ಕೊರೋನಾ ಕಾಲದಲ್ಲಿ ವ್ಯವಸ್ಥಿತ ರೂಪ ಪಡೆದ ಆನ್‍ಲೈನ್ ಯಕ್ಷಗಾನ ಕಲಿಕೆ ಕೊರೋನೋತ್ತರ ಕಾಲದಲ್ಲಿ ವೃತ್ತಿಪರ ಎಂಬ ಹಂತಕ್ಕೆ ತಲುಪಿದೆ. ಕಂಪ್ಯೂಟರ್ ಮುಂದೆ ಕುಳಿತು ಅಥವಾ ಮೊಬೈಲ್ ಫೋನ್ ಕೈಯಲ್ಲಿ ಹಿಡಿದು ತಾಳ-ಹಾವ-ಭಾವ-ನಾಟ್ಯವನ್ನು ಕಲಿತ ಅನೇಕರು ವಿವಿಧ ಮೇಳಗಳಲ್ಲಿ ವೇಷ ತೊಡುವಷ್ಟು ಪ್ರಾವೀಣ್ಯ ಮತ್ತು ಸ್ಥೈರ್ಯ ಗಳಿಸಿದ್ದಾರೆ.
ಚೆಂಡೆ-ಮದ್ದಳೆಯ ಸೊಗಸು ಹಿನ್ನೆಲೆಯಲ್ಲಿ ಮೇಳೈಸುತ್ತಿತ್ತು. ಸುಧನ್ವಾರ್ಜುನ ಕಥಾಮೃತ ಪ್ರಮುಖ ಘಟ್ಟ ತಲುಪಿತ್ತು. ಬೆಂಗಳೂರಿನ ಬಡಾವಣೆಯೊಂದರ ಫ್ಲ್ಯಾಟ್‍ನ ಟೆರೇಸ್ ಮೇಲೆ ಹೂಕುಂಡಗಳ ನಡುವೆ ನಿಂತಿದ್ದ ಸುಧನ್ವನು ಅತ್ಯುತ್ಸಾಹದಲ್ಲಿದ್ದ. ಅತ್ತ ಉಡುಪಿಯ ಮನೆಯೊಂದರ ಕೋಣೆಯಲ್ಲಿ ನಿಂತಿದ್ದ ಅರ್ಜುನ ಛಲ ಬಿಡದೆ ಕಾಯುತ್ತಿದ್ದ. ಮಂಗಳೂರಿನ ಮನೆಯ ಮಹಡಿ ಮೇಲೆ, ಡಿಟಿಎಚ್‍ನ ಡಿಶ್‍ಗಳ ನಡುವೆ ನಿಂತಿದ್ದ ಸುಧನ್ವನೂ ಹೋರಾಟದ ಹುರುಪಿನಲ್ಲಿದ್ದ. ಅಮೆರಿಕದ ಮಹಾನಗರದ ಡ್ರಾಯಿಂಗ್ ರೂಂನಲ್ಲಿದ್ದ ಅರ್ಜುನನೂ ಚಿಕ್ಕಮಗಳೂರು, ಮೈಸೂರು ಮತ್ತು ಇತರ ನಗರಗಳಲ್ಲಿದ್ದ ಸುಧನ್ವರೂ ಯುದ್ಧಕ್ಕೆ ಸನ್ನದ್ಧರಾಗಿದ್ದರು.
ಪಾರ್ಥ-ಸುಧನ್ವರ ಮುಖಾಮುಖಿಯ ಈ ಸನ್ನಿವೇಶದಲ್ಲಿ ರೋಷಾವೇಶದಲ್ಲಿದ್ದ ಸುಧನ್ವನ ಧ್ವನಿ ಜೋರಾಗಿ ಮೊಳಗುತ್ತಿತ್ತು. ಪಾರ್ಥನತ್ತ ನೋಡುತ್ತ ಎದೆಸೆಟೆದು ನಿಂತಿದ್ದ ಆತ 'ಪಾರ್ಥ, ಇನ್ನೇಕೆ ತಡ ತೊಡು ಬಾಣ ಎನ್ನುತ್ತಿದ್ದಂತೆ ಆ ಧ್ವನಿ ಬೆಂಗಳೂರಿನಿಂದಲೂ ಮಂಗಳೂರಿನಿಂದಲೂ ಉಡುಪಿಯಿಂದಲೂ ವಿದೇಶದಿಂದಲೂ ಪ್ರತಿಧ್ವನಿಸಿದಂತಾಯಿತು. ಹೂಡು ಶರ, ತೊಡು ಶರ, ಹೂಡು ಬಾಣ....' ಎಂಬ ಸವಾಲು ಎಲ್ಲ ಕಡೆಯಿಂದ ಕೇಳಿತು. ಕಂಪ್ಯೂಟರ್ ಪರದೆಯ ಮೇಲೆ ಇಡೀ ಪ್ರಸಂಗ ವಿಜೃಂಭಿಸಿತು. ಗುರುವಿನ ಮುಖದಲ್ಲಿ ಮುಗುಳು ನಗೆ ಮೂಡಿತು.
