ADVERTISEMENT

ಮೊದಲ ಓದು: ಮೊಗಳ್ಳಿ ಗಣೇಶರ ಮೂರು ಕೃತಿಗಳು

ಪ್ರಜಾವಾಣಿ ವಿಶೇಷ
Published 21 ಜುಲೈ 2024, 0:03 IST
Last Updated 21 ಜುಲೈ 2024, 0:03 IST
ಮೊಗಳ್ಳಿ ಗಣೇಶ ಕೃತಿಗಳು
ಮೊಗಳ್ಳಿ ಗಣೇಶ ಕೃತಿಗಳು   

ಮೊಗಳ್ಳಿ ಗಣೇಶ ಅವರ ಮೂರು ಕೃತಿಗಳು ಹೊರಬಂದಿವೆ. ನಾನೆಂಬುದು ಕಿಂಚಿತ್ತು (ಆತ್ಮಕಥನ); ಅಲ್ಲಿ ಯಾರೂ ಇಲ್ಲ (ಗಪದ್ಯ ಕಾದಂಬರಿ); ಹೊಕ್ಕಳು ಕಾದಂಬರಿ.

ಕಥಾಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಮೊಗಳ್ಳಿ ಗಣೇಶ ಅವರು ಆತ್ಮಕಥನವನ್ನೂ ಕತೆಗಾರರಂತೆ ನಿರೂಪಿಸುತ್ತ ಹೋಗಿದ್ದಾರೆ. ಬರೆಹ ನಿರುದ್ವಿಗ್ನವಾಗಿದ್ದರೂ, ಓದುಗರಿಗೆ ಆಗಾಗ ನಿಟ್ಟುಸಿರು ಮೂಡಿಸುವಂತೆ, ಹಣೆಗಂಟು ಹಾಕುವಂತೆ, ಅರಿವಿಲ್ಲದೇ ಲೊಚಗುಟ್ಟುವಂತೆ, ಕಣ್ಣೀರ ಪಸೆ ಒರೆಸಿಕೊಳ್ಳುವಂತೆ ಮಾಡುತ್ತದೆ.

ಬಾಲ್ಯದಲ್ಲಿ ಉಂಡ ಅಪ್ಪನ ಕ್ರೋಧ, ಆಕ್ರೋಶ, ಪ್ರೀತಿಗಾಗಿ ತಹತಹಿಸಿದ್ದು, ಬದಲಿಗೆ ಸಿಕ್ಕಿದ್ದು ಬರೀ ಅವಮಾನ. ಇಂಥ ಅಪಾರ ಸಿಟ್ಟು ಸೆಡವುಗಳ ನಡುವೆ, ಅಪಮಾನಗಳ ಹುದುಲೊಳಗೆ ಕಳೆದುಹೋಗಬಹುದಾದ ಹುಡುಗನಿಗೆ ಕಾದಿದ್ದು ಪ್ರೀತಿಯೆಂಬ ಹುಲುಕಡ್ಡಿಯೇ. ತಾತನ ಮುಚ್ಚಟೆ, ಚಿಕ್ಕಪ್ಪನ ಪ್ರೀತಿಯ ಬಿಸುಪು, ಓದಿನಲ್ಲಿ ಮುಂದಿರುವ ವಿಶ್ವಾಸ ಇವೆಲ್ಲ ಕೈ ಹಿಡಿದು ನಡೆಸುತ್ತವೆ. 

