ADVERTISEMENT

ವಿಕಾಸದ ಬೆನ್ನೇರಿ ಸಾಗಿದ ಪಯಣದಲ್ಲಿ ಅನಾವರಣಗೊಂಡ ಸತ್ಯಗಳು

ಆದರ್ಶ ಬಿ.ಎಸ್.
Published 17 ನವೆಂಬರ್ 2018, 19:30 IST
Last Updated 17 ನವೆಂಬರ್ 2018, 19:30 IST
ವಿಕಾಸ
ವಿಕಾಸ   

ಮಹಾಸ್ಫೋಟದಿಂದ ವಿಶ್ವದ ಉಗಮವಾಗಿದ್ದು ನಮಗೆಲ್ಲ ತಿಳಿದೇ ಇದೆ. ನಮ್ಮ ಊಹೆಗೂ ನಿಲುಕದಷ್ಟು ರಹಸ್ಯಗಳನ್ನು ತನ್ನ ಗರ್ಭದೊಳಗೆ ಬಚ್ಚಿಟ್ಟುಕೊಂಡಿರುವ ಈ ಅಖಂಡ ವಿಶ್ವಕ್ಕೆ, ಹುಲುಮಾನವರ ಅಗತ್ಯವೆಷ್ಟಿತ್ತು? ಇಂತಹ ವಿಚಿತ್ರ ಪ್ರಶ್ನೆಗಳಿಗೆ ಗೂಗಲ್ ಉತ್ತರ ನೀಡಬಲ್ಲದು. ಆದರೆ ಆ ಉತ್ತರಕ್ಕೆ ತನ್ನದೇ ಆದ ಚೌಕಟ್ಟುಗಳು ಹುಟ್ಟಿಕೊಳ್ಳಬಹುದು. ಚೌಕಟ್ಟುಗಳಾಚೆಗಿನ ಉತ್ತರ ಹುಡುಕಲೆಂದೇ ಸಾಹಿತ್ಯ ಹುಟ್ಟಿದ್ದೇನೋ?!

ಭೂಮಿ ಹುಟ್ಟಿ 380 ಕೋಟಿ ವರ್ಷಗಳಾದರೂ, ಮಾನವ ಸಂಕುಲದ ವಿಕಾಸನವಾದದ್ದು 25 ಲಕ್ಷ ವರ್ಷಗಳ ಈಚೆಗೆ. ಬಿಸಿಲಿಗೆ ಹೊಂದಿಕೊಳ್ಳುವ ಮಾನವ ಆಫ್ರಿಕಾದಲ್ಲಿ ವಿಕಸನ ಹೊಂದುತ್ತಿರುವಾಗ, ಚಳಿಗೆ ಹೊಂದಿಕೊಳ್ಳುವಂತೆ ಯುರೋಪ್ ಮತ್ತು ಉತ್ತರ ಅಮೆರಿಕ ಕಡೆ ಮತ್ತೊಂದು ಸಂತತಿಯ ವಿಕಸನವಾಗುತ್ತಿತ್ತು. ಹೋಮೋ ಸೆಲೆನಿಸಿಸ್, ಹೋಮೋ ಎರೆಕ್ಟಸ್, ಹೋಮೋ ನಿಯಾಂಡರ್ತಲೆನಿಸ್ - ಹೀಗೆ ಬಣ್ಣ, ಆಕಾರ, ಗಾತ್ರ, ಪ್ರಾಬಲ್ಯ ಎಲ್ಲ ರೀತಿಯಲ್ಲೂ ಬೇರೆ ಎನಿಸುವ ಹತ್ತು ಹಲವು ಮಾನವ ಸಂತತಿಗಳು ಹುಟ್ಟಿಕೊಂಡವು. ಹೋಮೋ ಫ್ಲೋರೆಸೆನೀಸ್ ಎಂಬ ಸಂತತಿಯ ಮನುಷ್ಯರು ಎತ್ತರವಾಗಿ ಬೆಳೆದು, 25 ಕೆ.ಜಿ ತೂಕ ಹೊಂದಿದ್ದರು. ವಿಧವಿಧವಾದ ಈ ಸಂತತಿಗಳಲ್ಲಿ ಪರಸ್ಪರ ಪ್ರಾಬಲ್ಯ ಪರೀಕ್ಷೆಗಳು ನಡೆದವು. ಎಷ್ಟೋ ಸಂತತಿಗಳು ಅವನತಿ ಕಂಡವು. ಕೊನೆಗೆ ಎಲ್ಲವೂ ನಶಿಸಿ ಒಂದೇ ಸಂತತಿಯ ಮಾನವ ಜಗತ್ತನ್ನು ಆವರಿಸಿಕೊಳ್ಳತೊಡಗಿದ. ಅವನೇ ‘ಹೋಮೋ ಸೇಪಿಯನ್’ - ಅಥವಾ ‘ಬುದ್ಧಿವಂತ ಮಾನವ’. ಹೆಚ್ಚು ಪ್ರಬಲವೂ, ತೀಕ್ಷ್ಣವೂ ಇದ್ದ ಬೇರೆ ಸಂತತಿಗಳು ನಶಿಸಿಹೋದದ್ದೇಕೆ? ಹೋಮೋ ಸೇಪಿಯನ್ ಗುಂಪುಗಾರಿಕೆಯಲ್ಲಿ ಗೆದ್ದನೇ? ಬುದ್ಧಿವಂತಿಕೆಯಲ್ಲಿ ಗೆದ್ದನೇ? ವಿಜ್ಞಾನಕ್ಕೆ ಇವೆಲ್ಲವೂ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ.