ಇದು ಒಂದು ಪ್ರಸಂಗ. ಇಂಥ ಹತ್ತಾರು ಪ್ರಸಂಗಗಳು ಆನ್‍ಲೈನ್‍ನಲ್ಲೇ ಸೃಷ್ಟಿಯಾಗಿ, ನೂರಾರು ಕಲಾವಿದರು ಬೆಳಕಿಗೆ ಬರುತ್ತಾರೆ, ಆನ್‍ಲೈನ್ ಯಕ್ಷಗಾನ ಕಲಿಕೆಯ ಮಹಿಮೆಯಿಂದ.
ಕೊರೋನಾ ಕಾಲದಲ್ಲಿ ವ್ಯವಸ್ಥಿತ ರೂಪ ಪಡೆದ ಆನ್‍ಲೈನ್ ಯಕ್ಷಗಾನ ಕಲಿಕೆ ಕೊರೋನೋತ್ತರ ಕಾಲದಲ್ಲಿ ವೃತ್ತಿಪರ ಎಂಬ ಹಂತಕ್ಕೆ ತಲುಪಿದೆ. ಕಂಪ್ಯೂಟರ್ ಮುಂದೆ ಕುಳಿತು ಅಥವಾ ಮೊಬೈಲ್ ಫೋನ್ ಕೈಯಲ್ಲಿ ಹಿಡಿದು ತಾಳ-ಹಾವ-ಭಾವ-ನಾಟ್ಯವನ್ನು ಕಲಿತ ಅನೇಕರು ವಿವಿಧ ಮೇಳಗಳಲ್ಲಿ ವೇಷ ತೊಡುವಷ್ಟು ಪ್ರಾವೀಣ್ಯ ಮತ್ತು ಸ್ಥೈರ್ಯ ಗಳಿಸಿದ್ದಾರೆ.
ಮೊದಲು ಬಾಯಿಗೆ, ಅಲ್ಲಿಂದ ಕೈಗೆ, ನಂತರ ಕಾಲಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಕಲಿತು ಕಲಾವಿದರಾದ ಅನೇಕರು ಆನ್‍ಲೈನ್ ಕಲಿಕೆಯ ಸ್ವಾದವನ್ನು ಅನುಭವಿಸಿ ಧನ್ಯರಾಗಿದ್ದಾರೆ.
ತಾಂ..ತತ್ತ ತತ್ತ...ತಾಂ...ತತ್ತ ತಾಂ; ತಿತ್ತಿಥೈ...ತಕಧಿಮಿ ತಕಜಣು... ಮುಂತಾದ ತಾಳಗಣನೆಯ ಪಾಠದಿಂದ ‘ಧಿಗಿಣ’ ಸುತ್ತುವ ವರೆಗೂ ಆರು ತಿಂಗಳ ಪ್ರಾಥಮಿಕ ಪಾಠ ಆನ್‍ಲೈನ್ ಯಕ್ಷಗಾನ ಅಭ್ಯಾಸದಲ್ಲಿ ಇರುತ್ತದೆ. ನಂತರ ಪ್ರಸಂಗ ಅಭ್ಯಾಸ ನಡೆಯುತ್ತದೆ. ಪ್ರಸಾದ್ ಚೇರ್ಕಾಡಿ, ಸತೀಶ್ ಅಗ್ಪಾಲ, ಸುಷ್ಮಾ ಮಯ್ಯ, ಪ್ರಿಯಾಂಕಾ ಮೋಹನ್ ಮುಂತಾದವರು ಆನ್‌ಲೈನ್ ಪಾಠ ಮಾಡುವುದರಲ್ಲಿ ಸಕ್ರಿಯರಾಗಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರು, ದೇಶದ ನಾನಾ ಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಮಾತ್ರವಲ್ಲದೆ, ಯಕ್ಷಗಾನದ ಬಗ್ಗೆ ಕೇವಲ ಕೇಳಿರುವವರು ಮತ್ತು ಆ ಕಲೆಯನ್ನು ನೋಡಿಯೇ ಗೊತ್ತಿಲ್ಲದವರು ಕೂಡ ಆನ್‍ಲೈನ್ ಪಾಠ ಕೇಳಲು ಆಸಕ್ತಿ ವಹಿಸುತ್ತಿದ್ದಾರೆ. ಕೆಲವರು ಆನ್‌ಲೈನ್‌ನಲ್ಲೇ ಕಲಿತು ಪರಿಣಿತಿ ಜೊಂದಿ ವಿವಿಧ ಯಕ್ಷಗಾನ ಮೇಳಗಳಲ್ಲಿ ಸೇರಿಕೊಂಡಿದ್ದಾರೆ.
