ನವದೆಹಲಿ: ಬಾಂಗ್ಲಾದೇಶ ಹುಟ್ಟಿಗೆ ಕಾರಣವಾದ ಬೊಲ್ಶೆವಿಕ್ ಕ್ರಾಂತಿ, ಭಾರತಕ್ಕೆ ಕಾಶ್ಮೀರ ಸೇರ್ಪಡೆ ಹಾಗೂ ಒಸಾಮಾ ಬಿನ್ ಲಾಡೆನ್‌ನ ಅಂತ್ಯ... ಹೀಗೆ ಹಲವು ಐತಿಹಾಸಿಕ ಘಟನಾ ವಸ್ತುಗಳನ್ನು ಒಳಗೊಂಡ ತಮ್ಮ ಚೊಚ್ಚಲ ಕಾದಂಬರಿ ‘ದಿ ಪೋಟ್ರೇಟ್ ಆಫ್ ಸೀಕ್ರೆಟ್’ ಕಾದಂಬರಿಯನ್ನು ಕ್ರೀಡಾ ಕ್ಷೇತ್ರದ ಉದ್ಯಮಿ ತರುಣ್ ಮೆಹರಿಷಿ ರಚಿಸಿದ್ದು, ಪೆಂಗ್ವಿನ್ ಪ್ರಕಾಶನ ಕೃತಿಯನ್ನು ಹೊರತಂದಿದೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಜಗತ್ತಿನ ಸುಪ್ರಸಿದ್ಧ ಕಲಾವಿದ ರಷ್ಯಾದ ನಿಖೊಲಸ್ ರೋರಿಚ್ ಅವರ ಎರಡು ಪ್ರಸಿದ್ಧ ಪೇಯಿಂಟಿಂಗ್‌ಗಳ ಹಿಂದಿನ ಕಥೆಯೇ ಈ ಕೃತಿಯ ಕಥಾ ವಸ್ತು. ಅದರಲ್ಲಿ ಬೇಹುಗಾರಿಕಾ ಸಂಸ್ಥೆಗಳಾದ ಭಾರತದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ), ಪಾಕಿಸ್ತಾನದ ಐಎಸ್‌ಐ ಹಾಗೂ ಅಮೆರಿಕದ ಸಿಐಎಗಳ ನಡುವಿನ ಜಾಗತಿಕ ಮಟ್ಟದ ರಾಜಕೀಯದ ವಿಷಯ ಅಡಗಿರುವುದು ಈಗ ಓದುಗರಲ್ಲಿ ಕುತೂಹಲ ಮೂಡಿಸಿದೆ.
ಇದು ಇತಿಹಾಸವೂ ಹೌದು ಹಾಗೂ ಕಾಲ್ಪನಿಕವೂ ಹೌದು ಎನ್ನುವುದು ಮೆಹರಿಷಿ ಅವರ ಹೇಳಿಕೆ. ವಿಷಯದ ಆಳಕ್ಕಿಳಿದು ಕಾಲಚಕ್ರದಲ್ಲಿ ಗತಿಸಿದ ಎಲ್ಲಾ ಘಟನೆಗಳನ್ನೂ ದಾಖಲಿಸದೇ, ನಡೆದ ಘಟನೆಗಳನ್ನೇ ಬಳಸಿಕೊಂಡು ಕಾದರಂಬರಿಯ ಸ್ವರೂಪವನ್ನು ನೀಡುವ ಪ್ರಯತ್ನ ಮಾಡಿದ್ದೇನೆ’ ಎಂದಿದ್ದಾರೆ.
ಕ್ರೀಡಾ ಉತ್ಪನ್ನಗಳ ಉದ್ಯಮದಲ್ಲಿರುವ ನನಗೆ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚು ಸಮಯಾವಕಾಶ ಸಿಕ್ಕಿತು. ಉದ್ಯಮ ಸ್ಥಗಿತಗೊಂಡಿತು. ಆಗ ಬಹುಕಾಲದಿಂದ ತಲೆಯಲ್ಲಿ ಕೊರೆಯುತ್ತಿದ್ದ ಒಂದು ಅಂಶದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಯಿತು. ಮೊದಲ ಲಾಕ್‌ಡೌನ್‌ನಲ್ಲಿ ಕಥೆ ಸರಾಗವಾಗಿ ಸಾಗಿತು. ಹೀಗಾಗಿ ಕೆಲಸಕ್ಕೆ ಮರಳುವ ಮೊದಲೇ ಧಾವಂತದಲ್ಲಿ ಕಾದರಂಬರಿ ಪೂರ್ಣಗೊಳಿಸುವ ಸಾಹಸಕ್ಕೆ ಕೈಹಾಕಿದೆ’ ಎಂದು ಕಾದಂಬರಿ ಹಿಂದಿನ ಘಟನೆಯನ್ನು ಮೆಹರಿಷಿ ಮೆಲುಕು ಹಾಕಿದ್ದಾರೆ.
