಧ್ಯ. ಏಕೆಂದರೆ ಮುಂದಿನ ಹಂತದಲ್ಲಿ ಆ ಪ್ರಮಾಣದ ಸಂಪನ್ಮೂಲಗಳಾಗಲಿ, ಶ್ರಮಿಕರಾಗಲೀ ಸಿಕ್ಕುವುದಿಲ್ಲ. ಅಲ್ಲದೆ ಜಿಡಿಪಿಯ ಹೆಚ್ಚಳವು ಆರ್ಥಿಕ ಲಾಭವನ್ನು ಎಲ್ಲಾ ವರ್ಗಗಳಿಗೆ ಕೊಡುವುದೂ ಇಲ್ಲ. 2016-17ರ ಅಂಕಿಸಂಖ್ಯೆಗಳನ್ನು ಆಧರಿಸಿದ ಈ ಕೃತಿಯಲ್ಲಿ ಭಾರತದ ಅರ್ಥವ್ಯವಸ್ಥೆಯು ತನ್ನ ವೇಗವನ್ನು ಕಳೆದುಕೊಳ್ಳುತ್ತದೆಯೆಂದು ಕರಾರುವಾಕ್ಕಾಗಿ ಇವರು ಬರೆದಿದ್ದಾರೆ.

ಅಭಿಜಿತ್ ಬ್ಯಾನರ್ಜಿ

ಅಭಿಜಿತ್ ಮತ್ತು ಎಸ್ತರ್ ತಮ್ಮನ್ನು ಸಾಮಾನ್ಯ ಸಂಶೋಧಕರನ್ನಾಗಿ ಬಿಂಬಿಸಿಕೊಳ್ಳುತ್ತಾರೆ. ಎಲ್ಲಿಯೂ ಬೌದ್ಧಿಕ ಅಹಂಕಾರವಿಲ್ಲ. ತಾಳ್ಮೆಯಿಂದ, ನಿತ್ಯದ ಜೀವನದ ಸರಳ ಉದಾಹರಣೆಗಳಿಂದ ಖಚಿತವಾದ ವಾದಗಳನ್ನು ನಮ್ಮ ಮುಂದಿಡುತ್ತಾರೆ. ಭಾಷೆ ಹಾಗೂ ವಾದ ಮಂಡನೆ ಎಷ್ಟು ಸರಳವಾಗಿವೆಯೆಂದರೆ ಅರ್ಥಶಾಸ್ತ್ರಕ್ಕೆ ನಾವೆಲ್ಲ ಅನಿವಾರ್ಯವೆಂದುಕೊಂಡಿರುವ ಉಗ್ರ ತಾಂತ್ರಿಕ ಪದಗಳು, ಗ್ರಾಫ್‍ಗಳು ಇಲ್ಲವೇ ಇಲ್ಲ. ಒಂದು ಕಾಲದಲ್ಲಿ ಅರ್ಥಶಾಸ್ತ್ರವನ್ನು ಗಣಿತಶಾಸ್ತ್ರ ಅಥವಾ ಭೌತಶಾಸ್ತ್ರ ಮಾಡಿಯೇ ತೀರುತ್ತೇವೆ ಎಂದು ಅನೇಕ ಪ್ರತಿಭಾವಂತ ಅರ್ಥಶಾಸ್ತ್ರಜ್ಞರು ಹೊರಟು ಅದನ್ನು ಕಬ್ಬಿಣದ ಕಡಲೆಯನ್ನಾಗಿ ಮಾಡಿದ್ದರು. ಈ ಪ್ರವೃತ್ತಿಯನ್ನು ವ್ಯಂಗ್ಯವಾಗಿ ‘Physics envy’ ಎಂದು ಕರೆಯಲಾಗುತ್ತದೆ. ಅಭಿಜಿತ್ ಮತ್ತು ಎಸ್ತರ್ ಅವರಿಗೆ ಈ ಕೀಳರಿಮೆ ಇಲ್ಲ. ಅವರ ಪ್ರಕಾರ ಅರ್ಥಶಾಸ್ತ್ರವು ಸಮಾಜಗಳ ಬಗ್ಗೆ ಇದೆ. ಅಲ್ಲದೆ ಅದಕ್ಕೆ ಸಮಾಜಗಳನ್ನು ಬೆಳೆಸುವ ಅಥವಾ ಅಸ್ಥಿರಗೊಳಿಸುವ ಎರಡೂ ಶಕ್ತಿಗಳಿವೆ.