'ಒಂಬತ್ತು ತಿಂಗಳು ಕಲಿತರೆ ಕಲಾವಿದರಾಗಿ ಹೊರಹೊಮ್ಮುವಷ್ಟು ಪಕ್ವವಾಗುತ್ತಾರೆ. ನಮ್ಮಲ್ಲಿ ಕೋರ್ಸ್ ಪೂರೈಸಿದ ಅನೇಕ ಮಂದಿ ಅವರವರ ಊರ ಯಕ್ಷಗಾನ ಮೇಳಗಳಲ್ಲಿ ವೇಷಗಾರಿಕೆ ಮತ್ತು ಭಾಗವತಿಕೆ ಮಾಡುತ್ತಿದ್ದಾರೆ' ಎನ್ನುತ್ತಾರೆ ಕಥೆಗಾರರು ತಂಡದ ಬೋಧಕ ಪ್ರಸಾದ್ ಚೇರ್ಕಾಡಿ.
ಬಾಲ್ಯದ ಹಂಬಲಕ್ಕೆ ತಡವಾಗಿ ಲಭಿಸಿದ ಪೋಷಣೆ
ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಕೊಲ್ಯ ನಿವಾಸಿ ಸ್ಮಿತಾ ಅವರು ಬಾಲ್ಯದಲ್ಲಿ ಯಕ್ಷಗಾನ ನೋಡಿಯೇ ಬೆಳೆದವರು. ಈ ಕಲೆಯನ್ನು ಕಲಿಯಬೇಕೆಂಬ ಹಂಬಲ ಅವರಲ್ಲಿ ಆಗಲೇ ಮೂಡಿತ್ತು. ಆದರೆ ಅದಕ್ಕೆ ಕಾಲ ಕೂಡಿರಲಿಲ್ಲ. ಈಗ ಅವರು ಮಂಗಳೂರಿನ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದ ಉಪನ್ಯಾಸಕಿ.
'ಆನ್‍ಲೈನ್‍ನಲ್ಲಿ ಮೊದಲು ಕಲಿತದ್ದು ನಾಟ್ಯ. ನಂತರ ಭಾಗವತಿಕೆಯತ್ತ ಆಕರ್ಷಿತಳಾದೆ. ಮೂರು ತಿಂಗಳು ಬೇಸಿಕ್ ತರಬೇತಿ ಪಡೆದೆ. ನಂತರ ಮೂರು ತಿಂಗಳು ಅಡ್ವಾನ್ಸ್‌ಡ್ ತರಬೇತಿಯಲ್ಲಿ ಪಾಲ್ಗೊಂಡೆ. ಮೂರು ಪ್ರಸಂಗಗಳಲ್ಲಿ ಭಾಗವಹಿಸಿದ್ದೇನೆ. ಆನ್‍ಲೈನ್ ತರಗತಿಯಲ್ಲಿ ಕಲಿಯುವಾಗ ಗುರುಗಳು ಹತ್ತಿರದಲ್ಲೇ ಇದ್ದು ನಮಗೊಬ್ಬರಿಗೆ ಮಾತ್ರ ಹೇಳಿಕೊಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಇದು ಕಲಿಕೆಗೆ ಅನುಕೂಲ ಆಗುತ್ತದೆ' ಎನ್ನುತ್ತಾರೆ ಸ್ಮಿತಾ.
ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮೈಕ್ರೊಬಯಾಲಜಿ ಪದವಿ ವಿದ್ಯಾರ್ಥಿಯಾಗಿರುವ ಕಾಸರಗೋಡು ನೀರ್ಚಾಲಿನ ಸುಮನ್‍ರಾಜ್ ನೀಲಂಗಳ ಅವರು ಆನ್‍ಲೈನ್ ತರಗತಿಗೆ ಹಾಜರಾಗಿ ಭಾಗವತಿಕೆ ಮತ್ತು ವೇಷಗಾರಿಕೆ ಎರಡನ್ನೂ ನಿಭಾಯಿಸುತ್ತಿದ್ದಾರೆ. ಕೊಲ್ಲಂಗಾನ ಮೇಳದಲ್ಲಿ 'ಪಾತ್ರಧಾರಿ'ಯಾಗಿದ್ದಾರೆ.