‘ಸುಮಾರು ₹400 ಕೋಟಿ ಮೊತ್ತದ ಎರಡು ಪೇಯಿಂಟಿಂಗ್‌ಗಳು ಸರ್ಕಾರಿ ಕೃಷಿ ಸಂಶೋಧನಾ ಕೇಂದ್ರದಿಂದ ಕಳುವಾದ ಕುರಿತು ಐಎಎಸ್ ಅಧಿಕಾರಿ ಕಮಲ್ ಪತ್ತೆ ಮಾಡಿದರು. ಅದೇ ಸಂದರ್ಭದಲ್ಲಿ ಭಯೋತ್ಪಾದಕ ಗುಂಪೊಂದು ಭಾರತದ ಮೇಲೆ ಪರಮಾಣು ದಾಳಿಗೆ ಸಿದ್ಧತೆ ನಡೆಸಿದ್ದನ್ನು ಭಾರತೀಯ ಬೇಹುಗಾರಿಕಾ ಸಂಸ್ಥೆಯು ಐಎಸ್‌ಐನಲ್ಲಿದ್ದ ತನ್ನ ಮೂಲಗಳಿಂದ ಮಾಹಿತಿ ಪಡೆದಿತ್ತು. ಕಮಲ್ ಅವರು ಕಳವಾದ ಪೇಯಿಂಟಿಂಗ್ ಅನ್ನು ಮರಳಿ ಪಡೆಯುವುದು ಹೇಗೆ ಎಂದು ದಾರಿ ಹುಡುಕುತ್ತಿದ್ದರು. ಆದರೆ ಹೀಗೆ ಮಾರಾಟವಾದ ಪೇಯಿಂಟಿಂಗ್ ಭಯೋತ್ಪಾದನಾ ಕೃತ್ಯಕ್ಕೆ ಬಳಕೆಯಾಗುತ್ತಿರುವ ಮಾಹಿತಿಯನ್ನು ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಪತ್ತೆ ಮಾಡಿದ್ದರು. ಈ ಅಂಶಗಳು ‘ದಿ ಪೋಟ್ರೇಟ್ ಆಫ್ ಎ ಸೀಕ್ರೇಟ್’ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ತರುಣ್ ಹೇಳಿದ್ದಾರೆ.
‘ಈ ಎಲ್ಲಾ ಘಟನೆಗಳು ನಡೆಯುವ ಹೊತ್ತಿಗೆ ಭಾರತೀಯ ಸಿನಿಮಾ ಹಾಗೂ ದೇಶ ವಿಭಜನೆ ಹೊತ್ತಿಸಿದ ಬೆಂಕಿಯಲ್ಲಿ ಬೂದಿಯಾದ ರಹಸ್ಯವನ್ನು ಈ ಪೇಯಿಂಟಿಂಗ್ ಬಹಿರಂಗಗೊಳಿಸಿತು. ಅದು ಜಾಗತಿಕಮಟ್ಟದ ರಾಜಕೀಯದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು’ ಎಂದು ಹೇಳಿದ ತರುಣ್, ಸಿನಿಮಾ ಮಾಡುವ ಸಲುವಾಗಿ ಈ ಕಾದರಂಬರಿಯನ್ನು ಬರೆದಿಲ್ಲ. ಆದರೆ ಕಾದರಂಬರಿ ಓದಿದ ಹಲವರು ಇದನ್ನು ಸಿನಿಮಾ ಅಥವಾ ಒಟಿಟಿ ಸರಣಿ ಮಾಡಬಹುದು ಎಂದು ಸಲಹೆ ನೀಡಿದ್ದಾರೆ ಎಂದಿದ್ದಾರೆ.
‘ಸಿನಿಮಾ ಹಕ್ಕು ಕೂಡಾ ಮಾರಾಟವಾಗಿದೆ. ಆದರೆ ಈ ಸಂದರ್ಭದಲ್ಲಿ ಖರೀದಿಸಿದವರು ಯಾರು ಎಂಬುದನ್ನು ಬಹಿರಂಗಪಡಿಸಲಾಗದು. ಮೂವರು ನಿರ್ಮಾಪಕರು ಈ ಸಿನಿಮಾ ತಯಾರಿಕೆಯಲ್ಲಿ ತೊಡಗಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.