ಇವರ ಕೃತಿಗಳನ್ನು ಓದುತ್ತಾ ಹೋದಂತೆ ಇಲ್ಲಿ ಮನುಷ್ಯಪರವಾದ ಕಾಳಜಿ, ಮನುಷ್ಯರ ಆಯ್ಕೆ ಹಾಗೂ ಪ್ರಯತ್ನಗಳ ಪ್ರಾಧಾನ್ಯತೆ ಗಾಢವಾಗಿ ನಮ್ಮನ್ನು ತಟ್ಟುತ್ತವೆ. ಅವರ ಕಾಳಜಿಯೆಂದರೆ ಮನುಷ್ಯರು ಬಡತನ, ಅನಾರೋಗ್ಯ ಹಾಗೂ ಶಿಕ್ಷಣದ ಕೊರತೆಗಳಿಂದ ನರಳದಂತೆ ಘನತೆಯಿಂದ ಬದುಕುವಂತಾಗಬೇಕು. ನಾನು ಅಪಾರವಾಗಿ ಮೆಚ್ಚಿಕೊಂಡಿರುವ ಅಂಶವೆಂದರೆ ಅವರ ಪ್ರಕಾರ ಅತ್ಯಂತ ಬಡವನಾದ ವ್ಯಕ್ತಿಯೂ ತನ್ನ ನಿರ್ಧಾರಗಳನ್ನು ಆರ್ಥಿಕ ದೃಷ್ಟಿಕೋನದಿಂದ ಮಾತ್ರ ಮಾಡುವುದಿಲ್ಲ. ಅವನ ಆಯ್ಕೆಗಳು ತನ್ನ ಘನತೆಯನ್ನು ಉಳಿಸಿಕೊಳ್ಳುವ ಪರವಾಗಿರುತ್ತವೆ. ಹೀಗಾಗಿಯೇ ಶ್ರೀಮಂತ ದೇಶಗಳು ನಂಬುವ ಹಾಗೆ ಎಲ್ಲಾ ಬಡದೇಶಗಳ ಜನರು ನಿಂತ ಕಾಲಿನ ಮೇಲೆಯೆ ವಲಸೆ ಹೊರಡುವುದಿಲ್ಲ. ಯುದ್ಧ ಹಾಗೂ ಕ್ರೂರ ರಾಜಕೀಯದಿಂದ ಉಂಟಾಗುವ ಅಸಹಜ ಸನ್ನಿವೇಶವಿಲ್ಲದಿದ್ದರೆ ತನ್ನ ಮನೆ, ಸಮುದಾಯ ಭಾಷೆಗಳನ್ನು ತ್ಯಜಿಸಿ ಹೊರಡುವುದು ಮನುಷ್ಯ ಜೀವಿಗಳಿಗೆ ಬೇಕಿಲ್ಲ.

ನಮಗೆ ಪ್ರಸ್ತುತವಾಗಬೇಕಾದ ಚರ್ಚೆಯೆಂದರೆ ‘ಅಭಿವೃದ್ಧಿ’ಯೆನ್ನುವ ಏಕದೇವೋಪಾಸನೆಯ ಬಗೆಗಿನ ಚರ್ಚೆ. ಆಳದಲ್ಲಿ ಅರ್ಥಶಾಸ್ತ್ರಜ್ಞರು ಅಭಿವೃದ್ಧಿಯೆಂದರೆ ಆರ್ಥಿಕ ಅಭಿವೃದ್ಧಿಯೆಂದೇ ನಂಬಿದ್ದಾರೆ. ಹೀಗಾಗಿ ಏಕಶಿಲಾಕೃತಿಯ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯಿಂದಾಗಿ ವಿವಿಧ ದೇಶಗಳ ಮೇಲೆ ಆಗುವ ವಿಭಿನ್ನ ಹಾಗೂ ವಿಶಿಷ್ಟ ಮನುಷ್ಯ ಪರಿಣಾಮಗಳ ಬಗ್ಗೆ ಹೆಚ್ಚು ಆಸಕ್ತರಾಗಿಲ್ಲ. ಆದರೆ ದೇಶಗಳಲ್ಲಿ ಈಗಾಗಲೇ ಇರುವ ಸಾಮಾಜಿಕ, ಆರ್ಥಿಕ ರಚನೆಗಳಿರುತ್ತವೆ. ಅವು ಅಭಿವೃದ್ಧಿಯ ವಿವಿಧ ಮಾದರಿಗಳನ್ನು ಬಯಸುತ್ತವೆ. ಅಭಿಜಿತ್ ಹಾಗೂ ಎಸ್ತರ್ ವಿವರಿಸುವಂತೆ ಚೀನವು ಗರಿಷ್ಠ ಮಟ್ಟದ ರಫ್ತುಗಳನ್ನು ಅವಲಂಬಿಸಿರುವ ಅರ್ಥವ್ಯವಸ್ಥೆಯನ್ನು ಅವಲಂಬಿಸಿದೆ ಹಾಗೂ ಬೆಳೆದಿದೆ. ಆದರೆ, ಭಾರತವು ಈಗಲೂ ರಫ್ತು ಮಾರುಕಟ್ಟೆಯಲ್ಲಿ ಮುಖ್ಯ ದೇಶವಾಗಿಲ್ಲ. ಆಗಲೂ ಬೇಕಿಲ್ಲ. ಇಲ್ಲಿಯ ಆರ್ಥಿಕ ಸುಸ್ಥಿರತೆಯು ಮೂಲ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಣ ಹಾಗೂ ಕೌಶಲಗಳ ಅಭಿವೃದ್ಧಿ ಇವುಗಳನ್ನು ಅವಲಂಬಿಸಿದೆ.

