ADVERTISEMENT

ಮಹತ್ವದ ಅಭೂತಪೂರ್ವ ಅಪೂರ್ವ ಅಂತರರಾಷ್ಟ್ರೀಯ ನೃತ್ಯೋತ್ಸವ

ಎಂ.ಸೂರ್ಯ ಪ್ರಸಾದ್
Published 11 ನವೆಂಬರ್ 2024, 13:22 IST
Last Updated 11 ನವೆಂಬರ್ 2024, 13:22 IST
   

ಸಂಗೀತ ಮತ್ತು ನೃತ್ಯ ನಾಟಕಗಳ ದೇಶದ ಪ್ರಮುಖ ಪ್ರಾತಿನಿಧಿಕ ಸಂಸ್ಥೆ ನವದೆಹಲಿಯಲ್ಲಿರುವ ಸಂಗೀತ ನಾಟಕ ಅಕಾಡೆಮಿಯು ಆಯೋಜಿಸಿ ಕಳೆದ ವಾರ ಮುಕ್ತಾಯಗೊಂಡ ಆರು ದಿನಗಳ ಭಾರತೀಯ ನೃತ್ಯದ ಅಭೂತಪೂರ್ವ ಹಾಗೂ ಅಪೂರ್ವ ಪ್ರಪ್ರಥಮ ಅಂತರರಾಷ್ಟ್ರೀಯ ನೃತ್ಯೋತ್ಸವ ಭಾರತೀಯ ನೃತ್ಯ ಪ್ರಕಾರಗಳ ಕೆಲವು ಅದ್ಭುತ ಮತ್ತು ಮೋಡಿಮಾಡುವ ವೈವಿಧ್ಯತೆಯನ್ನು ಪ್ರದರ್ಶಿಸಿತು, ಈ ಉತ್ಸವದಲ್ಲಿ ಬೌದ್ಧಿಕ ಪ್ರವಚನಗಳು ವಿಚಾರೋತ್ತೇಜಕ ಚಿಂತನೆಗಳೊಂದಿಗೆ ಮೇಳೈಸಿದವು. ನೃತ್ಯ ವೃತ್ತಿಪರರು, ಶಿಕ್ಷಕರು, ನೃತ್ಯ ಸಂಯೋಜಕರು, ಸಂಶೋಧಕರು, ವಿಮರ್ಶಕರು, ನಿರ್ದೇಶಕರು, ಪೂರೈಕೆದಾರರು, ವ್ಯವಸ್ಥಾಪಕರು, ಸಂಘಟಕರ ಉತ್ಸಾಹಪೂರ್ಣ ಸಮಾಗಮ ಖುಷಿ ಕೊಡುತ್ತಿದೆ. ತದಂಗವಾಗಿ ನಡೆದ ಪ್ರದರ್ಶನಗಳು, ಉಪನ್ಯಾಸಗಳು, ವಿಡಿಯೊ ಪ್ರಕ್ಷೇಪಗಳು, ಸಂಶೋಧನಾ ವರದಿಗಳು, ಅನೌಪಚಾರಿಕ ಚರ್ಚೆಗಳು ಎರಡು ಸಭಾಂಗಣಗಳಲ್ಲಿ ಪೂರ್ಣ ದಿನದ ಕಾರ್ಯಕ್ರಮ.ಗಳಾಗಿ ಮೈದಳೆದವು.

