ಪ್ರತಿಭಾ ನಂದಕುಮಾರ್ ಅವರ ‘ಅವನ ಮುಖ ಮರೆತು ಹೋಗಿದೆ’ ಹಲವು ಬಗೆಯ ವಿಸ್ಮೃತಿಗಳನ್ನು ಕುರಿತು ಧೇನಿಸುವ ಕವನ ಸಂಕಲನವಾಗಿದೆ. ಇಲ್ಲಿ ಸ್ಥೂಲವಾಗಿ ಎರಡು ಬಗೆಯ ವಿಸ್ಮೃತಿಗಳನ್ನು ಗುರುತಿಸಬಹುದು. ಮನುಷ್ಯನ ಮನುಷ್ಯತ್ವದ ಚಹರೆ ಕಳೆದುಹೋಗಿ ಅವನೊಳಗಿರುವ ವಿಕೃತಿಗಳು ಉಕ್ಕುತ್ತಿರುವಾಗ, ಅವನೊಳಗೆ ಹಿಂದೆ ಇದ್ದಿರಬಹುದಾದ ಮನುಷ್ಯತ್ವದ ಸ್ಮೃತಿಯ ಬಗೆಗೆ ಇಲ್ಲಿನ ಕವಿತೆಗಳು ಗಮನ ಕೇಂದ್ರೀಕರಿಸುತ್ತವೆ. ಇದು ಮನುಷ್ಯತ್ವದ ವಿಸ್ಮೃತಿಯಾದರೆ, ಮನುಷ್ಯರ ನಡುವೆ ಮಾತಿನಿಂದ ಬಂಧವೇರ್ಪಡಿಸುವ ಮಾತಿನ ಅರ್ಥಪದರಗಳು ಸವೆಯುತ್ತಾ ಬಂದು ಮಾತಿನ ದುರ್ವಾಸನೆ ಮಾತ್ರ ಹೊಮ್ಮುವಂತೆ ಇರುವಾಗ ವಾಗಾರ್ಥಗಳ ಲೋಕ ವಿಸ್ಮೃತಿಯಲ್ಲಿ ಅಡಗಿರುವಂತೆ ತೋರುತ್ತಿರುವುದನ್ನು ಕಾಣಿಸುವುದರತ್ತ ಗಮನಹರಿಸುವುದನ್ನೂ ಈ ಕವಿತೆಗಳಲ್ಲಿ ಕಾಣಬಹುದು.
ಹಾಗೆ ನೋಡಿದರೆ ‘ಮುಖ ಮರೆತು ಹೋಗುವುದು’ ಎಂದರೆ ಗುರುತು ಮರೆತು ಹೋಗುವುದು. ಗುರುತು ಎನ್ನುವುದು ನೆನಪಿನ ಸತ್ವ ಮಾತ್ರವಲ್ಲ, ಅಸ್ತಿತ್ವದ ಕುರುಹೂ ಹೌದು. ಸದ್ಯ ಈ ಸಂಕಲನ ಗಮನ ಹರಿಸುತ್ತಿರುವುದು ಇಂತಹ ಮರೆವಿನ ಮರೆಗುಳಿ ಸಮುದಾಯಗಳು, ವ್ಯಕ್ತಿಗಳ ಬಗ್ಗೆ. ದುರಿತಕಾಲದ ಕ್ರೌರ್ಯವು ನಾವು ಕಳೆದುಕೊಂಡ ಮಾತಿನ ಸಂವಹನ, ಸಾಮರಸ್ಯವನ್ನೂ ಮನುಷ್ಯತ್ವದ ಸೆಲೆಗಳನ್ನೂ ವಿಸ್ಮೃತಿಗೆ ತಳ್ಳಿದಂತಿದೆ. ಇದನ್ನು ಕುರಿತು ಧ್ಯಾನಿಸುವ ಕವಿತೆಗಳು ಪ್ರಸ್ತುತ ಸಂಕಲನದಲ್ಲಿವೆ.
