‘ಬರ್ತೀಯಾ?... ಎಷ್ಟು?’ ಪುಸ್ತಕದ ಶೀರ್ಷಿಕೆ ಮತ್ತು ‘ಭಾರತೀಯ ಸೂಳೆಲೋಕದ ಕಥೆಗಳು’ ಎನ್ನುವ ಅಡಿ ಟಿಪ್ಪಣಿಯನ್ನು ನೋಡಿ ಓದುಗನೊಬ್ಬ ಕುತೂಹಲದಿಂದ ಪುಸ್ತಕ ಕೈಗೆತ್ತಿಕೊಂಡರೆ, ಅದರ ಪರಿಣಾಮ ವೇದನೆಯೇ ಆಗಿರುತ್ತದೆ. ಇಲ್ಲಿನ ಇಪ್ಪತ್ತೊಂದು ಕಥೆಗಳು ಓದುಗನ ಮನಸನ್ನು ಕಲ್ಲವಿಲಗೊಳಿಸುವುದು ಮಾತ್ರವಲ್ಲ, ಆ ಲೋಕದಲ್ಲಿ ನಿನ್ನ ಪಾತ್ರವೇನು ಎನ್ನುವ ಆತ್ಮವಿಮರ್ಶೆಗೂ ಒತ್ತಾಯಿಸುವಷ್ಟು ಪ್ರಖರವಾಗಿವೆ.
ರುಚಿರಾ ಗುಪ್ತ ಅವರು ಸಂಪಾದಿಸಿರುವ ಇಂಗ್ಲಿಷ್ ಕೃತಿಯನ್ನು ಸುಕನ್ಯಾ ಕನಾರಳ್ಳಿ ‘ಬರ್ತೀಯಾ?... ಎಷ್ಟು?’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಕಮಲಾದಾಸ್, ಸಾದತ್ ಹಸನ್ ಮಂಟೋ, ಪ್ರೇಮ್‌ಚಂದ್, ಇಂದಿರಾ ಗೋಸ್ವಾಮಿ, ಕಮಲೇಶ್ವರ್, ಅಮೃತಾ ಪ್ರೀತಮ್, ಇಸ್ಮತ್ ಚುಗ್ತಾಯಿ, ಕನ್ನಡದ ನಿರಂಜನ (‘ಕೊನೆಯ ಗಿರಾಕಿ’) ಸೇರಿದಂತೆ ವಿವಿಧ ಭಾಷೆಗಳ ಲೇಖಕರ ಕಥನಗಳು ಇಲ್ಲಿವೆ. ಲೇಖಕರು ಬೇರೆಯಾದರೂ ಎಲ್ಲ ಕಥನಗಳಲ್ಲಿನ ಭಾಷೆ ಒಂದೇ – ನೋವಿನದು, ತಲ್ಲಣದ್ದು. ಈ ನೋವಿನ ಭಾಷೆಗೆ ಉದಾಹರಣೆಯಾಗಿ ಕಮಲಾದಾಸ್‌ರ ‘ಎಳೆಯ ಸೂಳೆಗೊಂದು ಗೊಂಬೆ’ ಕಥೆಯನ್ನು ನೋಡಬಹುದು. ವೇಶ್ಯಾಗೃಹಗಳ ನಡುವಣ ಸ್ಪರ್ಧೆ, ಆ ಮನೆಗಳಲ್ಲಿನ ಕತ್ತಲೆ–ಬೆಳಕು, ಭಾವನೆಗಳ ಸಂಘರ್ಷಗಳನ್ನು ಕಥೆ ಕೊಂಚ ವಾಚ್ಯದ ದನಿಯಲ್ಲಿಯೇ ಚಿತ್ರಿಸುತ್ತದೆ. ವೇಶ್ಯಾಗೃಹವನ್ನು ಪ್ರವೇಶಿಸಿದ ಬಾಲಕಿಯೊಬ್ಬಳ ಕಣ್ಣುಗಳ ಮೂಲಕ ಮೈಮಾರಾಟದ ವ್ಯಾಪಾರವನ್ನು, ಆ ವ್ಯಾಪಾರದ ನಡುವೆಯೂ ಉಳಿದಿರುವ ಅಂತಃಕರಣವನ್ನು ಕಥೆ ಚಿತ್ರಿಸುತ್ತದೆ. ಬೊಂಬೆಗೂ ಬೊಂಬೆಯಂತಹ ಬಾಲಕಿಗೂ ಹೆಚ್ಚಿನ ವ್ಯತ್ಯಾಸವಿಲ್ಲದ, ಎಳೆಯ ಹುಡುಗಿಯರನ್ನು ಬಯಸುವ ಪೊಲೀಸ್ ಇನ್‌ಸ್ಪೆಕ್ಟರ್ ಕೊನೆಗೆ ತನ್ನ ಮನಸ್ಸಿನಾಳದ ಕಾಮನೆಯನ್ನೇ ಕಳೆದುಕೊಳ್ಳುವ, ದಂಧೆಯ ನಡುವೆ ಪ್ರೇಮ ಸುಳಿದಾಡುವ, ತಲೆಮಾರುಗಳ ನಡುವಿನ ತಲ್ಲಣಗಳನ್ನು ಚಿತ್ರಿಸುವ – ಹೀಗೆ ಹಲವು ಎಳೆಗಳನ್ನು ಕೂಡಿಸಿಕೊಂಡಿರುವ ಕಥೆ, ನಿಟ್ಟುಸಿರುಗಳ ಜೀವಂತ ಸಂಕಲನವೊಂದನ್ನು ಓದುಗನಿಗೆ ದಾಟಿಸಲು ಹವಣಿಸುವಂತಿದೆ.
