ADVERTISEMENT

ಮೃದಂಗ ತಯಾರಕರನ್ನು ಅರಸುತ್ತ...

ಸೆಬಾಸ್ಟಿಯನ್‌ ಅಂಡ್‌ ಸನ್ಸ್‌...

ಸುಮಂಗಲಾ
Published 2 ಫೆಬ್ರುವರಿ 2020, 4:46 IST
Last Updated 2 ಫೆಬ್ರುವರಿ 2020, 4:46 IST
ಟಿ.ಎಂ. ಕೃಷ್ಣ  ಚಿತ್ರ:ಅಮರ್‌ ರಮೇಶ್‌
ಟಿ.ಎಂ. ಕೃಷ್ಣ  ಚಿತ್ರ:ಅಮರ್‌ ರಮೇಶ್‌   

ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಪ್ರಖ್ಯಾತ ಸಂಗೀತಗಾರ, ನ್ಯಾಯನಿಷ್ಠುರಿ ಮಾತುಗಾರ, ಲೇಖಕ ಟಿ.ಎಂ.ಕೃಷ್ಣ ಜಾತಿ ವ್ಯವಸ್ಥೆಯ ಕಬಂಧಬಾಹುಗಳು ಹೇಗೆ ಕಲೆಯನ್ನು ಕಟ್ಟಿಹಾಕಿವೆ ಎಂಬ ಕುರಿತು ಆಳವಾಗಿ ಚಿಂತನೆ ನಡೆಸಿರುವ ಅಪರೂಪದ ಕಲಾವಿದ. ಕಲಾಪರಿಧಿಯ ಅಂಚಿನಲ್ಲಿರುವ ಮೃದಂಗ ತಯಾರಕರ ಬದುಕು, ಒದ್ದಾಟಗಳು, ಅವರ ಸೃಜನಶೀಲತೆ, ಹಸ್ತ ಕೌಶಲದ ಬಗ್ಗೆ ಬರೆಯಬೇಕೆಂದು ಹುಡುಕಿಕೊಂಡು ಹೊರಟ ಕೃಷ್ಣ, ಎರಡು ಮೂರು ವರ್ಷ ಸುತ್ತಾಡಿ, ಅವರ ಬದುಕನ್ನು ಹತ್ತಿರದಿಂದ ಅರಿತು, ಹತ್ತಾರು ಮೂಲಗಳಿಂದ ವಿಷಯ ಸಂಗ್ರಹಿಸಿ, ಅಧ್ಯಯನ ಮಾಡಿ ‘ಸೆಬಾಸ್ಟಿಯನ್ & ಸನ್ಸ್’ ಕೃತಿಯನ್ನು ಇಂಗ್ಲಿಷ್‌ನಲ್ಲಿ ಹೊರತಂದಿದ್ದಾರೆ. ಇಂದು (ಫೆ.2ರ ಭಾನುವಾರ) ಚೆನ್ನೈನಲ್ಲಿ ಬಿಡುಗಡೆಯಾಗುತ್ತಿರುವ ಈ ಕೃತಿಯ ಒಂದು ಅಧ್ಯಾಯದ ಆಯ್ದ ಭಾಗವನ್ನು ‘ಪ್ರಜಾವಾಣಿ’ ಓದುಗರಿಗಾಗಿ ಸುಮಂಗಲಾ ಅನುವಾದಿಸಿದ್ದಾರೆ.