ವಿಶೇಷವೆಂದರೆ ಅಭಿಜಿತ್ ಹಾಗೂ ಎಸ್ತರ್ ಉಪಭೋಗಿ ಆರ್ಥಿಕತೆಯ ಬಗ್ಗೆ ಗಾಢವಾದ ಅನುಮಾನವಿಟ್ಟುಕೊಂಡಿದ್ದಾರೆ. ಮನುಷ್ಯರು ಬಯಸುವುದು ತೃಪ್ತಿಯನ್ನೇ ಹೊರತು ಉಪಭೋಗವನ್ನಲ್ಲ ಎಂದು ಅವರು ನಂಬಿದ್ದಾರೆ. ಹೀಗಾಗಿಯೇ ತಂತ್ರಜ್ಞಾನ ಹಾಗೂ ಉನ್ನತಶಿಕ್ಷಣದಿಂದ ವಂಚಿತರಾದ 40 ರಿಂದ 50ರ ವಯಸ್ಸಿನ ಅಮೆರಿಕನ್ ಪುರುಷರು ಖಿನ್ನತೆ, ಮದ್ಯವ್ಯಸನ ಹಾಗೂ ಸಿನಿಕತನದಿಂದ ನರಳುವುದನ್ನು ತುಂಬಾ ಅಂತಃಕರಣದಿಂದ ವಿವರಿಸುತ್ತಾರೆ. ಇದರ ಮೂಲದಲ್ಲಿರುವುದು ಅಭಿವೃದ್ಧಿಯ ಹೆಸರಿನಲ್ಲಿ ಸಮಾನತೆಯನ್ನು ಸಂಪೂರ್ಣವಾಗಿ ಮರೆತಿರುವ ಆರ್ಥಿಕ ಚಿಂತನೆ. ಇಂಥ ಅಸಮಾನತೆಗಳಿರದಿದ್ದರೆ ವಲಸೆಗಾರರು ಹಾಗೂ ಇತರರ ಬಗ್ಗೆ ದ್ವೇಷವನ್ನೇ ಬಿತ್ತುವ ರಾಜಕೀಯ ಚಿಂತನೆಗಳು ಅಮೆರಿಕದಲ್ಲಿ ಪ್ರಬಲವಾಗುತ್ತಿರಲಿಲ್ಲ. ಅಭಿಜಿತ್ ಹಾಗೂ ಎಸ್ತರ್ ಅಮೆರಿಕದ ಆಫ್ರಿಕನ್ – ಅಮೆರಿಕನ್ ಜನಾಂಗದ ಆರ್ಥಿಕ ಸ್ಥಿತಿಗಳು ಹಾಗೂ ಈಗಲೂ ಪ್ರಬಲವಾಗಿರುವ ಜನಾಂಗೀಯ ಭಾವನೆ (racism) ಇವುಗಳನ್ನು ವಿವರವಾಗಿ ಚರ್ಚಿಸುತ್ತಾರೆ.

