ADVERTISEMENT

ಇಂದು ‘ಯಾಜಿ ಸುವರ್ಣ ಸಂಭ್ರಮ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:03 IST
Last Updated 26 ಅಕ್ಟೋಬರ್ 2024, 0:03 IST
<div class="paragraphs"><p>ಬಳ್ಕೂರು ಕೃಷ್ಣ ಯಾಜಿ</p></div>

ಬಳ್ಕೂರು ಕೃಷ್ಣ ಯಾಜಿ

   

ಚಿತ್ರ: ಪಿ.ಕೆ.ಜೈನ್

ಬಳ್ಕೂರು ಕೃಷ್ಣ ಯಾಜಿ ಬಡಗುತಿಟ್ಟು ಯಕ್ಷ ರಂಗದ ಮೇರು ಕಲಾವಿದ. ಅವರ ವೇಷಗಳು, ಪಾತ್ರಗಳು ಜನಪ್ರಿಯ, ಅಷ್ಟೇ ಪರಿಣಾಮಕಾರಿ. ಗತ್ತಿನ, ಲಯಬದ್ಧ ಕುಣಿತ, ಭಾವಾಭಿನಯ, ಮತ್ತು ಪಾತ್ರೋಚಿತ ಮಾತುಗಾರಿಕೆ. ಅವರೊಬ್ಬ ಅಪೂರ್ವ ಕಲಾವಿದ.

ADVERTISEMENT

ನಾಯಕ ಪಾತ್ರಗಳಷ್ಟೇ ಪರಿಣಾಮಕಾರಿಯಾಗಿ ಪ್ರತಿ ನಾಯಕ ಪಾತ್ರಗಳನ್ನೂ ರಂಗದಲ್ಲಿ ಬಿಂಬಿಸುವ ಸಾಮರ್ಥ್ಯವಿರುವ ಬಳ್ಕೂರು ಕೃಷ್ಣ ಯಾಜಿ, ಆರಂಭದಲ್ಲೇ ಕೃಷ್ಣನ ವೇಷಕ್ಕೆ ಹೆಚ್ಚು ಪ್ರಸಿದ್ಧಿ ಪಡೆದವರು. ಕೆರೆಮನೆ ಮಹಾಬಲ ಹೆಗಡೆಯವರ ಮೂಲಕ ಹೆಜ್ಜೆ ಕಲಿತು ರಂಗ ಪ್ರವೇಶಿಸಿದ ಕೃಷ್ಣ ಯಾಜಿ ಅವರು, 1973ರಲ್ಲಿ ಇಡಗುಂಜಿ ಮೇಳದ ಮೂಲಕ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ನಂತರ ಕೋಟ ಅಮೃತೇಶ್ವರಿ, ಕಮಲಶಿಲೆ ಮೇಳಗಳ ಬಳಿಕ ಸಾಲಿಗ್ರಾಮ ಡೇರೆ ಮೇಳ ಸೇರಿ ಪರಿಪಕ್ವಗೊಂಡರು. ಸಾಲಿಗ್ರಾಮ ಮೇಳದಲ್ಲೇ 29 ವರ್ಷ ತಿರುಗಾಟ ಮಾಡಿ, ಯಕ್ಷರಂಗದ ಎಲ್ಲ ರೀತಿಯ ಪಾತ್ರಗಳಿಗೂ ಸೈ ಅನ್ನಿಸಿಕೊಂಡು, ತಮ್ಮ ಮಾತು ಮತ್ತು ಗತ್ತಿನ ಕುಣಿತದ ಶೈಲಿಯಿಂದಾಗಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಯಾಜಿ ಯಕ್ಷ ಮಿತ್ರ ಮಂಡಳಿ ಮೂಲಕ ಪರಂಪರೆಯ ಪೌರಾಣಿಕ ಕಥಾನಕಗಳನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ ಬಂದಿದ್ದಾರೆ.

