ADVERTISEMENT

ಕಲಾವಿದೆಯರ ಕಥೆಯ ಕನ್ನಡಿ ನೃತ್ಯಗಾಥಾ

ವಿಕ್ರಂ ಕಾಂತಿಕೆರೆ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
<div class="paragraphs"><p>ಏಕವ್ಯಕ್ತಿ ಪ್ರದರ್ಶನ, ಅನೇಕ ಭಾವಗಳ ದರ್ಶನ... ‘ನೃತ್ಯಗಾಥಾ’ದಲ್ಲಿ ವಿದುಷಿ ಅನಘಶ್ರೀ&nbsp;</p></div>

ಏಕವ್ಯಕ್ತಿ ಪ್ರದರ್ಶನ, ಅನೇಕ ಭಾವಗಳ ದರ್ಶನ... ‘ನೃತ್ಯಗಾಥಾ’ದಲ್ಲಿ ವಿದುಷಿ ಅನಘಶ್ರೀ 

   

 ಚಿತ್ರಗಳು: ಫಕ್ರುದ್ದೀನ್ ಎಚ್

ಹೆಣ್ಣೆಂಬ ಕಾರಣದಿಂದ ಸಮಾಜದ ದೂಷಣೆಗೆ ಒಳಗಾಗುವ ಸಂದರ್ಭಗಳನ್ನು ಮನೋಜ್ಞವಾಗಿ ಕಟ್ಟಿಕೊಡುವ ನಾಟಕ ‘ನೃತ್ಯಗಾಥಾ’ ಏಕವ್ಯಕ್ತಿ ಪ್ರದರ್ಶನ. ಉಡುಪಿ ಕೊಡವೂರಿನ ನೃತ್ಯನಿಕೇತನ ಸಂಸ್ಥೆಯ ಈ ನಾಟಕ ಎರಡು ವರ್ಷಗಳ ವಿರಾಮದ ಬಳಿಕ ಮಂಗಳೂರಿನಲ್ಲಿ ಮತ್ತೆ ಪ್ರದರ್ಶನ ಕಂಡಿತು.

‘ಹೆಣ್ಣೊಬ್ಬಳು ಕಾಣೆಯಾದರೆ ಓಡಿಹೋದಳೆಂದೇ ಯಾಕೆ ಭಾವಿಸಬೇಕು...?’

ADVERTISEMENT

ಲಖನೌದಲ್ಲಿ ನೃತ್ಯ ಮಾಡುತ್ತಿದ್ದ ಉಮ್ರಾನ್ ಜಾನ್ ಎಂಬ ವೇಶ್ಯೆ ‘ಪ್ರತಿಷ್ಠಿತ’ಳಾದ ನಂತರ, ಜನಿಸಿದ ಊರು ಕಾನ್ಪುರಕ್ಕೆ ಬಂದ ಸಂದರ್ಭದಲ್ಲಿ ತಾಯಿಯ ಮೂದಲಿಕೆಗೆ ದಿಟ್ಟ ಉತ್ತರ ನೀಡಿ ಕೇಳಿದ ಮರುಪ್ರಶ್ನೆ ಇದು.

ಕಲಾವಿದೆಯರ ಬದುಕಿನ ತುಮುಲಗಳನ್ನು ಬಿಂಬಿಸಿ ಇಂಥ ಪ್ರಶ್ನೆಗಳನ್ನು ಹುಟ್ಟುಹಾಕುತ್ತ, ಉತ್ತರ ಅರಸುತ್ತಲೇ ‘ನೃತ್ಯಗಾಥಾ’ ಏಕವ್ಯಕ್ತಿ ನೃತ್ಯನಾಟಕ ಪ್ರೇಕ್ಷಕರ ಮನದಾಳಕ್ಕೆ ಇಳಿಯುತ್ತದೆ, ಯೋಚನಾ ಲಹರಿಯಲ್ಲಿ ತೇಲಿಸುತ್ತದೆ.

ವೈಯಕ್ತಿಕ ಜೀವನ, ವೃತ್ತಿ ಬದುಕು ಮತ್ತು ಹವ್ಯಾಸಗಳಿಗೆ ಹೆಣ್ಣೆಂಬ ಕಾರಣದಿಂದ ಅಕಾಲದಲ್ಲಿ ತೆರೆ ಎಳೆಯಬೇಕಾದ ಅಥವಾ ಸಮಾಜದ ದೂಷಣೆಗೆ ಒಳಗಾಗುವ ಸಂದರ್ಭಗಳನ್ನು ಮನೋಜ್ಞವಾಗಿ ಈ ನಾಟಕ ತೆರೆದಿಡುತ್ತದೆ. ಹೆಣ್ಣಿಗೆ ಇಂಥ ಶಿಕ್ಷೆಗಳು ಸಾರ್ವಕಾಲಿಕ ಎಂಬ ವಾಸ್ತವವನ್ನೂ ಆಗಾಗ ನೆನಪಿಸುತ್ತದೆ.

