ADVERTISEMENT

ಮಕ್ಕಳ ಮನದೊಂದಿಗೆ ಅನುಸಂಧಾನ ಪರ್ವ

ಹಂದೆಯವರಿಗೆ ಎಂಭತ್ತಮೂರು, ಮೇಳಕ್ಕೆ ನಲವತ್ತಮೂರು

ನಾ.ಕಾರಂತ ಪೆರಾಜೆ
Published 11 ಆಗಸ್ಟ್ 2018, 13:25 IST
Last Updated 11 ಆಗಸ್ಟ್ 2018, 13:25 IST
   

ಕೋಟ ಶ್ರೀಧರ ಹಂದೆಯವರಿಗೆ ‘ವನಜ ರಂಗಮನೆ ಪ್ರಶಸ್ತಿ’ಯ ಆಮಂತ್ರಣವನ್ನು ಸನ್ಮಿತ್ರ ಜೀವನ್‍ರಾಂ ನೀಡಿದ್ದರು. ಆಪ್ತ ವಿನ್ಯಾಸದ ಕರೆಯೋಲೆಯನ್ನು ಓದಿ ಮುಗಿಸುತ್ತಿದ್ದಂತೆ ಹಂದೆಯವರ ಭಾಷಣವೊಂದರ ನೆನಪುಗಳು ಅಟ್ಟಿಸಿಕೊಂಡು ಬಂದುವು. ವಾರದ ಹಿಂದೆಯಷ್ಟೇ ಕಣ್ತಪ್ಪಿ, ಮತ್ತೆ ಪತ್ತೆಯಾದ ಹದಿನೆಂಟು ವರುಷಗಳ ಹಿಂದಿನ ಲೇಖನವೊಂದು ಕಣ್ಣಿಗೆ ಬಿತ್ತು. ಇರಲಿ ಎಂದು ತೆಗೆದಿಟ್ಟ ಪತ್ರಿಕಾ ತುಣುಕು ಫೈಲಿನೊಳಗಿಂದ ಇಣುಕಿತು!

2004 ಫೆಬ್ರವರಿ 15ರಂದು ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಯಕ್ಷಗಾನ ಸಮ್ಮೇಳನ ನಡೆದಿತ್ತು. ‘ಯಕ್ಷಕಲಾ ಭಾರತಿ – ಮಕ್ಕಳ ಯಕ್ಷಗಾನ ಕೇಂದ್ರ’ದ ಆಯೋಜನೆ. ಮೂರು ವಿಚಾರಗೋಷ್ಠಿಗಳಿದ್ದುವು. ಯಕ್ಷಗಾನದಲ್ಲಿ ಮಕ್ಕಳ ಮೇಳದ ಅನುಭವ ಗಾಥೆಯನ್ನು ಹಂದೆಯವರು ಪ್ರಸ್ತುತ ಪಡಿಸಿದ್ದರು. ಸುಮಾರು ಮುಕ್ಕಾಲು ಗಂಟೆ ಮಕ್ಕಳ ಮೇಳವೊಂದರ ನಿರ್ವಹಣೆಯ ಸುಖ, ಸವಾಲುಗಳನ್ನು ಎಳೆಎಳೆಯಾಗಿ ಬಿಡಿಸಿದ್ದರು. ಉತ್ತಮ ಸಂವಾದವೂ ನಡೆದಿತ್ತು. ಅಂದು ಯಾವ ವಿಚಾರಗಳು ಅವರ ಮನದೊಳಗಿತ್ತೋ ಇಂದು ಕೂಡಾ ಅದರಲ್ಲಿ ರಾಜಿಯಿಲ್ಲ!