ಹೆಜ್ಜೆಯೂರಿದ ಹೆಣ್ಣುಮಕ್ಕಳು

ದಂಡಮುಡಿ ಸುಮತಿ ರಾಮ ಮೋಹನ ರಾವ್ ಮೃದಂಗ ಬಾರಿಸುವುದನ್ನು ಮೊದಲ ಸಲ ನೋಡಿದ್ದು ನನಗೆ ಸ್ಫುಟವಾಗಿ ನೆನಪಿದೆ. ಆಗ ಹದಿಹರೆಯದ ನಾನು ಆಕೆಯ ಕೌಶಲ ಮತ್ತು ಕೈಚಳಕ ಕಂಡು ಬೆರಗಾಗಿದ್ದೆ. ಆದರೂ ‘ಗಂಡು’ ಜಾಗದಲ್ಲಿ ಮಹಿಳೆಯೊಬ್ಬಳು ಕುಳಿತು ಅಷ್ಟು ಉಮೇದಿನಿಂದ, ಚುರುಕಾಗಿ ಬಾರಿಸುವುದನ್ನು ನೋಡುವುದು ಕಸಿವಿಸಿ ಹುಟ್ಟಿಸಿತ್ತು. ಈಕೆ ಎಷ್ಟು ಗಂಡುಬೀರಿಯಪ್ಪ ಎಂದು ನಾನು ಆಗ ಯೋಚಿಸಿದ್ದೆ. ಇದಾಗಿ ಬಹಳ ವರ್ಷಗಳ ನಂತರ ನನಗೆ ಗೊತ್ತಾಗಿದ್ದು, ಹತ್ತೊಂಬತ್ತನೇ ಶತಮಾನ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ, ದೇವದಾಸಿ ಸಮುದಾಯದ ಬಹಳಷ್ಟು ಮಹಿಳೆಯರು ಮೃದಂಗ ಬಾರಿಸುತ್ತಿದ್ದರು ಎಂದು.

ADVERTISEMENT

ದುರದೃಷ್ಟವಶಾತ್, ಇಪ್ಪತ್ತನೇ ಶತಮಾನದಲ್ಲಿ ಸಂಗೀತದ ಬ್ರಾಹ್ಮಣೀಕರಣದೊಂದಿಗೆ ಬ್ರಾಹ್ಮಣ ಪದ್ಧತಿಗಳಿಗೆ ಸಂಬಂಧಿಸಿದ ಎಲ್ಲ ನಿಷೇಧಗಳೂ ಒಳನುಸುಳಿದವು. ಪುರುಷರ ಲೋಕವೆಂದು ಪರಿಗಣಿಸಿರುವ ಇಲ್ಲಿ ಮೃದಂಗ ಕಲಾವಿದರಾಗಿ ಮಹಿಳೆಯರು ಇಂದಿಗೂ ತಮ್ಮ ಹಕ್ಕಿನ ಸ್ಥಾನಕ್ಕಾಗಿ ಹೋರಾಡಬೇಕಿದೆ. ಮೃದಂಗ-ತಯಾರಿಕೆಯೂ ಯಾವಾಗಲೂ ಪುರುಷ ನಿಯಂತ್ರಿತ ಕ್ಷೇತ್ರವಾಗಿದೆ. ಈ ಗೃಹ ಕೈಗಾರಿಕೆಯಲ್ಲಿ ಮಹಿಳೆಯರು ಸದಾ ಸಹಾಯ ಒದಗಿಸುತ್ತಲೇ ಇದ್ದಾರೆ. ಆದರೆ, ಯಾರೂ ಅವರ ಬಗ್ಗೆ ಮಾತನಾಡುವುದಿಲ್ಲ. ಅವರು ದೈಹಿಕವಾಗಿ ದಣಿಸುವ ‘ಕಲ್ಲು ಕುಟ್ಟುವ ಕೆಲಸ’ ಮಾಡುತ್ತಾರೆ ಮತ್ತು ಚರ್ಮ ಒಣಗಿಸಲು ಸಹಾಯ ಮಾಡುತ್ತಾರೆ. ಆದಾಗ್ಯೂ ಮೃದಂಗ ಮಾಡುವುದು, ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಕೆಲಸಗಳು ಹೆಣ್ಣುಮಕ್ಕಳಿಗೆ ಬಹಳ ಕಷ್ಟದ ಕೆಲಸವೆಂದೇ ಸಾಮಾನ್ಯವಾಗಿ ಪರಿಗಣಿತವಾಗಿದೆ. ಇಷ್ಟಾಗಿಯೂ ಜೀವನೋಪಾಯಕ್ಕಾಗಿ ಪುರುಷರು ಹಾಕಿದ ಎಲ್ಲೆಗಳನ್ನು ನಿರ್ಲಕ್ಷಿಸಿ, ಇದರಲ್ಲಿ ತೊಡಗಿಸಿಕೊಂಡ ಮಹಿಳೆಯರು ಕೆಲವರಿದ್ದಾರೆ.