ನೃತ್ಯದ ಸೊಬಗು, ಅಭಿನಯದ ಸೊಗಸು, ಮಾತಿನ ವಾಗ್ಮಯ, ಬೆಳಕು–ಸಂಗೀತದ ಆಪ್ತ ಕೂಡುವಿಕೆಯಿಂದ ರಂಗಪ್ರಸ್ತುತಿಯ ಪರಿಪೂರ್ಣ ಆನಂದ ನೀಡುವ ನೃತ್ಯಗಾಥಾ ಮೂವರು ನರ್ತಕಿಯರ ಕಥೆಯನ್ನು ಆಧಾರವಾಗಿರಿಸಿ ರೂಪಿಸಿದ ಪ್ರಯೋಗ. ನೀಲಾಂಜನೆ, ಶಾಂತಲೆ ಮತ್ತು ಉಮ್ರಾನ್ ಜಾನ್ ಅವರ ಕಲಾಜೀವನವನ್ನು ಹೆಣ್ಣು ಸಾಮಾಜಿಕವಾಗಿ ಎದುರಿಸುವ ಸಮಸ್ಯೆಗಳ ಚಿತ್ರಣಕ್ಕಾಗಿ ಬಳಸಿಕೊಂಡಿರುವುದು ಈ ಪ್ರಯೋಗದ ಹೆಚ್ಚುಗಾರಿಕೆ.

ಉಡುಪಿ ಕೊಡವೂರಿನ ನೃತ್ಯನಿಕೇತನ ಸಂಸ್ಥೆ 2018ರಲ್ಲಿ ಮೊದಲ ಬಾರಿ ರಂಗಕ್ಕೆ ತಂದ ನಾಟಕ ಎರಡು ವರ್ಷಗಳ ವಿರಾಮದ ನಂತರ ಮತ್ತೆ ಪ್ರದರ್ಶನಗೊಳ್ಳುತ್ತಿದೆ. ಮಂಗಳೂರಿನ ಸೇಂಟ್ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ, ಅರೆಹೊಳೆ ಪ್ರತಿಷ್ಠಾನ ಮತ್ತು ಜೆಸಿಐ ಸಂಯುಕ್ತವಾಗಿ ಈಚೆಗೆ ಆಯೋಜಿಸಿದ್ದ ಬಹುಭಾಷಾ ರಂಗೋತ್ಸವವು ‘ನೃತ್ಯಗಾಥಾ’ದ ಮರುಪ್ರದರ್ಶನಕ್ಕೆ ವೇದಿಕೆಯಾಯಿತು.

ಎಂಜಿನಿಯರ್, ಉಡುಪಿ ಮಾರ್ಪಳ್ಳಿಯ ಅನಘಶ್ರೀ ಈ ನಾಟಕದ ಪಾತ್ರಧಾರಿ. ಭರತನಾಟ್ಯ, ಯಕ್ಷಗಾನ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅನಘಶ್ರೀ ಪಾತ್ರಗಳೇ ಪ್ರೇಕ್ಷಕರ ಮುಂದೆ ಜೀವತಳೆದಷ್ಟು ತಾದಾತ್ಮ್ಯದಿಂದ ಅಭಿನಯಿಸುವ ಮೂಲಕ ನಾಟಕಕ್ಕೆ ಜೀವರಸ ತುಂಬಿದ್ದಾರೆ.

ಚಿಂತನಶೀಲ ಯುವ ನೃತ್ಯಕಲಾವಿದೆಯೊಬ್ಬಳು ನೃತ್ಯ ಅಧ್ಯಯನಕ್ಕೆ ತೊಡಗುವ ಸನ್ನಿವೇಶದ ಮೂಲಕ ‘ನೃತ್ಯಗಾಥಾ’ ಆರಂಭವಾಗುತ್ತದೆ. ‘ನನ್ನ ಒಳಗಿನ ನೃತ್ಯಗಾರ್ತಿಯನ್ನು ಕಳಚಿಡದೆ ನೃತ್ಯ ಮತ್ತು ನಾನು ಒಂದೇ ಆಗುವ ಮಾರ್ಗಕ್ಕಾಗಿ ಮನಸ್ಸು ಸದಾ ಹುಡುಕಾಡುತ್ತಿದೆ’ ಎಂದು ಆರಂಭದಲ್ಲೇ ಹೇಳುವ ಮಾತು ಅಧ್ಯಯನ ಮಾಡುವ ಕಲಾವಿದೆಗೂ ನಾಟಕದ ಪಾತ್ರಗಳಿಗೂ ಅನ್ವಯವಾಗುತ್ತದೆ.