ಪ್ರತಿಭಾ ಅವರ ಮೊದಲ ಕವಿತೆಗಳು ‘ನಾವು ಹುಡುಗಿಯರೇ ಹೀಗೆ’ ಎನ್ನುವ ಸಾರ್ವತ್ರಿಕ ಸ್ತ್ರೀವಾದದ ನೆಲೆಯಲ್ಲಿ ಹುಟ್ಟಿದಂಥವು. ಆನಂತರ ‘ಆಹಾ ಪುರುಷಾಕಾರಂ’, ‘ಅವರು ಪುರಾವೆಗಳನ್ನು ಕೇಳುತ್ತಾರೆ’, ‘ಕವಡೆಯಾಟ’ ಮುಂತಾದ ಸಂಕಲನಗಳಲ್ಲಿ ಪ್ರತಿಭಾ ಅವರ ಕಾವ್ಯವು ಹೆಣ್ಣು ಎದುರಿಸಬಹುದಾದ ಕ್ರೌರ್ಯಗಳನ್ನು ಅಭಿಮುಖಗೊಳಿಸಿಕೊಂಡು, ಒಂದು ಸೂಕ್ಷ್ಮ ಸಂವೇದನೆಯ ಮನಸ್ಸನ್ನು ಹೆಣ್ಣಾಗಿ ನೋಡುವ ನೆಲೆಗೆ ತಲುಪಿತು. ಸ್ತ್ರೀತ್ವದ ಪುರಾಣ ಇನ್ನೂ ಇಷ್ಟಕ್ಕೇ ಮುಗಿಯಲಿಲ್ಲ ಎಂದು ‘ಮುದುಕಿಯರಿಗಿದು ಕಾಲವಲ್ಲ’ ಎನ್ನುವ ಹಂತಕ್ಕೆ ಹೊರಳಿಕೊಂಡು ಹೆಣ್ಣಿನ ದೇಹದ ಪಯಣವೆಂಬುದನ್ನೇ ನೆಪವಾಗಿಟ್ಟುಕೊಂಡು ಅವರ ಕಾವ್ಯ ಲೋಕಾವಲೋಕನ ಮಾಡಿತು.
ಇದೀಗ ಸುದ್ದಿಯಲ್ಲೇ ಎಲ್ಲವೂ ಎಂದು ದಿನದ ಇಪ್ಪತ್ನಾಲ್ಕು ಗಂಟೆಗಳ ಸುದ್ದಿ ಸಂಭ್ರಮದಲ್ಲಿ ತೊಡಗಿದವರಿಗೆ ಸುದ್ದಿಯೊಳಗೆ ಇರುವ ತಲ್ಲಣ, ಆತಂಕಗಳನ್ನು ಛೇದಿಸಲು ಆಗದು ಎನ್ನುವ ಪ್ರಮೇಯದೊಂದಿಗೆ ಅವರ ಹೊಸ ಕವಿತೆಗಳು ಬಂದಿವೆ. ಸಮಕಾಲೀನ ಜಗತ್ತಿನ ದುಃಖ ಮತ್ತು ಭಾಷೆ ಎರಡೂ ಕ್ಲೀಷೆಯಾಗಿರುವುದನ್ನು ಅವು ಗುರುತಿಸಿಕೊಳ್ಳುತ್ತವೆ:
ಕ್ಲೀಷೆಯಾಗಿದೆ ದುಃಖ/ಪ್ರಾಸಕ್ಕೂ ಎಟುಕುವುದಿಲ್ಲ.
ಇಕಾರಕ್ಕೂ ಆಕಾರಕ್ಕೂ ಹೊಂದುವುದಿಲ್ಲ./ಬಿಟ್ಟು ಬಿಡುವುದು ಒಳ್ಳೆಯದು.
