ಕ್ರಿಯಾಶೀಲ ನೃತ್ಯ ಕಲಾವಿದೆ, ಹೊಸ ಹೊಸ ಪ್ರತಿಭಾನ್ವಿತ ಯುವ ಕಲಾವಿದೆಯರನ್ನು ತಮ್ಮ ಆಪ್ತ ಭರತನಾಟ್ಯ ಶೈಲಿಯಲ್ಲಿ ತರಬೇತಿಗೊಳಿಸಿ ನೃತ್ಯ ಕ್ಷೇತ್ರವನ್ನು ವಿಪುಲವಾಗಿ ಸಮೃದ್ಧಗೊಳಿಸುತ್ತಿರುವ ಗುರು ಶುಭಾ ಧನಂಜಯ ಒಬ್ಬ ಉತ್ಕೃಷ್ಟ ಪ್ರದರ್ಶಕಿ, ನೃತ್ಯ ಸಂಯೋಜಕಿ, ಸಂಘಟನಾ ಚತುರೆ, ಪ್ರಯೋಗಶೀಲ ಬೋಧಕಿಯಾಗಿ ಮತ್ತೊಮ್ಮೆ ಮಿಂಚಿದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ನೂತನ ಆಧ್ಯಕ್ಷೆಯಾಗಿ ಜವಾಬುದಾರಿಯನ್ನು ವಹಿಸಿಕೊಂಡ ನಂತರ ಗುರು ಶುಭಾ ಧನಂಜಯ ನೇತೃತ್ವದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಅವರ ಕೌಶಲ್ಯಪೂರ್ಣ ಶಿಷ್ಯೆ ಅರುಂಧತಿ ವಸಿಷ್ಠ ಅವರ ಚೊಚ್ಚಲ ಕಾರ್ಯಕ್ರಮ ಗುರು ಶುಭಾ ಅವರ ವಿಶಿಷ್ಟ ಕೊಡುಗೆಗಳನ್ನು ಜಾಹೀರುಗೊಳಿಸುವಂತಹುದು.
ಅಂದಿನ ಕಾರ್ಯಕ್ರಮದ ಸ್ವೀಕಾರಾರ್ಹ ವಿಷಯ ವಸ್ತುವಿನ ಬಂಧದಲ್ಲಿ ಭಾವ ಮತ್ತು ಲಯಗಳ ಕಲಾತ್ಮಕ ಬಿಗುವು ಬೆರಗುಗೊಳಿಸಿತು. ನೃತ್ಯ ಕಲಾರ್ಥಿ ಅರುಂಧತಿ ಅವರ ಚೈತನ್ಯ, ಲವಲವಿಕೆ ಮತ್ತು ಕಮನೀಯತೆ ಮೊಟ್ಟ ಮೊದಲ ನೋಟದಲ್ಲೇ ರಸಿಕರ ಕಣ್ಮನಗಳನ್ನು ಸೆಳೆದದ್ದು ವಿಶೇಷತೆ.
ಆರಂಭಿಕ ದೇವೀ ಸ್ತುತಿ(ಅಯಗಿರಿ ನಂದಿನಿ)ಯ ಮೂಲಕ ದೇವಿಯ ವಿವಿಧ ರೂಪಗಳನ್ನು ತೋರುವಾಗ ಅರುಂಧತಿಯ ಅಭಿನಯ ಕೌಶಲ ಮತ್ತು ಚಾತುರ್ಯ ಮೆಚ್ಚುವಂತಹುದು. ಕ್ಷಣಾರ್ಧದಲ್ಲಿ ಶಿಷ್ಟ ರಕ್ಷಕಿ, ದುಷ್ಟ ಸಂಹಾರಕಿ, ಸೌಮ್ಯ, ಭಯಂಕರ ಇತ್ಯಾದಿ ಭಾವ-ಲಯಗಳ ವೈವಿಧ್ಯವನ್ನು(ರೇವತಿ ಮತ್ತು ಪುನ್ನಾಗವರಾಳಿ ರಾಗಗಳಲ್ಲಿ) ಲೀಲಾಜಾಲವಾಗಿ ವೇದಿಕೆಯನ್ನು ಆವರಿಸಿಕೊಂಡು ಪ್ರಸ್ತುತ ಪಡಿಸಿ ಕಲಾವಿದೆ ಮನಗೆದ್ದರು.
