ADVERTISEMENT

ಮೊದಲ ಮಾತು | ಸಾಂವಿಧಾನಿಕ ಆಶಯ ಮನದಟ್ಟು ಮಾಡುವ ಯತ್ನ

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2023, 0:38 IST
Last Updated 13 ಆಗಸ್ಟ್ 2023, 0:38 IST
b
b   

ರಾಜ್ಯ ಸರ್ಕಾರದ ಸಚಿವರಾಗಿರುವ ಡಾ.ಎಚ್‌.ಸಿ.ಮಹದೇವಪ್ಪನವರ ಸಾಮಾಜಿಕ–ರಾಜಕೀಯ ಅಧ್ಯಯನ, ಆಲೋಚನೆ, ನಿಲುವುಗಳ ಬರಹ ರೂಪವೇ ‘ಸಂವಿಧಾನದ ನೆರಳಲ್ಲಿ’ ಕೃತಿಯಾಗಿ ಹೊರಬಂದಿದೆ.‘ದೇಶದಲ್ಲಿ ಕೋಮುಶಕ್ತಿಗಳು ಪ್ರಜಾಪ್ರಭುತ್ವದ ಸತ್ವವನ್ನೇ ಕೊಲ್ಲುವ ಕೆಲಸ ಮಾಡುತ್ತಿರುವಾಗ ವಿಪಕ್ಷಗಳು ಹೇಗೆ ಸಂವಿಧಾನದ ಆಶಯಗಳ ಪರಿಮಿತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದು ಎಂಬ ಅನುಕರಣಾ ಮಾದರಿಯನ್ನು ತಮ್ಮ ಬರಹಗಳ ಮೂಲಕ ನೀಡಿರುವ ಈ ಪುಸ್ತಕದ ವಿಚಾರಗಳನ್ನು ಕಾಂಗ್ರೆಸ್‌ ಆದಿಯಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಎಲ್ಲ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಓದಿ ತಿಳಿದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ.

ಸಮಕಾಲೀನ ಸವಾಲುಗಳು, ಸಮಕಾಲೀನ ರಾಜಕಾರಣ, ಸಮಾಜ ಮತ್ತು ಸಾಮಾಜಿಕ ನ್ಯಾಯ, ವ್ಯಕ್ತಿತ್ವ, ಪಕ್ಷ ಮತ್ತು ರಾಜಕಾರಣ, ಪ್ರತಿಸ್ಪಂದನ ಎಂಬ ವಿಭಾಗಗಳಲ್ಲಿ ಒಟ್ಟು 116 ಲೇಖನಗಳಿವೆ. ಸಂವಿಧಾನದ ಮೂಲ ಆಶಯ, ಬಿಜೆಪಿ ಅದನ್ನು ದುರುಪಯೋಗಪಡಿಸಿಕೊಂಡಿದ್ದು, ಮತಾಂತರ ನಿಷೇಧ ಕಾಯ್ದೆಯ ಸಾಧಕ–ಬಾಧಕಗಳು, ಬಿಜೆಪಿಯ ದಲಿತ ವಿರೋಧಿ ನೀತಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ವೈಫಲ್ಯಗಳು ಸಾಕಷ್ಟು ಲೇಖನಗಳಲ್ಲಿ ಕಾಣಸಿಗುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಿಂದಿನ ಅವಧಿಯಲ್ಲಿ ನೀಡಿರುವ ಯೋಜನೆಗಳು, ಅದರ ಹಿಂದಿನ ಆಶಯಗಳ ಕುರಿತು ಕೆಲವು ಲೇಖನಗಳು ಮಾತನಾಡುತ್ತವೆ.

‘ಎಚ್‌.ಸಿ.ಮಹದೇವಪ್ಪನವರ ಈ ಪ್ರತಿಕ್ರಿಯೆ ರೂಪದ ಬರವಣಿಗೆಗಳನ್ನು ಓದಿದರೆ ಅವರಿಗೆ ಇರುವ ವಿಷಯಜ್ಞಾನ, ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆಯ ಅರಿವಾಗುತ್ತದೆ. ನ್ಯಾಯಕ್ಕೆ ಸಂಬಂಧಿಸಿದ ಮೀಸಲಾತಿ, ಭೂಸುಧಾರಣೆ, ದಲಿತ ಸಮುದಾಯದ ಅನ್ಯಾಯ–ಅಪಮಾನದ ಪ್ರಶ್ನೆಗಳು, ಹಿಂದುತ್ವದ ರಾಜಕಾರಣಕ್ಕೆ ಸಂಬಂಧಿಸಿದ ಕೋಮುವಾದ ಸೇರಿದಂತೆ ಎಲ್ಲ ಜ್ವಲಂತ ವಿಷಯಗಳಿಗೆ ಅವರು ತಕ್ಷಣ ಸ್ಪಂದಿಸಿ ಸಾರ್ವಜನಿಕ ಚರ್ಚೆಗೆ ವೇದಿಕೆ ಒದಗಿಸಿದ್ದಾರೆ’ ಎಂದು ದಿನೇಶ್‌ ಅಮಿನ್‌ ಮಟ್ಟು ಕೃತಿಯ ಕುರಿತಾಗಿ ಹೇಳುತ್ತಾರೆ.

ADVERTISEMENT

ಮಹದೇವಪ್ಪನವರ ಆಲೋಚನೆಗಳನ್ನು ರಮೇಶ್‌ ಎಚ್‌.ಕೆ. ಅವರು ಸೊಗಸಾಗಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಆಳವಾದ ಅಧ್ಯಯನದಿಂದ ಕೂಡಿದ ಸರಳವಾದ ಬರಹಗಳು ಪ್ರಸ್ತುತ ರಾಜಕಾರಣ, ನೀತಿ–ನಿಯಮಗಳ ಕುರಿತಾಗಿನ ಒಳನೋಟ ಒದಗಿಸುತ್ತವೆ. 

ಸಂವಿಧಾನದ ನೆರಳಿನಲ್ಲಿ

ಲೇ:ಡಾ.ಎಚ್‌.ಸಿ.ಮಹದೇವಪ್ಪ

ನಿ: ರಮೇಶ್‌ ಎಚ್‌.ಕೆ

ಪ್ರ: ಅಮೂಲ್ಯ ಪುಸ್ತಕ

ಪು:320

ಬೆ: 300

ಸಂ: 9448676770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.