ಗೌರಿ
ಕಥಾ ಸಂಕಲನಗಳು, ಕಾವ್ಯ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಜಗತ್ತಿಗೆ ಪರಿಚಿತರಾಗಿರುವ ಇಂದ್ರಕುಮಾರ್ ಎಚ್.ಬಿ. ಅವರ ಮೂರನೇ ಕಾದಂಬರಿ ‘ಎತ್ತರ’. ಗಾತ್ರದಲ್ಲಿಯಷ್ಟೇ ಅಲ್ಲ, ಮಹತ್ವಾಕಾಂಕ್ಷೆಯ ದೃಷ್ಟಿಯಿಂದಲೂ ಇದು ಅವರ ಹಿಂದಿನ ಎರಡು ಕಾದಂಬರಿಗಳಿಗಿಂತ ಎತ್ತರದಲ್ಲಿದೆ.
ತನ್ನ ಊರಿನಲ್ಲಿ, ಕೆಲಸದಲ್ಲಿ, ಕುಟುಂಬದಲ್ಲಿ ತಿರಸ್ಕೃತನಾದ ವ್ಯಕ್ತಿಯೊಬ್ಬ ತನಗೆ ಗೊತ್ತೇ ಇಲ್ಲದ ಕಾಡಿನ ಸೆರಗಿನ ಊರೊಂದಕ್ಕೆ ಹೊಸ ಬದುಕನ್ನು ಅರಸಿ ಹೋಗುತ್ತಾನೆ. ಆ ಜಗತ್ತಿಗೆ ಅವನು ತೆರೆದುಕೊಳ್ಳುತ್ತಿರುವ ಹಾಗೆಯೇ ಅವನಿಗೆ ಎದುರಾಗುವ ಅನುಭವಗಳು, ವ್ಯಕ್ತಿಗಳು, ಸಂಬಂಧಗಳು, ಸನ್ನಿವೇಶಗಳ ಮೂಲಕವೇ ಈ ಕಾದಂಬರಿ ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ.
ಇದು ಒಮ್ಮುಖ ಚಲನೆಯಲ್ಲಿ ಬೆಳೆಯುತ್ತ ಹೋಗುವ ಕಥನವಲ್ಲ. ಭೂತ-ಭವಿಷ್ಯತ್-ವರ್ತಮಾನಗಳ ನಡುವೆ ಹೊಯ್ದಾಡುತ್ತ, ವಾಸ್ತವ-ಕನಸು-ಅಪೇಕ್ಷೆಗಳ ನಡುವೆ ತುಯ್ದಾಡುತ್ತ ಸಾಗುತ್ತದೆ. ಅಂಥದ್ದೊಂದು ಜಗತ್ತನ್ನು ಸೃಷ್ಟಿ ಮಾಡಿದ್ದು ಈ ಕಾದಂಬರಿಯ ಸಾಧನೆ. ಇಲ್ಲಿ ದಟ್ಟವಾದ ಕಾಡಿದೆ. ಗಟ್ಟಿಯಾದ ಹೆಂಗಸರಿದ್ದಾರೆ. ಬೆಟ್ಟದ ಮೇಲೊಂದು ನಿಗೂಢವಾದ ಮನೆಯಿದೆ. ಆ ಮನೆಯಷ್ಟೇ ನಿಗೂಢವಾದ ಮನುಷ್ಯರೂ ಇದ್ದಾರೆ. ಸತ್ತವರೂ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತಾರೆ; ಬದುಕಿದ್ದವರು ಸತ್ತಂತೆ ಭಾವ ಮೂಡಿಸುತ್ತಾರೆ. ಎಲ್ಲರೂ ತಮ್ಮ ಒಡಲೊಳಗೆ ಬಿಡಿಸಲಾಗದ ಗುಟ್ಟಿನ ಪೊಟ್ಟಣವನ್ನೇ ಇಟ್ಟುಕೊಂಡು ಅಡ್ಡಾಡುತ್ತಿದ್ದಾರೇನೋ ಎಂದು ಭಾಸವಾಗುತ್ತದೆ.
