ADVERTISEMENT

ಕಥಕ್‌ ಮಾಂತ್ರಿಕ ಬಿರ್ಜು ಮಹಾರಾಜ್‌; ನೃತ್ಯಲೋಕದ ಮಹಾರಾಜ!

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 19:30 IST
Last Updated 22 ಜನವರಿ 2022, 19:30 IST
ಬಿರ್ಜು ಮಹಾರಾಜರ ನೃತ್ಯ ವೈಭವದ ಪರಿ...
ಬಿರ್ಜು ಮಹಾರಾಜರ ನೃತ್ಯ ವೈಭವದ ಪರಿ...   

ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಈಗ ನಮ್ಮ ನಡುವೆ ಇಲ್ಲ. ತಮ್ಮ ಘೂಂಘರು (ಗೆಜ್ಜೆ) ನಿನಾದವನ್ನು ಮಾತ್ರ ಅವರು ಬಿಟ್ಟು ಹೋಗಿದ್ದಾರೆ. ಅವರ ಸಾವಿರಾರು ಶಿಷ್ಯರು, ಆ ಘೂಂಘರು ನಿನಾದವನ್ನು ಮುಂದೆಯೂ ಹೊರಡಿಸುತ್ತಲೇ ಇರುತ್ತಾರೆ. ಬಿರ್ಜು ಮಹಾರಾಜ್ ಅವರ ನೃತ್ಯ ಬೃಂದಾವನದಲ್ಲಿ ಗೋಪಿಯರನ್ನು ಸೆಳೆದ ಕೃಷ್ಣನ ಮುರಳಿಯಂತೆ – ಮೋಹಕ, ಚುಂಬಕ. ಅವರ ನೃತ್ಯ ಪ್ರದರ್ಶನದಲ್ಲಿ ಕಲಾ ರಸಿಕರಂತೂ ಮಂತ್ರಮುಗ್ಧರಾಗಿ ತನ್ಮಯರಾಗುತ್ತಿದ್ದರು. ಪರಿಪೂರ್ಣತೆಗೆ ಅವರ ಮನಸ್ಸು ಸದಾ ತುಡಿಯುತ್ತಿತ್ತು. ಅದಕ್ಕಾಗಿ ಅವರು ಅಭ್ಯಾಸದ ಮಂತ್ರವನ್ನು ತಮ್ಮ ಎಲ್ಲ ಶಿಷ್ಯಂದಿರಿಗೂ ಹೇಳಿಕೊಡುತ್ತಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ, ‘ಕಾಫಿ ಪಿತೇ ಬಿ ತತ್ಕಾರ್, ಖಾತೆ ಬಿ ತತ್ಕಾರ್’. ಅಂತರಾರ್ಥ - ಅಭ್ಯಾಸ, ಅಭ್ಯಾಸ ಮತ್ತು ಅಭ್ಯಾಸ.