'ರಾಗ-ಸ್ವರ ಸಂಚಾರವನ್ನು ಸೂಕ್ಷ್ಮವಾಗಿ ಕಲಿಯಲು ಆನ್‍ಲೈನ್ ತರಗತಿಗಳು ಅನುಕೂಲ ಮಾಡಿವೆ. ಭಾಗವತಿಕೆಗೆ ಆನ್‍ಲೈನ್ ತರಗತಿಗಳು ಹೆಚ್ಚು ಉತ್ತಮ ಎಂದೆನಿಸುತ್ತದೆ. ಆಫ್‍ಲೈನ್ ತರಗತಿಗಳಲ್ಲಿ ತುಂಬ ಜನರು ಇರುವುದರಿಂದ ಗೊಂದಲ ಆಗುತ್ತದೆ. ಆನ್‍ಲೈನ್‍ನಲ್ಲಿ ವೈಯಕ್ತಿಕವಾಗಿ ಕಾಳಜಿ ವಹಿಸಿ ಕಲಿಸಿಕೊಡುತ್ತಾರೆ' ಎಂಬುದು ಸುಮನ್‍ರಾಜ್ ಅಭಿಪ್ರಾಯ.
ರಫೀಕುದ್ದೀನ್ ಆಸೆಗೆ ಜೀವ ತುಂಬಿದ ಆನ್‍ಲೈನ್ ಪಾಠ
ದಕ್ಷಿಣ ಕನ್ನಡದ ಮಡಂತ್ಯಾರು ನಿವಾಸಿ, ಕುವೈತ್‍ನಲ್ಲಿ ಉದ್ಯೋಗದಲ್ಲಿರುವ ರಫೀಕುದ್ದೀನ್ ಅವರು ಬಾಲ್ಯದಿಂದಲೇ ಯಕ್ಷಗಾನದ ಒಡನಾಟ ಇರಿಸಿಕೊಂಡವರು. ನಾಟ್ಯ ಮತ್ತು ಮದ್ದಳೆ ನುಡಿಸುವಿಕೆಯಲ್ಲಿ ಪಳಗಿರುವ ಅವರ ಭಾಗವತಿಕೆ ಕಲಿಯುವ ಆಸೆ ಈಡೇರಿಸಿದ್ದು ಆನ್‍ಲೈನ್ ತರಬೇತಿ. ತಂದೆ ಅಬ್ದುಲ್ ಶುಕೂರ್ ಜೊತೆ ಬಾಲ್ಯದಿಂದಲೇ ಯಕ್ಷಗಾನ, ಭೂತದ ಕೋಲ ಮುಂತಾದವುಗಳನ್ನು ನೋಡುತ್ತ ಬೆಳೆದ ರಫೀಕುದ್ದೀನ್ ಅವರಿಗೆ ನೆಲದ ಕಲೆಯ ಬಗ್ಗೆ ಆಗಲೇ ಆಸಕ್ತಿ ಮೂಡಿತ್ತು. ಬಿಕಾಂ ಪದವಿ ಗಳಿಸಿದ ನಂತರ ಕಂಪ್ಯೂಟರ್ ಜ್ಞಾನದಲ್ಲೂ ಪರಿಣಿತಿ ಪಡೆದ ಅವರು ಕಾಲೇಜು ದಿನಗಳಲ್ಲೇ ಹೆಜ್ಜೆಗಾರಿಕೆ ಕಲಿತಿದ್ದರು. ಕಾಲೇಜು ವಾರ್ಷಿಕೋತ್ಸವದಲ್ಲಿ ಮೊದಲ ಬಾರಿ ವೇಷವನ್ನೂ ತೊಟ್ಟಿದ್ದರು.
ಈ ನಡುವೆ ಹಿಮ್ಮೇಳದಲ್ಲೂ ಆಸಕ್ತಿ ಹುಟ್ಟಿ ಮದ್ದಳೆ ನುಡಿಸಲು ಕಲಿತರು. ವಿವಿಧ ಮೇಳಗಳಲ್ಲಿ ಮುಮ್ಮೇಳ ಮತ್ತು ಹಿಮ್ಮೇಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೂವರೆ ದಶಕದಿಂದ ಕುವೈತ್‍ನಲ್ಲಿರುವ ಅವರು ಅಲ್ಲಿ ತುಳುಕೂಟವನ್ನು ಹುಟ್ಟುಹಾಕಿ ಯಕ್ಷಗಾನ ಸೇವೆ ಮಾಡುತ್ತಿದ್ದಾರೆ. ಈ ನಡುವೆ ಭಾಗವತಿಕೆಯನ್ನೂ ಕಲಿಯುತ್ತಿದ್ದಾರೆ.