ನಮ್ಮ ಸುತ್ತಮುತ್ತ ಮಕ್ಕಳ ಮೇಳ, ತಂಡಗಳಿವೆ. ಹೆತ್ತವರಿಗೂ ಒಲವು ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ. ಬಹುತೇಕ ತಂಡಗಳು ವೃತ್ತಿ ರಂಗಭೂಮಿಯ ಯಥಾಪ್ರತಿ. ಅದೇ ಕುಣಿತ, ಅದೇ ಸಂಭಾಷಣೆ, ಅದೇ ರಂಗವಿನ್ಯಾಸ. ಶ್ರೀಧರ ಹಂದೆಯವರ ನೇತೃತ್ವದ ಸಾಲಿಗ್ರಾಮ ಮಕ್ಕಳ ಮೇಳದ ಪ್ರದರ್ಶನವನ್ನು ಹಲವು ಬಾರಿ ನೋಡಿದ್ದೇನೆ. ಅದು ವೃತ್ತಿ ರಂಗಭೂಮಿಯ ಛಾಯಾಪ್ರತಿಯಲ್ಲ. ಯಾವುದೇ ಗಿಮಿಕ್‍ಗಳನ್ನು ತುರುಕಿಸಿಲ್ಲ. ಯಕ್ಷಗಾನದ ಸೊಬಗನ್ನು ಮಕ್ಕಳ ಮೂಲಕ ಅನಾವರಣಗೊಳಿಸುತ್ತಾ ಬಂದಿರುವ ಹಂದೆಯವರ ಶ್ರಮವು ದೇಶವಲ್ಲ, ವಿದೇಶದಲ್ಲೂ ಮಾತಿನ ವಿಚಾರ. ಸರಿ, ಅಂದು ಉಪ್ಪಳದಲ್ಲಿ ಯಕ್ಷಗಾನ ಸಮ್ಮೇಳನ ನಡೆದಿತ್ತಲ್ಲಾ. ಅಂದಿನ ಅವರ ವಿಚಾರ ಪ್ರಸ್ತುತಿಯ ಸಾರವನ್ನೊಮ್ಮೆ ನೋಡೋಣ :
“ಮಕ್ಕಳ ತಂಡದ ರೂಪೀಕರಣವು ಒಂದು ನಿರಂತರ ಕ್ರಿಯೆ. ಇಲ್ಲಿ ಸಂಚಾಲಕನೇ ನಿರ್ದೇಶಕ. ಅವನ ಸಾಮಥ್ರ್ಯ ಮತ್ತು ತ್ಯಾಗದಲ್ಲಿ ತಂಡದ ಯಶಸ್ಸು ಅಡಗಿದೆ. ಮಕ್ಕಳ ಮನಸ್ಸು ಬಾಲ್ಯಸಹಜ ಆಸಕ್ತಿಗಳತ್ತ ವಾಲುತ್ತದೆ. ಮಗುವಿಗಿಂತಲೂ ಹೆತ್ತವರಿಗೆ ಯಕ್ಷಗಾನದ ಆಸಕ್ತಿ ಮೂಡುತ್ತಿರಬೇಕು. ಅವರಿಗೆ ಆಸಕ್ತಿ ಇಲ್ಲದಿದ್ದರೆ ಮಕ್ಕಳು ಯಕ್ಷಗಾನದಲ್ಲಿ ಬೆಳೆಯಲು ಕಷ್ಟ. ತಂಡವನ್ನು ಮುನ್ನಡೆಸುವಲ್ಲಿ ನಿರ್ದೇಶಕನ ಪಾಡು ಕಣ್ಣಿಗೆ ಕಾಣದು.”

ADVERTISEMENT

“ತಂಡಕ್ಕೆ ಸೇರಿದ ಒಬ್ಬ ವಿದ್ಯಾರ್ಥಿಯು ತರಬೇತಿ ಕೊನೆಯಾಗುವಾಗ ದೈಹಿಕವಾಗಿ ಬೆಳೆದಿರುತ್ತಾನೆ. ಕೋಮಲ ಸ್ವರ ಗಡುಸಾಗಿರುತ್ತದೆ. ಕೃಷ್ಣನ ಪಾತ್ರಕ್ಕೆ ತಯಾರಾದ ಹುಡುಗ