ಭಾಷೆ ಬರೆದ ಭಾಷ್ಯ

ADVERTISEMENT

ದೈಹಿಕ ಪ್ರಾಬಲ್ಯದಲ್ಲಿ ಬಹುತೇಕ ಪ್ರಾಣಿಗಳಿಗಿಂತ ಹಿಂದುಳಿದರೂ, ಮಾನವನ ಮೆದುಳು ಮಾತ್ರ 20 ಲಕ್ಷ ವರ್ಷಗಳಿಂದ ವಿಕಾಸವಾಗುತ್ತಲೇ ಬಂದಿದೆ. ಹೊಟ್ಟೆಪಾಡಿನ ಹಿಂದೆ ಬಿದ್ದದ್ದೇ ಮೆದುಳಿನ ಬೆಳವಣಿಗೆಯ ಆರಂಭ ಎಂಬ ಸಿದ್ಧಾಂತವಿದೆ. ಮೂಳೆಗಳಿಂದ ಮಾಂಸ ಬೇರ್ಪಡಿಸಿ ತಿನ್ನುವುದು, ಬೇಯಿಸಿ ತಿನ್ನುವುದು, ನೂರಾರು ದಿನಗಳ ತನಕ ಆಹಾರ ಸಂಗ್ರಹಿಸಿಡುವುದು - ಹೀಗೆ ಚಿಕ್ಕ ಚಿಕ್ಕ ಯೋಚನೆಗಳು ಭೂಮಿಯ ಮೇಲಿನ ಬದುಕನ್ನೇ ಬದಲಿಸಬಲ್ಲವು ಎಂದು ಯಾರೂ ಎಣಿಸಿರಲಿಲ್ಲ. ಇನ್ನೊಂದು ಪ್ರಶ್ನೆ ಇಲ್ಲಿ ಕಾಡಬಹುದು. ಭಾಷೆ ಎಲ್ಲಿಂದ ಹುಟ್ಟಿದ್ದು? ಮಂಗವೊಂದು, ಸಿಂಹ ಬಂದಾಗ ಕೊಡುವ ಎಚ್ಚರಿಕೆಗೂ, ಚಿರತೆ ಬಂದಾಗ ಕೊಡುವ ಎಚ್ಚರಿಕೆಗೂ ವ್ಯತ್ಯಾಸವಿದೆ ಎಂದು ವಿಜ್ಞಾನ ಹೇಳುತ್ತದೆ. ಒಂದು ಗಿಳಿ ಸಹ ಐನ್‌ಸ್ಟೈನ್ ಹೇಳಬಲ್ಲ ಎಲ್ಲ ಮಾತುಗಳನ್ನು ಹೇಳಬಲ್ಲದು. ಆದರೆ ಅರ್ಥ ಮಾಡಿಕೊಳ್ಳುವ ಸಾಧನಗಳು ಬೇಕಷ್ಟೆ. ಇವೆಲ್ಲವನ್ನೂ ಮೀರಿ ನಮ್ಮ ಭಾಷೆ ವಿಕಾಸಗೊಂಡಿದೆ. ಧ್ವನಿ ತಂತುಗಳನ್ನು ಮೀಟುತ್ತ ಅನಂತಾನಂತ ಪದಗಳನ್ನು ಹೊರಡಿಸಬಲ್ಲೆವು ನಾವು. ಗುಂಪುಗಾರಿಕೆ ಜೀವಿಗಳಲ್ಲಿ ಸರ್ವೇಸಾಮಾನ್ಯ. ಆದರೆ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಸಾಗಿದಂತೆ, ಬಾಂಧವ್ಯ ಸಡಿಲಗೊಳ್ಳುತ್ತ ಸಾಗುತ್ತದೆ. ಇಂತಹ ದೊಡ್ಡ ದೊಡ್ಡ ಗುಂಪುಗಳನ್ನು ಒಟ್ಟುಗೂಡಿಸುವಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸಿದೆ.