ಚರ್ಮೋದ್ಯಮದ ರಾಣಿ

ನಾವು ಮಾಧಮ್ಮಾಳ್ ಅವರನ್ನು ಭೇಟಿಯಾದಾಗ, ಒಂದು ಪ್ರಶಾಂತ ಮುಗುಳ್ನಗು ಬೀರುತ್ತಿದ್ದ ಆಕೆ ಆತ್ಮವಿಶ್ವಾಸ ಮತ್ತು ಸಂತಸದಿಂದ ಬೀಗುತ್ತಿದ್ದಳು. ಯಾಕಿರಬಾರದು ಹೇಳಿ? ಈ ಮಹಿಳೆ ದಶಕಗಳ ಕಾಲ ಚರ್ಮ ಪೂರೈಕೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದವಳು. ಆಕೆಯ ತಂದೆ ಮತ್ತು ಅಜ್ಜ ಇದೇ ವ್ಯವಹಾರದಲ್ಲಿದ್ದರು. ತಮಿಳುನಾಡು ಮತ್ತು ಕೇರಳದ ಮೃದಂಗ ತಯಾರಕರಿಗೆ ಚರ್ಮ ಒದಗಿಸುವ ಕುಟುಂಬದ ವೃತ್ತಿಯನ್ನು ಆಕೆ ಮುಂದುವರಿಸಿದಳು. ಅವಳ ತಂದೆ ಒಳ್ಳೆಯ ಬದುಕನ್ನು ಅರಸಿ ಅಂಬೂರ್‌ಗೆ ಬಂದಾಗ ಆಕೆ ಇನ್ನೂ ಮೂರು ವರ್ಷದ ಹಸುಗೂಸು. ಆತ ತನ್ನ ಬದುಕಿನ ಹೆಜ್ಜೆಗಳಲ್ಲಿ ಮಗಳನ್ನೂ ನಡೆಸಿದ. ಆಕೆ ಏಕನಿಷ್ಠೆಯಿಂದ, ದಣಿವಿಲ್ಲದೇ ದುಡಿದಳು, ಹೊಸ ವ್ಯಾಪಾರ ಸಂಬಂಧಗಳನ್ನು ಬೆಳೆಸಿದಳು. ವ್ಯಾಪಾರವನ್ನು ವಿಸ್ತರಿಸಿ ಈಗಿರುವ ಹಂತಕ್ಕೆ ತಲುಪಿದಳು. ಬಾಳಿನ ಬಗ್ಗೆ ಯಾವುದೇ ಖೇದಗಳಿಲ್ಲದ ಹೆಣ್ಣುಮಗಳು.

