ಕಲ್ಲಿದ್ದಿಲಿನಂತೆ ಕಿಡಿ ಸೋಕಿದ ಕೂಡಲೇ ಧಗಧಗಿಸುವ ಧರ್ಮದ್ವೇಷವೆಂಬ ಉರಿಗೆ ಸರ್ವಜನಾಂಗದ ಶಾಂತಿಯ ಉದ್ಯಾನ ಮತ್ತೆಮತ್ತೆ ಸುಟ್ಟು ಕರಕಲಾಗುತ್ತಿದೆ. ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ಶಾಂತಿಯ ತೋಟದಲ್ಲಿ ಕೋಮು ಸೌಹಾರ್ದ ಕದಡುವ ಸರಣಿ ಘಟನೆಗಳು ಕಳೆದೊಂದು ವರ್ಷದಲ್ಲಿ ಹೆಚ್ಚಾಗಿ ನಡೆದಿವೆ. ಈ ಕಿಡಿಯಲ್ಲಿ ಗಳ ಹಿರಿಯುವವರೂ, ಚಳಿ ಕಾಯಿಸಿಕೊಳ್ಳುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ ಸಾಮರಸ್ಯ ಬದುಕಿನ ಅನಾವರಣಕ್ಕೂ ಹಲವರು ಪ್ರಯತ್ನಿಸಿದ್ದಾರೆ. ಸಾಮರಸ್ಯ ಬದುಕಿನ ನಿದರ್ಶನಗಳನ್ನು ಹೊರೆಕಟ್ಟಿ ಮುನ್ನೆಲೆಗೆ ತಂದ ಚಂದ್ರಕಾಂತ ವಡ್ಡು ಅವರದೂ ಅಂತಹ ಪ್ರಯತ್ನಗಳಲ್ಲಿ ಒಂದಾಗಿದೆ.
ಕೃತಿಗೆ ‘ಸೌಹಾರ್ದ ಕರ್ನಾಟಕ’ ಎಂಬ ಶೀರ್ಷಿಕೆಯನ್ನೇ ಮೊದಲು ಅಂತಿಮಗೊಳಿಸಿ ಸಾಮರಸ್ಯ ಬದುಕಿನ ಲೇಖನಗಳಿಗೆ ಆಹ್ವಾನ ನೀಡಿದ್ದೆ ಎಂದು ವಡ್ಡು ಅವರು ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. ಅವರ ಮಿಂಚಂಚೆ ಪೆಟ್ಟಿಗೆ ತುಂಬಿದ ಮೇಲೆ ಎರಡು ಸಂಪುಟದಲ್ಲಿ ಈ ಹೊತ್ತಿಗೆಯನ್ನು ತರುವ ನಿರ್ಧಾರಕ್ಕೆ ಬರುತ್ತಾರೆ. ಹೀಗೆ ಮೂಡಿಬಂದಿದ್ದು ಈ ಕೃತಿ. ಮೊದಲ ಹೊತ್ತಿಗೆ ಸಿದ್ಧವಾಗುತ್ತಿದ್ದಂತೆ ಮತ್ತೊಂದಿಷ್ಟು ಲೇಖಕರ ಅನುಭವದ ಸರಣಿಯನ್ನು ವಡ್ಡು ಅವರು ಎರಡನೇ ಸಂಪುಟದ ಮೂಲಕ ಓದುಗರ ಎದುರಿಗಿರಿಸಲು ಕಾರ್ಯ ಆರಂಭಿಸಿದ್ದಾರೆ.
