ರಾಯಕೊಂಡ
ಲೇ:ಕರಣಂ ಪವನ್ ಪ್ರಸಾದ್
ಪ್ರ: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ
ಮೊ: 99025 90303
***
ಕಥೆ, ಕಾದಂಬರಿಗಳೇ ಹಾಗೆ. ಕೂತಲ್ಲಿಯೇ ಹೊಸದೊಂದು ಊರು, ಕೇರಿ, ಮನೆ, ಬದುಕು, ಬವಣೆಗಳನ್ನು ಸುತ್ತಿಸಿ ಚಿಂತನೆಗೆ ಹಚ್ಚುವಂತಹ ಮಾಯಾಲೋಕ. ಬೆಂಗಳೂರಿನ ಕಾಂಕ್ರೀಟ್ ಕಾಡೊಳಗೆ ಕೂತು ‘ರಾಯಕೊಂಡ’ ಓದಿ ಮುಗಿಸಿದಾಗ ರಾಯಲಸೀಮೆಯ ಬಿರುಬಿಸಿಲು, ಕಲ್ಲುಬಂಡೆ, ಗಿಡ, ಮರ, ದೂಳು, ಬ್ರಾಹ್ಮಣರ ಮನೆ, ಬದುಕು ಎಲ್ಲವನ್ನೂ ಹೊಕ್ಕು ನೋಡಿದಂತಹ ಅನುಭವ. ಅಂದಹಾಗೆ, ರಾಯಕೊಂಡವು ಕರಣಂ ಪವನ್ ಪ್ರಸಾದ್ ಅವರ ನಾಲ್ಕನೆಯ ಕಾದಂಬರಿ.
ಕರಣಂ ಅವರದು ಕನ್ನಡದ ಓದುಗರಿಗೆ ಪರಿಚಿತ ಹೆಸರು. ಅನೇಕರು ಇವರ ಬರಹವನ್ನು ಎಸ್. ಎಲ್. ಭೈರಪ್ಪನವರ ಬರಹಕ್ಕೆ ಹೋಲಿಸುವುದುಂಟು. ಮೊದಲ ಕಾದಂಬರಿ ‘ಕರ್ಮ’ದಲ್ಲಿ ಭೈರಪ್ಪನವರ ಶೈಲಿಯ ಪ್ರಭಾವ ಕಂಡರೂ ತದನಂತರ ಬಂದ ‘ನನ್ನಿ’, ‘ಗ್ರಸ್ತ’ ಎರಡೂ ವಿಭಿನ್ನವಾಗಿದ್ದು, ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿದ್ದವು. ಭೈರಪ್ಪನವರ ಪ್ರಭಾವದಿಂದ ಹೊರಬಂದಿರುವ ಕರಣಂ, ಈಗ ತಮ್ಮದೇ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗುರುತಿಸಿಕೊಂಡಿದ್ದಾರೆ. ಹಾಗೆಯೇ ‘ರಾಯಕೊಂಡ’, ಅವರ ಮೊದಲಿನ ಮೂರೂ ಕಾದಂಬರಿಗಳಿಗಿಂತ ಭಿನ್ನವಾಗಿದೆ.
ಕಾದಂಬರಿಗಳಲ್ಲಿ ಮೊದಲು ಗಮನಕ್ಕೆ ಬರುವುದು ಕಥಾವಸ್ತು, ಮತ್ತದನ್ನು ಹೇಳುವ ರೀತಿ. ನಡುವೆ ಬರುವ ಉಪಕಥೆಗಳು, ಪಾತ್ರಗಳು ಅಥವಾ ಘಟನೆಗಳಿಗೆ ಪೂರ್ಣತೆಯಿರುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ನೋಡುವುದಾದರೆ, ಬಳಸಿಕೊಂಡ ಘಟನೆಗಳು ಸಂದರ್ಭಕ್ಕನುಸಾರವಾಗಿ ಔಚಿತ್ಯವೆನಿಸಿ ಅಂತ್ಯಗೊಂಡಿರುವುದು ಕಾದಂಬರಿಕಾರರ ಸ್ಪಷ್ಟತೆಗೆ ದ್ಯೋತಕ. ಬಂದುಹೋಗುವ ಪಾತ್ರಗಳು ಆಯಾ ಕಾಲಘಟ್ಟಕ್ಕೆ ಪೂರಕವಾಗಿವೆ. ಈ ದೃಷ್ಟಿಯಲ್ಲಿ ‘ರಾಯಕೊಂಡ’ ಒಂದು ಪೂರ್ಣ ಕಾದಂಬರಿ.
