ADVERTISEMENT

ಉಚ್ಛಾರಣೆಯೋ ಉಚ್ಚಾರಣೆಯೋ ನೀವೇ ಹೇಳಿ!

ಎಂ.ಅಬ್ದುಲ್ ರೆಹಮಾನ್ ಪಾಷ
Published 17 ನವೆಂಬರ್ 2018, 19:30 IST
Last Updated 17 ನವೆಂಬರ್ 2018, 19:30 IST
ಚಿತ್ರ: ಜಿ.ಎಸ್. ನಾಗನಾಥ್
ಚಿತ್ರ: ಜಿ.ಎಸ್. ನಾಗನಾಥ್   

ಭಾಷಾ ಬೋಧಕನಾಗಿ ನನಗದು ಮೊದಲ ಕರ್ತವ್ಯವಾಗಿತ್ತು. 1975ರಲ್ಲಿ ಮದ್ದೂರು ತಾಲ್ಲೂಕಿನ ಕಾಳಮುದ್ದನ ದೊಡ್ಡಿಯಲ್ಲಿರುವ ಸಕ್ಕರೆ ಕಾರಖಾನೆಯಲ್ಲಿರುವ ಅನ್ಯಭಾಷೀಯ ಹಿರಿಯ ಎಂಜಿನಿಯರುಗಳಿಗೆ ನಾನು ಕನ್ನಡ ಕಲಿಸಬೇಕಾಗಿತ್ತು. ಕಲಿಯುವವರಲ್ಲಿ ಹೆಚ್ಚಿನವರು ತಮಿಳು ಮತ್ತು ಮಲಯಾಳ ಮಾತೃಭಾಷೀಯರು ಇದ್ದರು.

ನನಗೆ ಕಲಿಸುವಾಗ ಎದುರಾದ ಒಂದು ವಿಶಿಷ್ಟ ಸಮಸ್ಯೆ ಎಂದರೆ, ಕನ್ನಡದಲ್ಲಿನ ಮಹಾಪ್ರಾಣ ಧ್ವನಿಗಳು. ಉದಾಹರಣೆಗೆ ಭಾರತ, ಇಲಾಖೆ, ಫಲಿತಾಂಶ ಇತ್ಯಾದಿ. ಮಲಯಾಳ ಮಾತೃಭಾಷೀಯರು ಇವುಗಳನ್ನು ಸರಿಯಾಗಿಯೇ ಮಹಾಪ್ರಾಣದೊಂದಿಗೇ ಉಚ್ಚರಿಸುತ್ತಿದ್ದರು. ಆದರೆ, ತಮಿಳು ಮಾತೃಭಾಷೀಯರು ಮಾತ್ರ ಇವುಗಳನ್ನು ಬಾರತ, ಇಲಾಕೆ, ಪಲಿತಾಂಶ ಎಂಬಂತೆ ಮಹಾಪ್ರಾಣದ ಬದಲಿಗೆ ಅಲ್ಪಪ್ರಾಣ ಧ್ವನಿಗಳನ್ನು ಬಳಸಿ ಹೇಳುತ್ತಿದ್ದರು. ತಮಿಳಿನಲ್ಲಿ ಮಹಾಪ್ರಾಣ ಪ್ರಯೋಗ ಇಲ್ಲ ಎನ್ನುವುದೇ ಇಲ್ಲಿನ ಮೂಲಭೂತ ಸಮಸ್ಯೆ. ಸಂಜೆ ಈ ಸಮಸ್ಯೆ ಕುರಿತು ನಾನೇ ಆಲೋಚಿಸುತ್ತಿರುವಾಗ ನನಗೆ ಒಂದು ಪರಿಹಾರ ಹೊಳೆಯಿತು. ಅಕಸ್ಮಾತ್ ಅಲ್ಪಪ್ರಾಣ- ಮಹಾಪ್ರಾಣದ ವ್ಯತ್ಯಾಸವನ್ನು ಅಥವಾ ಮಹಾಪ್ರಾಣ ಉಚ್ಚಾರಣೆಯ ಪರಿಣಾಮವನ್ನು ಕಣ್ಣಿಗೆ ಕಾಣುವ ಹಾಗೆ ಮಾಡಿದರೆ ಹೇಗೆ ಎಂದು. ಪೋಸ್ಟ್ ಕಾರ್ಡ್ ಸೈಜಿನ ಒಂದು ತೆಳ್ಳನೆಯ ಕಾರ್ಡನ್ನು ಬಾಯಿಯ ಎದುರು ಹತ್ತಿರದಲ್ಲಿ ಹಿಡಿದೆ. ನಾನು ಬಾರತ ಎಂದಾಗ ಕಾರ್ಡು ಸುಮ್ಮನೆ ಇತ್ತು; ಅದೇ ಭಾರತ ಎಂದು ಹೆಚ್ಚು ಉಸಿರಿನೊಂದಿಗೆ ಹೇಳಿದಾಗ ಕಾರ್ಡು ಅಲುಗಾಡಿತು. ಅದೇ ತರಹ, ಇಲಾಖೆಯ ಖೆ-ಗೆ, ಫಲಿತಾಂಶದ ಫ-ಕ್ಕೆ ಕಾರ್ಡು ಅಲುಗಾಡಿದ್ದು ನೋಡಿ ನನಗೆ ತುಂಬ ಸಂತೋಷವಾಯಿತು.