ಬಲರಾಮ ಪಾತ್ರಧಾರಿಗಿಂತಲೂ ಎತ್ತರಕ್ಕೆ ಬೆಳೆಯುತ್ತಾನೆ. ಸ್ತ್ರೀವೇಷಕ್ಕೆ ರೂಪುಗೊಂಡವನ ಕಂಠ ಮಾಧುರ್ಯವು ಪ್ರದರ್ಶನದ ಹೊತ್ತಿಗೆ ಗಡುಸಾಗುತ್ತದೆ! ತಂಡದಲ್ಲಿ ಎಲ್ಲಾ ಮಕ್ಕಳೂ ಎಲ್ಲಾ ಪಾತ್ರಗಳನ್ನು ನಿಭಾಯಿಸುವಷ್ಟು ತಯಾರಿರಬೇಕು. ಒಬ್ಬ ಗೈರುಹಾಜರಾದರೂ ಪ್ರದರ್ಶನಕ್ಕೆ ತೊಡಕಾಗಬಾರದು.”

“ಮಕ್ಕಳ ತಂಡದಿಂದ ಏನು ಪ್ರಯೋಜನ? ಕೆಲವರು ಪ್ರಶ್ನಿಸುವುದಿದೆ. ಯಕ್ಷಗಾನದಿಂದ ಮಕ್ಕಳಲ್ಲಿ ಸ್ವಂತಿಗೆ, ಸಹಬಾಳ್ವೆ, ಶಿಸ್ತು, ಸಮಯಪ್ರಜ್ಞೆ ಬೆಳೆಯುತ್ತದೆ. ಪುರಾಣ ವಿಚಾರಗಳನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಮುಂದೆ ಅವರು ಕಲಾವಿದರಾಗದಿರಬಹುದು. ಆದರೆ ಯಕ್ಷಗಾನದ ಸಹೃದಯಿ ಪ್ರೇಕ್ಷಕರಾಗುವುದು ಖಂಡಿತ.” ಎಂದಿದ್ದರು. ಒಬ್ಬ ಗುರುವಿನಲ್ಲಿ ಇಂತಹ ಸೂಕ್ಷ್ಮ ವಿಚಾರಗಳು ನಿತ್ಯ ಎಚ್ಚರ ಸ್ಥಿತಿಯಲ್ಲಿದ್ದರೆ ತಂಡಗಳು ಅಲುಗಾಡದೆ ಗಟ್ಟಿಯಾಗಿರುತ್ತದೆ. ಹಂದೆಯವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದುದರಿಂದ ಮಕ್ಕಳ ಮನಸ್ಸಿನೊಂದಿಗೆ ಅನುಸಂಧಾನ ಮಾಡಲು ಸಾಧ್ಯವಾಯಿತು.

ಶ್ರೀಧರ ಹಂದೆಯವರ ಕಾಯಕವನ್ನು ಎರಡು ದಶಕಗಳಿಂದ ಕೇಳುತ್ತಾ ಬಂದಿದ್ದೇನೆ. ಯಕ್ಷಗಾನ ರಂಗದ ಅವರ ದೂರದೃಷ್ಟಿಯ ಯೋಚನೆಯಲ್ಲಿ ಬಡಗು ತಿಟ್ಟಿನ ಸಮಗ್ರತೆಯ ಕಲ್ಪನೆಯನ್ನು ಕಂಡಿದ್ದೇನೆ. ವರ್ತಮಾನ ಮತ್ತು ಭೂತ ಕಾಲದಲ್ಲಿ ಆಗಿ ಹೋದ ಕಲಾವಿದರ ಕಲಾಭಿಜ್ಞತೆಯ ನೆನಪು ಹಂದೆಯವರಲ್ಲಿದೆ. ಬಹುಶಃ ಅವರ ರಂಗ ಎಚ್ಚರದ ಜೀವಂತಿಕೆಗೆ ಹಿರಿಯರ ಒಡನಾಟಗಳೂ ಕಾರಣವಾಗಿದೆ. ಬಹುಶಃ ಮೂರು ವರುಷಗಳ ಹಿಂದೆ ಉಡುಪಿಯ ಕಲಾರಂಗವು ‘ಬಣ್ಣದ ಬಿನ್ನಾಣ’ ಎನ್ನುವ ವಿಶಿಷ್ಟ ಕಲಾಪವನ್ನು ಆಯೋಜಿಸಿತ್ತು. ಬಣ್ಣದ ವೇಷಗಳ ಸೊಬಗಿನ ವರ್ಣವೈಭವದ ಕಾರ್ಯಕ್ರಮ. ಅಂದು ರಂಗದ ಬಗೆಗಿನ ಅವರ ವಿಷಾದದ ಮಾತುಗಳು ಮರೆಯುವಂತಹುದಲ್ಲ.

