ADVERTISEMENT

ಮೊಗೆವ ಆಸಕ್ತಿಗಳಿಗೆ ವಿಷಾದಗಳ ಹಂಗಿಲ್ಲ!

ಭಾಸ್ಕರ ರೈ ಕುಕ್ಕುವಳ್ಳಿಗೆ ಮುಂಬೈಯಲ್ಲಿ ಯಕ್ಷರಕ್ಷಾ ಪ್ರಶಸ್ತಿ ಪ್ರಧಾನ

ನಾ.ಕಾರಂತ ಪೆರಾಜೆ
Published 27 ಆಗಸ್ಟ್ 2018, 9:27 IST
Last Updated 27 ಆಗಸ್ಟ್ 2018, 9:27 IST
   

ಮಂಗಳೂರಿನ ವೃತ್ತಿ ಬದುಕಿನ ಆರಂಭದ ದಿನಮಾನಗಳು. ಅಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ. ‘ಕೃಷ್ಣ ಸಂಧಾನ’ ಪ್ರಸಂಗದ ತಾಳಮದ್ದಳೆ. ಹಿರಿಯ ಅಂಚೆಯಣ್ಣ (ಹೆಸರು ನೆನಪಾಗುತ್ತಿಲ್ಲ) ಒಬ್ಬರ ಸಂಯೋಜನೆ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಕೇಳಿ ಗೊತ್ತಿತ್ತು. ನೋಡಿರಲಿಲ್ಲ. ಅಂದು ಅವರದು ‘ಕೃಷ್ಣ’ನ ಪಾತ್ರ. ನಾನೂ ಚಿಕ್ಕ ಪಾತ್ರವೊಂದರಲ್ಲಿ ಮೊದಲ ಬಾರಿಗೆ ಕುಡ್ಲದಲ್ಲಿ ಅರ್ಥವನ್ನೂ ಹೇಳಿದ್ದೆ. ರೈಗಳ ಅರ್ಥಗಾರಿಕೆ, ಆಪ್ತತೆಗಳು, ತೆರೆದುಕೊಳ್ಳುವ ಗುಣ, ಹೊಸಬರನ್ನು ಹೊಸಬನಂತೆ ಕಾಣದ ವ್ಯಕ್ತಿತ್ವವು ತುಂಬಾ ಇಷ್ಟವಾಗಿತ್ತು. ಅಲ್ಲಿಂದ (1987) ಈ ಕ್ಷಣದ ವರೆಗೆ ನಮ್ಮೊಳಗೆ ಭಾವ ಬಂಧಗಳ ತೇವ ಆರಿಲ್ಲ. ವೈಯಕ್ತಿಕವಾದ ಭಿನ್ನತೆಗಳು ನುಸುಳಿಲ್ಲ. ಅಹಂಗಳು ಸ್ಪರ್ಶವಾಗಿಲ್ಲ. ಪ್ರತಿಷ್ಠೆಗಳು ಮೇಳೈಸಲಿಲ್ಲ.