ಮರುದಿನ ತರಗತಿಯಲ್ಲಿ ಎಲ್ಲರ ಕೈಯಲ್ಲೂ ಒಂದೊಂದು ಕಾರ್ಡು. ನಾನು ಒಮ್ಮೆ ಮಾಡಿ ತೋರಿಸಿ, ಮಹಾಪ್ರಾಣದ ಧ್ವನಿಗಳಿಗೆ ಕಾರ್ಡು ಅಲುಗಾಡುವುದರ ಕಡೆ ಗಮನ ಸೆಳೆದೆ. ತಮಿಳು ಮಾತೃಭಾಷೀಯ ವಿದ್ಯಾರ್ಥಿಗಳಿಗೂ ಬಹಳ ಸಂತೋಷ ಎನ್ನಿಸಿತು. ಈಗ ನನ್ನೊಂದಿಗೆ ಅವರೂ ಭಾರತ ಎಂದರು. ಆದರೆ, ಕಾರ್ಡು ಮಾತ್ರ ಅಲುಗಾಡಲೇ ಇಲ್ಲ; ಏಕೆಂದರೆ ಅವರು ಈಗಲೂ ಬಾರತ ಎಂದೇ ಎನ್ನುತ್ತಿದ್ದರು. ಭಾ ಎನ್ನುವುದನ್ನು ಉಚ್ಚರಿಸಲು ಏನೇನೋ ಮಾಡಿದರು, ಆದರೂ ಅದು ಬಾ ಆಗಿಯೇ ಉಳಿಯುತ್ತಿತ್ತು. ಅಂತೂ ಕಾರ್ಡು ಮಾತ್ರ ಅಲುಗಾಡಲೇ ಇಲ್ಲ.