ಪ್ರವಾಹಗಳ ಸುಳಿಯಲ್ಲಿ

ಒಂದೆಡೆ ಪ್ರಾಣಿಗಳ ಸಂತತಿ ಕಡಿಮೆಯಾಗುತ್ತ ಸಾಗಿದಂತೆ, ಮತ್ತೊಂದೆಡೆ ಆಹಾರದ ಕೊರತೆ ಒದಗಿ ಬಂದಿತ್ತು. ಬೇಟೆಯಿಲ್ಲದ ದಿವಸಗಳಲ್ಲಿ ಹಸಿದೇ ಮಲಗಬೇಕಾಗಿತ್ತು ಅಥವಾ ಕಾಡಿನ ಹಣ್ಣುಗಳ ಮೊರೆ ಹೋಗಬೇಕಿತ್ತು. ಹಸಿವಿನಿಂದ ತಪ್ಪಿಸಿಕೊಳ್ಳಲು ಹೊಸ ದಾರಿ ಹುಡುಕಲೇಬೇಕಾಗಿತ್ತು. ಕ್ರಿಸ್ತಪೂರ್ವ 9000ದ ವೇಳೆಗೆ, ಈಗಿನ ಟರ್ಕಿ ಮತ್ತು ಇರಾನ್ ದೇಶಗಳ ಪ್ರದೇಶದಲ್ಲಿ ಹೊಸ ಕ್ರಾಂತಿಯೊಂದು ಆರಂಭವಾಗಿತ್ತು. ಸರ್ವೇಸಾಮಾನ್ಯ ಹುಲ್ಲಾಗಿದ್ದ ಗೋಧಿಗೆ ಎಲ್ಲಿಲ್ಲದ ಪ್ರಾಮುಖ್ಯ ದೊರಕಿತ್ತು. ಪುಟ್ಟ ಪುಟ್ಟ ಗುಡಿಸಲುಗಳಲ್ಲಿ ಗೋಧಿ ಬೆಳೆಯುತ್ತಿದ್ದ ಮಾನವ, ಅರಣ್ಯ ನಾಶಗೊಳಿಸಿ ಕೃಷಿ ಭೂಮಿಯಾಗಿ ಪರಿವರ್ತಿಸಿದ. ಕೆಲವೇ ದಶಕಗಳಲ್ಲಿ ಆಹಾರ ಸಂಗ್ರಹಣೆಯ ವಿಧಾನಗಳು ಬೆಳಕಿಗೆ ಬಂದವು. ಕೃಷಿ ಎಂಬುದು ನಿಸರ್ಗದ ಹೊಸ ವಿರೋಧಿಯಾಗಿ ರೂಪುಗೊಂಡಿತ್ತು.