ನಂತರದ ದಿವಸಗಳ ಅವರ ಅಕ್ಷರಯಾನ, ಕಲಾಯಾನವನ್ನು ಹತ್ತಿರದಿಂದ ನೋಡಿ ಖುಷಿಪಟ್ಟಿದ್ದೆ, ಹೆಮ್ಮೆಪಟ್ಟಿದ್ದೆ. ಸ್ವಲ್ಪ ಕಾಲ ಒಂದೇ ಸೂರಿನಡಿ ವಾಸವಾಗಿದ್ದೆವು ಕೂಡಾ. ನಂತರದ ದಿನಮಾನಗಳಲ್ಲಿ ವೃತ್ತಿ ಕ್ಷೇತ್ರಗಳ ಅಂತರಗಳು ದೂರವಾದುವು. ತಾಳಮದ್ದಳೆ, ಆಟ, ಉಪನ್ಯಾಸ, ಗಮಕ, ಕವಿ, ಲೇಖಕ, ಸಂಘಟಕ, ಪ್ರವಚನ. ಈ ಎಲ್ಲ ನೆಲೆಗಳು ಅವರ ವ್ಯಕ್ತಿತ್ವದ ಅನಾವರಣಕ್ಕೆ ಅಡಿಗಟ್ಟಾದುವು. ಅವಕಾಶಗಳ ಬಾಗಿಲುಗಳು ತೆರೆದುವು. ಸಮರ್ಥವಾಗಿ ಬಳಸಿಕೊಂಡರು, ಯಶಕಂಡರು. ಅವಕಾಶಗಳ ತೆಕ್ಕೆಯೊಳಗೆ ಆಪ್ತರನ್ನೂ ಸೇರಿಸಿಕೊಂಡರು. ಅವರ ಏಳ್ಗೆಗೆ ಮೊದಲ ಮೆಟ್ಟಿಲಾದರು. ಹೀಗೆ ಬೆಳೆದ ಆಪ್ತ ಗಡಣ ದೊಡ್ಡದು. ಅಂಚೆ ಇಲಾಖೆಯಲ್ಲಿ ಹದಿನಾಲ್ಕು ವರುಷ ದುಡಿತ. ಬಳಿಕ ಶೈಕ್ಷಣಿಕ ಕ್ಷೇತ್ರಕ್ಕೆ ಪದಾರ್ಪಣೆ. ಪ್ರಾಧ್ಯಾಪಕನಾಗಿ ಸೇವೆ. ಈ ಲೇಖನದೊಂದಿಗೆ ಯಕ್ಷಗಾನದ ಕಿರೀಟ ವೇಷವೊಂದಿದೆ. ಬ್ಯಾಂಕ್‍ಗಳು, ಸಂಘಸಂಸ್ಥೆಗಳು, ಜಾಹೀರಾತು ಫಲಕಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಚಿತ್ರಗಾರರಿಗೆ ತುಂಬಾ ಇಷ್ಟವಾದ ಚಿತ್ರವಿದು. ಕೈಮುಗಿದ ಭಂಗಿಯಲ್ಲಿರುವ ಕಿರೀಟವೇಷವು ಕುಕ್ಕುವಳ್ಳಿಯವರದ್ದೆಂದು ಬಹುತೇಕರಿಗೆ ತಿಳಿದಿಲ್ಲ! ಹೆಚ್ಚು ಅರ್ಥದಾರಿಯಾಗಿ ಕಾಣಿಸಿಕೊಂಡ ರೈ, ಹವ್ಯಾಸಿ ವೇಷಧಾರಿಯಾಗಿ ವೃತ್ತಿ ಕಲಾವಿದರ ಜತೆಯೂ ಭಾಗವಹಿಸಿದ್ದಾರೆ. ಎಲ್ಲ ಪ್ರದರ್ಶನಗಳಲ್ಲಿ ತನ್ನ ವೈಯಕ್ತಿಯ ಮಿತಿ ಅರಿವಿನ ವ್ಯಾಪ್ತಿಯ ಎಚ್ಚರವನ್ನು ಗಮನಿಸಿದ್ದೇನೆ. ಮೂಲತಃ ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಅವರು. ಯಕ್ಷಗಾನದ ಸುಂದರ ವಾತಾವರಣ. ಹಿರಿಯರ ಒಡನಾಟ. ಇಲ್ಲಿಂದ ಕಲಾ ಬದುಕನ್ನು ಕಟ್ಟಿಕೊಂಡ ಭಾಸ್ಕರ ರೈಅವರಿಗೆ ಅವರ ಕಲಾ ಪ್ರವೃತ್ತಿಯು ಮುಂದೆ ವೃತ್ತಿ ಬದುಕಿಗೆ ಹೊಳಪು ನೀಡಿತು.