ಮುಖ್ಯವಾಗಿ ಬಡಗು ತಿಟ್ಟಿನ ಬಣ್ಣದ ವೇಷಧಾರಿಗಳಿಗೆ ಹಂದೆಯವರು ದನಿಯಾಗಿದ್ದರು -“ಉಪ್ಪರಳ್ಳಿ ಶೇಷ ಎನ್ನುವ ಕಲಾವಿದರ ರಾವಣ ಪಾತ್ರವನ್ನು ನೋಡಿದ ಅಂದಿನ ಬ್ರಿಟಿಷ್ ಅಧಿಕಾರಿ ಕಂಗಾಲಾಗಿದ್ದ ದಿನಮಾನಗಳ ಘಟನೆಯು ಬಡಗು ತಿಟ್ಟಿನಲ್ಲಿ ಮಾತಿಗೆ ವಿಷಯವಾಗಿತ್ತು. ಸುಧನ್ವ ಮೋಕ್ಷ, ತಾಮ್ರಧ್ವಜ ಕಾಳಗದಂತಹ ಪ್ರಸಂಗಗಳಲ್ಲಿ ಬಣ್ಣದ ವೇಷಕ್ಕೆ ಅವಕಾಶವಿಲ್ಲ. ಆಗ ಹಂಸಧ್ವಜ, ಮಯೂರಧ್ವಜ ಪಾತ್ರಗಳನ್ನು ಬಣ್ಣದ ವೇಷಧಾರಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಬಣ್ಣದ ಕುಷ್ಟ ಅವರ ಹೆಣ್ಣು ಬಣ್ಣದ ಲಾಲಿತ್ಯ, ಪೇತ್ರಿ ಮಾಧವ ನಾಯಕರ ವಯ್ಯಾರದ ರಾಕ್ಷಸಿ, ಬೇಲ್ತೂರು ರಾಮ ಅವರ ಪರಿಣಾಮಕಾರಿ ರಾಕ್ಷಸ.. ಪಾತ್ರಗಳು ಮನೆಮಾತಾಗಿದ್ದುವು. ಈಗ ಬಣ್ಣದ ವೇಷಕ್ಕೆ ಅವಕಾಶ ಎಲ್ಲಿದೆ?”

ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರ ಕಲಾಯಾನದ ಕಿರು ಪುಸ್ತಕ ‘ಹಾಸ್ಯಗಾರನ ಅಂತರಂಗ’. ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ‘ಕನ್ನಡ ಪ್ರಪಂಚ ಪ್ರಕಾಶನ’ವು 2002ರಲ್ಲಿ ಪ್ರಕಾಶಿಸಿತ್ತು. ಪುಸ್ತಕವನ್ನು ಹಂದೆಯವರು ಬಿಡುಗಡೆಗೊಳಿಸಿದ ಸಂದರ್ಭ ಹಸಿಯಾಗಿದೆ – “ಯಕ್ಷಗಾನ ಹಾಳಾಗುತ್ತಿದೆ ಎಂಬ ಗೊಣಗಾಟ ಯಾಕೆ ಮಾಡ್ತೀರಿ. ಈಗಿನ ರಂಗಭೂಮಿಯನ್ನು ಅದರ ಪಾಡಿಗೆ ಬಿಟ್ಟುಬಿಡಿ. ಹಿಂದಿನಿಂದಲೇ ಒಂದು ಚೌಕಟ್ಟಿನೊಳಗೆ ಬೆಳೆದು ಬಂದ ಕಲೆಯ ಸೊಬಗನ್ನು ಮಕ್ಕಳ ಮೂಲಕ ಹಬ್ಬಿಸಿ.” ಎಂದಿದ್ದರು. ಇಂತಹ ಯೋಚನೆಗಳು ಒಂದು ರಂಗವನ್ನು ಜೀವಂತವಿರಿಸಲು ಬೇಕಾದ ಒಳಸುರಿಗಳು.

