ಇತಿಹಾಸ ಅರಿಯುವಲ್ಲಿ ಬಂಡೆಗಲ್ಲು ಚಿತ್ರ ಅಥವಾ ಪ್ರಾಗೈತಿಹಾಸಿಕ ನೆಲೆ ಪ್ರಮುಖ ಆಕರ. ಮಾತ್ರವಲ್ಲ ಚರಿತ್ರೆಯ ಅಧ್ಯಯನಕ್ಕೆ ಅದು ಬಹುವಾಗಿ ನೆರವಾಗುತ್ತದೆ. ಬಂಡೆಯ ಮೇಲಿನ ಚಿತ್ರಕಲೆ ಮಾನವ ಜೀವನ ವೃತ್ತಾಂತದ ದಾಖಲೆಯೂ ಆಗಿದೆ.ಕರ್ನಾಟಕವು ಭಾರತದಲ್ಲಿಯೇ ಅಧ್ಯಯನದ ದೃಷ್ಟಿಯಿಂದ ವಿಶೇಷ ಆಯಾಮ ಪಡೆದಿದ್ದು, ಪುರಾತತ್ವ ಲೋಕಕ್ಕೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಅದರಲ್ಲೂ ಬಂಡೆ ಚಿತ್ರಗಳ ಅಧ್ಯಯನ ಗಮನಾರ್ಹ ಎಂಬ ಲೇಖಕರ ಅಂಬೋಣ ದಿಟವೂ ಹೌದು. ಮಧ್ಯಭಾರತದಲ್ಲಿ ಹೆಚ್ಚು ಅಧ್ಯಯನಕ್ಕೆ ಒಳಗಾಗಿರುವ ಬಂಡೆ ಚಿತ್ರ ಕ್ಷೇತ್ರ ದಕ್ಷಿಣ ಭಾರತಕ್ಕೆ ಅದರಲ್ಲೂ ಕರ್ನಾಟಕದ ಮಟ್ಟಿಗೆ ತೀರಾ ಕಡಿಮೆ. ಲೇಖಕ ಮೋಹನ್ ಆರ್. ಈ ಕೊರತೆ ನೀಗಿಸುವಲ್ಲಿ ಶ್ರಮಿಸಿದ್ದಾರೆ. ಇದು ಅವರ ಚೊಚ್ಚಲ ಕೃತಿಯೂ ಹೌದು. ಸಾಕಷ್ಟು ಅಧ್ಯಯನ, ಸಂಶೋಧನೆ, ಚರ್ಚೆ, ಪರಾಮರ್ಶೆಗಳ ಕೃಷಿಗೈದು ಉತ್ತಮ ಕೃತಿ ರಚಿಸಿದ್ದಾರೆ.
ಪುಸ್ತಕ ಒಟ್ಟು ಹತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಜೊತೆಗೆ ಅನುಬಂಧಗಳು, ಕನ್ನಡ, ಇಂಗ್ಲಿಷ್ ಪರಾಮರ್ಶನ ಗ್ರಂಥಗಳು, ಲೇಖನಗಳ ಪಟ್ಟಿಯೂ ಇದೆ. ವರ್ಣಚಿತ್ರಗಳ ಪ್ರತ್ಯೇಕ ವಿಭಾಗವೇ ಇದ್ದು ಕೃತಿಯ ಅಂದವನ್ನು ಹೆಚ್ಚಿಸಿದೆ. ಆದಿಮ ಚಿತ್ರಕಲೆ ನಡೆದುಬಂದ ಹಾದಿ, ಅದಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳು, ಬಂಡೆಚಿತ್ರಗಳ ಕಾಲಮಾನದ ಸಂಕ್ಷಿಪ್ತ ಮಾಹಿತಿಯೂ ಇಲ್ಲಿದೆ.
ನಿರಂತರ ಸಂಶೋಧನೆ ಸಂಸ್ಕೃತಿ ಹಿರಿಮೆಗೆ ನಾಂದಿ ಎಂಬುದನ್ನು ಧ್ವನಿಸುತ್ತದೆ ಪುಸ್ತಕ. ಅದೆಷ್ಟೋ ಐತಿಹಾಸಿಕ ಕುರುಹುಗಳು ಗಣಿಗಾರಿಕೆ, ನಗರೀಕರಣ, ಆಧುನೀಕರಣದ ಹೊಡೆತಕ್ಕೆ ಸಿಕ್ಕು ನಾಮಾವಶೇವಾಗಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕುರುಹುಗಳ ದಾಖಲೀಕರಣ ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಅತ್ಯಂತ ತುರ್ತು ಎಂಬುದನ್ನು ಪುಸ್ತಕ ಸಾರುತ್ತದೆ. ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಇತಿಹಾಸ ಅಧ್ಯಯನ ಮಾಡುವ ಆಸಕ್ತರರು ಸೇರಿದಂತೆ ಜನಸಾಮಾನ್ಯರಿಗೂ ಉಪಯುಕ್ತ ಕೃತಿ ಹಾಗೂ ಕೈಪಿಡಿ ಎನ್ನಬಹುದು ಈಪುಸ್ತಕವನ್ನು.
***
ಕರ್ನಾಟಕದ ಆದಿಮ ಚಿತ್ರಕಲೆ
ಲೇ: ಮೋಹನ ಆರ್.
ಪ್ರ: ಇತಿಹಾಸ ದರ್ಪಣ ಪ್ರಕಾಶನ ಬೆಂಗಳೂರು
ಮೊ: 78294 04063
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.