ADVERTISEMENT

ಮಂಗಳೂರು ಪರಿಸರದಲ್ಲಿ ಆಗ ದರೋಡೆಕೋರ ಚಂದ್ರನ್ ಅಟ್ಟಹಾಸ ಜೋರಾಗಿದ್ದ ಕಾಲ. ಆಡಳಿತಕ್ಕೂ ತಲೆನೋವು. ಎಲ್ಲಿಯವರೆಗೆ ಅಂದರೆ ಹಳ್ಳಿ ಹಳ್ಳಿಗಳಲ್ಲಿ ಜನರೇ ರಾತ್ರಿ ಕಾವಲು ಮಾಡುವ ಪ್ರಮೇಯ ಬಂದಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯ ಗಾಢತೆಯನ್ನು ಜನರಿಗೆ ತಲುಪಿಸಲು ಚಂದ್ರನ್ ಪ್ರಕರಣ ಸುತ್ತ ಹೆಣೆದ ಕಥಾನಕವು ಯಕ್ಷಗಾನ ರೂಪದಲ್ಲಿ ಪ್ರಸ್ತುತ ಪಡಿಸಲಾಗಿತ್ತು. ಜಿಲ್ಲಾಡಳಿತದ ಸಹಕಾರ. ಭಾಸ್ಕರ ರೈ, ಸೂರ್ಯನಾರಾಯಣ ಭಟ್ ಪಂಜಾಜೆ.. ಬಳಗವು ಅನೇಕ ಪ್ರದರ್ಶನಗಳನ್ನು ಏರ್ಪಡಿಸುವಲ್ಲಿ ಶ್ರಮಿಸಿತ್ತು.ಸಾಮಾಜಿಕವಾದ ಅರಿವಿನ ಆಂದೋಳನವು ಜನಸ್ವೀಕೃತಿ ಪಡೆದಿತ್ತು.

ದೇಶದಲ್ಲಿ ಏಡ್ಸ್ ಕಾಯಿಲೆ ಮತ್ತು ಪರಿಹಾರದ ಜಾಗೃತಿಗೆ ಸರ್ಕಾರ ಮುಂದಾದ ಸಂದರ್ಭ. ಆಡಳಿತದಿಂದ ಈ ಕುರಿತ ಅಂದೋಳನಕ್ಕೆ ಯಕ್ಷಗಾನ ಮೂಲಕ ಸಾಥ್. ಮಾರಕ ರೋಗದ ಗಾಢತೆಯನ್ನಾವರಿಸಿದ ಕಥಾನಕವನ್ನು ಭಾಸ್ಕರ ರೈ ಸಿದ್ಧಪಡಿಸಿದ್ದರು. ಹಿರಿಯ ಸಾಹಿತಿ ಅಮೃತ ಸೋಮೇಶ್ವರರು ಪ್ರಸಂಗ ರಚನೆ ಮಾಡಿದ್ದರು. ತಾಳಮದ್ದಳೆ, ಆಟಗಳ ಮೂಲಕ ಮಾರಕ ಕಾಯಿಲೆಯ ಮಾರಕ ಸ್ವರೂಪವನ್ನು ಬಿಂಬಿಸುವಲ್ಲಿ ಯಶವಾಗಿತ್ತು. ದೂರದ ದೆಹಲಿಯಲ್ಲೂ ಪ್ರದರ್ಶನಗೊಂಡಿತು. ದೂರದರ್ಶನ, ರೆಡಿಯೊಗಳಲ್ಲೂ ಬಿತ್ತರಗೊಂಡಿತ್ತು. ನೂರಾರು ಪ್ರದರ್ಶನವನ್ನು ಕಂಡ ‘ಘೋರ ಮಾರಕ’ದ ಹಿಂದಿನ ಕುಕ್ಕುವಳ್ಳಿ ಅವರ ನೇಪಥ್ಯ ಶ್ರಮ ಗುರುತರ.