ಒಂದು ಸಮಯವಿತ್ತು. ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿರಿಯರ ಒತ್ತಾಸೆ ಇದ್ದಿರಲಿಲ್ಲ. ಎಲ್ಲಾದರೂ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ? ಎನ್ನುವ ಭಯ. ಯಕ್ಷಗಾನದತ್ತ ಸಾರ್ವತ್ರಿಕವಾಗಿ ಅಷ್ಟೊಂದು ಒಲವಿಲ್ಲದ ಸಮಯವೂ ಆಗಿತ್ತು. 1975ರ ಕಾಲಘಟ್ಟದ ಇಂತಹ ಮನಸ್ಥಿತಿಗಳ ಮಧ್ಯೆ ಹಂದೆಯವರು ಕಾರ್ಕಡ ಶ್ರೀನಿವಾಸ ಉಡುಪರೊಂದಿಗೆ ‘ಸಾಲಿಗ್ರಾಮ ಮಕ್ಕಳ ಮೇಳ’ವನ್ನು ಕಟ್ಟಿದರು. ಅದು ಸಡಿಲ ಕಟ್ಟಲ್ಲ, ಗಟ್ಟಿಯಾದ ಕಟ್ಟು! ವಿದ್ಯಾಭ್ಯಾಸಕ್ಕೆ ತೊಡಕಾಗದೆ, ಬಿಡುವಿನ ಅವಧಿಯಲ್ಲಿ ತರಬೇತಿ. ಶಿಸ್ತಿಗೊಳಪಟ್ಟ ತಂಡದ ರೂಪೀಕರಣ. ರಾಜ್ಯ, ದೇಶ, ಅಂತಾರಾಷ್ಟ್ರೀಯ ನೆಲದಲ್ಲಿ ಮೇಳ ಓಡಾಡಿರುವುದು ಸರ್ವವೇದ್ಯ.

ಮೇಳಕ್ಕೆ ಈಗ ನಲವತ್ತಮೂರು ವರುಷ. ಹಂದೆಯವರಿಗೆ ಎಂಭತ್ತಮೂರು. ಈ ಎರಡು ಸಂಖ್ಯೆಯೊಳಗೆ ಒಂದು ಸಾಂಸ್ಕøತಿಕ ಜೀವಂತಿಕೆ ಅವಿತಿದೆ. ಅದು ಅಗೋಚರ. ಹಾಗಾಗಿ ನೋಡಿ, ರಂಗವಿಂದು ವಿಪರೀತಾವಸ್ಥೆಯ ಬೀಸುಹೆಜ್ಜೆಯಲ್ಲಿ ಪಲ್ಲಟಗೊಳ್ಳುತ್ತಿದ್ದರೂ (ಅದು ಪಲ್ಲಟವಲ್ಲ, ಅಭಿವೃದ್ಧಿ, ಬದಲಾವಣೆ ಎನ್ನುವ ಸಮರ್ಥನೆಯೂ ಇದೆಯೆನ್ನಿ) ಅದಕ್ಕೂ ನಮಗೂ ಸಂಬಂಧವೇ ಇಲ್ಲವೆನ್ನುವಂತೆ ಇದ್ದು ಬಿಡುವ ನಿರ್ದೇಶಕರ ನಿರ್ಲಿಪ್ತ ಸ್ಥಿತಿಯು ಮಕ್ಕಳ ಮೇಳದ ಯಶದ ಗುಟ್ಟು. ಹತ್ತಾರು ಹೆಗಲುಗಳು ಮೇಳದ ಯಶೋಯಾನದಲ್ಲಿ ಹೆಜ್ಜೆಯೂರಿವೆ.