ನಮ್ಮ ದೇಹದಲ್ಲಿ ಆದ ಮಾರ್ಪಾಡುಗಳಿಗೂ ಕೃಷಿಯೇ ಕಾರಣ ಎಂದು ವಿಜ್ಞಾನ ಹೇಳುತ್ತದೆ. ನಾವು ಗೋಧಿ ಬೆಳೆಯಲಿಲ್ಲ. ಗೋಧಿ ನಮ್ಮನ್ನು ಬೆಳೆಸಿತು. ಗೋಧಿಗೆ ಬೆಟ್ಟಗಳ ಮೇಲೆ ಬೆಳೆವ ಆಸೆಯಿರಲಿಲ್ಲ. ನಮ್ಮ ಕೈಯಿಂದ ಬೆಟ್ಟಗಳನ್ನು ಕಡಿಸಿತು. ಗೋಧಿಯ ಆರೋಗ್ಯ ಕೆಟ್ಟಾಗ ಆರೈಕೆ ಮಾಡಬೇಕಾಯಿತು. ಬಾಗಿದ್ದ ನಮ್ಮ ಬೆನ್ನು ನೆಟ್ಟಗಾಗುತ್ತಾ ಸಾಗಿತು. ನಮ್ಮ ದೇಹ ಹೊಸ ರೂಪ ತಳೆದು, ಹೊಸ ಕೆಲಸವೊಂದಕ್ಕೆ ಮಾರ್ಪಾಡಾಗಿ ನಿಂತಿತು. ಆಹಾರದ ಕೊರತೆ ನೀಗಿದಂತೆಲ್ಲ ಹೊಸ ಯೋಚನೆಗಳು ಆರಂಭವಾದವು. ಅದೇ ಆಧುನಿಕತೆಯ ಆರಂಭ.

ಕೃಷಿ ಕ್ರಾಂತಿ ಮುಂದಿನ ಹಂತಕ್ಕೆ ಕಾಲಿಟ್ಟಿತು. ಸಸ್ಯಾಹಾರಿ ಮುಗ್ಧ ಜೀವಿಗಳನ್ನು ಮನುಷ್ಯ ತನ್ನ ಹತೋಟಿಗೆ ತೆಗೆದುಕೊಂಡ. ಮೊದಲ ಹೆಜ್ಜೆಯಾಗಿ ಅವುಗಳಿಗೆ ಕ್ರೂರ ಮೃಗಗಳಿಂದ ರಕ್ಷಣೆ ನೀಡಿದ. ಹತೋಟಿಗೆ ಸಿಲುಕದ ಬಲಿಷ್ಠ ಜೀವಿಗಳನ್ನು ಸಾಯಿಸಲಾಯಿತು.

ಹಸುವಿನ ಹಾಲಿನ ಅಗತ್ಯ ತಿಳಿದ ಮಾನವ, ಕರುವಿಗೆ ಹೆಚ್ಚು ಹಾಲು ನೀಡಲಿಲ್ಲ. ಇದರಿಂದ ತಾಯಿ ಮತ್ತು ಮಗುವಿನಿಂದ ಸಾಕಷ್ಟು ಪ್ರತಿರೋಧ ಎದುರಾಯಿತು. ಆಫ್ರಿಕಾದಲ್ಲಿ ಹೆಚ್ಚು ಪ್ರತಿರೋಧ ಒಡ್ಡುವ ಕರುವನ್ನು ಸಾಯಿಸಿ, ಅದರ ಚರ್ಮದಿಂದ ತಯಾರಿಸಿದ ಗೊಂಬೆಯನ್ನು ತಾಯಿಯ ಮುಂದೆ ನಿಲ್ಲಿಸಲಾಗುತ್ತಿತ್ತು. ಬುದ್ಧಿ ವಿಕಾಸಗೊಳ್ಳದ ಮೂಕ ಜೀವಿಗಳನ್ನು ತನ್ನಿಚ್ಛೆಯಂತೆ ಬಳಸಿಕೊಳ್ಳುವ ಕ್ರೌರ್ಯವೇ ಮುಂದೆ ಹೈನುಗಾರಿಕೆಯಾಗಿ ಬದಲಾಗಿದ್ದು ವಿಪರ್ಯಾಸ.