ಪ್ರದರ್ಶನದ ಕೇಂದ್ರ ಬಿಂದುವಾಗಿ ಆನಂದಭೈರವಿ ರಾಗದ ತಂಜಾವೂರು ಸೋದರರ ವರ್ಣ(ಸಖಿಯೇ ಇಂದ ಜಾಲಂ) ವಿಶದವಾಗಿ ಅರಳಿತು. ನಾಯಕಿಯು ತನ್ನ ಸಖಿಯ ಬಳಿ ತನ್ನ ದೂರದಲ್ಲಿರುವ ತನ್ನ ನಾಯಕನ ಗುಣಗಾನ ಮಾಡುತ್ತಾ ಅವನನ್ನು ವಿಳಂಬ ಮಾಡದೆ ಕೂಡಲೇ ಕರೆತರುವಂತೆ ಹೇಳುತ್ತಾ ನಾಯಕನನ್ನು ಸೇರುವ ಆತುರ ಕಾತುರತೆಗಳನ್ನು ತೋಡಿಕೊಳ್ಳುತ್ತಾಳೆ. ವಿಪ್ರಲಂಭ ಶೃಂಗಾರದ ನೈಜ ಚಿತ್ರಣ, ವರ್ಣದ ಮೊದಲ ಭಾಗ ವಿಳಂಬದಲ್ಲಿ ನಂತರ ಕ್ಷಿಪ್ರವಾದ ನಿರೂಪಣೆಯಲ್ಲಿ ಮೂಡಿ ಬಂದ ಗಟ್ಟಿಯಾದ ಲಯ ಮಾದರಿಗಳ ನೃತ್ತ, ನೃತ್ಯ ಮತ್ತು ಅಭಿನಯ ಪ್ರಬುದ್ಧತೆಯನ್ನು ಬಿಂಬಗಳಾದವು.
ಗುರು ಶುಭಾ ಅವರ ಪುತ್ರಿಯರಾದ ಮುದ್ರಾ ಧನಂಜಯ್ ಮತ್ತು ಮಾಯಾ ಧನಂಜಯ್ (ನಟುವಾಂಗ ಮತ್ತು ನೃತ್ಯ ಸಂಯೋಜನೆಗಳು) ಕಾರ್ಯಕ್ರಮದ ಆದ್ಯಂತ ನಿರ್ವಹಣೆಯಲ್ಲಿ ಪ್ರಶಂಸಾರ್ಹ ಪಾತ್ರ ವಹಿಸಿದರು. ಪುರಂದರದಾಸರ ʼಚಂದ್ರಚೂಡʼ (ರಾಗಮಾಲಿಕೆ) ಪದಾಭಿನಯದಲ್ಲಿ ಅರುಂಧತಿ ಶಿವನ ವೇಷ-ಭೊಷಣಗಳು, ವಾಹನ, ಗುಣ-ವಿಶೇಷತೆಗಳನ್ನು ಅರ್ಥಪೂರ್ಣ ಹಾಗೂ ಭಾವವನ್ನು ಮನಕ್ಕೆ ಮುಟ್ಟಿಸುವ ವಾಹಕವಾದ ಅಭಿನಯದಲ್ಲಿ ರೂಪಿಸಿದರು. ಧನಂಜಯ್ ಸೋದರಿಯರ ಸಂಸ್ಕರಿತ ನಟುವಾಂಗ ಮತ್ತು ವಿನಯ್‌ಮಾನ್ಯ(ಗಾಯನ)ರನ್ನೊಳಗೊಂಡಿದ್ದ ಸಂಗೀತ ಸಹಕಾರ ಉಪಯುಕ್ತವಾಗಿತ್ತು.
ಬಹುತೇಕ ಸ್ತ್ರೀ ಕೇಂದ್ರಿತ ಭರತನಾಟ್ಯ ಕ್ಷೇತ್ರದಲ್ಲಿ ಯುವ ನರ್ತಕ ಎಸ್.ರಘುನಂದನ್ ದಾಪುಗಾಲು ಹಾಕುತ್ತಾ ಅನೇಕ ಮೈಲಿಗಲ್ಲುಗಲ್ಲನ್ನು ಸಾಧಿಸುತ್ತಿರುವುದು ಅದ್ಭುತ. ಅಂತಹ ಸಾಧನೆಗಳಲ್ಲಿ ಅವರು ಸಾದರ ಪಡಿಸುತ್ತಿರುವ 'ವಾಗ್ಗೇಯ ನೃತ್ಯ ವೈಭವ ಸರಣಿ' ಕಾರ್ಯಕ್ರಮಗಳು ಪ್ರಮುಖವಾದವು.