ಇಷ್ಟೆಲ್ಲಾ ಹೇಳುತ್ತಿರುವಾಗ ಹಂದೆಯವರ ಬಯೋಡಾಟದ ಹಾಳೆಯು ಕಿವಿಯಲ್ಲಿ ಹೇಳಿತು – ‘ಇಷ್ಟೇ ಅಲ್ಲ, ಇನ್ನೂ ಇದೆ”! ಅದೇನು, ನೋಡೋಣ. ಶ್ರೀಧರ ಹಂದೆ ಅವರು ನಲವತ್ತು ವರುಷ ಹಿಂದಿ ಭಾಷಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. 1991ರಲ್ಲಿ ರಾಷ್ಟ್ರಪತಿ ಶಂಕರ ದಯಾಳ್ ಶರ್ಮರಿಂದ ಶಿಕ್ಷಕ ರಾಷ್ಟ್ರ ಪ್ರಶಸ್ತಿ. ಮಕ್ಕಳ ಮೇಳವನ್ನು ವಿದೇಶಕ್ಕೆ ಒಯ್ದ ನೆಗಳ್ತೆ, 1978ರಲ್ಲಿ ಅಮೇರಿಕಾದ ವಿಶ್ವ ಮಕ್ಕಳ ಉತ್ಸವ, 1985ರಲ್ಲಿ ಬೆಹರಿನ್ ಕನ್ನಡ ಸಂಘ, 1988ರಲ್ಲಿ ಲಂಡನ್, ಮ್ಯಾಂಚೆಸ್ಟರ್‍ನಲ್ಲಿ ಪ್ರದರ್ಶನಗಳು. ತೆಂಕು-ಬಡಗು ತಿಟ್ಟಿನ ಪ್ರದರ್ಶನವು ಪ್ರೇಕ್ಷಕರಿಂದ ಸರ್ವಸ್ವೀಕೃತಿ. ವೈಯಕ್ತಿಕವಾಗಿ - ಭಾಗವತ, ಗಮಕಿ, ಪ್ರಸಂಗ ಕವಿ, ನಟ, ನಿರ್ದೇಶಕ, ಸಂಪನ್ಮೂಲ ವ್ಯಕ್ತಿ, ಸಂಘಟಕ. ಪ್ರಸ್ತುತ ಹಂದೆಯವರ ಚಿರಂಜೀವಿ ಸುಜಯೀಂದ್ರ ಹಂದೆಯವರಿಗೆ ಮಕ್ಕಳ ಮೇಳದ ನಿರ್ವಹಣೆಯ ಜವಾಬ್ದಾರಿ.

ಯಕ್ಷಗಾನದ ಕಲೆಯನ್ನು ತಲೆಮಾರಿಗೆ ದಾಟಿಸಿದ ಸಾಹಸಿ, ತ್ಯಾಗಿಗೆ ನೂರಾರು ಸಂಮಾನ, ಪ್ರಶಸ್ತಿಗಳು ಮುಡಿಗೇರಿವೆ. ಈಗ ಹಂದೆಯವರಿಗೆ ‘ವನಜ ರಂಗ ಮನೆ ಪ್ರಶಸ್ತಿ’ಯ ಬಾಗಿನ. ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಯೋಜನೆ. ಇದೇ 12ರಂದು ಸಂಜೆ ಸುಳ್ಯ ರಂಗಮನೆಯ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ. ಶ್ರೀಮತಿ ವನಜಾಕ್ಷಿ ಜಯರಾಮ ನೆನಪಿನ ಗೌರವ ಪ್ರದಾನ ಸಮಾರಂಭವನ್ನು ಅವರ ಚಿರಂಜೀವಿ ಜೀವನ್‍ರಾಂ ಸುಳ್ಯ ಮತ್ತು ತಂಡವು ಸಂಘಟಿಸಿದೆ.z

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.