ಕಟ್ಟಡಗಳು ಕಟ್ಟಿದ ಸಮಾಧಿ

ಗುಂಪುಗಾರಿಕೆಯಲ್ಲಿ ಬದುಕುವ ಯೋಜನೆಗೆ ಅಂಟಿಕೊಂಡಂತೆ ಬಂದಿದ್ದು ನನ್ನ ಮನೆ, ನನ್ನ ಪಂಗಡ ಎಂಬ ವಿಭಜನೆ. ಸ್ಥಳದಿಂದ ಸ್ಥಳಕ್ಕೆ ಸಾಗುವ ಬಾಳ್ವೆ ಕಷ್ಟಕರ ಎನಿಸತೊಡಗಿತು. ಒಂದೆಡೆ ನೆಲೆಸುವ ಯೋಚನೆ ಹುಟ್ಟಿಕೊಂಡಿತು. ಆಹಾರ ಬೆಳೆಯುತ್ತಿರುವಾಗ ಹೊಲ ಬಿಟ್ಟು ಹೋಗುವಂತಿರಲಿಲ್ಲ. ಒಂದಷ್ಟು ಮನೆಗಳು, ಒಂದಷ್ಟು ಹೊಲಗಳು ಊರೊಂದನ್ನು ಪ್ರತಿನಿಧಿಸತೊಡಗಿದವು. ಭವಿಷ್ಯದ ಚಿಂತೆ ಹುಟ್ಟಿಕೊಂಡಂತೆಲ್ಲ, ಆಹಾರದ ಉತ್ಪಾದನೆ ಕಾಲೋಚಿತವಾಗತೊಡಗಿತು. ಹಳ್ಳಿ ಹಳ್ಳಿಗಳಲ್ಲಿ ಉತ್ಪಾದನೆಯ ವಿಧಾನ ಬದಲಾಗುತ್ತಾ ಸಾಗಿತು. ಈ ಗುಂಪುಗಳಲ್ಲೇ ನಂಬಿಕೆ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು.ಈ ನಂಬಿಕೆ ಎಂಬ ನೌಕೆಯ ಸುತ್ತ ವಿಧವಿಧವಾದ ಕಾನೂನುಗಳು ಜನ್ಮ ತಾಳಿದವು.

ಹಣ ಹೆಣೆದ ಜಾಲ

ದೊಡ್ಡ ಸಮುದಾಯಗಳು ಮಾನವರಲ್ಲಷ್ಟೇ ಅಲ್ಲ. ಇರುವೆ ಮತ್ತು ಜೇನುಗಳಲ್ಲೂ ಕಾಣಸಿಗುತ್ತವೆ. ಗೂಡು ಕಟ್ಟುವಾಗ ಜೇನುಗಳಿಗೆ ತಮ್ಮದೇ ಆದ ಜವಾಬ್ದಾರಿ ನಿಗದಿಯಾಗಿರುತ್ತದೆ. ಮಕರಂದ ತರುವ ಗುಂಪು, ಗೂಡು ಕಟ್ಟುವ ಗುಂಪು, ಸ್ವಚ್ಛಗೊಳಿಸುವ ಗುಂಪು, ಸಂರಕ್ಷಿಸುವ ಗುಂಪು ಹೀಗೆ ಹತ್ತು ಹಲವು ಗುಂಪುಗಳಿವೆ. ಆದರೆ ವಕೀಲ ಜೇನಿನ ಗುಂಪಿಲ್ಲ. ಯಾಕೆಂದರೆ ಯಾವ ಜೇನೂ ಮೋಸ ಮಾಡುವುದಿಲ್ಲ. ತನಗೆಂದು ಒಂದಂಗುಲ ಹೆಚ್ಚು ಕಟ್ಟುವುದಿಲ್ಲ. ಯಾವ ಜೇನೂ ಹೆಚ್ಚು ಸಂಬಳ ಕೇಳುವುದಿಲ್ಲ. ಆದರೆ ಬುದ್ಧಿಯ ವಿಕಸನಕ್ಕೆ ಸಿಲುಕಿದ ಮನುಷ್ಯನಲ್ಲಿ ಮೋಸ, ಅಸೂಯೆ, ವಂಚನೆ ಹುಟ್ಟಿಕೊಂಡವು. ಗುಂಪು ಬೆಳೆಯುತ್ತ ಸಾಗಿದಂತೆ, ಆಹಾರದ ವಿನಿಮಯ ಹೆಚ್ಚಾದಂತೆ, ಎಣಿಕೆ ದೊಡ್ಡ ಸಮಸ್ಯೆಯಾಗುತ್ತ ಸಾಗಿತು. ದೊಡ್ಡ ದೊಡ್ಡ ಊರುಗಳಲ್ಲಿನ ಲೆಕ್ಕ ಬೆಳೆಯುತ್ತಲೇ ಸಾಗಿತು, ಅಷ್ಟೇ ಅಲ್ಲದೆ ಅಂಕಿ ಅಂಶಗಳನ್ನೆಲ್ಲ ಸಂಗ್ರಹಿಸಿಡಲು ಮಿದುಳಿನ ನೆನಪಿನ ಶಕ್ತಿಯ ಮಿತಿ ಅರಿವಾಯಿತು. ಮೊದಲು ಬಾರ್ಲಿಯ ಕಾಳುಗಳನ್ನು ಬಳಸಿ, ಅವುಗಳನ್ನು ಗುಂಪಾಗಿ ಜೋಡಿಸಿ, ಮಾಹಿತಿ ಸಂಗ್ರಹಿಸಿಡಲಾಗುತ್ತಿತ್ತು. ನಂತರ ಬಣ್ಣ ಬಣ್ಣದ ಗರಿಗಳು, ಎಲೆಗಳ ಮೇಲಿನ ಲಿಪಿ, ತಾಳೆಗರಿ ಇತ್ಯಾದಿ ವಿಧಾನಗಳು ಬೆಳಕಿಗೆ ಬಂದವು.