ADVERTISEMENT

ಕೊನೆಯಲ್ಲಿ ಒಬ್ಬ ಹಿರಿಯ ವಿದ್ಯಾರ್ಥಿ- ಎಂಜಿನಿಯರ್, ‘ಸರ್, ನನಗೆ ಬರುತ್ತೆ’ ಎಂದರು. ನನಗೆ ಸಮಾಧಾನವೋ ಸಮಾಧಾನ. ಒಬ್ಬರಿಗಾದರೂ ಸಾಧನೆಯಾಯಿತಲ್ಲ ಎಂದು. ಸರಿ ಎಂದು ಅವರನ್ನು ಎಬ್ಬಿಸಿ, ಎಲ್ಲರೆದುರು ನಿಲ್ಲಿಸಿ, ಎಲ್ಲಿ, ಎಲ್ಲರಿಗೂ ಕಾಣುವ ಹಾಗೆ ಅಂದು ತೋರಿಸಿ ಎಂದೆ. ಅವರು ಕಾರ್ಡನ್ನು ಬಾಯಿಯ ಎದುರು ಹಿಡಿದರು. ಒಂದು ಸಲ ಬಾರತ ಎಂದರು. ಕಾರ್ಡು ಅಲುಗಾಡಲಿಲ್ಲ. ಮತ್ತೊಮ್ಮೆ ಬಾರತ ಎಂದರು. ಈ ಬಾರಿ ಕಾರ್ಡು ಅಲುಗಾಡಿತು. ಅವರು ಅಂದಿದ್ದು ಈ ಬಾರಿಯೂ ಬಾರತ ಎಂದೇ. ಆದರೆ, ಕಾರ್ಡು ಅಲುಗಾಡಿತಲ್ಲ, ಎಂದು ನೋಡಿದರೆ, ಅವರು ಮಾಡಿದ್ದು ಹೀಗೆ: ಒಂದು ಸಲ ಬಾರತ ಎನ್ನುವಾಗ ಕಾರ್ಡನ್ನು ಅಲುಗಾಡಿಸದೇ ಹಿಡಿದುಕೊಳ್ಳುತ್ತಿದ್ದರು. ಎರಡನೆ ಸಲ ಹೇಳುತ್ತಿದ್ದುದೂ ಬಾರತ ಎಂದೆ. ಆದರೆ ಈ ಬಾರಿ ಕಾರ್ಡು ಹಿಡಿದ ಕೈಯಿಂದ ಅದನ್ನು ಅವರೆ ಅಲುಗಾಡಿಸಿ ಬಿಡುತ್ತಿದ್ದರು. ಕಾರ್ಡು ಅಲುಗಾಡಿದರೆ ಮಹಾಪ್ರಾಣ ಆಗಿಬಿಡುತ್ತದೆ ಅಲ್ಲವೆ? ಕಾರ್ಡೇನೋ ಅಲುಗಾಡಿತು... ಆದರೆ ಮಹಾಪ್ರಾಣ ಮಾತ್ರ ಬಾಯಿಂದ ಹೊರಬರಲಿಲ್ಲ!

ಅಲ್ಪಪ್ರಾಣ- ಮಹಾಪ್ರಾಣದ ಉಚ್ಚಾರಣೆಯ ಸಮಸ್ಯೆಯನ್ನೇ ಆಧರಿಸಿ ನಾನೊಂದು ಜೋಕ್ ಹೇಳುತ್ತಿರುತ್ತೇನೆ: ಐದನೇ ತರಗತಿಯಲ್ಲಿ ಕುಳಿತಿರುವ ಗೀತಾ ಎನ್ನುವ ಹುಡುಗಿ ಸ್ಕರ್ಟ್‌ನ ಜೇಬಿನಿಂದ ತೆಗೆದು ಯಾರಿಗೂ ಗೊತ್ತಾಗದ ಹಾಗೆ ಏನನ್ನೋ ತಿನ್ನುತ್ತಿರುವುದು ಗಮನಕ್ಕೆ ಬರುತ್ತೆ. ಶಿಕ್ಷಕರು, ‘ಏ, ಗೀತಾ, ಏನದು ತಿಂತಾ ಇರೋದು?’ ಎಂದು ಕೇಳಿದಾಗ ಆ ಹುಡುಗಿ, ಅಳುಕುತ್ತಾ, ‘ಅಪ್ಪಳ ಸಾರ್’ ಎಂದು ನಿಜ ಹೇಳುತ್ತಾಳೆ. ಈಗ ಕನ್ನಡ ಶಿಕ್ಷಕರಿಗೆ ಗೀತಾ ತರಗತಿಯಲ್ಲಿ ಕುಳಿತು ಏನನ್ನೋ ತಿನ್ನುತ್ತಿರುವುದು ಮುಖ್ಯವಾಗದೇ, ಹಪ್ಪಳವನ್ನು ಅವಳು ಅಪ್ಪಳ ಎಂದಳಲ್ಲ ಎನ್ನುವುದೇ ಬಹಳ ಬೇಸರದ ಸಂಗತಿಯಾಗುತ್ತದೆ. ಅವಳ ಉಚ್ಚಾರಣೆಯನ್ನು ಸರಿಪಡಿಸುವುದಕ್ಕಾಗಿ, ಶಿಕ್ಷಕರು, ‘ಅದು, ಅಪ್ಪಳ ಅಲ್ಲ, ಹಪ್ಪಳ, ಎಲ್ಲಿ ಹೇಳು ನೋಡೋಣ? ಹಪ್ಪಳ ಅಂತ?’ ಎನ್ನುತ್ತಾರೆ. ಗೀತಾ ಮತ್ತೆ ‘ಅಪ್ಪಳ’ ಎನ್ನುತ್ತಾಳೆ. ಅದು ಅವಳ ಅಭ್ಯಾಸ. ಅದನ್ನು ತಿದ್ದುವ ಹವಣಿಕೆಯಲ್ಲಿ ಕನ್ನಡ ಶಿಕ್ಷಕರು, ‘ಅದನ್ನೇ ಸ್ವಲ್ಪ ಒತ್ತಿ ಹೇಳು’ ಎನ್ನುತ್ತಾರೆ. ಅದಕ್ಕೆ ಗೀತಾ ಆತಂಕದಿಂದ, ‘ಒತ್ತಿದರೆ ಅದು ಜೇಬಲ್ಲೇ ಪುಡಿಪುಡಿಯಾಗುತ್ತೆ ಸಾರ್’ ಎಂದದ್ದಕ್ಕೆ ಇಡೀ ತರಗತಿ ಜೋರಾಗಿ ನಗುತ್ತೆ.

ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಡಳಿತ ಕನ್ನಡ ತರಬೇತಿಗಳನ್ನು ನಡೆಸುತ್ತಿದ್ದ ದಿನಗಳಲ್ಲಿ ನಡೆದ ಒಂದು ಘಟನೆ. ಇಂಗ್ಲಿಷ್‌ನ ಪ್ರನನ್ಸಿಯೇಷನ್ ಎಂಬ ಪದಕ್ಕೆ ಸಂವಾದಿಯಾದ ಕನ್ನಡ ಪದವನ್ನು ಉಚ್ಛಾರಣೆ ಎಂದರೆ ಸರಿಯೇ, ಉಚ್ಚಾರಣೆ ಎಂದರೆ ಸರಿಯೇ ಎಂಬ ಬಗ್ಗೆ ಶಿಬಿರಾರ್ಥಿಗಳಲ್ಲಿಯೇ ಜೋರಾಗಿ ವಾದವಿವಾದ ನಡೆಯಿತು. ನಾನು ಈ ಪ್ರಶ್ನೆಯನ್ನು ಅವರಿಂದಲೇ ಬಗೆಹರಿಸಲು ಪ್ರಯತ್ನಿಸಿದೆ. ಬೋರ್ಡಿನ ಮೇಲೆ 1. ಉಚ್ಛಾರಣೆ 2. ಉಚ್ಚಾರಣೆ