ಎ.ಪಿ. ಶಿಂಧೆ ಸಭಾಂಗಣದಲ್ಲಿ ನಡೆದ ಆರು ದಿನಗಳ ನೃತ್ಯ ಮೇಳವು ಬೆಳಗಿನ ವಿಚಾರ ಸಂಕಿರಣಗಳು ಮತ್ತು ಕಮಾನಿ ಸಭಾಂಗಣದಲ್ಲಿ ಸಂಜೆಯ ನೇರ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.. ಆದ್ದರಿಂದ ದೇಶದ ಶ್ರೀಮಂತ ನೃತ್ಯ ಪರಂಪರೆಗೆ ಜಾಗತಿಕ ಗಮನವನ್ನು ಸೆಳೆಯುವಂತಾಯಿತು. ನೃತ್ಯ ಕಲಾ ಕುಂಭಮೇಳವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟಿಸಿದರು. ಮೇಳದ ಉದ್ದಕ್ಕೂ 200 ಕ್ಕೂ ಹೆಚ್ಚು ಭಾಷಣಕಾರರು 30 ವಿಭಿನ್ನ ಮತ್ತು ವಿಶಿಷ್ಟ ವಿಷಯಗಳ ಕುರಿತು ಭಾಷಣಗಳನ್ನು ನೀಡಿದರು. ಪ್ರಪಂಚದಾದ್ಯಂತದ ಬಂದ ಕಲಾವಿದರಿಂದ 16 ಬೆರಗುಗೊಳಿಸುವ ಪ್ರದರ್ಶನಗಳು ಒಂದು ಹೊಸ ಇತಿಹಾಸವನ್ನು ನಿರ್ಮಿಸಿದವು. ಅಷ್ಟೇ ಅಲ್ಲ, ವಿವಿಧ ಜಾನಪದ ತಂಡಗಳಿಂದ ಪ್ರದರ್ಶಗಳೂ ನಮ್ಮ ಶ್ರೀಮಂತ ಜಾನಪದ ಸಂಸ್ಕೃತಿಗೆ ಕನ್ನಡಿ ಹಿಡಿದವು. ಬೆಳಗಿನ ಭಾಗವು ಬೌದ್ಧಿಕವಾಗಿ ಉತ್ತೇಜಕವಾಗಿ ವಿಚಾರಪ್ರದವೂ ಆಗಿದ್ದು, ಸಂಜೆ ಭಾರತೀಯ ನೃತ್ಯದ ರೋಮಾಂಚಕ ಪ್ರದರ್ಶನವಾಗಿ ಮಾರ್ಪಟ್ಟು ಕಲಾತ್ಮಕ ಮತ್ತು ಭಾವನಾತ್ಮಕ ಅನುಭವಗಳನ್ನು ನೀಡಿದವು. ಜೋರವರಸಿಂಹ ಜಾದವ್ (ಎಸ್‌ಎನ್‌ಎ ಉಪಾಧ್ಯಕ್ಷ), ಡಾ. ಸೋನಲ್ ಮಾನ್‌ಸಿಂಗ್, ಡಾ. ಪದ್ಮಾ ಸುಬ್ರಹ್ಮಣ್ಯಂ, ಗುರು ವಿಮಲಾ ಮೆನನ್, ಗುರು ಪುರು ದಧೀಚ್, ಗುರು ರಾಜ-ರಾಧಾ ರೆಡ್ಡಿ, ಗುರು ದರ್ಶನ ಜವೇರಿ ಮುಂತಾದ ಹೆಸರಾಂತ ಕಲಾವಿದರು ತಮ್ಮ ಅಸಾಧಾರಣ ಕಲಾ ಕೌಶಲ್ಯದಿಂದ ಕಾರ್ಯಕ್ರಮವನ್ನು ಅಲಂಕರಿಸಿದರು.

ಆಕರ್ಷಕ ಛಾಯಾಚಿತ್ರ ಪ್ರದರ್ಶನ

ADVERTISEMENT

‌ಮಧುರ ನೆನಪುಗಳನ್ನು ಮರುಕಳಿಸುವಂತಹ ಭಾರತೀಯ ನೃತ್ಯ ಪ್ರಕಾರಗಳ ವಿಫಲಗೊಳ್ಳದ ಸೆಳವು ಪ್ರದರ್ಶಿಸುವ ಭಾರತೀಯ ನೃತ್ಯದ ಹೆರಿಟೇಜ್ ಜೆಮ್ಸ್ ಎಂಬ ಆಕರ್ಷಕ ಛಾಯಾಚಿತ್ರ ಪ್ರದರ್ಶನವೂ ಸಹ ನೃತ್ಯೋತ್ಸವದ ವಿಶೇಷ ಆಕರ್ಷಣೆಯಾಯಿತು.

ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ, ಮತ್ತು ಪ್ರವಾಸೋದ್ಯಮ, ಸುರೇಶ್ ಗೋಪಿ ಮತ್ತು ಅಸ್ಸಾಂನ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮುಂತಾದ ಗೌರವಾನ್ವಿತ ವ್ಯಕ್ತಿಗಳು ವಿವಿಧ ದಿನಗಳಲ್ಲಿ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು.