ಕ್ಯಾಮೆರಾ ಲೆನ್ಸ್ ಅನ್ನು ಫೋಕಸ್ ಮಾಡುತ್ತ ಹೋದಹಾಗೆ ಫ್ರೇಮಿನೊಳಗೆ ಬ್ಲರ್ ಆಗಿದ್ದ ದೃಶ್ಯ ಸ್ಪಷ್ಟವಾಗುತ್ತ ಹೋಗುವ ಹಾಗೆ ಈ ಕಾದಂಬರಿ ಆ ನಿಗೂಢ ಲೋಕವನ್ನು ಫೋಕಸ್ ಮಾಡುತ್ತ ಹೋಗುತ್ತದೆ. ಉತ್ತಮ ಪುರುಷ ನಿರೂಪಣೆಯಲ್ಲಿರುವ ಈ ಕಾದಂಬರಿ, ಮುಖ್ಯಪಾತ್ರದ ಕಣ್ಣಿನ ಮೂಲಕ ಆ ಜಗತ್ತಿನ ಬಿಡಿಬಿಡಿ ಚಿತ್ರಗಳನ್ನು ಸ್ಲೈಡ್ ಷೋ ರೀತಿಯಲ್ಲಿ ತೋರಿಸುತ್ತ ಹೋಗುತ್ತದೆ. ಹಾಗಾಗಿಯೇ ಈ ಕಥನ ಜಗತ್ತಿಗೊಂದು ಅಸ್ಪಷ್ಟತೆ ಮತ್ತು ನಿಗೂಢ ಗುಣ ಸಿಕ್ಕಿದೆ. ಇಂಥ ಜಗತ್ತನ್ನು ಕಟ್ಟಿಕೊಟ್ಟಿರುವುದು ಈ ಕಾದಂಬರಿಯ ಶಕ್ತಿ. ಆದರೆ ಅದನ್ನು ಮೀರಿ ಮಹತ್ವವಾದದ್ದೇನೂ ಮುಟ್ಟಲಾಗದೇ ಇರುವುದರಿಂದ ಆ ಶಕ್ತಿಯೇ ಈ ಕಾದಂಬರಿಯ ಮಿತಿಯೂ ಆಗಿಬಿಟ್ಟಿದೆ.
ಮುಖ್ಯಪಾತ್ರದ ಕಣ್ಣಿನಲ್ಲಿ ಕಂಡಷ್ಟೇ, ಕಂಡ ಹಾಗಷ್ಟೇ ನಾವು ಈ ಜಗತ್ತನ್ನು ಕಾಣುತ್ತೇವೆ. ಅವನು ದಿನವೂ ಸಾಗುವ ಅದೇ ಅದೇ ದಾರಿಯಲ್ಲಿ, ಅದೇ ಅದೇ ತಿರುವಿನಲ್ಲಿ, ಅದೇ ಅದೇ ವೃತ್ತಗಳಲ್ಲಿ ನಾವೂ ಸುತ್ತಬೇಕಾಗುತ್ತದೆ. ಆ ನಾಯಕನ ದೃಷ್ಟಿಯೂ ಸಹಜವಾದದ್ದಲ್ಲ. ಎದುರಿಗಿರುವ ವ್ಯಕ್ತಿ ಒಂದು ಹೆಜ್ಜೆ ಎತ್ತಿಟ್ಟರೆ ತನ್ನ ಕೊಲ್ಲಲೇ ಬಂದಂತೆ ಭಾಸವಾಗುವ, ಒಂದು ಮಾತು ಆಡಿದರೆ ಅದಕ್ಕೆ ನೂರು ಊಹೆ ಮಾಡಿಕೊಳ್ಳುವ ಅವನೂ ಒಂದು ರೀತಿಯಲ್ಲಿ ಭ್ರಮೆಯೊಳಗೆ ಸಿಕ್ಕಿಕೊಂಡವನು. ಈ ನಿರೂಪಣಾ ಶೈಲಿಗೆ ಇಷ್ಟು ದೊಡ್ಡ ಕಥನದ ಭಾರ ಹೊರುವಷ್ಟು ತ್ರಾಣವಿಲ್ಲ. ಹಾಗಾಗಿಯೇ ಒಂದು ಹಂತದ ನಂತರ ಇದರ ಓದು, ನಿಂತಲ್ಲೇ ಗಿರಗಿರ ತಿರುಗುತ್ತಿರುವ ಹಾಗೆ ಭಾಸವಾಗುತ್ತದೆ.
ಈ ಕಾದಂಬರಿಯ ಮೊದಲ ಭಾಗ ಇಂಥ ಅತಿಯಾದ ವಿವರಗಳಿಂದ ಬಳಲುತ್ತದೆ. ಮುಖ್ಯಪಾತ್ರದ ದೃಷ್ಟಿಯಿಂದಲೇ ಎಲ್ಲವನ್ನೂ ನೋಡುತ್ತ ಹೋಗುವುದರಿಂದ, ಎದುರಿನ ಪಾತ್ರಗಳ ಮನಸ್ಸಿನ ಒಳತೋಟಿ ನಮಗೆ ಸ್ಪಷ್ಟವಾಗಿ ದಕ್ಕುವುದೇ ಇಲ್ಲ. ಎಲ್ಲರೂ ನಾಯಕ ತನ್ನೊಳಗಿನ ಭ್ರಮಾವ್ಯಸನಕ್ಕೆ ತಕ್ಕಹಾಗೆ ಬಿಡಿಸಿಕೊಂಡ ಕ್ಯಾರಿಕ್ಯಾಚರ್‍ಗಳ ಹಾಗೆ ಭಾಸವಾಗುತ್ತಾರೆ. ಈ ಜಗತ್ತು, ಇಲ್ಲಿನ ಪಾತ್ರಗಳು, ಪರಿಸ್ಥಿತಿಗಳು, ಮನುಷ್ಯ ಸಂಬಂಧಗಳು ಯಾವವೂ ಈ ಜಗತ್ತಿನದು ಅನಿಸದಿರುವುದರಿಂದ ಅವುಗಳ ಜೊತೆಗೆ ನಮಗೆ ಭಾವುಕ ಸಂಬಂಧ ಸ್ಥಾಪಿತಗೊಳ್ಳುವುದೇ ಇಲ್ಲ. ಆ ಅತಿವಾಸ್ತವದ ಜಗತ್ತಿನ ಮೂಲಕವೇ, ವಾಸ್ತವ ಪ್ರಪಂಚದ ವಿವರಗಳಿಂದ ಹೇಳಲು ಸಾಧ್ಯವಾಗದ ದರ್ಶನವನ್ನು ಕಟ್ಟಿಕೊಡಲು ಸಾಧ್ಯವಾಗಿದ್ದರೆ ಒಂದು ಯಶಸ್ವಿ ಕೃತಿ ಆಗಬಹುದಿತ್ತು.