ಬಾಬುರಾವ್ ಬಗೂಲ್ ಅವರ ‘ಬೀದಿಹೆಣ್ಣು’, ಕರುಳಕುಡಿಯನ್ನು ಉಳಿಸಿಕೊಳ್ಳಲು ಹಂಬಲಿಸುವ ತಾಯಿಯೊಬ್ಬಳು ಆ ಪ್ರಯತ್ನದಲ್ಲಿಯೇ ತನ್ನ ಮೈ–ಮನಸುಗಳನ್ನು ದಹಿಸಿಕೊಳ್ಳುವ ಕಥೆ. ಮಾನವೀಯತೆಯನ್ನು ಕಳೆದುಕೊಂಡ ಇಡೀ ವ್ಯವಸ್ಥೆಯೇ ಪಶುವಿನ ರೂಪ ತಾಳಿರುವುದನ್ನು ಚಿತ್ರಿಸುವ ಕಥೆ, ಮಗು–ತಾಯಿ ಇಬ್ಬರೂ ಉಳಿದಿಲ್ಲ ಎನ್ನುವ ದಾರುಣ ಸತ್ಯದೊಂದಿಗೆ ಕೊನೆಗೊಳ್ಳುತ್ತದೆ. ಅಮ್ಮ ಹಾಗೂ ಮಗು ವಾಸಿಸಲಿಕ್ಕೆ ಈ ಜಗತ್ತು ಯೋಗ್ಯವಾಗಿಲ್ಲ ಎನ್ನುವ ಸೂಚನೆಯನ್ನೂ ಕಥೆ ಓದುಗರ ಮುಂದಿಡುತ್ತದೆ.
ಸಂಕಲನದಲ್ಲಿಯೇ ಅತ್ಯಂತ ಭಿನ್ನವಾದ ಕಥೆ ವಿಭೂತಿಭೂಷಣ್ ಬಂದ್ಯೋಪಾಧ್ಯಾಯ್ ಅವರ ‘ಹೀಂಗ್–ಕೊಚೂರಿ’. ಕೋಲ್ಕತ್ತಾದಲ್ಲಿ ನಡೆಯುವ ಈ ಕಥೆ, ಕುಸುಮ್ ಎನ್ನುವ ಹೆಣ್ಣು ಹಾಗೂ ಆಕೆಯ ನೆರೆಯ ಕುಲೀನ ಕುಟುಂಬದ ಮಗುವಿನ ವಾತ್ಸಲ್ಯದ ಕಥೆ. ಅಮ್ಮ ಬೇಡವೆಂದ ಮನೆಗೆ ಕದ್ದುಮುಚ್ಚಿ ಹೋಗಿಬರುವ ಬಾಲಕನಿಗೆ, ಕುಸುಮ್‌ಳ ಮನೆಗೆ ಬರುವ ‘ಬಾಬು’ ತಂದುಕೊಡುವ ‘ಹೀಂಗ್–ಕೊಚೂರಿ’ ತಿನಿಸಿನ ಬಗ್ಗೆ ಇನ್ನಿಲ್ಲದ ಆಕರ್ಷಣೆ. ಮಗುವಿನ ಮುಗ್ಧತೆ, ಕುಸುಮ್‌ಳ ವಾತ್ಸಲ್ಯ, ಹಿಂಗ್ ಕೊಚೊರಿಯ ಸ್ವಾದ – ಇವೆಲ್ಲವೂ ಕಟ್ಟಿಕೊಡುವ ಮಾನವೀಯ ವಾತಾವರಣದಲ್ಲಿ, ಅಲ್ಲಿ ನಡೆಯುವ ವೇಶ್ಯಾವೃತ್ತಿ ತೀರಾ ನಗಣ್ಯವಾಗಿ ಕಾಣಿಸುತ್ತದೆ. ಕಥೆಯ ಕೊನೆಯಲ್ಲಿ, ಬಾಲ್ಯದ ನೆನಪಿನ ಪರಿಮಳದ ಬೆನ್ನತ್ತಿ ತನ್ನನ್ನು