ಬಿರ್ಜು ಮಹಾರಾಜ್ ಅವರೇ ತಿಳಿಸುವಂತೆ, ಹೃದಯದ ಬಡಿತ, ಹಕ್ಕಿಯ ಕಲರವ, ಹಾರಾಟ ಎಲ್ಲವೂ ತಾಳಮೇಳಗಳ ಜೋಡಣೆ. ಇಂತಹ ತಾಳಮೇಳ ಸರ್ವಂತರ್ಯಾಮಿ ಎಂದೂ ಅವರು ಹೇಳುತ್ತಿದ್ದರು. ನೃತ್ಯಕ್ಕೂ ಅಂತಹ ಸಹಜವಾದ ತಾಳಮೇಳ ಬೇಕೆನ್ನುವುದು ಅವರ ಬಯಕೆಯಾಗಿತ್ತು. ಶಿಷ್ಯಂದಿರಿಗೆ ಮನ ಮುಟ್ಟುವಂತೆ ನೃತ್ಯದ ಪ್ರತಿಯೊಂದು ಪಟ್ಟನ್ನೂ ಅವರು ಹೇಳಿಕೊಡುತ್ತಿದ್ದರು. ಇಳಿ ವಯಸ್ಸಿನಲ್ಲೂ ತಮ್ಮ ನೃತ್ಯ ಪ್ರದರ್ಶನದಲ್ಲಿ ರಸಿಕರನ್ನು ಮೋಡಿಮಾಡಿ ಕಟ್ಟಿಹಾಕುವ ಕಲೆಗಾರಿಕೆ ಅವರಿಗೆ ಸಿದ್ಧಿಸಿತ್ತು. ತಮ್ಮ ನೃತ್ಯ ಕೌಶಲದಿಂದ, ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ, ಸತ್ಯಜಿತ್ ರೇ ಅವರ ಶತರಂಜ್ ಕೆ ಖಿಲಾಡಿ, ಸಂಜಯ್‌ ಲೀಲಾ ಬನ್ಸಾಲಿ ಅವರ ದೇವದಾಸ್ ಮತ್ತು ಬಾಜಿರಾವ್ ಮಸ್ತಾನಿ, ಕಮಲ್ ಹಾಸನ್ ಅವರ ವಿಶ್ವರೂಪಂ ಚಲನಚಿತ್ರಗಳಿಗೆ ಅದ್ಭುತವಾಗಿ ಅವರು ನಾಟ್ಯ ಸಂಯೋಜನೆ ಮಾಡಿದ್ದರು. ಮಾಧುರಿ ದೀಕ್ಷಿತ್‌ ಅವರಿಗೆ ಬಿರ್ಜು ಮಹಾರಾಜ್‌ ಅವರು ಮಾಡಿದ ಕೊರಿಯೋಗ್ರಫಿಯನ್ನು ಮೆಚ್ಚದ ಪ್ರೇಕ್ಷಕರೇ ಇಲ್ಲ.

ಒಂದು ಘಟನೆ ನೆನಪಾಗುತ್ತದೆ. ‌ಹಲವು ವರ್ಷಗಳ ಹಿಂದಿನ ಮಾತು. ಕಥಕ್‌ನ ಈ ದಂತಕಥೆಯನ್ನು ಬರಮಾಡಿಕೊಳ್ಳಲು ಕೆಲವು ಮಕ್ಕಳನ್ನು ನಿಲ್ಲಿಸಲಾಗಿತ್ತು. ಮಕ್ಕಳು ಹಿಡಿದಿದ್ದ ಹೂವು ಪಡೆಯಲು ಬಾಗಿದ ಆ ಮಹಾನ್‌ ಕಲಾವಿದ, ‘ಕಥಕ್‌ ಕುರಿತು ನಿನಗೇನಾದರೂ ಗೊತ್ತೆ ಮರಿ’ ಎಂದು ಪ್ರಶ್ನಿಸಿದರು. ತಕ್ಷಣ ಆ ಹುಡುಗಿ, ‘ಓಹೋ ಗೊತ್ತು. ಆ ನೃತ್ಯವನ್ನು ಬಿರ್ಜು ಮಹಾರಾಜರು ಮಾಡುತ್ತಾರೆ’ ಎಂದು ಮುಗ್ಧವಾಗಿ ಉತ್ತರಿಸಿದ್ದಳು. ತನ್ನ ಎದುರು ನಿಂತ ಆ ಮಹಾನ್‌ ವ್ಯಕ್ತಿಯೇ ಬಿರ್ಜು ಮಹಾರಾಜ್‌ ಎನ್ನುವುದು ಆಕೆಗೆ ಗೊತ್ತಿರಲಿಲ್ಲ. ‘ಹೌದು, ಅವರು ಕಥಕ್‌ ನೃತ್ಯವನ್ನು ಮಾಡುತ್ತಾರೆ. ಅಷ್ಟೇ ಅಲ್ಲ, ಆ ನೃತ್ಯವನ್ನೇ ಬದುಕುತ್ತಾರೆ’ ಎಂದು ಬಿರ್ಜು ಅವರು ಹೇಳಿದ್ದರು. ಕಥಕ್‌ ಎಂದರೆ ಅವರ ಜೀವವೇ ಆಗಿತ್ತು.

