ADVERTISEMENT

ಕನ್ನಡತಿ ರಂಜನಿ ರಾಘವನ್ ಅವರ ಕಥಾ ಸಂಕಲನ ‘ಕತೆ ಡಬ್ಬಿ’ ಪುಸ್ತಕ ವಿಮರ್ಶೆ

ಬಿ.ಎಂ.ಹನೀಫ್
Published 15 ಜನವರಿ 2022, 23:45 IST
Last Updated 15 ಜನವರಿ 2022, 23:45 IST
ರಂಜನಿ ರಾಘವನ್
ರಂಜನಿ ರಾಘವನ್   

ರಂಜನಿ ರಾಘವನ್ ಕನ್ನಡದ ಟಿವಿ ಧಾರಾವಾಹಿ ಪ್ರಿಯರಿಗೆ ಪರಿಚಿತ ಹೆಸರು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ಕನ್ನಡಿಗರ ಮನಸ್ಸು ಗೆದ್ದು, ‘ಕನ್ನಡತಿ’ ಧಾರಾವಾಹಿಯ ಮೂಲಕ ಜನಪ್ರಿಯತೆಯ ತುದಿಗೇರಿದವರು. ಜೊತೆಗೆ ಈಗ ಸಿನಿಮಾ, ವೆಬ್ ಸರಣಿಯ ನಟನೆ ಮತ್ತು ಚಿತ್ರಕಥೆ ಬರೆಯುವುದರ ಮೂಲಕ ಬಿಡುವಿಲ್ಲದ ದಿನಚರಿಯಲ್ಲಿ ತೊಡಗಿದವರು. ಅವರ ಮೊದಲ ಕಥಾ ಸಂಕಲನ ‘ಕತೆ ಡಬ್ಬಿ’ ಜೀವನದಲ್ಲಿ ಕಂಡುಂಡದ್ದೇ ಎನ್ನಬಹುದಾದ ಹಲವು ಘಟನೆಗಳ ಕಥಾವಿಸ್ತರಣೆಯಾಗಿದೆ.

ಕುಟುಂಬದಲ್ಲಿ ಬದಲಾಗುತ್ತಿರುವ ಮನುಷ್ಯ ಸಂಬಂಧಗಳ ಮರುವ್ಯಾಖ್ಯೆ ಇಲ್ಲಿಯ ಬಹುತೇಕ ಕಥೆಗಳಲ್ಲಿ ಎದ್ದು ಕಾಣುವ ಅಂಶ. ಸರಳ ಕನ್ನಡದಲ್ಲಿ ನೇರವಾಗಿ ಕಥೆ ಹೇಳುವ ರಂಜನಿಯವರು, ಓದುಗರ ಕುತೂಹಲ ಕಾಯ್ದುಕೊಳ್ಳುವಂತೆ ಇಲ್ಲಿ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ. ಕಥೆಯ ಓಘಕ್ಕೆ ಎಲ್ಲೂ ತಡೆಯಾಗದಂತೆ ಸರಾಗವಾಗಿ ಘಟನೆಗಳನ್ನು ನಿರೂಪಿಸುತ್ತಾರೆ.

ಒಟ್ಟು 14 ಕಥೆಗಳಿರುವ ಈ ಡಬ್ಬಿಯಲ್ಲಿ ಅನುಭವದ ವೈವಿಧ್ಯ ಗಮನ ಸೆಳೆಯುತ್ತದೆ. ಎಲ್ಲ ಕಥೆಗಳಲ್ಲೂ ಮನುಷ್ಯರ ಒಳಿತು ಕೆಡುಕುಗಳ ಕುರಿತ ಜಿಜ್ಞಾಸೆಯಿದೆ. ಕೆಲವು ಕಥೆಗಳ ಪಾತ್ರಗಳು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ನಿಲ್ಲುತ್ತವೆ. ಉದಾಹರಣೆಗೆ ‘ಕ್ಯಾಬ್ ವಿ ಮೆಟ್’ ಕಥೆಯ ಡ್ರೈವರ್ ತಿಮ್ಮೇಶ್, ‘ಚುಚ್ಚುಮದ್ದಿನ ಸೈಡ್ ಎಫೆಕ್ಟ್’ ಕಥೆಯ ನರಹರಿ ಶರ್ಮಾ, ‘ನಂಜನಗೂಡು ಟು ನ್ಯೂಜೆರ್ಸಿ’ಯ ಕನಕಮ್ಮ, ‘ದೇವರು ಕಾಣೆಯಾಗಿದ್ದಾರೆ’ ಕಥೆಯ ಗೋಪಾಲಾಚಾರಿ- ಹೀಗೆ ಹಲವು ಪಾತ್ರಗಳನ್ನು ಹೆಸರಿಸಬಹುದು. ಸಂಕಲನದ ವೈವಿಧ್ಯವನ್ನು ಸೂಚಿಸುವಂತೆ ಒಂದು ಕಥೆಯಲ್ಲಿ ಕೋತಿ ಮತ್ತು ಅದರ ಮರಿಯೇ ಮುಖ್ಯ ಪಾತ್ರಗಳಾಗಿವೆ.