ಕರ್ನಾಟಕ ಹಾಗೂ ಆಂಧ್ರದ ಗಡಿಭಾಗದ ಊರಿನ ಬ್ರಾಹ್ಮಣ ಕುಟುಂಬವೊಂದರ ಬದುಕೇ ಇಲ್ಲಿನ ಕಥಾವಸ್ತು. ಆ ಪರಿಸರಕ್ಕೆ ಹೊಂದುವಂತೆ ಭಾಷೆಯನ್ನು ಸಮರ್ಥವಾಗಿ (ತೆಲುಗು ಮಿಶ್ರಿತ ಕನ್ನಡದ ಸಂಭಾಷಣೆಗಳು) ಬಳಸಿಕೊಳ್ಳಲಾಗಿದೆ. ಇದು ದಕ್ಷಿಣ ಭಾರತದ ಭಾಷಾ ಸೌಹಾರ್ದ ಹಾಗೂ ಗಡಿ ಭಾಗಗಳ ಜನಸಂಸ್ಕೃತಿಯ ಬಿಂಬ ಕೂಡ ಆಗಿದೆ.
ಇಲ್ಲಿ ರಾಜಕೀಯವಿದೆ, ದೈಹಿಕ ಕಾಮನೆಗಳಿಗೆ ಸಂಬಂಧಿಸಿದ ಘಟನೆಗಳಿವೆ, ಬ್ರಾಹ್ಮಣಿಕೆ ಯನ್ನೇ ಬದುಕಾಗಿಸಿ
ಕೊಂಡ ಜನ, ಜನಿವಾರವೆಂಬ ದಾರದಲ್ಲಿ ಸಮಾಜ ವನ್ನು ಕಟ್ಟಿಹಾಕುವ ಚಿತ್ರಣವಿದೆ, ನಮ್ಮ ಸಮಾಜ ಇವತ್ತಿಗೂ ವಿಚಿತ್ರವಾಗಿ ಕಾಣುವ ಸಲಿಂಗ ಸಂಬಂಧಗಳಿವೆ, ಪಾಪಪುಣ್ಯದ ತರ್ಕಗಳಿವೆ, ಎಲ್ಲದರ ಜೊತೆಗೆ ಶಾಪವೆಂಬ ವಿಚಾರವನ್ನು ಉದ್ದಕ್ಕೂ ಹಿಡಿದಿಟ್ಟುಕೊಂಡ ಕರ್ಮದ ಪರಿಕಲ್ಪನೆಯಿದೆ.
ಕಾದಂಬರಿ ಶುರುವಾಗುವುದೇ ಮದುವೆಯ ಸಂಭ್ರಮದಲ್ಲಿರುವ ಮನೆಯವರ ರಾಜಕೀಯದ ಬಗೆಗಿನ ಮಾತುಕತೆಯಿಂದ. ‘ನಾವು ಬ್ರಾಹ್ಮಣರೇ ಬಿಜೆಪಿಗೆ ಮತ ಹಾಕಲಿಲ್ಲ ಎಂದರೆ ಇನ್ಯಾರು ಹಾಕುತ್ತಾರೆ’ ಎನ್ನುವ ಮಾತಿನೊಂದಿಗೆ ಶುರುವಾಗುವ ರಾಜಕೀಯವು ಚರ್ಚೆಯ ರೂಪದಲ್ಲಿ ಪ್ರಸ್ತುತವಾದರೂ ಓದುತ್ತಾ ಹೋದಾಗ ಸಿಗುವ ಘಟನೆಗಳು, ರಾಜಕೀಯವೆಂಬುದು ಹೇಗೆ ಜಾತಿಯ ಹಿಡಿತಕ್ಕೆ ಸಿಕ್ಕಿದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತವೆ.