ADVERTISEMENT

ಯಾವ ಆಡಂಬರದ ಪೋಷಾಕುಗಳಿಲ್ಲ, ಆಭರಣಗಳಂತೂ ಇಲ್ಲವೇ ಇಲ್ಲ. ಆದರೂ ಆ ನೃತ್ಯದ ವೈಭವವೇ ವೈಭವ. ಅವರ ಅಭಿನಯ ಮತ್ತು ನೃತ್ಯ ಯಾವ ರೀತಿ ಇರುತ್ತಿತ್ತು ಅಂದರೆ ‘ಯಥೋ ಹಸ್ತ ತಥೋ ದೃಷ್ಟಿ, ಯಥೋ ದೃಷ್ಟಿ ತಥೋ ಮನಃ, ಯಥೋ ಮನಃ ತಥೋ ಭಾವ, ಯಥೋ ಭಾವ ತಥೋ ರಸಃ’ ಎನ್ನುವ ಮಾತಿನ ಕೃತಿರೂಪವಾಗಿತ್ತು. ಹೌದು, ಅವರ ಅಭಿನಯ ವರ್ಣನಾತೀತವಾದುದು.

1938ರ ಫೆಬ್ರುವರಿ 4ರಂದು ಜನಿಸಿದ ಅವರ ಮೊದಲ ಹೆಸರು ದುಃಖಹರನ್/ಬ್ರಿಜ್ ಮೋಹನನಾಥ್ ಮಿಶ್ರ. ಎಳೆಯ ವಯಸ್ಸಿನಲ್ಲೇ ತಂದೆಯ ತೊಡೆಯ ಮೇಲೆ ಕುಳಿತು ತಿಹಾಯ್ ಮತ್ತು ಕಥಕ್ ನೃತ್ಯದ ಬೋಲ್‌ಗಳನ್ನು ಪಠಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಿರ್ಜು ಮಹಾರಾಜ್, ತಾಯಿಯಿಂದ ಠುಮ್ರಿ ಮತ್ತು ಧುನ್, ಚಿಕ್ಕಪ್ಪ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಅವರಲ್ಲಿ ‘ಲಖನೌ ಕಾಲ್ಕ ಬಿಂದಾದಿನ್’ ಘರಾನಾ ಮಾದರಿಯ ಕಥಕ್ ಶಿಕ್ಷಣ ಪಡೆದರು. ಮುಂದೆ ಕಪಿಲಾ ವಾತ್ಸಾಯನ ಅವರ ಮಾರ್ಗದರ್ಶನ ಸಹ ಅವರಿಗೆ ಸಿಕ್ಕಿತು.

ದೆಹಲಿಯ ಭಾರತೀಯ ಕಲಾಕೇಂದ್ರ ಮತ್ತು ಕಥಕ್ ಕೇಂದ್ರದಲ್ಲಿ ನಿರ್ದೇಶಕರ ಹುದ್ದೆಯನ್ನೂ ಅವರು ಅಲಂಕರಿಸಿದರು. ಬಳಿಕ ತಮ್ಮದೇ ಆದ ಕಲಾಶ್ರಮ ಮೂಲಕ ಸಾವಿರಾರು ನೃತ್ಯ ಆಸಕ್ತರಿಗೆ ಕಥಕ್ ಶಿಕ್ಷಣ ನೀಡಿದರು. ಏಳು ವರ್ಷ ಅಭ್ಯಾಸ ಮಾಡಿದವರಿಗೆ ಮಾತ್ರ ರಂಗಮಂಚದ ಮೇಲೆ ಪ್ರದರ್ಶನಕ್ಕೆ ಅವಕಾಶ ಎನ್ನುವುದು ಅವರ ನಿಯಮವಾಗಿತ್ತು. ಅಂದರೆ ಸರಿಯಾದ ಕಲಿಕೆಗೆ ಅವರು ಅಷ್ಟೊಂದು ಮಹತ್ವ ನೀಡುತ್ತಿದ್ದರು.