ಪಂಪನು ‘ಮುಗಿಲ ಮರೆಯ ವಿದ್ಯುಲ್ಲತೆ’ ಎಂದು ಬಣ್ಣಿಸಿದ ನೀಲಾಂಜನೆಯ ಪ್ರಸಂಗದ ಮೂಲಕ ನಾಟಕ ಚುರುಕು ಪಡೆಯುತ್ತದೆ. ವೇದಿಕೆಯಲ್ಲೇ ಕುಸಿದು ಬಿದ್ದು ನೀಲಾಂಜನೆಯ ಆಯುಷ್ಯ ಮುಗಿಯುತ್ತದೆ. ಆದರೆ ಹೊರಪ್ರಪಂಚಕ್ಕೆ ತಿಳಿಯದಂತೆ ಬದಲಿ ನೃತ್ಯಗಾರ್ತಿ ಅಲ್ಲಿ ಸೃಷ್ಟಿಯಾಗುತ್ತಾಳೆ. ಪ್ರೇಕ್ಷಕರ ಪಾಲಿಗೆ ನೀಲಾಂಜನೆ ಅಮರ. ಆಕೆ ಇಲ್ಲವಾಗಿರುವ ವಾಸ್ತವ ನಿಗೂಢವಾಗಿಯೇ ಉಳಿಯುತ್ತದೆ.

ಅರಸನ ಮನ ಕದ್ದ ಸಾಮಾನ್ಯ ನರ್ತಕಿ ಶಾಂತಲೆ ‘ಆಸೆಯೆಂಬ ಹಕ್ಕಿ ಅಡಗಿ ಕುಳಿತ ಎದೆಯ ಕದವನ್ನು ಬಿಚ್ಚುವ’ ಮೊದಲ ರಾತ್ರಿಯಂದೇ ಕಾಮಾತುರನಾದ ಪತಿಯನ್ನು ಒಪ್ಪಿಸಿ ಗುರುವಿನ ಬಳಿಗೆ ಕರೆದುಕೊಂಡು ಹೋಗುವಷ್ಟು ಗಟ್ಟಿತನ ತೋರಿಸುತ್ತಾಳೆ.  ಆದರೆ ಗುರು ಕೆತ್ತಿದ ಮದನಿಕೆಯರಿಗೆ ರೂಪದರ್ಶಿಯಾಗುವ ಮೂಲಕ ಆಕೆಯ ಚಲನಶೀಲ ಬದುಕು ಕೂಡ ಅಚರವಾಗುತ್ತದೆ.

ಉಮ್ರಾನ್ ಜಾನ್ ಬದುಕನ್ನು ಚಿತ್ರಿಸುವ ಸಂದರ್ಭದಲ್ಲಿ ಹೆಣ್ಣಿನ ಬದುಕಿನ ಸಂಕಷ್ಟಗಳನ್ನು ಈ ನಾಟಕ ಹೆಚ್ಚು ಪರಿಣಾಮಕಾರಿಯಾಗಿ ಮುಂದಿಡುತ್ತದೆ. ಕಾನ್ಪುರದಿಂದ ಕದ್ದುಕೊಂಡು ಹೋಗಿ ಕಾಮತೃಷೆ ತೀರಿಸಲು ಬಳಸಲಾದ ಉಮ್ರಾನ್‌ ಜಾನ್ ಬಿಡಿಸಿಕೊಳ್ಳಲಾಗದ ಈ ಬಂಧನವನ್ನು ಅನಿವಾರ್ಯವಾಗಿ ಒಪ್ಪಿಕೊಂಡರೂ ಹೃದಯಶ್ರೀಮಂತಿಕೆ ಇರುವ ಗಂಡಿಗೆ ಕಲಾರಸ ಉಣಿಸುವುದಕ್ಕೂ ಮುಂದಾಗುತ್ತಾಳೆ. ತನ್ನ ಸಂಕಷ್ಟವನ್ನು ಅಡಗಿಸಿಟ್ಟು ಪರರ ಜೀವನ ಬೆಳಗುವ ಜ್ಯೋತಿಯಾಗಲು ಹೆಣ್ಣಿಗೆ ಸಾಧ್ಯ ಎಂಬುದನ್ನು ತೋರಿಸಿಕೊಡುತ್ತಾಳೆ.