ಕಾಡಿನೊಳಗಿನ ವಿಕ್ಷಿಪ್ತ ಲೋಕ, ಕಳ್ಳ ಸಾಗಾಣಿಕೆ, ಅರಣ್ಯ ನಾಶ, ಹಣದ ದಾಹ, ವೈಯಕ್ತಿಕ ಬದುಕಿನ ದುರಂತಗಳು ಎಷ್ಟೆಲ್ಲ ಆಘಾತಗಳ ನಂತರವೂ ಬದುಕು ಕಟ್ಟಿಕೊಳ್ಳುವ ಛಲ, ವಿಜ್ಞಾನದ ಅಪಸವ್ಯಗಳು, ಪ್ರೇಮ, ಕಾಮ, ಸ್ವಾರ್ಥ-ಈ ಎಲ್ಲವೂ ಇಲ್ಲಿನ ಕಥನ ಭಿತ್ತಿಯಲ್ಲಿವೆ. ಆದರೆ ಇವೆಲ್ಲವೂ ಕೊನೆಗೂ ನಾಯಕನ ಕಣ್ಣ ಫ್ರೇಮಿನಲ್ಲಿ ಹಾದುಹೋಗುವ ಛಾಯಾ ಚಿತ್ರಗಳೋ, ಅವನ ಡೈರಿಯಲ್ಲಿನ ಎರಡು ಸಾಲುಗಳೋ ಅಷ್ಟೇ ಆಗಲು ಸಾಧ್ಯವಾಗಿವೆ. ಹಾಗಾಗಿ ಅವುಗಳಿಗೊಂದು ಸ್ವತಂತ್ರವಾದ ಸ್ಪೇಸ್ ಇಲ್ಲ. ಅದೇ ಕಾರಣಕ್ಕೆ ಅವು ಹೊಮ್ಮಿಸಬಹುದಾಗಿದ್ದ ಜೀವನದರ್ಶನವೂ ಹೊಮ್ಮಿಲ್ಲ.
ಬಲು ಎತ್ತರದಿಂದ ನೋಡಿದಾಗ ಎಲ್ಲವೂ ಮನಮೋಹಕವಾಗಿ ಕಾಣಿಸುತ್ತದೆ. ಕಾಡು ಹಸಿರ ಸೆರಗಾಗಿ ಕಾಣಿಸುತ್ತದೆ. ಮನುಷ್ಯ ಸಣ್ಣಚುಕ್ಕಿಯಾಗಿ ಕಾಣಿಸುತ್ತಾನೆ. ಹಾಗೆ ‘ಎತ್ತರದ ನೋಟ’ದಲ್ಲಿ ಕಟ್ಟಿಕೊಡಲಾದ ವಿಕ್ಷಿಪ್ತವೂ, ನಿಗೂಢವೂ ಆದ ಜಗತ್ತೊಂದು ಈ ಕಾದಂಬರಿಯಲ್ಲಿದೆ. ಆದರೆ ಎತ್ತರದಿಂದ ಕಾಣಲಾಗುವ ಸುಂದರ ಜಗತ್ತಿನೊಳಗೊಂದು ಸುತ್ತು ಹಾಕುವ, ನೀರ ಬೆಲಗಿನಲ್ಲಿ ಕಾಲುಬಿಟ್ಟು ಕೂತುಕೊಳ್ಳುವ, ಅನಾಮಿಕ ಹಕ್ಕಿಗಳ ಹಾಡಿಗೆ ಕಿವಿಯಾಗುವ, ತರಗೆಲೆಗಳ ಮೇಲೆ ಹರಿದುಹೋಗುವ ಹಾವಿಗೆ ಮೈಜುಮ್ ಅನಿಸಿಕೊಳ್ಳುವ ‘ನಿಜ’ದ ಅನುಭವ ಪ್ರಪಂಚ ತುಸು ಹಿನ್ನೆಲೆಗೆ ಸರಿದಿದೆ.
ಪುಸ್ತಕ: ಎತ್ತರ
ಲೇಖಕ: ಇಂದ್ರಕುಮಾರ್ ಎಚ್.ಬಿ.
ಪು: 530
ಬೆ: ₹500
ಪ್ರ: ಇಂಪನಾ ಪುಸ್ತಕ
ದೂ: 9986465530
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.