ಅಭಿಜಿತ್, ರಘುರಾಮ್ ರಾಜನ್ ಹಾಗೂ ಇತರರು ಸಂಪಾದಿಸಿದ ‘What the Economy Needs Now’ಎನ್ನುವ ಕೃತಿಯ ಮುನ್ನುಡಿಯಲ್ಲಿ ಮೊದಲ ವಾಕ್ಯವೇ ‘ಭಾರತವು ಜಗತ್ತಿನ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ದೊಡ್ಡ ಅರ್ಥವ್ಯವಸ್ಥೆಗಳಲ್ಲಿ ಒಂದಾಗಿದೆ; ಕಳೆದ 25 ವರ್ಷಗಳಲ್ಲಿ ಸರಾಸರಿ ಪ್ರತಿಶತ 7ರಂತೆ ಬೆಳೆದಿದೆ. .... ಆದರೆ ಈಗಲೂ ಭಾರತವು ಜಿ- 20 ಗುಂಪಿನ ದೇಶಗಳಲ್ಲಿ ಅತ್ಯಂತ ಬಡದೇಶಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದಲ್ಲಿ ಅಭಿವೃದ್ಧಿಯ ಲಾಭಗಳನ್ನು ಅತ್ಯಂತ ಅಸಮಾನವಾಗಿ ಹಂಚಿರುವುದರಿಂದಾಗಿ ಉಳಿದವರಿಗಿಂತ ಮೇಲುಸ್ತರದ ಆದಾಯಗಳು ಹೆಚ್ಚು ತ್ವರಿತವಾಗಿ ಬೆಳೆದಿವೆ’. ಕೃತಿಯ ಕಾಳಜಿಯೆಂದರೆ ಭಾರತದಲ್ಲಿ ‘ಪ್ರಬಲ, ಸಮಾನ ಹಾಗೂ ಸುಸ್ಥಿರ’ ಅರ್ಥವ್ಯವಸ್ಥೆಯನ್ನು ಸ್ಥಿರಗೊಳಿಸುವುದಾಗಿದೆ.

ಅಭಿಜಿತ್ ಹಾಗೂ ಎಸ್ತರ್ ಅವರ ಕೃತಿಗಳನ್ನು ಒಂದೇಟಿಗೆ ಓದಿ ‘ಬಿಸಾಕು’ವಂತಿಲ್ಲ. ನಿಧಾನವಾಗಿ ಒಂದೊಂದು ಅಧ್ಯಾಯವೂ ತೆರೆದಿಡುವ ಚರ್ಚೆಯನ್ನು ಮನನ ಮಾಡಿಕೊಳ್ಳಬೇಕು. ಖಂಡಿತವಾಗಿಯೂ ಇವುಗಳಲ್ಲಿ ಆಕರ್ಷಕವಾದ, ಕ್ರಾಂತಿಕಾರಿಯಾದ ಪ್ರಖರ ವೈಚಾರಿಕತೆ ಇಲ್ಲ. ಅವರು ಸರಿಯಾಗಿ ಹೇಳುವಂತೆ ಬಡತನದ ಬಗ್ಗೆ ಏನು ಮಾಡಬೇಕೆಂದು ಕೇಳಿದರೆ ಅರ್ಥಶಾಸ್ತಜ್ಞರು ತತ್ವಜ್ಞಾನಿಗಳಂತೆ ಮಾತನಾಡತೊಡಗುತ್ತಾರೆ; ಆದರೆ ಬಡತನವು ದಿನನಿತ್ಯದ ಸಾಮಾನ್ಯ ಬದುಕಿನ ವಿಷಯವಾಗಿದೆ. ‘ಅನೇಕ ದೇಶಗಳ ಬಡಜನರು ಅವರ ಬದುಕಿನ ಬಗ್ಗೆ ಹೇಳಿದ ಕತೆಗಳನ್ನು ನಾವು ಕಲಿತ(ಪಶ್ಚಿಮದ) ಚೌಕಟ್ಟುಗಳಲ್ಲಿ ಇಡಲಾಗಲಿಲ್ಲ. ಅವರ ಕತೆಗಳ ಒಂದು ಸುಸಂಗತವಾದ ನಿರೂಪಣೆಯನ್ನು ನಮ್ಮ ಬರಹಗಳಲ್ಲಿ ಪ್ರಯತ್ನಿಸಿದ್ದೇವೆ.’ ನಮ್ಮ ಚಿಂತನೆಯ ದಿಕ್ಕು ಇದೇ ಆಗಬೇಕಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.