'ಆನ್‍ಲೈನ್ ತರಗತಿಯಿಂದಾಗಿ ಭಾಗವತಿಕೆ ಕಲಿಯುವ ಆಸೆಗೆ ಬಣ್ಣ ತುಂಬಲು ಸಾಧ್ಯವಾಗಿದೆ. ಭಾಗವತಿಕೆಯಲ್ಲಿ ಬಹಳ ಬೇಗ ಪಾರಮ್ಯ ಸಾಧಿಸಲು ಆನ್‍ಲೈನ್ ತರಗತಿ ನೆರವಾಗಿದೆ' ಎಂದು ಅವರು ಹೇಳಿದರು.
ಕಲಿಕೆಯ ಎಲ್ಲ ಹಂತಗಳಲ್ಲೂ ಆನ್‍ಲೈನ್ ತರಗತಿಯಿಂದ ಅನುಕೂಲ ಆಗುತ್ತಿದೆ. ಗುರುವಿನ ಮುಂದೆ ಕುಳಿತು ಕಲಿಯುವ ವಿದ್ಯೆಯನ್ನು ದೂರದಲ್ಲಿದ್ದೂ ಕಲಿಯಬಹುದು ಎಂಬ ಅರಿವು ಕೂಡ ಮೂಡಿದೆ. ಅಮೆರಿಕ, ಸ್ವಟ್ಜರ್ಲೆಂಡ್ ಮುಂತಾದ ಕಡೆಯಲ್ಲಿರುವವರು ಕೂಡ ಆನ್‍ಲೈನ್ ತರಗತಿಗಳ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಯುವಕ-ಯುವತಿಯರು ಹೆಚ್ಚಾಗಿ ಬರುತ್ತಿದ್ದಾರೆ.
ಸತೀಶ್ ಅಗ್ಪಾಲ, ಆನ್‍ಲೈನ್ ಶಿಕ್ಷಕ
ಕಲಿಯುವುದು ಆನ್‍ಲೈನ್ ಮಾದರಿಯಲ್ಲಾದರೂ ಅಂತಿಮವಾಗಿ ಪ್ರದರ್ಶನ ನೀಡಬೇಕಾಗಿರುವುದು ವೇದಿಕೆಯಲ್ಲಿ, ಸಾರ್ವಜನಿಕರ ಮುಂದೆ. ಅದನ್ನು ನೆನಪಿನಲ್ಲಿಟ್ಟುಕೊಂಡೇ ತರಬೇತಿ ನೀಡಲಾಗುತ್ತದೆ. ಅವರವರ ಊರಿನ ಮೇಳದಲ್ಲಿ ಸೇರಿಕೊಳ್ಳಲು ಸಾಧ್ಯವಾಗಲಿ ಎಂಬ ಆಶಯದೊಂದಿಗೆ ಅಭ್ಯಾಸ ಮಾಡಿಸಲಾಗುತ್ತದೆ. ಬೆಂಗಳೂರಿನಲ್ಲಿ ಜನಿಸಿ ಬೆಳೆದ ಕರಾವಳಿಗರ ಮಕ್ಕಳು ಮಾತ್ರವಲ್ಲದೆ, ಬೆಂಗಳೂರಿನವರೇ ಆದ ಅನೇಕ ಮಂದಿ ಆಸಕ್ತಿಯಿಂದ ಯಕ್ಷಗಾನ ಕಲಿಯುತ್ತಿದ್ದಾರೆ. ಹೊಸದಾಗಿ ಯಕ್ಷಲೋಕಕ್ಕೆ ತೆರೆದುಕೊಳ್ಳುತ್ತಿರುವ ಅವರಿಗೆ ಪಾಠ ಮಾಡುವಾಗ ಯಕ್ಷಲೋಕ ಹೊಸ ಮಜಲನ್ನು ದಾಟುತ್ತಿದೆ ಎಂಬ ಭಾವನೆ ಮೂಡುತ್ತಿದೆ.
ಪ್ರಸಾದ್ ಚೇರ್ಕಾಡಿ, ಆನ್‍ಲೈನ್ ಯಕ್ಷಗಾನ ಬೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.