ADVERTISEMENT

ಪ್ರೇಮಪತ್ರಗಳು, ನೋವಿನ ಧ್ವನಿಯಾಗಿ ಬದಲಾದ ಬಗೆ, ನೋವಿನ ಧ್ವನಿಗೆ ಬಂಡಾಯ ಮತ್ತು ಕ್ರಾಂತಿಯ ಕಾವನ್ನು ಕೊಟ್ಟ ಸ್ನೇಹಿತರು, ಅಮಿತವಾದ ಓದು, ಅವರೊಳಗಿನ ಚಿಂತನ ಮಥನಗಳು ನಾವು ನೋಡಿರುವ ಕತೆಗಾರನ ಹಿಂದಿನ ಕತೆಯನ್ನು ಅರಹುತ್ತ ಹೋಗುತ್ತವೆ. ಹತಾಶೆಯಿಂದ ಆರಂಭವಾಗುವ ಆತ್ಮಕಥನದಲ್ಲಿ ನಿರೂಪಕರಾಗಿಯೇ ಬದುಕನ್ನು ನೋಡುತ್ತ ಹೋಗುತ್ತಾರೆ. ಓದುಗರಿಗೆ ಕಾಣಿಸುತ್ತ ಹೋಗುತ್ತಾರೆ. ತಾಯಿಯ ನಿಟ್ಟುಸಿರಿಗೆ ಸಮರ್ಪಿಸಿದ ಈ ಕೃತಿ ಜಾತಿ ಪದ್ಧತಿ, ಮೇಲರಿಮೆ, ಕೀಳರಿಮೆಗಳ ಸುತ್ತ ಮಾತಾಡುತ್ತಲೇ ತಾವು ಅದನ್ನೆಲ್ಲವನ್ನೂ ಮೀರಿರುವ ಬಗ್ಗೆ ತಣ್ಣಗೆ ಹೇಳುತ್ತಾರೆ. ಓದಿಸಿಕೊಂಡು ಹೋಗುವ, ತಾಯಿಯೊಂದಿಗೆ ನಮ್ಮ ನಿಟ್ಟುಸಿರುಗಳನ್ನೂ ಬೆಸೆಯುವ ಕೃತಿಯಾಗಿದೆ.

ಗಪದ್ಯ ಕಾದಂಬರಿ ಎಂಬ ಅಡಿಟಿಪ್ಪಣಿಯೊಂದಿಗೆ ಪ್ರಕಟವಾಗಿರುವ ‘ಅಲ್ಲಿ ಯಾರೂ ಇಲ್ಲ’ ಕೃತಿಯು (ಪುಟ 340, ಬೆಲೆ ₹375) ವಿಶೇಷ ಕಥನವಾಗಿದೆ. ಕಾವ್ಯದ ಭಾಷೆಯನ್ನು ಸಿದ್ಧಿಸಿಕೊಂಡಿರುವ ಲೇಖಕರಿಗೆ ಇಲ್ಲಿ ಹೇಳಬಹುದಾದ ಎಲ್ಲವನ್ನೂ ಕಾವ್ಯಾತ್ಮಕವಾಗಿ ಹೇಳುತ್ತಲೇ ಪರಸ್ಪರ ಒಂದು ಬೆಸುಗೆ ಹಾಕುತ್ತ ಹೋಗುತ್ತಾರೆ. ಕೃತಿಯ ವಿಶೇಷವೆಂದರೆ ಇವೆಲ್ಲವೂ ಒಂದಕ್ಕೆ ಒಂದು ಕೊಂಡಿಯಂತೆ ಇದ್ದರೂ ಪರಸ್ಪರ ಪ್ರತ್ಯೇಕತೆಯನ್ನೂ ಕಾದುಕೊಳ್ಳುತ್ತವೆ. ಹಾಗಿದ್ದಾಗಲೂ ತಣ್ಣಗೆ ಒಂದು ಕತೆಯೂ ಈ ಕಾವ್ಯದೊಂದಿಗೆ ಹರಿಯುತ್ತಲೇ ಹೋಗುತ್ತದೆ. ಇದು ಯಾರದ್ದಾದರೂ ಆಗಿರಬಹುದಾದ ಕತೆ, ಯಾರಿಗಾದರೂ ಹೊಸೆಯುವಂಥ ಕೃತಿ. ವಿಭಿನ್ನ ಮತ್ತು ಸೋಜಿಗದ ಓದು. ವಿರಾಮವನ್ನು ಬೇಡುವ ಕೃತಿ. ಒಂದೇ ಗುಕ್ಕಿನಲ್ಲಿ ಓದುವಂಥದ್ದಲ್ಲ.

