ಸರಭರ ಸರಭರ ಎನ್ನುವ ಲಂಗಾ, ಕಣ್ಣು ಕೋರೈಸುವ ಚೋಲಿ, ಕೈತುಂಬಾ ಬಳೆ, ಹಣೆಯಲ್ಲಿ ಕೋರೈಸುವ ತಿಲಕ, ಬೈತಲುಮಣಿ ಹಣೆಗೆ ಸಿಂಗಾರವೆಂಬಂತೆ ಕಾಣುವ ಟೀಕಾ ಅಲಂಕರಿಸಿಕೊಂಡು ಕೈಗಳಲ್ಲಿ ಕೋಲು ಹಿಡಿದು ಹೊರಟರೆ ನವರಾತ್ರಿಯಲ್ಲಿ ತರುಣಿಯರ ಗರಬಾ ಸಡಗರ ಆರಂಭವೆಂದೇ ಅರ್ಥ.
ಗುಜರಾತ್ ಮೂಲದ ಈ ನೃತ್ಯಕ್ಕೆ ಚೀವನ ಚಕ್ರದ ಹುಟ್ಟು, ಸಾವು ಮರು ಹುಟ್ಟನ್ನು ಪ್ರತಿನಿಧಿಸುತ್ತದೆ. ವೃತ್ತಾಕಾರವಾಗಿ, ಒಬ್ಬರಿಗೆ ಒಬ್ಬರು ಕೈ ಗಳಿಂದ ಚಪ್ಪಾಳೆ ತಟ್ಟುತ್ತ ಅಥವಾ ಕೋಲಿನಿಂದ ಕೋಲನ್ನು ಸ್ಪರ್ಶಿಸುತ್ತ ಸುತ್ತುವರಿಯುತ್ತ ನರ್ತಿಸುವ ಈ ಪ್ರಕಾರ ಭೂಮಿಯ ಚಲನೆಯನ್ನೂ ಪ್ರತಿನಿಧಿಸುತ್ತದೆ.
ವೃತ್ತಾಕಾರಾದ ಸಮೂಹಗಳ ನಡುವೆ ಹಣತೆಯನ್ನ ಹಚ್ಚಿಡುವ ಸಂಪ್ರದಾಯವಿದೆ. ಅದು ಗರ್ಭದೊಳಗೆ ಒಡಮೂಡುವ ಜೀವವನ್ನು ಸಂಕೇತಿಸುತ್ತದೆ. ಗರಬಾ ನೃತ್ಯದ ಮೂಲ ಪದವೇ ಗರ್ಭ. ಹೆಣ್ಣುಮಗು ಮೊದಲು ಋತುಮತಿಯಾದಾಗ ಈ ನೃತ್ಯವನ್ನು ಮಾಡುತ್ತಿದ್ದರು. ನವರಾತ್ರಿಯಲ್ಲಿ ದುರ್ಗೆ ಅಥವಾ ಅಂಬಾದೇವಿಯನ್ನು ಸಂಪ್ರೀತಗೊಳಿಸಲು, ಈ ನೃತ್ಯವನ್ನು ಪ್ರಸ್ತುತಪಡಿಸುತ್ತಿದ್ದರು.
ದೈವೀಕ ಪೂಜೆ ಪುನಸ್ಕಾರ ಒಂದು ಮನರಂಜನೆಯ ರೂಪ ಪಡೆದದ್ದು ಬಾಲಿವುಡ್ ಸಿನಿಮಾಗಳ ಪ್ರಭಾವದಿಂದ. ಇದೀಗ ಪ್ರತಿ ಊರಲ್ಲೂ ದಾಂಡಿಯಾ ಮತ್ತು ಗರಾಬ ನೃತ್ಯಗಳು ನಡೆಯುತ್ತಿವೆ. ಪ್ರತಿಯೊಬ್ಬರೂ ನೃತ್ಯದ ಕೇಂದ್ರಬಿಂದು ಆಗಲು ಇಷ್ಟ ಪಡುತ್ತಾರೆ.
ಕನ್ನಡಿಯಂಟಿಸಿದ, ಚಮಕಿ ಇರುವ ಲೆಹಂಗಾ ಚೋಲಿ, ಘಾಗ್ರಾ ಚೋಲಿಗಳೊಡನೆ ಮಿಣಮಿಣ ಎನ್ನುವ ಸೀರೆಗಳೂ ಕಣ್ಮನ ಸೆಳೆಯುತ್ತವೆ. ಹಚ್ಚಿದ ದೀಪಗಳೆಲ್ಲವೂ ಪ್ರತಿಬಿಂಬಗಳಲ್ಲಿ ಮಿಂಚಲಿ, ದೀಪದೇದೀಪ್ಯಮಾನವಾಗಿ ಬೆಳಗಲಿ ಎಂಬ ಕಾರಣಕ್ಕೆ ಇಂಥ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.
ಈ ದಿನಗಳಿಗೆ ಮ್ಯಾಟ್ ಫಿನಿಷಿಂಗ್ ಮೇಕಪ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ನಿಮ್ಮ ಉಡುಗೆಯ ಬಣ್ಣದ ಐ ಶ್ಯಾಡೊಗಳನ್ನು ಬಳಸಿದರೆ ಚಂದ ಕಾಣುವಿರಿ. ಐ ಶ್ಯಾಡೊಗಳನ್ನು ಗಾಢವಾಗಿ ಬಳಸಿದರೆ ನ್ಯುಡ್ ಲಿಪ್‌ಸ್ಟಿಕ್‌ಗಳನ್ನೇ ಬಳಸಿ. ತುಟಿ ರಂಗು ತಿಳುವಾಗಿದ್ದಷ್ಟೂ ಕಣ್ಣು ಎದ್ದು ಕಾಣುವುದು.
ಗಾಢ ಬಣ್ಣಗಳಾಗಿರುವ ಕೆಂಪು, ಹಸಿರುಗಳ ಜೊತೆಗೆ ಬಿಳಿ ಮತ್ತು ಕಪ್ಪು ಬಣ್ಣದ ಉಡುಗೆಗಳೂ ಚಂದ ಕಾಣುತ್ತವೆ. ಹಳದಿ, ಕೇಸರಿ ಜೊತೆಗೆ ನೇರಳೆ ಮತ್ತು ಕೆಂಪು ಬಣ್ಣಗಳ ಸಂಯೋಜನೆಯ ಉಡುಗೆಗಳು ಹೆಚ್ಚು ಸಾಂಪ್ರದಾಯಿಕ ನೋಟವನ್ನು ನೀಡುತ್ತವೆ.
ಕೈತುಂಬ ಬಳೆ ಧರಿಸುವಾಗ ಎಚ್ಚರವಿರಲಿ. ಗಾಜಿನ ಬಳೆಗಳ ಕಿಣಿಕಿಣಿ ನಾದ ಮತ್ತು ಬೆಳಕಿನ ಪ್ರತಿಫಲನ ಚಂದ ಕಾಣುತ್ತದೆ. ನರ್ತಿಸುವಾಗ ಒಡೆಯದಂತೆ ಎಚ್ಚರವಹಿಸಿ. ಗಾಯಗಳಾಗಲೇಬಾರದು ಎಂದಿದ್ದರೆ ಮೆಟಲ್ ಮತ್ತು ಮೇಣದ ಬಳೆಗಳನ್ನು ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.