‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’
–ಇದು ಕುಮಾರವ್ಯಾಸ ಪೀಠಿಕೆಯಲ್ಲೇ ಹೇಳಿದ ಮಾತು. ಭೂಮಿಯನ್ನು ತಲೆ ಮೇಲೆ ಹೊತ್ತಿರುವ ಆದಿಶೇಷನೆಂಬ ಮಹಾಸರ್ಪವೇ ರಾಮಾಯಣದ ಕವಿಗಳ ಭಾರ ಹೊರಲು ತಿಣುಕಾಡಬೇಕಾಗಿದೆ. ರಾಮಾಯಣ ಎಂದರೆ ಒಂದೇ ಅಲ್ಲ. 300ಕ್ಕೂ ಹೆಚ್ಚು ರಾಮಾಯಣಗಳಿವೆ ಎಂದು ಜಾನಪದ ಕಥೆಗಳ ಬೆನ್ನು ಹತ್ತಿದ ಎ.ಕೆ.ರಾಮಾನುಜನ್ ಹೇಳಿದ್ದರು. ರಾಮಾಯಣದ ಕುರಿತ ವಿಶ್ಲೇಷಣಾ ಕೃತಿಗಳೂ ನಮ್ಮಲ್ಲಿ ಹೇರಳವಾಗಿವೆ. ನಮ್ಮ ನಡುವಣ ಚಿಂತಕ ಜಿ.ಎನ್.ನಾಗರಾಜ್ ‘ನಿಜ ರಾಮಾಯಣದ ಅನ್ವೇಷಣೆ’ ಎನ್ನುವ ಈ ಕೃತಿಯ ಮೂಲಕ ರಾಮಾಯಣಗಳ ಈ ಭಾರಕ್ಕೆ ತಮ್ಮದೂ ಒಂದು ಕೊಡುಗೆ ನೀಡಿದ್ದಾರೆ.
‘ಕನ್ನಡದ ಮಹಾಕವಿ ಕುವೆಂಪು ಮತ್ತು ಸಂಸ್ಕೃತದ ಮಹಾನಾಟಕಕಾರ ಭಾಸ ನನ್ನ ರಾಮಾಯಣದ ಅನ್ವೇಷಣೆಗೆ ಪ್ರೇರಣೆ’ ಎಂದಿರುವ ನಾಗರಾಜ್, ತಮ್ಮ ಕೃತಿಯನ್ನು ಪೂರ್ವ ಕಾಂಡ (ನಿಜ ರಾಮಾಯಣದ ಅನ್ವೇಷಣೆ) ಮತ್ತು ಉತ್ತರಕಾಂಡ (ರಾಮಾಯಣದ ನಿಜಸ್ವರೂಪ) ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ರಾಮಾಯಣ ಬೆಳೆದು ಬಂದ ಬಗೆ, ರಾಮಾಯಣ ಪೂರ್ವದ ಸೀತೆ– ಅಹಲ್ಯೆಯರ ಕಥೆ, ರಾಮನ ಹುಟ್ಟಿಗೂ ಸ್ಥಿರ ಕೃಷಿ ಮತ್ತು ಕಬ್ಬಿಣದ ಬಳಕೆಗೆ ಇರುವ ಸಂಬಂಧ, ಹಲರಾಮನ ಮೇಲೆ ಕೋದಂಡರಾಮನ ಸವಾರಿ– ಹೀಗೆ ವಿಭಿನ್ನ ದಿಕ್ಕಿನಲ್ಲಿ ರಾಮಾಯಣವನ್ನು ಬಗೆಬಗೆದು ಪರಿಶೀಲಿಸಿದ್ದಾರೆ. ರಾಮಾಯಣ ಮತ್ತು ಇಲಿಯಡ್ ಎಂಬ ಗ್ರೀಕ್ ಕಾವ್ಯದ ಕುರಿತ ಹೋಲಿಕೆ, ಕ್ಷತ್ರಿಯ–ವಾನರ– ದೇವತೆ– ಯಕ್ಷರ ವಿಭಜನೆಯ ಹಿಂದಿರುವ ವಸಾಹತು ರಾಜಕೀಯ ಮತ್ತು ರಾಮ ಅವತಾರವಾದ ಬಗೆಗಳನ್ನು ವಿಶ್ಲೇಷಿಸಿ ಸಾಕಷ್ಟು ಚರ್ಚೆಗೂ ಅವಕಾಶ ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.