ಕಾವ್ಯದ ಭಾಷೆಯಲ್ಲಿಯೇ ಕತೆ ಹೇಳುವುದು ಲೇಖಕರ ವೈಶಿಷ್ಟ್ಯವಾಗಿದೆ. ಅವರ ‘ಹೊಕ್ಕುಳು’ ಕೃತಿ (₹360) ಓದುವಾಗ ಈ ಗುಣದ ದಟ್ಟ ಅನುಭವವಾಗುತ್ತದೆ. ಅವರ ಆತ್ಮಕಥನದ ನೆರಳಿನಂತಿದೆಯೇ ಎಂಬ ಅನುಮಾನ ಕಾಡುವಾಗಲೇ ಲೇಖಕರು ಈ ಪಾತ್ರಗಳು ತಮ್ಮ ಜೀವನದ ಪಾತ್ರಗಳೆಂದು ಹೇಳುತ್ತಾರೆ. ಆದರೆ ಮಹಿಳೆಯರ ಬದುಕಿನಲ್ಲಿ ಹಾಸುಹೊಕ್ಕಿರುವ ಕ್ರೌರ್ಯ, ಅದನ್ನು ಅನುಭವಿಸಿ, ದಕ್ಕಿಸಿಕೊಂಡು ಅವನ್ನು ಅನುಭವಿಸುತ್ತಲೇ ಅನುಭಾವಿಯಾಗಿ ಬದಲಾಗುವ ಪಾತ್ರಗಳು ಅವುಗಳ ಅಧ್ಯಾಯದ ಹೆಸರುಗಳಂತೆಯೇ ಉಸಿರು ಒಂದು, ಎರಡು ಎಂಬ ನಿಡಿದಾದ ಉಸಿರನ್ನು ಹೊರಹೊಮ್ಮಿಸುತ್ತವೆ.

ಗಂಡುಮಕ್ಕಳ ಅಹಮಿಕೆಯನ್ನು ಓಲೈಸುವ ಹೆಣ್ಣುಮಕ್ಕಳು, ಇನ್ನೊಂದು ಮಹಿಳೆಯ ಕ್ರೌರ್ಯವನ್ನು ಮೌನವಾಗಿ ನೋಡುವ ತಣ್ಣಗಿನ ಕ್ರೌರ್ಯವನ್ನು ಮತ್ತಷ್ಟು ಹೃದಯವನ್ನು ವಿಹ್ವಲಗೊಳಿಸುತ್ತದೆ. 

ಮೂರೂ ಕೃತಿಗಳನ್ನು ಒಟ್ಟಿಗೆ ಓದಿದರೂ, ಪ್ರತ್ಯೇಕವಾಗಿ ಓದಿದರೂ ಅವಮಾನಗಳನ್ನೂ, ಕ್ರೌರ್ಯವನ್ನೂ ಉಣಬಡಿಸಿದ ಸಮಾಜದಲ್ಲಿ ಲೇಖಕ ಬೆಳೆದು ಬಂದ ಬಗೆಯನ್ನು ಸಶಕ್ತವಾಗಿ ಹಿಡಿದಿಡಲಾಗಿದೆ. ಈ ಮೂರು ಕೃತಿಗಳನ್ನು ಸಾಹಿತ್ಯಾಸಕ್ತರು ಖಂಡಿತ ಗಮನಿಸಬಹುದು.

ನಾನೆಂಬುದು ಕಿಂಚಿತ್ತು ಅಲ್ಲಿ ಯಾರೂ ಇಲ್ಲ ಹೊಕ್ಕುಳು ಲೇ: ಮೊಗಳ್ಳಿ ಗಣೇಶ ಪ್ರ: ದೇಸಿ ಪ್ರಕಾಶನ ಸಂ: 94484 39998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.