ಸೇವಾಸದನದಲ್ಲಿ ಅವರ ದಿವಂಗತ ತಂದೆ ನೃತ್ಯ ಚೇತನ ಡಾ.ಶಾಂಪ್ರಕಾಶ್ ನೆನಪಿನಲ್ಲಿ ನಡೆದ ಎರಡು ದಿವಸಗಳ ಶಾಂ ಸಂಗೀತ ನೃತ್ಯೋತ್ಸವ-೨೦೨೪ ಹಾಗೂ 'ವಾಗ್ಗೇಯ ನೃತ್ಯ ವೈಭವ ಸರಣಿ'ಯ ಐದನೇ ಆವೃತ್ತಿ ರಸಿಕರಿಗೆ ವಿಶಿಷ್ಟವಾದ ಮುದ ನೀಡಿತು. ಮಹಿಳಾ ಹರಿದಾಸರಲ್ಲಿ ಮುನ್ನೆಲೆಯಲ್ಲಿರುವ ಹರಪನಹಳ್ಳಿ ಭೀಮವ್ವನ 'ಸಂಕ್ಷೇಪ ರಾಮಾಯಣ'(ರಘುನಂದನ್ರ ಏಕವ್ಯಕ್ತಿ ಪ್ರದರ್ಶನ), ರಘು ಮತ್ತು ಅವರ ಪತ್ನಿ ನಡೆಸಿದ 'ಶಿವ-ಪಾರ್ವತಿ ಸಲ್ಲಾಪ' ಮತ್ತು ರಘು ಅವರ ಭಾವ ಮತ್ತು ಕಲಾತ್ಮಕ ಹೊಸ ನೃತ್ಯ ನಾಟಕ 'ಸುಧಾಮ ಚರಿತೆ' ನೋಡಗರನ್ನು ರೋಚಕ ರಂಗಪಯಣಕ್ಕೆ ಕರೆದೊಯ್ದಿತ್ತು.
ಭೀಮವ್ವನ ಮೇಲಿನ ರಚನೆಗಳನ್ನು ತಲೆದೂಗಿಸುವ ಗಾಯನ ಮತ್ತು ಅಭಿನಯ, ಆಪ್ಯಾಯಮಾನವಾದ ನೃತ್ಯ, ನಿರರ್ಗಳ ನಿರೂಪಣೆ, ರಂಗಾವತರಣ ಆ ರಚನೆಗಳ ಹೊಸ ವ್ಯಾಖ್ಯಾನದ ಪ್ರಯತ್ನಕ್ಕೂ ಸಾಕ್ಷಿಯಾಗಿತ್ತು. ಒಮ್ಮೊಮ್ಮೆ ಭಕ್ತಿ ಸಂಗೀತವು ಕಾಣಿಸುವ, ಕೈ ಹಿಡಿದು ಕರೆದೊಯ್ಯುವ ಹೊಸ ಚಿತ್ತ ಸ್ಥಿತಿ ಮತ್ತು ಅಚ್ಚರಿ ಸಾಧ್ಯತೆಗಳನ್ನು ತೆರೆಯುವಂತಾಯಿತು.
ರಘುನಂದನ್ ಸ್ವತಃ ತಾವೂ ನೃತ್ತ, ನೃತ್ಯ ಮತ್ತು ಅಭಿನಯಗಳಲ್ಲಿ ಪ್ರಬುದ್ಧರಾಗಿ ಕಾಣಿಸಿಕೊಂಡಿದ್ದಷ್ಟೇ ಅಲ್ಲದೆ ಅವರ ಗುಂಪು ನೃತ್ಯ ಸಂಯೋಜನೆ, ಭರತನಾಟ್ಯದ ಕಲೆ ಮತ್ತು ತಾಂತ್ರಿಕ ವಿವರಗಳನ್ನೂ ಅಳವಡಿಸಿಕೊಂಡಿದ್ದು ಮತ್ತು ಆ ವಿವರಗಳು ಲೋಪಗಳಿಲ್ಲದೆ ಪ್ರಕಟಗೊಳ್ಳುವಂತೆ ಕೈಗೊಂಡ ನಿರ್ದೇಶನ ಕಾವ್ಯ ಮತ್ತು ನೃತ್ಯದ ಆಸ್ವಾದನೆಗೆ ಹೊಸ ರುಚಿಯನ್ನು ಸೇರಿಸುತ್ತದೆ. ನೇರ ಸಂಗೀತ ಸಹಕಾರ ಪರಿಚಿತ ಮತ್ತು ಅಪರೂಪ ರಾಗದಲ್ಲಿ ಮೈತುಂಬಿಕೊಂಡಿತು. ಸುಪರಿಚಿತ 'ಸುಧಾಮ ಚರಿತೆ'ಯಲ್ಲಿ ಸುಧಾಮನಾಗಿ ಕ್ಷಣಕ್ಷಣಕ್ಕೂ ಅ ಪಾತ್ರವನ್ನು ಆವರಿಸಿಕೊಂಡು ಸನ್ನಿವೇಶಗಳನ್ನು ಕಟ್ಟುತ್ತಾ ತಾವೊಬ್ಬ ಪಳಗಿದ ಕಲಾವಿದ ಎಂಬುದನ್ನು ಸಾಬೀತು ಪಡಿಸುತ್ತಾರೆ. ಅವರ ಸಾತ್ವಿಕಾಭಿನಯ ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.