ಸಾಮ್ರಾಜ್ಯಗಳ ಬೆಳವಣಿಗೆ ಮತ್ತು ಸಾರಿಗೆ ಸಂಪರ್ಕಗಳ ನವೀಕರಣ ಹೊಸ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದವು. ಕೆಲವೊಂದು ಹಳ್ಳಿಗಳು ಉತ್ತಮ ಗುಣಮಟ್ಟದ ವೈನ್ ತಯಾರಿಸಿ ಹೆಸರು ಗಳಿಸಿದವು. ನಮಗೂ ದಕ್ಕಬಾರದೇ ಎಂದು ಕೆಲವು ಹಳ್ಳಿಗಳು ಯೋಚಿಸಿದವು. ಉತ್ತಮ ವೈನ್‌ಗೆ ಬದಲಾಗಿ, ತಮ್ಮಲ್ಲೇ ಬೆಳೆದ ಬಾರ್ಲಿಯನ್ನೋ, ಅಕ್ಕಿಯನ್ನೋ ನೀಡಿದರು. ಆದರೆ, ಎಷ್ಟು ವೈನ್‌ಗೆ ಎಷ್ಟು ಬಾರ್ಲಿ ಕೊಡಬೇಕು ಎಂಬ ಸಮಸ್ಯೆ ಕಾಡಿತು. ಇದಷ್ಟೇ ಅಲ್ಲ, ಶೂ ತಯಾರಿಸುವ ವ್ಯಕ್ತಿಯೊಬ್ಬ, ಶೂಗೆ ಬದಲಾಗಿ ಎಷ್ಟು ಗೋಧಿ ತೆಗೆದುಕೊಳ್ಳಬೇಕು? ಗೋಧಿಯಷ್ಟೇ ಅಲ್ಲ, ಕೆಲವರು ಕುರಿ, ಹಣ್ಣು, ಮಾಂಸ ಇತ್ಯಾದಿಗಳನ್ನು ಬದಲಾಯಿಸಿಕೊಳ್ಳಲು ಬಂದರು. ಮೊದಮೊದಲು ಒಂದು ತಳಿಯ ಬಾರ್ಲಿಯನ್ನೇ ಹಣವನ್ನಾಗಿ ಬಳಸಲಾಯಿತು. ಆದರೆ, ಮೋಸ ವಂಚನೆಗಳು ಹೆಚ್ಚಾದವು. ಸಂರಕ್ಷಣೆಯೂ ಸಮಸ್ಯೆಯಾಗಿ ಕಾಡಿತು. ಮಣಿಗಳು, ಕಪ್ಪೆ ಚಿಪ್ಪು ಯಾವುದೂ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ನಂತರ ಹುಟ್ಟಿದ್ದೇ ನಾಣ್ಯಗಳು. ಅದರಲ್ಲೂ, ಮೋಸ ವಂಚನೆಗಳು ನಡೆದವು. ನಂತರ ಬಂದಿದ್ದು, ನಾಣ್ಯಗಳ ಮೇಲೆ ಸಾಮ್ರಾಜ್ಯದ ಲಾಂಛನವನ್ನು ಅಚ್ಚಾಗಿಸುವ ಯೋಜನೆ.