1995 ಮಾರ್ಚ್ ತಿಂಗಳು. ದೆಹಲಿಯಲ್ಲಿ ಅಂತರ ರಾಷ್ಟ್ರೀಯ ಕೃಷಿ ಮೇಳ. ಅದರಲ್ಲಿ ಪುತ್ತೂರಿನ ‘ಕರ್ನಾಟಕ ಯಕ್ಷಭಾರತಿ’ ತಂಡದ ಪ್ರದರ್ಶನ. ಕುಕ್ಕುವಳ್ಳಿಯವರ ನೇತೃತ್ವ. ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಯೋಜನೆ. ತೋನ್ಸೆ ಪುಷ್ಕಳ ಕುಮಾರ್, ರಮೇಶ ಶೆಟ್ಟಿ ಬಾಯಾರ್, ಕೃಷ್ಣಪ್ಪ ಕಿನ್ಯ, ಜಲಂಧರ ರೈ, ಕೆ.ಯು.ಬಸ್ತಿ, ಭಾಸ್ಕರ ರೈ... ಕಲಾವಿದರು. ‘ನರಕಾಸುರ ಮೋಕ್ಷ, ಸುಧನ್ವ ಮೋಕ್ಷ, ಘೋರ ಮಾರಕ’ ಪ್ರಸಂಗಗಳ ಪ್ರಸ್ತುತಿ. ಪ್ರಯಾಣವು ಸುಲಲಿತವಲ್ಲದ ಕಾಲಘಟ್ಟವದು. ಬಸ್ ಪ್ರಯಾಣ ದುಬಾರಿ. ವಿಮಾನ ಎಟುಕದ ದ್ರಾಕ್ಷಿ. ಕೊನೆಯ ಆಯ್ಕೆ ರೈಲು. ಒಟ್ಟು ಆರು ದಿವಸದ ಯಕ್ಷ ಟೂರ್. ಇಂತಹ ಘಟನೆಗಳು ಸ್ಯಾಂಪಲ್ ಮಾತ್ರ. ಭಾಸ್ಕರ ರೈಯವರ ಕಲಾಯಾನದಲ್ಲಿ ಮೈಲುಗಲ್ಲಾಗಬಹುದಾದ ಕಾರ್ಯಕ್ರಮಗಳು ಹತ್ತಾರು ಅಲ್ಲ, ನೂರಾರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದಾಗ (2004) ಮಂಗಳೂರಿನಲ್ಲಿ ಮಹಿಳಾ ಯಕ್ಷಗಾನ ಸಮ್ಮೇಳನ ‘ಯಕ್ಷಪ್ರಮೀಳಾ’ ಆಯೋಜನೆಗೊಳಿಸಿದ್ದರು. ನೆನಪು ಸಂಚಿಕೆಯನ್ನೂ ಪ್ರಕಾಶಿಸಿದ್ದರು. ಯಕ್ಷೋತ್ಸವ, ತಾಳಮದ್ದಳೆ ಸಪ್ತಾಹಗಳನ್ನು ಸಂಘಟಿಸಿದ್ದರು. ತುಳು ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅವರದೇ ನೇತೃತ್ವದ ‘ಯಕ್ಷಾಂಗಣ ಮಂಗಳೂರು’ ಸಂಸ್ಥೆಗೆ ಈಗ ನಾಲ್ಕನೇ ವರುಷ. ಪ್ರತೀ ವರುಷ ಸಪ್ತಾಹ, ಸಂಸ್ಮರಣೆ, ಸಂಮಾನಗಳ ಸಂಪನ್ನ. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರ ಮಟ್ಟದ ಕಲಾಪಗಳ ಸಂಯೋಜನೆ.