ಎಂದು ಬರೆದೆ. ‘ಇದರಲ್ಲಿ 1. ಉಚ್ಛಾರಣೆ ಸರಿ ಎನ್ನುವವರು ಕೈಎತ್ತಿ’ ಎಂದೆ. 42 ಜನರಿದ್ದ ಗುಂಪಿನಲ್ಲಿ ಸುಮಾರು 37 ಜನ ಕೈಯೆತ್ತಿದರು. ಇಬ್ಬರು 2. ಉಚ್ಚಾರಣೆ ಸರಿಯೆಂದರೆ, ಇನ್ನು ಮೂವರಿಗೆ ಯಾವುದು ಸರಿ ಎಂಬುದರ ಬಗ್ಗೆ ಗೊಂದಲವಿತ್ತು. ಅವರು ಮತದಾನದಿಂದ ಹೊರಗುಳಿದರು. ಹೆಚ್ಚಿನವರು ಉಚ್ಛಾರಣೆಯೇ ಸರಿ ಎಂಬ ಭಾವನೆಯನ್ನು ಇಟ್ಟುಕೊಂಡಿದ್ದರೂ ವಾಸ್ತವದಲ್ಲಿ ಉಚ್ಚಾರಣೆ ಎಂಬ ಉಚ್ಚಾರಣೆಯೇ ಸರಿ. ಖನ್ನಡವನ್ನು ಆಳು ಮಾಡಿಬಿಟ್ಟಿದ್ದಾರೆ, ಬಅಳಷ್ಟು ಜನರಿಗೆ ಖನ್ನಡದ ಸರಿಯಾದ ಉಚ್ಛಾರಣೆಯೇ ಬರುವುದಿಲ್ಲ ಎಂದು ದುಕ್ಕ ಪಡುವ ಖನ್ನಡಾಬಿಮಾನಿಗಳು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ವಿಪರ್ಯಾಸದ ಸಂಗತಿಯೆಂದರೆ ಟಿ.ವಿ ವಾಹಿನಿಯರು ತೋರಿಸುವ ಹೈಕೋರ್ಟಿನ ಚಿತ್ರದಲ್ಲಿ ಕಟ್ಟಡದ ಮೇಲೆಯೂ ಉಚ್ಛ ನ್ಯಾಯಾಲಯ ಎಂದು ಬರೆದಿದೆ. ವಾಸ್ತವವಾಗಿ ಅದು ಉಚ್ಚ ನ್ಯಾಯಾಲಯವಾಗಬೇಕು.

ಉಚ್ಚಾರಣೆಗೆ ಸಂಬಂಧಿಸಿದ ಇನ್ನೊಂದು ಅನುಭವ. ಕನ್ನಡ ಮಾತೃಭಾಷೀಯರಲ್ಲಿಯೇ 1. ಸ 2. ಶ 3. ಷ ಇವುಗಳನ್ನು ಸರಿಯಾಗಿ ಉಚ್ಚರಿಸಲು ಆಗದೇ ಇರುವ ಸನ್ನಿವೇಶ ಎದುರಾಗುತ್ತದೆ. ಪ್ರಾಥಮಿಕ ತರಗತಿಗಳಲ್ಲಿ ನಮಗೆ ಇದರ ವಿಶಿಷ್ಟ ಉಚ್ಚಾರಣೆಯನ್ನು ಹೇಳಿಕೊಡಲು ನಮ್ಮ ಕನ್ನಡ ಶಿಕ್ಷಕರು ಪ್ರತಿಯೊಂದಕ್ಕೂ ಒಂದು ಮಾದರಿ ಪದವನ್ನು ಕೊಟ್ಟು ಹೇಳುತ್ತಿದ್ದರು. ಸಕ್ಕರೆ-ಸ, ಶಂಕರ-ಶ ಮತ್ತು ಷಣ್ಮುಖ-ಷ ಎಂದು. ನಾನು ಇದನ್ನು ನನ್ನ ತರಗತಿಯಲ್ಲಿ ಪ್ರಯೋಗಿಸಿದೆ. ಬಹಳ ಹೊತ್ತಿನ ಅಭ್ಯಾಸದ ನಂತರ ಒಬ್ಬ ಶಿಷ್ಯ ‘ನನಗೆ ಬರುತ್ತೆ ಸಾರ್’ ಎಂದು ಆತ ಹೇಳಿದ್ದು ಹೀಗೆ: ‘ಸಕ್ಕರೆ-ಸ, ಸಂಕರ-ಸ ಮತ್ತು ಸಣ್ಮುಕ-ಸ ಸರಿನಾ ಸಾ...?’ ಎಂದು ಬಾಜಿ ಗೆದ್ದವರಂತೆ ಬೀಗಿದರು. ಇನ್ನೇನೂ ಮಾಡಲು ತೋಚದೆ, ಶರಿಯಪ್ಪ, ನೀನು ಏಳಿದ್ದು ಬಹಳ ಷರಿಯಾಗಿದೆ ಎನ್ನಬೇಕೇನೋ!