ಇತಿಹಾಸಕ್ಕೆ ದಿಕ್ಕಿಲ್ಲ ಎಂಬ ಮಾತಿದೆ. ಭಯದಿಂದ ಭಕ್ತಿ ಹುಟ್ಟಿಕೊಂಡಿತು. ಒಂದೇ ದೇವರನ್ನು ಪೂಜಿಸುವ ಹಲವಾರು ಸಾಮ್ರಾಜ್ಯಗಳು ರೂಪುಗೊಂಡವು. ಆಹಾರ ಮತ್ತು ಜಮೀನಿಗಾಗಿ ನಡೆಯುತ್ತಿದ್ದ ಯುದ್ಧಗಳು ಧಾರ್ಮಿಕ ಯುದ್ಧಗಳಾಗಿ ಬದಲಾದವು.

ನಿಸರ್ಗದ ಗತಿಯನ್ನೇ ಬದಲಿಸುವಂತೆ ಸಾಗುತ್ತಿರುವ ಮನುಕುಲದ ವಿಕಾಸ, ಎಚ್ಚರಿಕೆಯ ಸದ್ದುಗಳಿಗೆ ಕಿವುಡಾಗಿ ನಿಂತಿದೆ. ಜೀವಶಾಸ್ತ್ರ ತೆರೆದಿಟ್ಟ ಅವಕಾಶಗಳಿಗೆ ಕಟ್ಟುಪಾಡುಗಳ ಬೀಗ ಜಡಿಯಲಾಗಿದೆ. ಅವನತಿಯೋ, ಪುನರಾರಂಭವೋ- ನಿಲ್ಲದ ವಿಕಸನದಲ್ಲಿ ನಶಿಸಿಹೋದ ಜೀವಸಂಕುಲಗಳೆಷ್ಟೋ! ಎಣಿಕೆ ಮರೆತು ಜಗತ್ತು ಮುಂದೆ ಸಾಗಿದೆ. ಮುಗಿಲು ಮುಟ್ಟುವ ಕಟ್ಟಡಗಳ ಕಟ್ಟಲು ನೆಲಕಚ್ಚಿದ ಮರಗಳೆಷ್ಟೋ! ಲಕ್ಷಾಂತರ ವರ್ಷಗಳಿಂದ, ಸಂಕೀರ್ಣವಾಗುತ್ತ ಸಾಗಿದ ನಮ್ಮ ನರವ್ಯೂಹಗಳು, ಬುದ್ಧಿವಂತಿಕೆ ಎಂಬ ಅಸ್ತ್ರವೊಂದನ್ನು ನಮಗೆ ಕರುಣಿಸಿವೆ. ಅದರ ಸದುಪಯೋಗ ನಮ್ಮ ಜವಾಬ್ದಾರಿಯಲ್ಲವೆ?

ಸರಣಿ ಹಂತಕ

ಸುಮಾರು 45 ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾ ಖಂಡವನ್ನು ಆಕ್ರಮಿಸಿಕೊಂಡು, ಅಲ್ಲಿ ಬದುಕು ಆರಂಭಿಸಿದ್ದು ಮಾನವ ವಿಕಾಸದ ದೊಡ್ಡ ಸಾಧನೆ. ಏಕೆಂದರೆ ಆ ಕಾಲಕ್ಕೆ ಆಸ್ಟ್ರೇಲಿಯಾ ಖಂಡ ಹಸಿದ ಹೆಬ್ಬುಲಿಯಾಗಿತ್ತು. ಡ್ರ್ಯಾಗನ್ ರೀತಿಯ ಹಲ್ಲಿಗಳು, ದೈತ್ಯ ಗಾತ್ರದ ಕಾಂಗರೂ, ಕ್ರೂರ ಸಿಂಹಗಳು, ವಿಷಕಾರಿ ಸರೀಸೃಪಗಳಿಂದ ತುಂಬಿದ್ದ ಈ ದ್ವೀಪದಲ್ಲಿ ಮನುಷ್ಯ ಬದುಕುವ ಲಕ್ಷಣಗಳೇ ಕಾಣುತ್ತಿರಲಿಲ್ಲ. ಆದರೆ, ಮನುಷ್ಯ ಕಾಲಿಟ್ಟ ಕೆಲವೇ ವರ್ಷಗಳ ನಂತರ 24 ದೈತ್ಯ ಜೀವಿಗಳು ಅವನತಿ ಕಂಡವು. ಅದೇ ಕಾರಣಕ್ಕಾಗಿ ಮಾನವರನ್ನು ನಿಸರ್ಗದ ‘ಸರಣಿ ಹಂತಕರು’ ಎಂದು ಕರೆಯುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.