ಕುಕ್ಕುವಳ್ಳಿ ಆಕಾಶವಾಣಿ, ದೂರದರ್ಶನ ಕಲಾವಿದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿ. ಬಾನುಲಿ ಪಠ್ಯಗಳ ರಚನೆಗಾರ. ಹಲವು ಸ್ಮøತಿ ಕೃತಿಗಳ ಸಂಪಾದಕ. ಮಾಸಿಕ, ತ್ರೈಮಾಸಿಕಗಳ ಸಂಪಾದಕ. ಕತೆ-ಕವಿತೆ-ಲೇಖನಗಳ ಪ್ರಕಟಣೆ. ಧ್ವನಿಸುರುಳಿ, ಸಾಕ್ಷ್ಯಚಿತ್ರಗಳ ಸಾಹಿತ್ಯ ರಚನೆ. ‘ನಮ್ಮ ಕುಡ್ಲ’, ‘ವಿ4 ಮೀಡಿಯಾ’ಗಳ ಕಾರ್ಯನಿರ್ವಾಹಕರು. ‘ಸ್ಪಂದನ’ ವಾಹಿನಿಯಲ್ಲಿ ಕಾವ್ಯ ಸ್ಪಂದನ ಮತ್ತು ಪಟ್ಲ-ಗಾನ-ಯಾನ ವಿನೂತನ ಕಾರ್ಯಕ್ರಮಗಳ ನಿರ್ವಾಹಕ. “ನೆಯಿ-ಪೇರ್, ಒಡ್ಡೋಲಗ, ಯಕ್ಷಿಕಾ, ಅಭಿರಾಮ, ಯಕ್ಷಪ್ರಮೀಳಾ, ಯಕ್ಷರ ಚೆನ್ನ, ಪುಳಿಂಚ ಕೃತಿ-ಸ್ಮøತಿ, ಪನಿಯಾರ (ಸಂಪಾದಿತ), ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ (ಯಕ್ಷಗಾನ) - ಪ್ರಕಟಿತ ಕೃತಿಗಳು. ಇವರ ನಾಟಕಗಳು – ‘ಹರಣ ಹಾರಿತು, ಎರೆಯನೆಡೆಗೆ, ತುಳುವೆರೆ ಬಲೀಂದ್ರೆ, ಗರತಿ ಮಂಗಣೆ, ಜನ್ಮರಹಸ್ಯ, ದಳವಾಯಿ ದೇವಪೂಂಜೆ, ಅಮರ್‍ವೀರೆರ್’.
ಕುಕ್ಕುವಳ್ಳಿಯವರ ಅರ್ಥಗಾರಿಕೆ ವಿಭಿನ್ನ, ಅನುಕರಣೆಯಿಲ್ಲ.

ಕೆಲವೊಮ್ಮೆ ಅರ್ಥಗಾರಿಕೆಯಲ್ಲಿ ಲಂಬನ ಕಂಡರೂ ಅದರೊಳಗೆ ಬದುಕಿನ ಸ್ಪರ್ಶದ ವಿಚಾರಗಳ ವಿಮರ್ಶೆಯಿರುತ್ತಿತ್ತು. ವಿಶ್ಲೇಷಣೆಯಿರುತ್ತಿತ್ತು. ಸಾಮಾನ್ಯವಾಗಿ ರಾಮ, ಕೃಷ್ಣ, ವಿದುರ, ಭರತ, ಸುಧನ್ವ, ಅತಿಕಾಯ, ರುಕ್ಮಾಂಗದ, ಹನುಮಂತ.. ಹೀಗೆ ವೈಚಾರಿಕೆ ನೆಲೆಯಿರುವ, ನೆಲೆಗೆ ಅವಕಾಶವಿರುವ ಪಾತ್ರಗಳಲ್ಲಿ ಸುಲಲಿತವಾದ ನಿರ್ವಹಣೆ. “ನನ್ನ ಯಕ್ಷಗಾನದ ಆರಂಭದ ಕಾಲಘಟ್ಟದಲ್ಲಿ ಡಾ.ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗರು, ವಿದ್ವಾನ್ ಕಾಂತ ರೈಗಳು, ಪೆರ್ಲ ಕೃಷ್ಣ ಭಟ್ಟರು, ತೆಕ್ಕಟ್ಟೆ ಆನಂದ ಮಾಸ್ತರ್.. ಮೊದಲಾದ ಹಿರಿಯರೊಂದಿಗೆ ಚಿಕ್ಕ ಪುಟ್ಟ ಅರ್ಥ ಹೇಳುವ ಅವಕಾಶಗಳು ದೊರೆತಿತ್ತು. ಅವರೆಲ್ಲರ ಪ್ರೋತ್ಸಾಹ, ಬೆಂಬಲದಿಂದ ಅರ್ಥದಾರಿಯಾಗಿ ಬೆಳೆಯಲು ಸಹಕಾರವಾಯಿತು.” ಎನ್ನುತ್ತಾರೆ. ಕನ್ನಡ, ತುಳು, ಆಂಗ್ಲ, ಹಿಂದಿ ಭಾಷೆಗಳ ಕೂಟ, ಆಟಗಳಲ್ಲಿ ಭಾಗವಹಿಸಿದ್ದಾರೆ. ಗೋಷ್ಠಿ, ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನುಭವಿ.