ನಾನು ಬಹಳ ಹಿಂದೆ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿರುವಾಗ ಕನ್ನಡೇತರ ಐ.ಎ.ಎಸ್., ಐ.ಪಿ.ಎಸ್. ಪ್ರೊಬೆಷನರಿ ಅಧಿಕಾರಿಗಳಿಗೆ ಕನ್ನಡವನ್ನು ಕಲಿಸುತ್ತಿದ್ದೆ. ಆಗ ಹೊಸದಾಗಿ ಕಲಿಯುವವರು ಮಾಡುವ ಹಲವಾರು ಪ್ರಮಾದಗಳು ಗಮನಕ್ಕೆ ಬರುತ್ತಿದ್ದವು. ಅಂದು ವಿದ್ಯಾರ್ಥಿಗಳು ನನ್ನ, ನಮ್ಮ ಇತ್ಯಾದಿ ಪದಗಳನ್ನು ಕಲಿಯುತ್ತಿದ್ದರು. ಪ್ರಯೋಗಿಸಿ ತೋರಿಸುವ ಭರದಲ್ಲಿ ಒಬ್ಬರು, ಪಕ್ಕದಲ್ಲಿಯೇ ಕುಳಿತಿದ್ದ ತಮ್ಮ ಪತ್ನಿ(ಆಕೆಯೂ ಐಎಎಸ್ ಅಧಿಕಾರಿ)ಯನ್ನು ತೋರಿಸುತ್ತಾ, ‘ಇವರು... ನಮ್ಮ... ಪತ್ನಿ’ ಎಂದರು. ನನ್ನ ಬದಲು ನಮ್ಮ ಎಂಬ ಪದ ಬಳಕೆಯಿಂದಾದ ಪ್ರಮಾದ ಅರ್ಥವಾದ ಉಳಿದೆಲ್ಲರೂ ಜೋರಾಗಿ ನಕ್ಕರು. ಏಕೆಂದು ಗೊತ್ತಾದ ನಂತರ ಆ ಅಧಿಕಾರಿ ಇವರೆಡರ ನಡುವೆ ಮುಂದೆಂದೂ ತಪ್ಪು ಮಾಡಲೇ ಇಲ್ಲ. ಕನ್ನಡ ಮಾತೃಭಾಷೀಯರಲ್ಲೇ ಉಚ್ಚಾರಣಾ ಭಿನ್ನತೆಗಳು ಕಂಡುಬರುತ್ತವಲ್ಲಾ? ಅದಕ್ಕೆ ಕಾರಣ ಗ್ರಾಮೀಣ ಕನ್ನಡದಲ್ಲಿ (ಸಂಸ್ಕೃತ ಮೂಲದಿಂದ ಬಂದಿರುವ) ಮಹಾಪ್ರಾಣ ಧ್ವನಿಗಳು, ಸ,ಶ,ಷ ವ್ಯತ್ಯಾಸ ಇತ್ಯಾದಿ ಇಲ್ಲದೇ ಇರುವುದು. ಶಿಷ್ಟ ಭಾಷೆ ಕಲಿಯುವ ಸಂದರ್ಭದಲ್ಲಿಯೂ ಅವರು ಬಾರತ ಎಂದು ಅಲ್ಪಪ್ರಾಣ ಬಳಸಿ ಹೇಳಿದಾಗಲೂ ಅದು ಅವರಿಗೆ ಸರಿಯಾಗಿಯೇ ಭಾರತ ಎಂಬಂತೆಯೇ ಕೇಳಿಸುತ್ತದೆ ಎನ್ನುವುದು, ಆಲಿಸುವಿಕೆಯ ಮನಶ್ಶಾಸ್ತ್ರಕ್ಕೆ ಸಂಬಂಧ ಪಟ್ಟ ಇನ್ನೊಂದು ಸಮಸ್ಯೆ. ಇದನ್ನು ನಿದರ್ಶಿಸಲು ಒಂದು ಹಿಂದಿ ಭಾಷೆಯ ಉದಾಹರಣೆಯನ್ನು ಹೇಳುತ್ತೇನೆ ನೋಡಿ.