‘ಚರ್ಮ ಕೊಡಲಿಕ್ಕೆ ಅಂತ ನಾನೊಬ್ಬಳೇ ಸಾಕಷ್ಟು ಊರುಗಳಿಗೆ ಹೋಗಿದೀನಿ- ಕೋಯಿಕ್ಕೋಡ್, ತಿರುಚ್ಚಿ, ಮನ್ನಾರ್‌ಗುಡಿ.. ಹೀಗೇ. ನನಗೆ ಏನೂ ತೊಂದರೆಯಾಗಲಿಲ್ಲ. ರಾತ್ರಿ ಬಸ್ಸು ಹಿಡೀತಿದ್ದೆ. ನಂಗೊಂದು ಟಿಕೆಟ್, ಚರ್ಮದ ಗಂಟಿಗೆ ಇನ್ನೊಂದು ಟಿಕೆಟ್. ಬೆಳಿಗ್ಗೆ ಐದು ಅಥವಾ ಆರಕ್ಕೆ ಅಲ್ಲಿರ್ತಿದ್ದೆ. ನನ್ನ ಕೆಲಸ ಮುಗಿಸ್ಕೊಳ್ತಿದ್ದೆ. ಅವರು ನಂಗೆ ವೆಲ್ಲೂರಿಗೆ ಟಿಕೆಟ್ ತೆಗೆಸ್ತಾ ಇದ್ರು, ಮತ್ತೆ ರಾತ್ರಿ ಹತ್ತು ಗಂಟೆಗೆಲ್ಲ ಮನೆ ಮುಟ್ತಿದ್ದೆ. ಚೆನ್ನೈಗೆ ಹೋದಾಗ ಚೆನ್ನಾಗಿರ್ತಿತ್ತು. ಅಲ್ಲಿಂದ ನೇರ ಅಂಬೂರ್‌ಗೆ ವಾಪಸು ಬರಬೋದಿತ್ತು. ನಾನು ಗಳಿಸಿದ್ದರಿಂದಲೇ ಈ ಮನೆ ತಗೊಂಡೆ. ಇದು ಒಳ್ಳೆ ವ್ಯಾಪಾರ. ರಜನೀ‌ಕಾಂತ್ (ಒಂದು ಸಿನಿಮಾದಲ್ಲಿ) ಹೇಳೋ ಹಂಗೆ, ನೀನು ತುಂಬ ಪ್ರಯತ್ನಪಟ್ಟು, ಶ್ರಮ ಹಾಕಿದ್ರೇನೇ ನಿಂಗೆ ಫಲಿತಾಂಶ ಸಿಗೋದು! ಆದರೆ ಒಂದೇ ಕೆಲಸದ ಮೇಲೆ ಮನಸ್ಸಿಟ್ಟು ಮಾಡಬೇಕು. ಅದನ್ನೂ ಮಾಡು, ಇದನ್ನೂ ಮಾಡು ಅನ್ನೋ ಹಂಗೆ ಅಲ್ಲ. ವೃತ್ತಿಯ ಬಗ್ಗೆ ನಂಗೆ ಯಾವ ದೂರೂ ಇಲ್ಲ.’

ಅಂಬೂರ್‌ಗೆ ಬಂದಿದ್ದು ಆಕೆಗೆ ತುಂಬ ಒಳ್ಳೆಯದಾಯಿತು. ಮೃದಂಗ ಮತ್ತು ತಬಲಾಗಳಿಗೆ ಚರ್ಮ ಒದಗಿಸುವ ಜೊತೆಗೇ, ಆಕೆ ಥಪ್ಪು, ಪಂಬೈ, ಉಡುಕೈ ಮತ್ತು ಇನ್ನಿತರ ವಾದ್ಯಗಳಿಗೂ ಚರ್ಮ ಒದಗಿಸಲು ಶುರು ಮಾಡಿದಳು. ‘ಬರ್ತಾ ಬರ್ತಾ ಕೆಲಸ ಹೆಚ್ಚಾಗಿದ್ದು ನಿಜ, ಈಗ ಇನ್ನೂ ಜಾಸ್ತಿಯಾಗಿದೆ’ ಎಂದಳಾಕೆ.