ಆಗಲೇ ಹೇಳಿದ ಹಾಗೆ, ಇದು ಬ್ರಾಹ್ಮಣ ಕುಟುಂಬದ ಕಥೆ. ಆ ಸಮುದಾಯದ ಹೆಣ್ಣುಗಂಡು ಮನಸ್ಸುಗಳು ವಯೋ ಸಹಜವಾದ ಕಾಮನೆಗಳಿಗೆ ಹೇಗೆ ತೆರೆದುಕೊಳ್ಳುತ್ತವೆ ಎನ್ನುವುದನ್ನು ಅರ್ಥವತ್ತಾಗಿ ಕಟ್ಟಿಕೊಡಲಾಗಿದೆ. ನಾರಾಯಣ ಭಟ್ಟನ ಸೊಸೆ ಮೀನಾಕ್ಷಿಯು ತನ್ನ ಗಂಡನ ದೈಹಿಕ ಅಶಕ್ತತೆಯ ಕಾರಣದಿಂದ ಮುಸ್ಲಿಂ ಹುಡುಗನೊಂದಿಗೆ ಸಂಬಂಧ ಬೆಳೆಸಿ ಗರ್ಭ ಧರಿಸಿ ಮಗು ಪಡೆಯುವುದು ದೈಹಿಕ ಕಾಮನೆಗಳಿಗೂ ಜಾತಿ ಜನಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದರ ಸೂಚಕ.
ಎಷ್ಟೋ ಬ್ರಾಹ್ಮಣರಿಗೆ ವ್ಯಕ್ತಿಗತವಾಗಿ ಯೋಗ್ಯತೆ ಇಲ್ಲದೆ ಬರಿ ಜನಿವಾರಕ್ಕಷ್ಟೇ ಗೌರವ ಸಲ್ಲುವುದನ್ನು ನಾರಾಯಣ ಭಟ್ಟನ ಪಾತ್ರವನ್ನು ಉಲ್ಲೇಖಿಸಿ ‘ಅವರ ಯೋಗ್ಯತೆಯೆಂದರೆ ಜನಿವಾರವಷ್ಟೇ’ ಎನ್ನುವ ಮಾತು ಸೂಚ್ಯವಾಗಿ ಹೇಳುತ್ತದೆ. ಶಕುಂತಲಾಳ ಗರ್ಭಪಾತದ ನಂತರ ಭ್ರೂಣವನ್ನು ಚರಂಡಿಗೆಸೆದು ಬಂದ ಕಿಟ್ಟಪ್ಪ, ‘ಅತ್ತೆ, ಜನಿವಾರ ಬದಲಾಯಿಸಬೇಕಾ’ ಎಂದು ಕೇಳುವುದು ಯೋಗ್ಯತೆ, ಪಾಪ, ಪುಣ್ಯ, ಕರ್ಮ, ಕಾರ್ಯಗಳನ್ನೆಲ್ಲ ಜನಿವಾರಕ್ಕಷ್ಟೇ ಅಂಟಿಸಿಕೊಳ್ಳುವ ಮನಃಸ್ಥಿತಿಯನ್ನು ತೋರುತ್ತದೆ. ‘ಬದಲಾಯಿಸುವುದರಿಂದ ಪಾಪ ಹೋಗುವುದಾದರೆ ಬದಲಾಯಿಸಬಹುದು’ ಎನ್ನುವ ಅಮ್ಮಿ ಅತ್ತೆಯ ನುಡಿ, ಈ ಚರ್ಚೆಗೊಂದು ತಾರ್ಕಿಕ ಆಯಾಮವನ್ನು ಕೊಟ್ಟಿದೆ.
ದೇವಸ್ಥಾನದ ಕಲ್ಯಾಣಿಯಲ್ಲಿ ಸತ್ತ ನಾಯಿಯ ವಿಚಾರವನ್ನು ಮುಚ್ಚಿಟ್ಟು, ಶುದ್ಧಿಗೊಳಿಸಲು ಮೇಕೆಯನ್ನು ಬಲಿ ಕೊಟ್ಟಿದ್ದ ನಾರಾಯಣ ಭಟ್ಟನ ವರ್ತನೆ ಪಾಪಪುಣ್ಯದ ಪರಿಕಲ್ಪನೆ ಕುರಿತು ಮರು ಚಿಂತಿಸುವಂತೆ ಮಾಡುತ್ತದೆ. ಮಂತ್ರ ಗೊತ್ತಿಲ್ಲದೆಯೂ ದೇವಸ್ಥಾನದ ಪೂಜಾರಿಯಾಗಿ, ಆನಂತರ ಮಂತ್ರಗಳನ್ನು ಕಲಿತು ದೊಡ್ಡ ಪುರೋಹಿತನಾಗಿ, ರಾಯಕೊಂಡದ ರಾಜಕೀಯಕ್ಕೂ ಪ್ರಮುಖ ವ್ಯಕ್ತಿಯಾಗಿ, ಅಲ್ಲಿಂದ ಆಂಧ್ರದ ರಾಜಕೀಯಕ್ಕೂ ಪರಿಚಿತನಾಗುವ ಪೆದ್ದಣ್ಣ, ಕಾದಂಬರಿಯಲ್ಲಿ ಬರುವ ಎಲ್ಲ ರಾಜಕೀಯ ವಿಚಾರಗಳಿಗೂ ಕೊಂಡಿ ಆಗುತ್ತಾನೆ.