ನಾನು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿರುವಾಗ ಹಿಂದಿ ಪಾಠಗಳನ್ನು ಪ್ರಸಾರ ಮಾಡುವ ಕೆಲಸ ನನ್ನ ಪಾಲಿಗಿತ್ತು. ಹೀಗೆ ಒಂದು ಪಾಠವನ್ನು ಧ್ವನಿಮುದ್ರಣ ಮಾಡುವಾಗ ಒಂದು ಹಂತದಲ್ಲಿ ಶಿಕ್ಷಕರು ಹಿಂದಿಯಲ್ಲಿ, ‘ಕಾನಾ ಕಾನಾ’ ಎಂದರು. ಅದನ್ನು ಕೇಳಿಸಿಕೊಂಡು ಪುನರುಚ್ಚರಿಸಬೇಕಾದ ವಿದ್ಯಾರ್ಥಿಗಳು, ಅಷ್ಟೇ ನಿಖರವಾಗಿ, ‘ಕಾನಾ ಕಾನಾ’ ಎಂದರು. ಆದರೆ, ಅದು ಶಿಕ್ಷಕರಿಗೆ ಸರಿ ಅನ್ನಿಸಲಿಲ್ಲ. ಮಕ್ಕಳು ತಪ್ಪಾಗಿ ಉಚ್ಚರಿಸುತ್ತಿದ್ದಾರೆ ಎಂಬುದು ಅವರ ಭಾವನೆ. ಹೀಗಾಗಿ ಅವರು ಮತ್ತೊಮ್ಮೆ, ‘ಠೀಕ್ ಸೆ ಬೊಲೋ ಬಚ್ಚೋ, ಕಾನಾ ಕಾನಾ’ (ಅವರಿಗೆ ಖಾನಾ ಖಾನಾ ಅಂದರೆ ಊಟವನ್ನು ಮಾಡುವುದು ಎಂದು ಹೇಳಬೇಕಾಗಿತ್ತು) ಎಂದರು. ಮಕ್ಕಳು ಅಷ್ಟೇ ಶಿಸ್ತಿನಿಂದ ‘ಕಾನಾ ಕಾನಾ’ ಎಂದರು. ಶಿಕ್ಷಕರಿಗೆ ಕೋಪ ಬಂತು,. ಅವರು ಅಸಹನೆಯಿಂದ ಎಂದರು, ‘ನಹೀ, ನಹೀ, ಕಾನಾ ಕಾನಾ ನಹೀ, ಕಾನಾ ಕಾನಾ, ಬೋಲೋ, ಕಾನಾ ಕಾನಾ’. ಮಕ್ಕಳಿಗೆ ತಬ್ಬಿಬ್ಬು. ಶಿಕ್ಷಕರು ಹೇಳುತ್ತಿರುವ ಹಾಗೆಯೇ ತಾವೂ ಹೇಳುತ್ತಿದ್ದರೂ, ಅವರೇಕೆ ನೀವು ಸರಿಯಾಗಿ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಎಂಬುದು ಅವರಿಗೂ ಅರ್ಥವಾಗದೇ ಹೋಯಿತು.

ನಿಮಗಾದರೂ ಇಲ್ಲಿರುವ ಸಮಸ್ಯೆ ಏನು ಎಂದು ಅರ್ಥವಾಗಿರಬಹುದಲ್ಲ! ಶಿಕ್ಷಕರು ತಾವು ಹೇಳುತ್ತಿರುವುದು ‘ಖಾನಾ ಖಾನಾ’ ಎಂದೂ, ಮಕ್ಕಳು ಹೇಳುವುದು ಮಾತ್ರ ‘ಕಾನಾ ಕಾನಾ’ ಎಂದೂ ಭಾವಿಸುತ್ತಾರೆ. ಅದು ಹೇಗೆ? ಶಿಕ್ಷಕರ ಕಿವಿಗೆ ತಾವು ‘ಕಾನಾ ಕಾನಾ’ ಎಂದು ಹೇಳುತ್ತಿರುವುದು ‘ಖಾನಾ ಖಾನಾ’ ಆಗಿಯೇ ಕೇಳಿಸುತ್ತದೆ ಎಂಬುದೇ ಇಲ್ಲಿನ ಸ್ವಾರಸ್ಯಕರ ವಿಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.