ಪೊಲೀಸರ ಕಥೆಗಳು ಕೇಳಿದಷ್ಟೂ, ಓದಿದಷ್ಟೂ ರೋಚಕ. ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಕಥನ ಒಂದೆಡೆ ತೆರೆದುಕೊಂಡರೆ ಹೇಗೆ? ಅಂತಹ ಕಥೆಯನ್ನು ಒಂದೆಡೆ ಪೇರಿಸಿಕೊಟ್ಟಿದೆ ಶಂಕರ ಬಿದರಿ ಅವರ ಆತ್ಮಚರಿತ್ರೆ ‘ಸತ್ಯಮೇವ ಜಯತೇ’.
ಪೊಲೀಸರ ಕಥೆಗಳು ಕೇಳಿದಷ್ಟೂ, ಓದಿದಷ್ಟೂ ರೋಚಕ. ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಕಥನ ಒಂದೆಡೆ ತೆರೆದುಕೊಂಡರೆ ಹೇಗೆ? ಅಂತಹ ಕಥೆಯನ್ನು ಒಂದೆಡೆ ಪೇರಿಸಿಕೊಟ್ಟಿದೆ ಶಂಕರ ಬಿದರಿ ಅವರ ಆತ್ಮಚರಿತ್ರೆ ‘ಸತ್ಯಮೇವ ಜಯತೇ’.
ಬದುಕಿನಲ್ಲಿ ಪರಿಶ್ರಮದಿಂದ ಸ್ಥಾನ, ಅಧಿಕಾರ ಪಡೆದರೂ ಅದಕ್ಕೂ ಮೀರಿದ ಆತ್ಮಗೌರವವನ್ನು ಉಳಿಸಿಕೊಳ್ಳಲೂ ಕಾನೂನು ಹೋರಾಟ ಮಾಡಬೇಕಾದ ಅನಿವಾರ್ಯ ಸನ್ನಿವೇಶ ಸೃಷ್ಟಿಸಿದ ವ್ಯವಸ್ಥೆಯ ಮುಖವನ್ನು ತೆರೆದಿಡುತ್ತಲೇ ಪೊಲೀಸ್ ಮತ್ತು ತಮ್ಮ ವೈಯಕ್ತಿಕ ಬದುಕನ್ನು ಹೇಳಿಕೊಂಡಿದ್ದಾರೆ ಬಿದರಿ ಅವರು.
42 ವರ್ಷಗಳ ಪೊಲೀಸ್ ಬದುಕಿನ ಸಾಹಸಗಾಥೆಗಳನ್ನು ಹೆಚ್ಚು ವಿವರಿಸಿದ ಈ ಕೃತಿಯನ್ನು ತಮಗಾಗಿ ಜೀವಕೊಟ್ಟು ಹುತಾತ್ಮರಾದ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಅರ್ಪಿಸಿದ್ದಾರೆ. ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಿದರಿ ಬದುಕಿನ ಹಲವು ಮಜಲುಗಳು, ಸಂಭ್ರಮ, ಸಂಕಷ್ಟಗಳು ಇಲ್ಲಿ ತೆರೆದುಕೊಂಡಿವೆ.
ಹೆಚ್ಚು ರೋಚಕತೆ ಮತ್ತು ಕುತೂಹಲಕರ ವಿಷಯಗಳಿಂದ ಕೂಡಿರುವುದು ವೀರಪ್ಪನ್ ಮತ್ತು ಅವನ ತಂಡದ ವಿರುದ್ಧದ ಕಾರ್ಯಾಚರಣೆ. ಆ ಪ್ರದೇಶದ ಚಿತ್ರಣ, ವೀರಪ್ಪನ್ ಸಹಚರರ ನಿಖರವಾದ ಸಂಖ್ಯೆಗಳು, ಅವನ ಸಹಚರರ ತಂಡವನ್ನು ದುರ್ಬಲಗೊಳಿಸಿದ ಕತೆಗಳು ಇಲ್ಲಿವೆ. ಇಷ್ಟೇ ಪ್ರಾಮುಖ್ಯವನ್ನು ಪಡೆದದ್ದು ಬಳ್ಳಾರಿ ಜಿಲ್ಲಾ ಎಸ್‌ಪಿ ಆಗಿದ್ದಾಗ ಕುಖ್ಯಾತ ಅಪರಾಧಿ ಭೀಮ್ಲಾ ನಾಯ್ಕನ ಹತ್ಯೆ ಪ್ರಕರಣ. ಇದಕ್ಕಾಗಿ ಬಿದರಿ ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಂದ ಗೌರವ ಪಡೆದ ಸಂಗತಿಯೂ ಕೃತಿಯಲ್ಲಿದೆ.ಬಾಲ್ಯ, ವಿದ್ಯಾರ್ಥಿ ಜೀವನ, ಬದುಕಿನ ವಿವಿಧ ಮಜಲುಗಳು, ಕಾನೂನು ಸುವ್ಯವಸ್ಥೆಯಲ್ಲಿ ನಿರ್ವಹಿಸಿದ ಮಹತ್ವದ ಘಟನೆ, ವೈಯಕ್ತಿಕ ಬದುಕು ಎಲ್ಲವನ್ನೂ ಹದವಾಗಿ ವಿವರಿಸಿದ್ದಾರೆ. ದೇವರು, ಧರ್ಮದ ಬಗೆಗಿನ ಅವರ ನಂಬಿಕೆಗಳು, ಅವರು ಪ್ರೀತಿಸುವ, ಪೂಜಿಸುವ ವ್ಯಕ್ತಿಗಳೂ ಈ ಕೃತಿಯಲ್ಲಿ ಹಾದು ಹೋಗಿದ್ದಾರೆ. ಗುರುಲಿಂಗ ಕಾಪಸೆ ಅವರ ಸುದೀರ್ಘ ಮುನ್ನುಡಿ ಈ ಕೃತಿಗಿದೆ. ಪೊಲೀಸ್ ಬದುಕಿನ ಸಾಧನೆಯ ಆಕಾಂಕ್ಷಿಗಳು, ಸ್ಫೂರ್ತಿ ಪಡೆಯಬಯಸುವ ಕುತೂಹಲಿಗಳು ಓದಬೇಕಾದ ಕೃತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.