ಮೊದಲ ಸಂಪುಟದಲ್ಲಿ 49 ಲೇಖಕರ ಬರಹಗಳ ಗುಚ್ಛವಿದೆ. ಈ ಬರಹಗಳಲ್ಲಿ ಯಾವುದೇ ಉಪದೇಶವಿಲ್ಲ, ವಿಶ್ಲೇಷಣೆ ಇಲ್ಲ. ಇವು ಸಾಮರಸ್ಯದ ಬದುಕನ್ನು ನೆನಪಿಸುವ ಘಟನೆಗಳ ಅನುಭವದ ಗುಚ್ಛ. ಉಸ್ಮಾನ್ ಸಾಬ್‌ನನ್ನು ತಾಯಿಯ ತಮ್ಮನ ರೂಪದಲ್ಲಿ ಕಂಡ ಮಲ್ಲಿಕಾರ್ಜುನಪ್ಪ, ಅನಾಥ ರಮೇಶನ ಧರ್ಮ ಬದಲಾಯಿಸದೆ, ಹೆತ್ತತಾಯಿಯಂತೆಯೇ ಸಲಹಿದ ಮುಸ್ಲಿಂ ತಾಯಿ, ರೈಲಿನ ಇಸ್ಮಾಯಿಲ್–ಮಾಧವರ ಖರ್ಜೂರ–ಚುರುಮುರಿಯ ಪಯಣ, ಯಾವುದೇ ‘ವಾರು’ ಇಲ್ಲದೆ ಜಾನುವಾರುಗಳ ರಕ್ಷಣೆ ಮಾಡುತ್ತಿದ್ದ ಉಳ್ಳಾಲದ ದರ್ಗಾ ಹಾಗೂ ಕುಂಬಳೆಯ ಗೋಪಾಲಕೃಷ್ಣನ ನೆನಪು ಹೀಗೆ ವೈಯಕ್ತಿಕವಾಗಿ ಅನುಭವಿಸಿದ ಸಾಮರಸ್ಯದ ಅನುಭಾವದ ಸಂಕಲನವಿದು. ಗ್ರಾಮದೇವತೆಗಳ ಆರಾಧನೆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಇಂದಿಗೂ ಕಾಣಸಿಗುವ ಕೋಮು ಸೌಹಾರ್ದದ ಅಕ್ಷರರೂಪದ ಚಿತ್ರಣಗಳೂ ಇಲ್ಲಿವೆ.
ರಾಜ್ಯದ ಮೂಲೆಮೂಲೆಯ, ಸರ್ವಜನಾಂಗದ ಜನ, ತೋರಣ ಕಟ್ಟಿ ಎಳೆದ ಸೌಹಾರ್ದದ ತೇರಿನಂತೆ ಈ ಕೃತಿ ಕಂಗೊಳಿಸುತ್ತದೆ. ರಹಮತ್ ತರೀಕೆರೆ, ನಾಗೇಶ ಹೆಗಡೆ, ಓ.ಎಲ್. ನಾಗಭೂಷಣಸ್ವಾಮಿ, ಸಿದ್ಧನಗೌಡ ಪಾಟೀಲ ಅವರಂತಹ ಹಿರಿಯರ ಬರಹಗಳೂ ಇಲ್ಲಿವೆ. ಹಿಂದೂ–ಮುಸ್ಲಿಂ ಭಾವೈಕ್ಯದ ತಂತೇ ಎಲ್ಲ ಲೇಖನಗಳ ಜೀವಾಳವಾಗಿದೆ. ಇಲ್ಲಿನ ಕೆಲವು ಪ್ರಸಂಗಗಳ ಉಲ್ಲೇಖ ನೋಡಿದಾಗ ಮತ್ತೆ ಅಂತಹ ದಿನಗಳು ಬರಬಾರದೆ ಎಂದು ಮನಸ್ಸು ಹಾತೊರೆಯುವಂತೆ ಆಗುತ್ತದೆ.
‘ಸಾಮಾನ್ಯ ಜನರು ಕೂಡ ಇತ್ತೀಚೆಗೆ ಕೋಮುವಾದಿಗಳ ಹುಸಿ ತರ್ಕಸರಣಿಗೆ ಮನಸೋಲುತ್ತಿರುವುದು ಮಾತ್ರ ಗಂಡಾಂತರದ ಮುನ್ಸೂಚನೆ’ ಎಂದು ಮುನ್ನುಡಿಯಲ್ಲಿ ವಡ್ಡು ಅವರು ಉಲ್ಲೇಖಿಸುತ್ತಾರೆ. ನಮಗರಿಯದಂತೆಯೇ ನಮ್ಮ ನಡುವಿದ್ದ ಸಾಮರಸ್ಯದ ಬದುಕು, ಸಂಘರ್ಷದ ಸಣ್ಣ ಕಿಡಿಗೆ ಜ್ವಾಲೆಯಾಗಿ ನಮ್ಮನ್ನೇ ಸುಡುತ್ತಿರುವುದು ಅಣಕಿಸುವಂತಿದೆ. ಇಂಥ ಸಂದರ್ಭದಲ್ಲಿ ಇಲ್ಲಿನ ಅಕ್ಷರಗಳು ಸುಡುವ ಎದೆಗಿಳಿದರೆ ಜ್ವಾಲೆ ತಣ್ಣಗಾಗಬಹುದು ಎನಿಸುವುದು ಸುಳ್ಳಲ್ಲ.
ಕೃತಿ: ಸೌಹಾರ್ದ ಕರ್ನಾಟಕ
ಸಂ:ಚಂದ್ರಕಾತ ವಡ್ಡು
ಪ್ರ: ಅಂಕುರ ಪ್ರಕಾಶನ, ಬೆಂಗಳೂರು
ಸಂ: 9448520414
ಪುಟ: 204
ದರ: 200
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.