ಬಿರ್ಜು ಮಹಾರಾಜರು ವ್ಯಾಪಾರಿ ಮನೋಭಾವದವರು ಆಗಿರಲಿಲ್ಲ. ಶ್ರೀಸಾಮಾನ್ಯನು ಕೂಡ ಅವರಲ್ಲಿ ಶಿಕ್ಷಣ ಪಡೆಯಬಹುದಿತ್ತು. ಅವರ ಪ್ರಕಾರ ನೃತ್ಯ ಕಲಾವಿದನಿಗೆ ಸಂಗೀತ ಜ್ಞಾನ ಮತ್ತು ತಬಲಾ ವಾದನ ಕೌಶಲ ಅತ್ಯಗತ್ಯ. ಭಕ್ತಿಯನ್ನು ಪ್ರಕಟಿಸಲು ಲಿಂಗ ಭೇದ ಬೇಡ, ವಯಸ್ಸಿನ ಅಂತರ ಇಲ್ಲ ಎಂದು ಪ್ರತಿಪಾದಿಸುತ್ತಿದ್ದರು.

ಬಿರ್ಜು ಮಹಾರಾಜರು ಕಥಕ್‌ ಕಲೆಗೆ ಪುನರುಜ್ಜೀವನ ನೀಡಿದವರು. ಬಹುತೇಕ ಪ್ರತಿಯೊಬ್ಬ ಸಮಕಾಲೀನ ನೃತ್ಯಗಾರನು, ಅವರ ಪ್ರತಿಭೆಯಿಂದ ಪ್ರಭಾವಿತನಾಗಿದ್ದಾನೆ ಎಂಬುದರಲ್ಲಿ ಸಂಶಯವಿಲ್ಲ. ಬಿರ್ಜು ಅವರು ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ವಿಷಯಗಳ ಮೇಲೆ ಗುಂಪು ಸಂಯೋಜನೆ, ನೃತ್ಯ ನಾಟಕಗಳ ಪ್ರವರ್ತಕರೂ ಹೌದು. ಅವರ ಕೆಲವು ಜನಪ್ರಿಯ ನಿರ್ಮಾಣಗಳಲ್ಲಿ ‘ಕೃಷ್ಣಾಯನ್’, ‘ಕಥಾ ರಘುನಾಥ್ ಕಿ’, ‘ಶಾನ್ ಇ ಅವಧ್’, ‘ಲಯ ಪರಿಕ್ರಮ’ಗಳು ಸಹ ಸೇರಿವೆ. ಜನರ ದೈನಂದಿನ ಕಥೆಗಳೇ ಅವರ ನೃತ್ಯ ರೂಪಕಗಳಿಗೆ ವಸ್ತುಗಳಾಗಿದ್ದವು.

ಬಿರ್ಜು ಮಹಾರಾಜ್‌ ಅವರದು ಬಹುಮುಖ ಪ್ರತಿಭೆ. ಅವರೊಬ್ಬ ನೃತ್ಯ ಕಲಾವಿದ, ಗಾಯಕ, ತಾಳವಾದ್ಯ ಪರಿಣಿತ, ಸಂಗೀತಗಾರ, ನೃತ್ಯ ಸಂಯೋಜಕ, ವರ್ಣಚಿತ್ರಕಾರ, ಕವಿ ಮತ್ತು ವಿನಮ್ರ ಶಿಕ್ಷಕ ಎಲ್ಲವೂ ಆಗಿದ್ದರು. ಪದ್ಮಭೂಷಣ, ಕಾಳಿದಾಸ್ ಸಮ್ಮಾನ್, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿಗಳು ಅವರಿಗೆ ಸಂದಿವೆ. ಕೇವಲ ಸ್ವಿಂಗ್ ಮಾಡುವುದು ಕಥಕ್ ಅಲ್ಲ, ಸರ್ಕಸ್ ಎನ್ನುವ ಅವರ ಮಾತು ಇಂದಿನ ಪೀಳಿಗೆಗೆ ಸದಾ ದಾರಿದೀಪವಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.