ಬದಲಿಗೆ ಸುಖ ಪದ ಬಳಕೆಗೆ ಎಷ್ಟೊಂದು ಅನುಕೂಲ (ಇದು ಗೌರಿ ಸುಖ)
ಪ್ರತಿಭಾ ಅವರ ಕಾವ್ಯದ ಗಮನ ಸದ್ಯ ಚಂದಗಾಣಿಸುವ ಕಾವ್ಯಸೃಷ್ಟಿಯ ಕಡೆಗಂತೂ ಇಲ್ಲ. ಅವರ ಹಿಂದಿನ ಎರಡು ಸಂಕಲನಗಳಲ್ಲಿ ದುರಿತ ಕಾಲದ ದಿಕ್ಕೆಟ್ಟ ಸ್ಥಿತಿಗಳು ಸಂವೇದನೆಗಳನ್ನು ನಾಶಪಡಿಸುತ್ತಿರುವುದನ್ನು ಶೋಧಿಸಿಕೊಂಡಂತೆಯೇ ಪ್ರಸ್ತುತ ಸಂಕಲನದ ಕವಿತೆಗಳು ಸಹ ಸಮಕಾಲೀನ ಬದುಕಿನ ತಲ್ಲಣಗಳೇನು ಎಂಬುದರ ಬಗ್ಗೆ ಇನ್ನಷ್ಟು ಸೂಕ್ಷ್ಮವೂ ಖಚಿತವೂ ಆಗಿ ಗ್ರಹಿಸುತ್ತಿವೆ.
ಮಾತು, ಅಭಿವ್ಯಕ್ತಿಗಳನ್ನು ಕಳೆದುಕೊಂಡ ಜಡ ಸಮುದಾಯಗಳು ಕೇಳುವುದನ್ನೂ ಕಳೆದುಕೊಂಡಿವೆ. ಮಾತಿನ ಶಕ್ತಿ ಹೀಗೆ ಹಾಳಾಗಿ
ರುವುದಕ್ಕೆ ವಾಗರ್ಥಗಳು ಭಿನ್ನವಾಗಿರುವುದೇ ಕಾರಣವಾಗಿರಬಹುದು. ಈ ಮಾತಿಗೆ ಪೂರಕ
ವಾಗಿ ಕೆಳಗಿನ ಸಾಲುಗಳನ್ನು ಗಮನಿಸಬಹುದು:
ಹಳೆಯ ಪಳೆಯುಳಿಕೆಯ ಮಾತುಗಳು ಸವೆಯುವುದೇ ಇಲ್ಲಾ
ಇಲ್ಲಿ ಆಡದ ಮಾತುಗಳು ಮಾಡದ ಕೃತ್ಯಗಳ/ಭರ್ಜರಿ ಬೇಟೆಗಳ ಕುಹಕ (ಓಡಿ ಹೋಗೋಣ)
ಸಮಕಾಲೀನ ಜಗತ್ತಿನ ಕ್ರೌರ್ಯವು ದೈಹಿಕವೋ ಮಾನಸಿಕವೋ ಎಂದು ಕೇಳಿಕೊಂಡರೆ ಎರಡೂ ಎನ್ನುವುದನ್ನು ಇಲ್ಲಿನ ಕವಿತೆಗಳು ಕಂಡುಕೊಂಡಿವೆ. ಸ್ತ್ರೀವಾದವು ತಾತ್ವಿಕವಾಗಿ ಎದುರಿಸುತ್ತಾ ಬಂದ ಪಿತೃತ್ವದ ಕ್ರೌರ್ಯವು ಇಂದು ಲಿಂಗಭೇದದ ಪರಿಧಿಯನ್ನು ದಾಟಿ ಸಾರ್ವತ್ರಿಕವಾಗಿ ಹಬ್ಬುತ್ತಿರುವ ಕ್ರೌರ್ಯವಾಗುವುದನ್ನು ಗುರುತಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಹ ಪ್ರತಿಭಾ ಅವರ ಈ ಸದ್ಯದ ಕವಿತೆಗಳು ಕ್ರೌರ್ಯವನ್ನು ಕುರಿತು ಧ್ಯಾನಿಸುತ್ತವೆ.