ಹುಡುಕಿಕೊಂಡು ಬರುವ ಬ್ರಾಹ್ಮಣ ಹುಡುಗನಿಗೆ ಮುದುಕಿಯಾದ ಕುಸುಮ್ ‘ಹೀಂಗ್–ಕೊಚೂರಿ’ ತಂದುಕೊಡುತ್ತಾಳೆ. ರೆಡ್‌ಲೈಟ್ ಏರಿಯಾದೊಂದಿಗೆ ಮನುಷ್ಯಲೋಕವನ್ನೂ ಕಥೆ ಕಾಣಿಸುತ್ತದೆ. ಹುಡುಗನ ಅಮಾಯಕತೆ ಅಥವಾ ಒಳ್ಳೆಯತನದೊಂದಿಗೆ ವೇಶ್ಯೆಯೊಬ್ಬಳ ವ್ಯಕ್ತಿತ್ವದ ಘನತೆಯನ್ನೂ ‘ಹೀಂಗ್–ಕೊಚೂರಿ’ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.
ಕಮಲೇಶ್ವರ್ ಅವರ ‘ಮಾಂಸದ ನದಿ’ ಸಂಕಲನದ ಮತ್ತೊಂದು ಉತ್ತಮ ಕಥೆ. ‘ಹೀಂಗ್–ಕೊಚೊರಿ’ಯಂತೆಯೇ ಈ ಕಥೆಯೂ ವೇಶ್ಯೆಯರ ಬದುಕಿನ ಬೇರೊಂದು ಸಾಧ್ಯತೆಯನ್ನು ಕಾಣಿಸಲು ಪ್ರಯತ್ನಿಸುತ್ತದೆ. ಜುಗನೂ ಎನ್ನುವ ಹೆಣ್ಣು ಹಾಗೂ ಆಕೆಯ ಬದುಕಿನಲ್ಲಿ ಎದುರಾಗುವ ಗಿರಾಕಿಗಳ ಈ ಕಥೆಯಲ್ಲಿ, ಕಾರ್ಮಿಕ ಚಳವಳಿಯ ಸಣ್ಣ ಎಳೆಯೊಂದು ಇಣುಕಿ ಮರೆಯಾಗುತ್ತದೆ. ಮೈ ಕಸುವಿನ ಜೊತೆಗೆ ಆರೋಗ್ಯವನ್ನೂ ಕಳೆದುಕೊಂಡ ಜುಗನೂ, ತೊಡೆಯಲ್ಲಿ ಎದ್ದ ಕುರದ ನಡುವೆಯೂ ಗಿರಾಕಿಗಳನ್ನು ನಿಭಾಯಿಸುತ್ತಾಳೆ. ದೇಹದ ನೋವನ್ನು ಹೇಗಾದರೂ ಸಹಿಸಿಕೊಳ್ಳುವ ಆಕೆ, ತನ್ನ ಆಪ್ತ ಗಿರಾಕಿಯೊಬ್ಬನ ನಿಷ್ಠೆ ಬದಲಾದಾಗ ತಲ್ಲಣಕ್ಕೆ ಒಳಗಾಗುವುದರೊಂದಿಗೆ ಕಥೆ ಕೊನೆಗೊಳ್ಳುತ್ತದೆ. ಕ್ರೌರ್ಯವನ್ನು ಅತ್ಯಂತ ತಣ್ಣಗೆ ಚಿತ್ರಿಸುವ ‘ಮಾಂಸದ ನದಿ’, ಕ್ರೌರ್ಯದ ನಡುವೆಯೂ ರೂಪುಗೊಂಡಿರಬಹುದಾದ ಪ್ರೇಮದ ಅನುಭೂತಿಯೊಂದನ್ನು ಕಾಣಿಸುತ್ತದೆ.