ಆಕೆಗೆ ಒಂದೇ ಒಂದು ಬೇಸರದ ಸಂಗತಿ ಎಂದರೆ ಈಗ ಜನರು ಮೊದಲಿನಂತೆ ಗುಣಮಟ್ಟದ ಕಡೆ ಗಮನ ಕೊಡೋದಿಲ್ಲ ಎನ್ನುವುದು. ‘ಆಗೆಲ್ಲ ಕಲಾವಿದರು ನಾದದ ಬಗ್ಗೆ ತುಂಬ ಗಮನ ಕೊಡ್ತಿದ್ದರು. ಮೊದಲೆಲ್ಲ ಎಲ್ಲವನ್ನೂ ಚರ್ಮದಿಂದ ಮಾಡ್ತಿದ್ದರು. ಈಗ ಪ್ಲಾಸ್ಟಿಕ್‍ನಿಂದ ಮಾಡ್ತಾರೆ. ಆದರೆ ಅದರ ನಾದ ಚೆನ್ನಾಗಿರೋದಿಲ್ಲ. ಈಗ ಬರೀ ಹಣವೇ ಮುಖ್ಯ. ಚರ್ಮವಾದ್ಯಗಳ ನಾದಕ್ಕೆ ಯಾವುದೂ ಸಾಟಿಯಲ್ಲ’ ಎನ್ನುವ ಮಾಧಮ್ಮಾಳ್ ಈ ಬದಲಾಗುತ್ತಿರುವ ಪೃವೃತ್ತಿಗೆ ಪ್ರಸಿದ್ಧ ಡ್ರಮ್ಮರ್ ಶಿವಮಣಿಯನ್ನು ದೂರುತ್ತಾಳೆ. ‘ಮೃದಂಗದ ವಿಚಾರದಲ್ಲಿಯೂ ಹಾಗೆಯೇ ಆದರೆ ಅಚ್ಚರಿಯೇನಿಲ್ಲ’ ಎನ್ನುತ್ತಾಳೆ. ಆಕೆಯ ಹೇಳಿಕೆ ಭವಿಷ್ಯಸೂಚಕ. ಸಿಂಥೆಟಿಕ್ ಮೃದಂಗದ ಮಾದರಿಯೊಂದನ್ನು ಈಗಾಗಲೇ ತಯಾರಿಸಿದ್ದಾರೆ. ಅಂದ ಹಾಗೆ ಇದರ ಮೇಲಿನ ಆಕರ್ಷಣೆಯು ಪ್ರಾಣಿ ಸಂರಕ್ಷಣೆಯ ಹೋರಾಟಕ್ಕಿಂತ ಇದರ ‘ಶುದ್ಧತೆ’ಯಲ್ಲಿಯೇ ಇರುವಂತೆ ತೋರುತ್ತದೆ. ಇದೇನಾದರೂ ಬಳಕೆಗೆ ಬಂದರೆ, ಕಲಾವಿದರು ಸತ್ತ ಪ್ರಾಣಿಯ, ವಿಶೇಷವಾಗಿ ಸತ್ತ ದನದ ಚರ್ಮದಿಂದ ಸಂಗೀತ ಹೊರಹೊಮ್ಮಿಸುವ ಮೈಲಿಗೆಯನ್ನು ಅಳಿಸಿಹಾಕಬಹುದು.

ಕಳೆದ ಮೂರು ವರ್ಷಗಳಿಂದ ಮಾಧಮ್ಮಾಳ್‍ಗೆ ವಯಸ್ಸು ಮನೆಯಲ್ಲಿಯೇ ಕಟ್ಟಿಹಾಕಿದೆ. ಆಕೆ ಮೊದಲಿನಂತೆ ಪ್ರಯಾಣಿಸುವುದಿಲ್ಲ. ಅಂಗಡಿಯನ್ನು ನಡೆಸುತ್ತಿರುವ ಆಕೆಯ ಮಗ ಕುಮಾರ್ ಹೋಗುತ್ತಾನೆ. ಆದರೆ ಹಳೆಯ ಗ್ರಾಹಕರು ಇನ್ನೂ ತನ್ನನ್ನು ನೆನಪಿಸಿಕೊಳ್ಳುತ್ತಾರೆ ಎನ್ನುವುದು ಆಕೆಗೆ ಖುಷಿಯ ಸಂಗತಿ.