2017ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಯಾಜಿ ಅವರು ಯಕ್ಷಗಾನ ರಂಗ ಪ್ರವೇಶಿಸಿ ಐದು ದಶಕಗಳು ಸಂದಿವೆ. ಇದರ ನೆನಪಿಗಾಗಿ ಮೊಗವೀರ ಸಂಘ, ಯಕ್ಷನಕ್ಷತ್ರ ಟ್ರಸ್ಟ್ ಕಿರಾಡಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಶನಿವಾರ ‘ಯಾಜಿ ಸುವರ್ಣ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ರಾತ್ರಿ 10 ಗಂಟೆಗೆ ‘ಯಾಜಿ ಬಣ್ಣದ ಬದುಕಿನ ಯಕ್ಷ ಯಾನ’ ಉಪಶೀರ್ಷಿಕೆಯಡಿ, ಅವರದೇ ಸಂಯೋಜನೆಯಲ್ಲಿ ನಡೆಯುತ್ತಿರುವ ಈ ಯಕ್ಷಗಾನ ಕಾರ್ಯಕ್ರಮದಲ್ಲಿ ‘ದೇವವ್ರತ, ಯಾತ್ರಾವ್ರತ ಮತ್ತು ಹರಿವ್ರತ'– ಎಂಬ ಮೂರು ಪ್ರಸಂಗಗಳನ್ನು ಪ್ರಖ್ಯಾತ ಕಲಾವಿದರ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ಭಾಗವತಿಕೆಯಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ನಾಗೇಶ್ ಕುಲಾಲ್ ನಾಗರಕೊಡಿಗೆ, ಮಧುಕರ ಹೆಗಡೆ ಮಡಾಮಕ್ಕಿ ಇರುತ್ತಾರೆ. ಮದ್ದಳೆಯಲ್ಲಿ ಪರಮೇಶ್ವರಿ ಭಂಡಾರಿ ಕರ್ಕಿ, ಶಶಾಂಕ್ ಆಚಾರ್ ಕಿರಿಮಂಜೇಶ್ವರ, ಚಂಡೆಯಲ್ಲಿ ರಾಕೇಶ್‌ ಮಲ್ಯ ಹಳ್ಳಾಡಿ, ಶ್ರೀಕಾಂತ್ ಶೆಟ್ಟಿ ಯಡಮೊಗೆ ಸಾಥ್ ನೀಡಲಿದ್ದಾರೆ.

ಹಾಸ್ಯ ಪಾತ್ರದಲ್ಲಿ ಶ್ರೀಧರ್ ಭಟ್ ಕಾಸರಕೋಡು, ಕಾರ್ತಿಕ್ ರಾವ್‌ ಪಾಂಡೇಶ್ವರ ಪಾಲ್ಗೊಳ್ಳಲಿದ್ದಾರೆ. ಸ್ತ್ರೀವೇಷದಲ್ಲಿ ಸಂತೋಷ್ ಹಿಲಿಯಾಣ, ಗೋವಿಂದ ವಂಡಾರು, ಸಚಿನ್ ಶೆಟ್ಟಿ ನಾಗರಕೊಡಿಗೆ, ವಸಂತ ಚಿಕೊಳ್ಳಿ, ಅಕ್ಷಯ್ ಶಿರಿಯಾರ ಕಾಣಿಸಿಕೊಳ್ಳಲಿದ್ದಾರೆ.

ಅತಿಥಿ ಕಲಾವಿದರಾಗಿ ಹಾಸ್ಯರತ್ನ ಹಳ್ಳಾಡಿ ಜಯರಾಂ ಶೆಟ್ಟಿ, ಯಾಜಿಯವರ ಮೊಮ್ಮಗ ಅಭಿಷೇಕ್ ಅಡಿ ಗೋಕರ್ಣ ಭಾಗವಹಿಸುತ್ತಿದ್ದಾರೆ. ಮುಮ್ಮೇಳದಲ್ಲಿ ಕೃಷ್ಣ ಯಾಜಿ ಬಳ್ಳೂರು, ಮಂಕಿ ಈಶ್ವರ ನಾಯ್ಕ್, ಪ್ರಸನ್ನ ಶೆಟ್ಟಿಗಾರ್ ಮಂದರ್ತಿ, ಪ್ರಕಾಶ್ ಮೊಗವೀರ ಕಿರಾಡಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.