ADVERTISEMENT

ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಎನ್ನುವುದೇ ಕಥೆಯ ಯಶಸ್ಸು ಎಂದುಕೊಂಡರೆ ಇಲ್ಲಿರುವ ಹೆಚ್ಚಿನವು ಯಶಸ್ವೀ ಕಥೆಗಳೇ. ಆದರೆ ಕಥೆಯೊಂದು ಓದುಗರ ಮನಸ್ಸಿನಲ್ಲಿ ಬೆಳೆಯಬೇಕಾದರೆ, ಪರಿಣಾಮಕಾರಿಯಾಗಿ ಕಾಡಬೇಕಾದರೆ ಇದಿಷ್ಟೇ ಸಾಕಾಗುವುದಿಲ್ಲ. ಅಲ್ಲಿರುವ ಪಾತ್ರಗಳ ನಡುವಣ ತಾಕಲಾಟ ಹೊಸ ಅರ್ಥಗಳನ್ನು ಹೊಳೆಯಿಸಬೇಕಾಗುತ್ತದೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಆದರ್ಶ ಪಾತ್ರಗಳ ಚಿತ್ರಣ ಮತ್ತು ಉಪದೇಶದ ಧಾಟಿಯೇ ಮುಖ್ಯವಾಗಿ ಮನುಷ್ಯಲೋಕದ ವೈವಿಧ್ಯಮಯ ಬಣ್ಣಗಳು ಗೈರುಹಾಜರಾಗಿವೆ. ಒಳಿತು-ಕೆಡುಕುಗಳ ಕಪ್ಪು–ಬಿಳುಪು ಚಿತ್ರಣವೇ ಇಲ್ಲಿನ ಕಥೆಗಳ ಮುಖ್ಯ ಮಿತಿ. ಕಥೆಗೂ ಪ್ರಬಂಧಕ್ಕೂ ನಡುವಣ ವ್ಯತ್ಯಾಸವೇ ಇಲ್ಲವಾದಂತೆ ಕಾಣುವ ‘ಹಂಗ್ರೀ ಮ್ಯಾನ್’ ಎನ್ನುವ ಕಥೆಯೂ ಇಲ್ಲಿದೆ. ಹಲವು ಕಥೆಗಳಲ್ಲಿ ಕಥೆಗಾರ್ತಿಯ ಇಂತಹ ಉಪದೇಶಪ್ರಿಯತೆ ಓದಿನ ಓಘಕ್ಕೆ ತಡೆಯೊಡ್ಡುತ್ತದೆ.

ಬುದ್ಧಿಯೇ ಪ್ರಮುಖ ಪಾತ್ರ ವಹಿಸುವ ಇಲ್ಲಿನ ಕಥೆಗಳಲ್ಲಿ ಇಂಗ್ಲಿಷ್ ಶಬ್ದಗಳ ಜಾಣ ಬಳಕೆ, ನಗರಕೇಂದ್ರಿತ ವಸ್ತುಗಳ ಸಿನಿಮೀಯ ನಿರೂಪಣೆ, ಅನಿರೀಕ್ಷಿತ ತಿರುವಿನೊಂದಿಗೆ ಕಥೆಯನ್ನು ಮುಕ್ತಾಯಗೊಳಿಸುವುದು- ಮುಂತಾಗಿ ಹಳೆಕಾಲದ ತಂತ್ರಗಳು ಎದ್ದುಕಾಣುತ್ತಿವೆ. ಸಿನಿಮಾ ಮತ್ತು ಟಿವಿ ಧಾರಾವಾಹಿಗಳ ಪ್ರಭಾವ ಇದಕ್ಕೆ ಕಾರಣ ಇರಬಹುದು. ಇಂತಹ ದುರ್ಬಲ ಘಳಿಗೆಗಳನ್ನು ಮೀರಿ ನಿಂತು, ಕಥನ ಕ್ರಿಯೆ ಮತ್ತು ಭಾಷೆಯ ಜೀವಂತಿಕೆಯನ್ನು ರೂಢಿಸಿಕೊಂಡರೆ ಈ ಕಥೆಗಾರ್ತಿಯಿಂದ ಗಮನಾರ್ಹ ಕಥೆಗಳನ್ನು ನಿರೀಕ್ಷಿಸಬಹುದು. ಅಂದವಾದ ಮುದ್ರಣ, ವಿನ್ಯಾಸ ಈ ಕೃತಿಯ ಹೆಚ್ಚುಗಾರಿಕೆ ಎನ್ನುವುದಂತೂ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.