‘ಈಗಲೂ ಅವರು ಚೆನ್ನೈಗೆ ಬನ್ನಿ ಅಂತ ಆಗೀಗ ಕರೀತಾ ಇರ್ತಾರೆ. ಚೆನ್ನೈಯಲ್ಲಿ ಇರೋರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ತಿದ್ದರು. ಚೆನ್ನೈನ ಟ್ರಿಪ್ಲಿಕೇನಿನಲ್ಲಿ ದಾವೂದ್ ಭಾಯಿ ಇದ್ದಾನೆ. ಅವಂದು ಸಂಗೀತ ವಾದ್ಯಗಳ ದೊಡ್ಡ ಅಂಗಡಿ ಇದೆ. ನಾನು ಅವನಿಗೆ ವಾದ್ಯಗಳನ್ನು, ಚರ್ಮವನ್ನು ಪೂರೈಸ್ತಿದ್ದೆ. ನಿನ್ನೆಯೂ ಅವನು ಬನ್ನಿ ಅಂತ ಫೋನಲ್ಲಿ ಹೇಳ್ತಾ ಇದ್ದ.’ ಆಕೆಗೆ ಹಣಕ್ಕಿಂತ ಗೌರವ, ಪ್ರಸಿದ್ಧಿ ಮತ್ತು ಪ್ರಾಮಾಣಿಕತೆ ಮುಖ್ಯವಾಗಿತ್ತು.

ಕುಮಾರ ಈ ಆದರ್ಶವಾದದಿಂದ ಪ್ರಭಾವಿತನಾಗಿಲ್ಲ. ‘ನಿನ್ನ ಹತ್ರ ಹಣ ಇದ್ರೇನೆ, ಜನ ಗೌರವ ಕೊಡ್ತಾರೆ’ ಎಂದು ಅವನು ಚುಚ್ಚಿದ. ಆಕೆ ಪ್ರತಿವಾದಿಸಿದಳು: ‘ನೀನು ಬರೀ ದುಡ್ಡು ಮಾಡೋ ಬಗ್ಗೆಯೇ ಚಿಂತೆ ಮಾಡಿದ್ರೆ, ಮೋಸಗಾರ, ಕಳ್ಳ ಅಂತ ಜನ ಬೈಯ್ತಾರೆ. ದಾವೂದ್ ಭಾಯಿ ಯಾಕೆ ನನ್ನ ಕರೆದ? ನನ್ನ ಹತ್ರ ಹಣ ಇದೆ ಅಂತಲ್ಲ. ಹಣ ಬರುತ್ತೆ, ಹೋಗುತ್ತೆ, ಆದರೆ ನೀನು ಗಳಿಸಿರೋ ಹೆಸರು ಯಾವಾಗ್ಲೂ ಇರುತ್ತೆ. ಆರೋಗ್ಯಂ ಕೂಡ ನನ್ನ ಕೇಳ್ತಾ ಇದ್ದ. ಜನರು ನಿನ್ನ ಕೆಲಸ ನೆನಪಿಟ್ಟುಕೋಬೇಕು, ಅದು ನಿಂಗೆ ಒಳ್ಳೇದು. ಇವನು ತಿಳ್ಕೊಳ್ಳಲ್ಲ, ಬರೀ ದುಡ್ಡು ದುಡ್ಡು ಅಂತಿರ್ತಾನೆ. ಜಯಲಲಿತಾ ಅಮ್ಮಾ ತಾನು ಮಾಡಿದ ಕೋಟಿಗಟ್ಟಲೆ ಹಣವನ್ನು ಸತ್ತ ಮೇಲೆ ತಗಂಡು ಹೋದಳಾ?’

ಒಂದು ಸಣ್ಣ ಖಂಡನೆಯೊಂದಿಗೆ ಕುಮಾರ್ ವಾಗ್ವಾದವನ್ನು ಮುಗಿಸಿದ. ‘ಅವತ್ತು ನಿಂಗೆ ಹುಷಾರಿಲ್ದೇ ಆಸ್ಪತ್ರೆಯಲ್ಲಿ ಮಲಗಿದ್ಯಲ್ಲ, ಅವಾಗ ಗೌರವ ಅಥವಾ ಪ್ರಸಿದ್ಧಿಯಿಂದ ಏನಾದ್ರೂ ಸಹಾಯ ಆಯ್ತಾ? ನೀನು ಇವನ್ನೆಲ್ಲ ಗಳಿಸಿದೀಯ ಅಂತ ನಿನ್ನನ್ನ ಉಳಿಸು ಅಂತ ಡಾಕ್ಟ್ರರಿಗ್ಯಾಕೆ ಹೇಳಲಿಲ್ಲ ಹಂಗಾರೆ?’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.