ರಾಯಕೊಂಡದಲ್ಲಿ ಆರ್‌ಎಸ್‌ಎಸ್ ಶಾಖೆ ಆರಂಭಗೊಂಡಾಗ ಹುಟ್ಟಿಕೊಂಡ ವಿರೋಧಕ್ಕೆ ಆತ ‘ಏನೋ ಹುಡುಗರು ಅಡಿಕೊಳ್ಳುತ್ತಾರೆ’ ಎಂಬರ್ಥದಲ್ಲಿ ಸಮಾಧಾನಿಸುವುದು, ಮುಂದೆ ಪೆದ್ದಣ್ಣನ ಮೊಮ್ಮಗ ಬಿಜೆಪಿ ಪಕ್ಷದ ಕಾರ್ಯಕರ್ತನಾಗುವುದು, ತನ್ನ ಸೈಬರ್ ಸೆಂಟರ್‌ನಲ್ಲಿ ನೀಲಿಚಿತ್ರಗಳ ವ್ಯವಹಾರ ನಡೆಸಿದರೂ ಪಾರ್ಕ್‍ನಲ್ಲಿ ಭೇಟಿಯಾಗುವ ಪ್ರೇಮಿಗಳಿಗೆ ರಾಖಿ ಕಟ್ಟಿಸಿ ಸಂಸ್ಕೃತಿ ರಕ್ಷಕನ ಮುಖ ತೋರಿಸುವುದು ಇವೆಲ್ಲ ಬಹುತೇಕ ಈಗಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತವೆ.
ಬ್ರಾಹ್ಮಣರ ಮನೆಗಳಲ್ಲಿ ನಡೆಯುವ ಘಟನೆಗಳು ಮರ್ಯಾದೆಗೆ ಚ್ಯುತಿಯಾಗುವಂತಿದ್ದರೂ ಅವೆಲ್ಲ ವನ್ನೂ ಸಂಕೀರ್ಣಗೊಳಿಸಿಕೊಳ್ಳದೆ ಮುಂದೇನು ಎಂದು ಯೋಚಿಸಿ ಕಾರ್ಯತತ್ಪರರಾಗುವ ಪರಿ ಗಮನಾರ್ಹ. ಮರ್ಯಾದೆಗೇಡು ಹತ್ಯೆಯ ಮಟ್ಟಿಗೆ ಯೋಚಿಸುವ ಉಳಿದ ಸಮುದಾಯದವರು ಒರೆಹಚ್ಚಿ ನೋಡಬೇಕಾದ ಸೂಕ್ಷ್ಮ ವಿಚಾರ.
ಇಡೀ ಕಾದಂಬರಿಯು ‘ಡಾರ್ಕ್ ಹ್ಯೂಮರ್’ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಲ್ಲಲ್ಲಿ ನಿರೂಪಕರು ತಮ್ಮ ಅಭಿಪ್ರಾಯವನ್ನು ಸೂಚಿಸಿದರೂ ಬಹಳ ಸಂಯಮದಿಂದ ಅಗತ್ಯಕ್ಕಷ್ಟೇ ಅನಿಸುವಷ್ಟು ಹೇಳಿ ಕಾದಂಬರಿಯ ಘಟನೆಗಳು, ಪಾತ್ರಗಳ ಬಗೆಗಿನ ತೀರ್ಮಾನವನ್ನು ಓದುಗರಿಗೇ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಒಂದು ಉತ್ತಮ ಕಾದಂಬರಿ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.