‘ಎಪ್ಪತ್ತು ದಾಟಿದ ಅಲಿಖಾನ್ ಸಾಹೇಬರಂಥವರು ಕೇವಲ ದೈಹಿಕ ಹಸಿವು ನೀಗಿಸುವುದಕ್ಕಾಗಿ ಮಾತ್ರ ಖಾಂದಾನೆಗೆ ಬರಲು ಸಾಧ್ಯವಿರಲಿಲ್ಲ’ ಎಂಬ ಮಾತಿನಲ್ಲಿ ಆಕೆ ಭೌತಿಕ ಸುಖಕ್ಕಿಂತ ಹೆಚ್ಚು ಬೌದ್ಧಿಕ ಸುಖವನ್ನೂ ನೀಡಲು ಸಮರ್ಥಳು ಎಂಬುದು ವೇದ್ಯವಾಗುತ್ತದೆ.

‘ಲಖನೌದಿಂದ ಬಂದ ಹೆಸರಾಂತ ವೇಶ್ಯೆ ನೀನೇನಾ? ಅಂದು ಯಾರೊಂದಿಗೋ ಓಡಿಹೋದೆ, ಇಂದು ಮನೆತನದ ಮರ್ಯಾದೆ ಕಳೆಯಲು ಮತ್ತೆ ಬಂದಿರುವೆಯಾ’ ಎಂದು ವಾಸ್ತವ ತಿಳಿಯದೆ ಪ್ರಶ್ನಿಸಿದ ಮನೆಯವರ ಮುಂದೆ ಉಮ್ರಾನ್ ಜಾನ್ ಅಸಹಾಯಕಳಾಗಿರಲಿಲ್ಲ. ಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ ರಸಿಕರ ಮನದ ದಾಹ ತೀರಿಸುವುದಕ್ಕೂ ಕಾಮುಕರ ದೇಹದ ಹಸಿವು ಇಂಗಿಸುವುದಕ್ಕೂ ವಿಧಿತಳಾದ ಉಮ್ರಾನ್ ಜಾನ್‌ಗೆ ತಾನು ಮಾಡಿದ ಕೆಲಸದಲ್ಲಿ ನಿಯತ್ತು ತೋರಿದ ಆತ್ಮವಿಶ್ವಾಸವಿತ್ತು, ಬದುಕಿನಲ್ಲಿ ನಡೆದ ನಿಜದ ಅರಿವಿತ್ತು. ಆದ್ದರಿಂದ ತಾಯಿ ಹಾಗೂ ಸಹೋದರನ ಎದುರು ಸೆಟೆದುನಿಂತು ವಾದ ಮಾಡುವ ಗಟ್ಟಿತನ ತೋರುತ್ತಾಳೆ. ನೈತಿಕ ಸ್ಥೈರ್ಯ ತುಂಬಿರುವ ಎಲ್ಲ ಮಹಿಳೆಯರ ಧ್ವನಿಯಾಗಿ ಉಮ್ರಾನ್‌ ಜಾನ್‌ ಕಂಡುಬರುತ್ತಾಳೆ.

ಯಕ್ಷಗಾನದ ಧೀಂಗಿಣದ ಸ್ಪರ್ಶ, ಹಿಂದುಸ್ತಾನಿ ಸಂಗೀತದ ಝಲಕ್‌, ಫ್ಯೂಷನ್‌ ರೋಮಾಂಚನ, ನೃತ್ಯವೈವಿಧ್ಯ ಎಲ್ಲವೂ ಕಲೆತಿರುವ ನಾಟಕವಿದು. ಏಕತಾನದ ಭಂಗವಿಲ್ಲದ್ದರಿಂದ ಮುಕ್ಕಾಲು ತಾಸು ಕೂಡ ರಸಸಾಗರದಲ್ಲಿ ಮೀಯುವಂತೆ ಮಾಡುವ ನಾಟಕ, ಪ್ರೇಕ್ಷಕರು ಹೊರಬಂದ ನಂತರ ‘ಎಲ್ಲಿ ನರ್ತಕಿ, ಎಲ್ಲಿ ನರ್ತಕಿ, ಎಲ್ಲಿ ನರ್ತಕಿ...’ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುವಷ್ಟು ಚಿಂತನೆಗೆ ಹಚ್ಚುತ್ತದೆ.

ನಾಟ್ಯಮಯೂರಿ...

ನಾಟ್ಯರಾಣಿಯಾಗುವತ್ತ....‘ನೃತ್ಯಗಾಥಾ’ದಲ್ಲಿ ವಿದುಷಿ ಅನಘಶ್ರೀ 

ಗುರುವಿನ ಕಡೆಗೆ...

ನಾಟ್ಯರಾಣಿ...‘ನೃತ್ಯಗಾಥಾ’ದಲ್ಲಿ ಅನಘಶ್ರೀ ನಾಟ್ಯಭಂಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.