ಕೃತಿ: ನನ್ನ ಹಾಡು ನನ್ನದು
ಲೇ: ಕಟ್ಟೆ ಗುರುರಾಜ್
ಪ್ರ: ಸಾವಣ್ಣ ಎಂಟರ್‌ಪ್ರೈಸಸ್ ಬೆಂಗಳೂರು
ಸಂ: 90363 12786
***
ಮೇರು ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಸಾಕಷ್ಟು ಸಂಗತಿಗಳನ್ನು ಅಲ್ಲಿ ಇಲ್ಲಿ ಕೇಳಿ, ಓದಿ ತಿಳಿದಿರಬಹುದು. ಆದರೆ, ಅವರೊಂದಿಗೆ ಒಡನಾಡಿದವರ ಬಾಯಲ್ಲೇ ಕೇಳಿದರೆ ಅಂತಹ ಅನುಭವಗಳು ಹೇಗಿರಬಹುದು?
ಅಂಥದ್ದೊಂದು ಪ್ರಯತ್ನ ಈ ಕೃತಿಯಲ್ಲಿ ಆಗಿದೆ. ಅಪರೂಪದ ಘಟನೆ, ಸಂಗತಿಗಳನ್ನು ಸಂಕಲಿಸಿ ಇಲ್ಲಿ ದಾಖಲಿಸಲಾಗಿದೆ. ಬಾಲಸುಬ್ರಹ್ಮಣ್ಯಂ ಅವರನ್ನು ಸಂಗೀತ, ವಿಜ್ಞಾನ, ಆಯುರ್ವೇದ, ಮನಃಶಾಸ್ತ್ರ ಹೀಗೆ ಎಲ್ಲ ನೆಲೆಯಲ್ಲಿಟ್ಟು ನೋಡುವ ಪ್ರಯತ್ನ ಇಲ್ಲಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ.
ನಾಲ್ಕು ವಿಭಾಗಗಳಿರುವ (ಬಾಲು ಬದುಕು, ಬಾಲು ಗಾನಕ್ರಿಯಾ ಕೌತುಕ, ನಮ್ಮ ಪ್ರೀತಿಯ ಬಾಲು ಹಾಡುಗಳು ಮತ್ತು ಬಾಲು ಬಂಧ) ಈ ಕೃತಿಯಲ್ಲಿ ಬಾಲು ಅವರ ಪ್ರೀತಿಯ ಹಾಡುಗಳ ಕುರಿತು ಸಂಗೀತ ಕ್ಷೇತ್ರದ ಖ್ಯಾತನಾಮ ಒಡನಾಡಿಗಳು ಬರೆದಿದ್ದಾರೆ. ಕೊನೆಯಲ್ಲಿ ಅವರೊಂದಿಗೆ ಲೇಖಕರೇ ನಡೆಸಿದ ಸುದೀರ್ಘವಾದ ಹಾಗೂ ಅಪರೂಪದ ಸಂದರ್ಶನವೂ ಇದೆ. ಪಾಂಡಿತ್ಯದ ಮೇರು ಶಿಖರವಾದರೂ ಪಾಮರನಂತೆ ಬದುಕಿದ್ದ ಬಾಲು ಎಂಬ ಸಂಗೀತ ವಿಶ್ವವನ್ನು ಆಸಕ್ತರಿಗೆ, ಅಭಿಮಾನಿಗಳಿಗೆ ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ. ಬಾಲು ಮೇಲಿನ ಗೌರವ, ಪ್ರೀತಿ ಮತ್ತು ಒಳನೋಟ ಅರಿಯುವ ಕುತೂಹಲಿಗಳಿಗೆ ಓದಿಸಿಕೊಂಡು ಹೋಗುವ ಕೃತಿ ಇದಾಗಿದೆ. ಬಾಲು ಅವರ ವ್ಯಕ್ತಿತ್ವದ ನಾನಾ ಮಗ್ಗಲುಗಳನ್ನು ಪರಿಚಯಿಸುವ ಜತೆಗೆ ಗಾಯಕನಾಗಿ ಅವರು ಏರಿದ ಎತ್ತರವನ್ನು, ಅದಕ್ಕೆ ಕಾರಣವಾದ ಅವರ ಪರಿಶ್ರಮದ ಕಥೆಯನ್ನು ಕಟ್ಟಿಕೊಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.