ಪ್ರತಿಭೆಯನ್ನು ಅರಸಿಕೊಂಡು ಬರುವ ದಿನಮಾನಗಳನ್ನು ಜ್ಞಾಪಿಸಿಕೊಳ್ಳೋಣ. ಅಂತಹ ಪ್ರತಿಭೆಯನ್ನು ಮಾನಿಸುವ ಮನಸ್ಸುಗಳಿದ್ದುವು. ಕಾಲದ ಪಲ್ಲಟವೋ, ವೈಯಕ್ತಿಕ ಪ್ರತಿಷ್ಠೆಯ ಮೇಲಾಟವೋ, ಕಲಾವಿದನು ವಿಮರ್ಶಕನಾಗಿ-ಕೆಲವೊಮ್ಮೆ ತೀರ್ಪು ನೀಡುವ ಮಹಾ ವಿಮರ್ಶಕನಾಗಿ ಬೆಳೆದ ಪರಿಯೋ ಏನೋ ಕೂಟ, ಆಟಗಳ ಸಂಘಟನೆಗಳ ಹರಹು ಬದಲಾಗಿದೆ. ಈ ವಿಚಾರವನ್ನು ರೈಗಳೊಂದಿಗೆ ಹಂಚಿಕಂಡಾಗ ಅವರದು ನಿರ್ಲಿಪ್ತದ ಭಾವ. ಇದರೊಳಗೆ ವಿಷಾದಗಳ ಮೌನವನ್ನು ನೋಡಿದೆ! ಇಂತಹ ವಿಷಾದಗಳು ರೈಗಳು ಮಾತ್ರವಲ್ಲ, ಅವರ ಸಮಕಾಲೀನರಾದ ಎಲ್ಲರಲ್ಲೂ ಗಮನಿಸಬಹುದಾಗಿದೆ. ವಿಷಾದ ಹತಾಶೆಯಲ್ಲವಲ್ಲ. ನವಿರಾದ ವಿಷಾದಗಳ ಮಧ್ಯೆ ಕಲಾ ಮನಸ್ಸುಗಳು ಮೆಚ್ಚುವಂತೆ ಪ್ರತ್ಯೇಕ ಛಾಪು ಬೀರುವ, ಹೆಜ್ಜೆ ಊರುವ ಕುಕ್ಕುವಳ್ಳಿಯವರೊಳಗಿನ ಕಲಾ ಮನಸ್ಸುಗಳು ಸದಾ ಆದ್ರ್ರವಾಗಿರುತ್ತದೆ. ಈ ಆದ್ರ್ರತೆಯ ಫಲವಾಗಿ ಹಲವಾರು ಸಂಮಾನಗಳಿಂದ ಮಾನಿತರು. ಪ್ರಶಸ್ತಿಗಳಿಂದ ಅಲಂಕೃತರು.

26ರಂದು ಪ್ರಶಸ್ತಿ ಪ್ರದಾನ

ಈಗ ಮುಂಬೈಯ ಅಜೆಕಾರು ಕಲಾಭಿಮಾನಿ ಬಳಗವು ‘ಯಕ್ಷರಕ್ಷಾ ಪ್ರಶಸ್ತಿ’ಯನ್ನು ಐವತ್ತು ಸಾವಿರ ನಗದು ಮೊತ್ತದೊಂದಿಗೆ ನೀಡುತ್ತಿದೆ. ಆಗಸ್ಟ್ 26ರಂದು ಮುಂಬೈಯ ಕುರ್ಲಾ ಬಂಟರ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಇವರೊಂದಿಗೆ ಯುವ ಮದ್ದಳೆಗಾರ ಪ್ರಶಾಂತ ಶೆಟ್ಟಿ ವಗೆನಾಡು, ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಭಾಸ್ಕರ ರೈ ಕುಕ್ಕುವಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.