ಈ ಕ್ರೌರ್ಯದ ಅನಾವರಣವನ್ನು ಮಾಡುವಾಗ ಎದುರಾಗುವ ತೊಡಕು ಎಂದರೆ ಪೊಲಿಟಿಕಲ್ ಕರೆಕ್ಟ್‌ನೆಸ್ ನಿಲುವಿ
ನದು. ಯಾರನ್ನೋ ಮೆಚ್ಚಿಸುವ, ಬಹುಜನದ ಅಭಿಪ್ರಾಯಗಳಿಗೆ ತಕ್ಕನಾಗಿ ನಿಲ್ಲಬೇಕಾದ, ಬರೆಯಬೇಕಾದ ಸಂದರ್ಭ
ಈ ಕಾಲದ ಒತ್ತಡವೇ ಸರಿ. ಪ್ರತಿಭಾ ಕಾವ್ಯ ಹಾಗೆ ನೋಡಿದರೆ ಎಂದಿಗೂ ‘ಕರೆಕ್ಟ್‌ನೆಸ್’ ಫ್ರೇಮಿನೊಳಗೆ ಕೂರುವಂತದ್ದಲ್ಲ. ನೇರಾನೇರ ಬಯಕೆಗಳನ್ನು ಹೇಳುವ, ತನಗನಿಸಿದ್ದನ್ನು ವ್ಯಕ್ತಪಡಿಸಿಯೇ ತೀರುವ ಒಳಬಂಡಾಯದ ಸೆಲೆಯೇ ಅವರ ಕಾವ್ಯವನ್ನು ಜೀವಂತವಾಗಿ ಇರಿಸುವುದು.
ಪ್ರತಿಭಾ ಅವರು ರಾಜಕೀಯ ಪದ್ಯಗಳನ್ನು ಬರೆದರೂ ಅದರಲ್ಲಿ ಲೋಕಕ್ಕೊಪ್ಪುವ ರುಚಿ ಇರದು. ಅದರಲ್ಲೊಂದು ಬಿಡುಬೀಸಾದ ಆತ್ಮಸಮ್ಮಾನದ ಸೆಳಕು ಇರುತ್ತದೆ. ‘ಶನಿಗೊಂದು ಪ್ರಾರ್ಥನೆ’ ಕವಿತೆಯಲ್ಲಿ ಹೆಣ್ಣುಮಕ್ಕಳನ್ನು ತನ್ನ ಹತ್ತಿರ ಬಿಟ್ಟುಕೊಳ್ಳದ ಶನಿಯನ್ನೆ ಛೇಡಿಸುತ್ತದೆ. ರಾಮಮಂದಿರ ಕಟ್ಟುವವರಿಗೆ ‘..ನಿಮ್ಮ ಮನೆಗಳಲ್ಲಿ ರಾಮಭಕ್ತಿಗಿಂತ ತುಂಬಿ ರಹೀಮ ಹಗೆತನ’ ಎನ್ನುವ ಮಾತನ್ನು ನೇರವಾಗಿ ಹೇಳಬಲ್ಲರು. ಹೀಗೆ ತಮ್ಮ ದನಿ ರಾಜಕೀಯವಾದರೆ ಅದಕ್ಕೆ ನೀವೇ ಹೊಣೆ ಎನ್ನುವ ಉತ್ತರದಾಯಿತ್ವವನ್ನು ಇಲ್ಲಿನ ಕವಿತೆಗಳು ಹೊರಿಸುತ್ತವೆ. ಆದುದರಿಂದ ಇಲ್ಲಿ ರಾಜಕೀಯದ ‘ಕರೆಕ್ಟ್‌ನೆಸ್’ ಎನ್ನುವ ತಿಳಿವಳಿಕೆಯ ಮರು ತಿಳಿವಳಿಕೆ ಕಾಣುತ್ತದೆ! ಕವಿತೆಯ ಈಡಿಯಮ್ಮಿನಲ್ಲೇ ಈ ರಾಜಕೀಯವನ್ನು ಎತ್ತುವುದು ಅದಕ್ಕೆ ಉತ್ತರ ಕೊಡುವುದು ಇಲ್ಲಿ ಅಂತಿಮವಾಗಿ ಪ್ರತಿಭಾ ಅವರ ಆಯ್ಕೆಯಾಗಿದೆ.
ಕೃತಿ: ಅವನ ಮುಖ ಮರೆತು ಹೋಗಿದೆ
ಲೇ: ಪ್ರತಿಭಾ ನಂದಕುಮಾರ್
ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಸಂ: 9449174662
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.