ವಿಚಾರ ವೈವಿಧ್ಯದ ಭಾಷಣಗಳು

ಉತ್ಸವದ ಆಳವಾದ ಪ್ರಭಾವವನ್ನು ನಿರಾಕರಿಸಲಾಗಲಿಲ್ಲ. ಅದರ ಪ್ರಮಾಣದಲ್ಲಿ ಮಾತ್ರವಲ್ಲದೆ ಅದರ ಸಾಂಸ್ಕೃತಿಕ ಪ್ರಾಮುಖ್ಯತೆಯಲ್ಲಿಯೂ ಒಂದು ವ್ಯಾಪಕವಾದ ಯೋಜನೆಯಾಗಿ ಅದು ರೂಪುಗೊಂಡಿದ್ದು ಶ್ಲಾಘನೀಯ. ಅದು ನೃತ್ಯಗಾರರು, ವಿದ್ವಾಂಸರು, ನೀತಿ ನಿರೂಪಕರು ಮತ್ತು ಲೋಕೋಪಕಾರಿಗಳು ಸೇರಿದಂತೆ ಭಾಗವಹಿಸುವವರ ವೈವಿಧ್ಯಮಯ ಗುಂಪನ್ನು ಒಟ್ಟುಗೂಡಿಸಿತು. ಕಲಾವಿದರ ನಡುವೆ ವಿನಿಮಯ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಖಚಿತಪಡಿಸಿಕೊಳ್ಳುವುದು, ಕಲಾವಿದರ ಸೃಜನಶೀಲ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವುದು ಮತ್ತು ಹೊಸ ಕೌಶಲ್ಯಗಳ ಸ್ವಾಧೀನ, ಜ್ಞಾನ ಮತ್ತು ಸಾಮರ್ಥ್ಯಗಳು, ಪ್ರೇಕ್ಷಕರ ಮೇಲೆ ಪ್ರಭಾವ, ಕಲೆಯನ್ನು ಅನುಭವಿಸುವ ಹೊಸ ವಿಧಾನಗಳನ್ನು ಸೃಷ್ಟಿಸುವುದು, ಪರಂಪರೆಗಳ ಸಂರಕ್ಷಣೆ, ಕಲಾನುಭವಕ್ಕೆ ಪ್ರೇಕ್ಷಕರನ್ನು ಸಕ್ರಿಯಗೊಳಿಸುವುದು ಮುಂತಾದ ಸಾಂಸ್ಕೃತಿಕವಾಗಿ ಶ್ರೀಮಂತ ವಿಚಾರಗಳ ವಿನಿಮಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸುವಂತಾಯಿತು. ಬಹು ವಿರಳ ಹಾಗೂ ಚಿರಪರಿಚಿತವಲ್ಲದ ನೃತ್ಯ ಪ್ರಕಾರಗಳನ್ನು ಪೋಷಿಸಲು ಮತ್ತು ಅವುಗಳನ್ನು ಉತ್ತೇಜಿಸಲು ಸೂಕ್ತ ಮತ್ತು ದೃಢ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯತೆಗಳ ಕುರಿತಾಗಿಯೂ ಅಭಿಪ್ರಾಯಗಳು ಮೂಡಿ ಬಂದವು..ಭಾರತದ ಪ್ರತಿಯೊಂದು ಜಿಲ್ಲೆಗೂ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಅಸ್ಮಿತೆ ಇದ್ದು, ಅದನ್ನು ಪ್ರತಿಬಿಂಬಿಸುವ ಕಲಾ ಪ್ರಕಾರಗಳು ಮರೆಯಾಗದಂತೆ ನೋಡಿಕೊಳ್ಳಬೇಕಾದ ಆವಶ್ಯಕತೆಯ ಬಗ್ಗೆಯೂ ವಿಶಿಷ್ಟ ಬೆಳಕನ್ನು ಚೆಲ್ಲಲಾಯಿತು.

ನೃತ್ಯ ಹಬ್ಬದ ಸಮಾರೋಪ ಸಮಾರಂಭದಲ್ಲಿ ದೇಶದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಜಗದೀಪ್ ಧಂಖರ್, ಗೌರವಾನ್ವಿತ ಗಜೇಂದ್ರ ಸಿಂಗ್ ಶೇಖಾವತ್ (ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು) ಮತ್ತು ಹೇಮಾಮಾಲಿನಿ (ಸಂಸತ್ತಿನ ಸದಸ್ಯೆ) ಮತ್ತಿತರ ಗಣ್ಯಾತಿಗಣ್ಯರು ತಮ್ಮ ಉಪಸ್ಥಿತಿಯಿಂದ ಸಮಾರಂಭದ ಮೆರಗನ್ನು ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.