ಕೆಲವು ಕಥೆಗಳು ಒರಟಾಗಿ, ತುಸು ವಾಚ್ಯವಾಗಿ ಕಾಣಿಸಿದರೂ – ಇವು ಹೇಳಲು ಹೊರಟಿರುವ ವಿಷಯವೇ ಅಷ್ಟು ರೂಕ್ಷವಾದುದು ಎನ್ನುವುದನ್ನು ಮರೆಯಬಾರದು. ಸಂಕಲನದ ಎಲ್ಲ ಕಥೆಗಳೂ ಸಂತ್ರಸ್ತೆಯರ ನೋವನ್ನು ಮೊಗೆದುಕೊಡುವ ಪ್ರಯತ್ನಗಳೇ ಆಗಿವೆ. ಕಾಮವ್ಯಾಪಾರದ ಕಥನಗಳಾದರೂ ಇಲ್ಲಿನ ಯಾವ ಕಥೆಯೂ ಯಾವ ಕ್ಷಣದಲ್ಲೂ ಓದುಗ ಮೈಮರೆಯಲು ಅವಕಾಶ ಕಲ್ಪಿಸುವುದಿಲ್ಲ ಎನ್ನುವುದಕ್ಕೆ, ಈ ಕಥೆಗಳ ಮಾನವೀಯ ಜಗತ್ತಿನ ಘನತೆಯ ಕನವರಿಕೆಯೇ ಕಾರಣವಾಗಿದೆ.
ಸುಕನ್ಯಾ ಅವರ ಅನುವಾದಿತ ಕಥೆಗಳನ್ನು ಓದುವಾಗ ಬೇಡ ಬೇಡವೆಂದರೂ ಕರ್ನಾಟಕದ ವರ್ತಮಾನ ಕಣ್ಣೆದುರು ಸುಳಿಯುತ್ತದೆ. ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಕಾಲೇಜಿನವರೇ ಆದ ಐವರು ವಿದ್ಯಾರ್ಥಿಗಳು ಅತ್ಯಾಚಾರ ಮಾಡಿರುವ ಘಟನೆ ಒಂದೆಡೆಯಾದರೆ, ಅಧಿಕಾರ–ಹಣದ ಲಾಲಸೆಯಲ್ಲಿ ಕರ್ನಾಟಕದ ರಾಜಕಾರಣ ಸಂಪೂರ್ಣ ಬೆತ್ತಲಾಗಿ ನಿರ್ಲಜ್ಜೆಯಿಂದ ನಿಂತಿರುವ ಸನ್ನಿವೇಶ ಮತ್ತೊಂದೆಡೆ. ನಾವು ಬದುಕುತ್ತಿರುವ ಸಾಮಾಜಿಕ ಸಂದರ್ಭ ಎಂತಹದ್ದು ಎನ್ನುವುದನ್ನು ಸೂಚಿಸುವಂತಿರುವ ಈ ಎರಡು ಸನ್ನಿವೇಶಗಳ ಚಿತ್ರಣದ ರೂಪದಲ್ಲಿ ‘ಬರ್ತೀಯಾ?...’ ಕೃತಿಯನ್ನು ಓದಿಕೊಳ್ಳಲಿಕ್ಕೆ ಸಾಧ್ಯವಿದೆ. ಈ ಕೃತಿಯ ಶೀರ್ಷಿಕೆಯ ಅಡಿ ಟಿಪ್ಪಣಿಯನ್ನು ‘ಕರ್ನಾಟಕ ರಾಜಕಾರಣದ ಕಥನಗಳು’ ಅಥವಾ ‘ಸಮಕಾಲೀನ ಕರ್ನಾಟಕದ ಕಥನಗಳು’ ಎಂದು ಓದಿಕೊಂಡರೂ ಕಥನದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಸಮಾಜದ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ, ಸುಕನ್ಯಾ ಅವರು ಅತೀವ ಕಾಳಜಿಯಿಂದ ಕನ್ನಡಕ್ಕೆ ತಂದಿರುವ ‘ಭಾರತೀಯ ಸೂಳೆಲೋಕದ ಕಥೆಗಳು’ ಕೃತಿ, ವಿಷದಿಂದಲೇ ರೂಪುಗೊಂಡ ಪ್ರತಿರೋಧದ ಲಸಿಕೆಯಂತೆ ಕಾಣಿಸುತ್ತದೆ. ಕನ್ನಡದ ಯುವ ತಲೆಮಾರು ಓದಲೇಬೇಕಾದ ಕೃತಿಯಿದು.
ಬರ್ತೀಯಾ?... ಎಷ್ಟು?
ಸಂ: ರುಚಿರಾ ಗುಪ್ತ; ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ
ಪ್ರ: ವಸಂತ ಪ್ರಕಾಶನ, ಬೆಂಗಳೂರು.
ದೂ:080– 22443996
ಪು: 304; ಬೆ: ₹ 240
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.